ಫುಟ್ಬಾಲ್ ಲೋಕದ ಮಾಂತ್ರಿಕ, ಅರ್ಜೆಂಟೀನಾದ ತಾರೆ ಲಿಯೋನೆಲ್ ಮೆಸ್ಸಿ ಅವರ ಕೋಲ್ಕತ್ತಾ ಭೇಟಿ ಸಂಭ್ರಮದ ಬದಲಿಗೆ ಗೊಂದಲ ಮತ್ತು ಆಕ್ರೋಶದೊಂದಿಗೆ ಅಂತ್ಯಗೊಂಡಿದೆ. ಮೆಸ್ಸಿ ಅವರನ್ನು ಕಣ್ತುಂಬಿಕೊಳ್ಳಲು ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ (ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ) ಹರಿದು ಬಂದಿದ್ದ ಲಕ್ಷಾಂತರ ಅಭಿಮಾನಿಗಳ ಉತ್ಸಾಹವು ಅವ್ಯವಸ್ಥೆಯಾಗಿ ಮಾರ್ಪಟ್ಟು, ಅಂತಿಮವಾಗಿ ದಾಂಧಲೆಗೆ ಕಾರಣವಾಗಿದೆ. ಈ ಘಟನೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾರ್ವಜನಿಕವಾಗಿ ಲಿಯೋನೆಲ್ ಮೆಸ್ಸಿ ಮತ್ತು ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.
ವಿಶ್ವದ ಶ್ರೇಷ್ಠ ಫುಟ್ಬಾಲ್ ಆಟಗಾರನ ಆಗಮನಕ್ಕಾಗಿ ಕೋಲ್ಕತ್ತಾ ಕಾತುರದಿಂದ ಕಾಯುತ್ತಿತ್ತು. ಇಂದು ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಮೆಸ್ಸಿ ಅವರನ್ನು ನೋಡಲು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಆದರೆ, ಕ್ರೀಡಾಂಗಣದ ನಿರ್ವಹಣೆಯಲ್ಲಿ ಉಂಟಾದ ಲೋಪದೋಷಗಳು ಮತ್ತು ಅತಿಯಾದ ಜನಸಂದಣಿಯಿಂದಾಗಿ ಬಹುತೇಕ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆಯನ್ನು ನೋಡಲು ಸಾಧ್ಯವಾಗಲಿಲ್ಲ.
ಮೆಸ್ಸಿ ಅವರು ವೇದಿಕೆಗೆ ಬಂದು ಹೋದ ಅಲ್ಪಾವಧಿಯಲ್ಲಿ, ದೂರದಲ್ಲಿದ್ದ ಅಭಿಮಾನಿಗಳಿಗೆ ಅವರು ಕಾಣಿಸದಿದ್ದಾಗ ಆಕ್ರೋಶ ಸ್ಫೋಟಗೊಂಡಿತು. ತಾಳ್ಮೆ ಕಳೆದುಕೊಂಡ ಅಭಿಮಾನಿಗಳು ಬ್ಯಾರಿಕೇಡ್‌ಗಳನ್ನು ಮುರಿದು, ಕುರ್ಚಿಗಳನ್ನು ತೂರಿದ್ದಲ್ಲದೆ, ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಪಕ್ಷಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. “ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಇಂದು ನಡೆದ ಘಟನೆಯಿಂದ ನಾನು ತೀವ್ರ ನೊಂದಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ಫುಟ್ಬಾಲ್ ಪ್ರೇಮಿಗಳು ತಮ್ಮ ಆರಾಧ್ಯ ದೈವವನ್ನು ನೋಡಲು ಬಂದಿದ್ದರು. ಆದರೆ ಆದ ಅವ್ಯವಸ್ಥೆ ನನ್ನ ಹೃದಯ ಕಲಕಿದೆ,” ಎಂದು ಅವರು ಬರೆದುಕೊಂಡಿದ್ದಾರೆ.
ಮೆಸ್ಸಿಗೆ ಮತ್ತು ಅಭಿಮಾನಿಗಳಿಗೆ ಕ್ಷಮೆ:
“ನಮ್ಮ ಆಹ್ವಾನವನ್ನು ಮನ್ನಿಸಿ ಬಂದ ಲಿಯೋನೆಲ್ ಮೆಸ್ಸಿ ಅವರಲ್ಲಿ ನಾನು ಈ ಅಹಿತಕರ ಘಟನೆಗಾಗಿ ಕ್ಷಮೆಯಾಚಿಸುತ್ತೇನೆ. ಹಾಗೆಯೇ, ನಿರಾಶರಾದ ಸಾವಿರಾರು ಅಭಿಮಾನಿಗಳಿಗೂ ಕ್ಷಮೆ ಕೋರುತ್ತೇನೆ,” ಎಂದು ಮಮತಾ ಹೇಳಿದ್ದಾರೆ. ಮೆಸ್ಸಿ ಅವರಂತಹ ಲೇಜೆಂಡ್ ಮುಂದೆ ಇಂತಹ ಶಿಸ್ತುರಹಿತ ವರ್ತನೆ ಮತ್ತು ಆಡಳಿತಾತ್ಮಕ ವೈಫಲ್ಯ ಪ್ರದರ್ಶನವಾಗಬಾರದಿತ್ತು ಎಂದು ಅವರು ವಿಷಾದಿಸಿದ್ದಾರೆ.
ಇದನ್ನೂ ಓದಿ | ರಾಜ್ಯ ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ ನೀಡಲಿದ್ದಾರೆಯೇ ಡಿಸಿಎಂ ಡಿಕೆಶಿ?
ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಮತ್ತು ನಿರ್ವಹಣಾ ವೈಫಲ್ಯ ಉಂಟಾಗಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಮಮತಾ ಬ್ಯಾನರ್ಜಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಆಯೋಜಕರು ಮತ್ತು ಪೊಲೀಸ್ ಅಧಿಕಾರಿಗಳ ಪಾತ್ರದ ಕುರಿತು ತನಿಖೆ ನಡೆಯಲಿದ್ದು, ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.







