ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (89) ಅವರ ಮರಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ ಸುಳ್ಳು ಸುದ್ದಿಗೆ ಅವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಉಸಿರಾಟದ ತೊಂದರೆಯಿಂದಾಗಿ ಮುಂಬೈಯ ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮೇಂದ್ರ ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪುತ್ರಿ ಇಶಾ ಡಿಯೋಲ್ ಸ್ಪಷ್ಟಪಡಿಸಿದ್ದಾರೆ.
ಇಶಾ ಡಿಯೋಲ್ ಇನ್‌ಸ್ಟಾಗ್ರಾಮ್‌ನಲ್ಲಿ “ನನ್ನ ತಂದೆ ಸ್ಥಿರವಾಗಿದ್ದಾರೆ ಮತ್ತು ಚೇತರಿಸುತ್ತಿದ್ದಾರೆ. ಮೀಡಿಯಾ ಸುಳ್ಳು ಸುದ್ದಿ ಹರಡುತ್ತಿದೆ. ಕುಟುಂಬಕ್ಕೆ ಖಾಸಗಿ ಸಮಯ ನೀಡಿ. ಪಾಪಾಗೆ ತ್ವರಿತ ಚೇತರಿಕೆಗಾಗಿ ನಿಮ್ಮ ಪ್ರಾರ್ಥನೆಗಳಿಗೆ ಧನ್ಯವಾದಗಳು” ಎಂದು ಅವರು ಬರೆದಿದ್ದಾರೆ.
ಧರ್ಮೇಂದ್ರ ಅವರು ವೆಂಟಿಲೇಟರ್‌ನಲ್ಲಿದ್ದಾರೆ ಎಂಬ ವರದಿಗಳನ್ನು ಅವರ ಮಗ ಸನ್ನಿ ಡಿಯೋಲ್ ಅವರ ಪ್ರತಿನಿಧಿ ಸಂಪೂರ್ಣವಾಗಿ ತಳ್ಳಿ ಹಾಕಿದ್ದು, “ಧರ್ಮೇಂದ್ರಜೀ ಸ್ಥಿರವಾಗಿದ್ದಾರೆ ಮತ್ತು ವೈದ್ಯಕೀಯ ತಂಡದ ಗಮನದಲ್ಲಿದ್ದಾರೆ. ವೆಂಟಿಲೇಟರ್‌ನಲ್ಲಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ದಯವಿಟ್ಟು ಗಾಳಿಸುದ್ದಿಯನ್ನು ಹರಡಿಸಬೇಡಿ” ಎಂದು ತಿಳಿಸಿದ್ದಾರೆ. ಹೇಮಾ ಮಾಲಿನಿ ಆಸ್ಪತ್ರೆಗೆ ಭೇಟಿ ನೀಡಿ “ನಾವೆಲ್ಲರೂ ಅವರ ಜೊತೆಯಲ್ಲಿದ್ದೇವೆ. ಪ್ರಾರ್ಥನೆ ಮಾಡಿ” ಎಂದು ಕೇಳಿಕೊಂಡಿದ್ದಾರೆ.
ಸಲ್ಮಾನ್ ಖಾನ್, ಶಾರುಖ್ ಖಾನ್, ಗೋವಿಂದ, ಅಮೀಶಾ ಪಟೇಲ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಸ್ಪತ್ರೆಗೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್, ಜಾವೇದ್ ಅಖ್ತರ್ ರಂತಹ ಗಣ್ಯರು ಸುಳ್ಳು ಸುದ್ದಿಯಿಂದ ಸಂತಾಪ ಸಂದೇಶ ಕಳುಹಿಸಿದ್ದರು ನಂತರ ಅಳಿಸಿದ್ದಾರೆ.







