ನ್ಯೂಯಾರ್ಕ್ ನಗರದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ, ಜೊಹ್ರಾನ್ ಮಮ್ದಾನಿ ಅವರು ನವೆಂಬರ್ 4, 2025ರ ಚುನಾವಣೆಯಲ್ಲಿ ಮೇಯರ್ ಆಗಿ ಆಯ್ಕೆಯಾದರು. 1969ರ ನಂತರದ ಅತಿ ಹೆಚ್ಚು ಮತದಾನ (2 ಮಿಲಿಯನ್‌ಗಿಂತ ಹೆಚ್ಚು) ಮತ್ತು ಯುವ ಮೇಯರ್ ಎಂಬ ದಾಖಲೆಯನ್ನು ಸೃಷ್ಟಿಸಿದ ಈ ಗೆಲುವು ಅಮೆರಿಕದ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಚುನಾವಣಾ ಪ್ರಚಾರದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಮ್ದಾನಿಯನ್ನು “100% ಕಮ್ಯೂನಿಸ್ಟ್ ಲುನ್ಯಾಟಿಕ್”, “ಎಡಪಂಥೀ ಜಿಹಾದಿ”, “ಯಹೂದಿ ವಿರೋಧಿ” ಎಂದು ತೀವ್ರವಾಗಿ ಟೀಕಿಸಿದ್ದರು. ಮಮ್ದಾನಿ ನಗರವನ್ನು “ಸೋವಿಯತ್ ಶೈಲಿಯ ಕಮ್ಯೂನಿಸ್ಟ್ ರಾಷ್ಟ್ರ” ಮಾಡುತ್ತಾರೆ, ಆಸ್ತಿ ತೆರಿಗೆ ಶೇ.70ರಷ್ಟು ಹೆಚ್ಚಿಸುತ್ತಾರೆ, ಎಲ್ಲರೂ ಪಲಾಯನ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಗೆಲುವಿನ ನಂತರ ಕೇವಲ 17 ದಿನಗಳ ಅಂತರದಲ್ಲಿ, ನವೆಂಬರ್ 21, 2025ರಂದು ವೈಟ್ ಹೌಸ್‌ನ ಓವಲ್ ಆಫೀಸ್‌ನಲ್ಲಿ ನಡೆದ ಭೇಟಿಯು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.

ಇವರ ಭೇಟಿಯು ಸಂಪೂರ್ಣವಾಗಿ ಸ್ನೇಹಪರವಾಗಿತ್ತು. ಟ್ರಂಪ್ ಅವರು ಮಮ್ದಾನಿಯನ್ನು “ ಭರ್ಜರಿ ಗೆಲುವು” ಸಾಧಿಸಿದ್ದಕ್ಕಾಗಿ ಅಭಿನಂದಿಸಿ, “ನೀವು ಉತ್ತಮ ಕೆಲಸ ಮಾಡುತ್ತೀರಿ ಎಂಬ ನಂಬಿಕೆ ನನಗಿದೆ. ನೀವು ರಿಪಬ್ಲಿಕನ್‌ಗಳನ್ನೂ ಆಶ್ಚರ್ಯಗೊಳಿಸುತ್ತೀರಿ!” ಎಂದು ಹೃತ್ಪೂರ್ವಕವಾಗಿ ಪ್ರಶಂಸೆ ಮಾಡಿದರು. ಮಮ್ದಾನಿಯ ಯುವ ಅಭಿಯಾನ, ಟಿಕ್‌ಟಾಕ್-ಇನ್‌ಸ್ಟಾಗ್ರಾಮ್ ಬಳಕೆ ಮತ್ತು ಯುವ ಮತದಾರರ ಸಮರ್ಥನೆಯನ್ನು ಟ್ರಂಪ್ ಶ್ಲಾಘಿಸಿದರು.
ಟ್ರಂಪ್ ಟ್ರುತ್ ಸೋಷಿಯಲ್‌ನಲ್ಲಿ “ನ್ಯೂಯಾರ್ಕ್‌ನ ಹೊಸ ಮೇಯರ್ ಜೊಹ್ರಾನ್ ಮಮ್ದಾನಿಯನ್ನು ಭೇಟಿಯಾಗಿ ನನಗೆ ತುಂಬಾ ಸಂತೋಷವಾಯಿತು. ನಾವು ಬಹಳಷ್ಟು ವಿಷಯಗಳಲ್ಲಿ ಒಪ್ಪಿಕೊಂಡೆವು. ಅವರು ಉತ್ತಮ ಕೆಲಸ ಮಾಡಲಿದ್ದಾರೆ!” ಎಂದು ಬರೆದಿದ್ದಾರೆ.
ಮಮ್ದಾನಿ ಕೂಡ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದು“ಅಧ್ಯಕ್ಷರೊಂದಿಗೆ ನ್ಯೂಯಾರ್ಕ್ ನಿವಾಸಿಗಳ ಜೀವನ ವೆಚ್ಚವನ್ನು ಕಡಿಮೆ ಮಾಡುವ ಬಗ್ಗೆ ಒಪ್ಪಿಕೊಂಡಿದ್ದೇವೆ. ನಗರದ ಒಳಿತಿಗಾಗಿ ಒಟ್ಟಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.”
ಈ ಭೇಟಿಯಲ್ಲಿ ಇಮಿಗ್ರೇಶನ್, ಇಸ್ರೇಲ್-ಪ್ಯಾಲೆಸ್ಟೈನ್, ಅಪರಾಧ ದರ ಮತ್ತು ಆರ್ಥಿಕ ಅಸಮಾನತೆಯಂತಹ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಎರಡೂ ನಾಯಕರು ಆ ವಿಷಯಗಳನ್ನು ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು ನಗರದ ತತ್ಕಾಲೀನ ಸಮಸ್ಯೆಗಳ ಮೇಲೆ ಗಮನ ಹರಿಸಿದರು. ಟ್ರಂಪ್ ಅವರು ಮಾಧ್ಯಮಗಳ ಮುಂದೆ “ನಾನು ಈಗ ಅವರನ್ನು 100% ಬೆಂಬಲಿಸುತ್ತೇನೆ” ಎಂದು ಸ್ಪಷ್ಟವಾಗಿ ಹೇಳಿದ್ದು ದೊಡ್ಡ ಸುದ್ದಿಯಾಯಿತು.
ಇದನ್ನೂ ಓದಿ | ಟ್ರಂಪ್ ಟೀಕಾಕಾರ ಮಮ್ದಾನಿಗೆ ನ್ಯೂಯಾರ್ಕ್ ಮೇಯರ್ ಪಟ್ಟ!
ಅಮೆರಿಕದ ರಾಜಕೀಯದಲ್ಲಿ ಹೊಸ ಆಯಾಮವನ್ನು ತೋರಿಸುತ್ತದೆ. ಕಟು ಶತ್ರುತ್ವದಿಂದ ಸಹಕಾರದ ಕಡೆಗೆ ಬಂದ ಟ್ರಂಪ್ ಮತ್ತು ಮಮ್ದಾನಿ ಅವರ ಸಂಬಂಧವು ಜನವರಿ 1, 2026ರಿಂದ ಮಮ್ದಾನಿ ಅಧಿಕಾರ ಸ್ವೀಕಾರದ ನಂತರ ಹೇಗೆ ಮುಂದುವರಿಯಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.







