ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಮತ್ತು ಹಿಂಸಾಚಾರದ ಪ್ರಕರಣಗಳು ದಿನೇ ದಿನೇ ಸಂಕೀರ್ಣವಾಗುತ್ತಿವೆ. ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ಬಳಿಕ ಭುಗಿಲೆದ್ದಿರುವ ಹಿಂಸಾಚಾರ ಮತ್ತು ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ಹಲ್ಲೆ ಆರೋಪಗಳು ಈಗ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಮೂಡಿಸಿವೆ.
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ಭಾರತ ವ್ಯಕ್ತಪಡಿಸಿದ ಕಳವಳವನ್ನು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯವು ಸಾರಾಸಗಟಾಗಿ ತಳ್ಳಿಹಾಕಿದ್ದು, ಭಾರತವು ‘ಸುಳ್ಳು ಸುದ್ದಿ’ಗಳನ್ನು ಆಧರಿಸಿ ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದೆ.
ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಎಂಬುವವರ ಹತ್ಯೆಯಾದ ಬೆನ್ನಲ್ಲೇ ಮೈಮೆನ್ಸಿಂಗ್ ಸೇರಿದಂತೆ ಹಲವು ಕಡೆಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗಲಾಟೆಯ ಸಂದರ್ಭದಲ್ಲಿ ಹಿಂದೂ ಸಮುದಾಯದವರ ಆಸ್ತಿಪಾಸ್ತಿ ಮತ್ತು ವ್ಯಕ್ತಿಗಳ ಮೇಲೆ ದಾಳಿಗಳು ನಡೆದಿವೆ ಎಂಬ ವರದಿಗಳು ಭಾರತೀಯ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಭಾರತದ ವಿದೇಶಾಂಗ ಸಚಿವಾಲಯ (MEA), ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿತ್ತು.
ಬಾಂಗ್ಲಾ ವಿದೇಶಾಂಗ ಸಚಿವಾಲಯದ ಸಮರ್ಥನೆ ಏನು?
ಭಾರತದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿದೇಶಾಂಗ ಸಚಿವಾಲಯ, “ಮೈಮೆನ್ಸಿಂಗ್‌ನಲ್ಲಿ ದೀಪು ಚಂದ್ರದಾಸ್ ಎನ್ನುವ ಹಿಂದೂ ಯುವಕನೊಬ್ಬನ ಹತ್ಯೆಯಾಗಿದೆ ಎಂಬ ವರದಿಗಳ ನಂತರ ಅಲ್ಪಸಂಖ್ಯಾತರ ಮೇಲೆ ವ್ಯಾಪಕ ದಾಳಿ ನಡೆಯುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಅಲ್ಲಿ ಅಂತಹ ಯಾವುದೇ ಸೂಚನೆಗಳಿಲ್ಲ,” ಎಂದು ಸ್ಪಷ್ಟಪಡಿಸಿದೆ.
ಅಲ್ಲದೆ, “ಯಾವುದೋ ಒಂದು ಪ್ರತ್ಯೇಕ ಅಪರಾಧ ಕೃತ್ಯ ಅಥವಾ ವೈಯಕ್ತಿಕ ದ್ವೇಷದ ಘಟನೆಯನ್ನು ಇಟ್ಟುಕೊಂಡು, ಇಡೀ ಅಲ್ಪಸಂಖ್ಯಾತ ಸಮುದಾಯದ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ ಎಂದು ಭಾರತೀಯ ಅಧಿಕಾರಿಗಳು ಮತ್ತು ಮಾಧ್ಯಮಗಳು ಬಿಂಬಿಸಲು ಪ್ರಯತ್ನಿಸುತ್ತಿವೆ. ಇದು ದಾರಿತಪ್ಪಿಸುವ ಕೆಲಸ,” ಎಂದು ಬಾಂಗ್ಲಾ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ತಮ್ಮ ದೇಶದಲ್ಲಿ ನಡೆಯುತ್ತಿರುವ ಅರಾಜಕತೆಯನ್ನು ಸಮರ್ಥಿಸಿಕೊಳ್ಳಲು ಬಾಂಗ್ಲಾದೇಶವು ಮಾಧ್ಯಮಗಳತ್ತ ಬೊಟ್ಟು ಮಾಡಿದೆ. “ಕೆಲವು ಮಾಧ್ಯಮಗಳು ಉತ್ಪ್ರೇಕ್ಷಿತ ಮತ್ತು ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿವೆ. ವಾಸ್ತವದಲ್ಲಿ ಪರಿಸ್ಥಿತಿ ಹಾಗಿಲ್ಲ. ಹಿಂದೂಗಳು ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ, ಸುಳ್ಳು ಪ್ರಚಾರದ ಮೂಲಕ ಬಾಂಗ್ಲಾದೇಶದ ವರ್ಚಸ್ಸನ್ನು ಹಾಳುಮಾಡಲಾಗುತ್ತಿದೆ,” ಎಂದು ಢಾಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ | ಬಾಂಗ್ಲಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಸಾವು!
ಶೇಖ್ ಹಸೀನಾ ಅಧಿಕಾರ ಕಳೆದುಕೊಂಡ ನಂತರ ಬಾಂಗ್ಲಾದೇಶದಲ್ಲಿನ ಹಿಂದೂಗಳ ಸುರಕ್ಷತೆ ಭಾರತಕ್ಕೆ ಪ್ರಮುಖ ಚಿಂತೆಯ ವಿಷಯವಾಗಿದೆ. ಇಸ್ಕಾನ್ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರ ಬಂಧನ, ದುರ್ಗಾ ಪೂಜೆ ಪೆಂಡಾಲ್‌ಗಳ ಮೇಲಿನ ದಾಳಿಗಳಂತಹ ಘಟನೆಗಳು ಈಗಾಗಲೇ ಉಭಯ ದೇಶಗಳ ಸಂಬಂಧವನ್ನು ಹಳಸಿಸಿವೆ. ಈಗ ಶರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರದ ಬೆಳವಣಿಗೆಗಳು ಮತ್ತು ಬಾಂಗ್ಲಾದೇಶದ ಈ ನಿರಾಕರಣೆ ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.







