ಕರ್ನಾಟಕದಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿನ ತೊಗರಿ ಬೇಳೆಗೆ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ₹8,000 ಬೆಂಬಲ ಬೆಲೆ ನಿಗದಿಪಡಿಸಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರಿಂದ ನೇರವಾಗಿ ಎಫ್‌ಎಕ್ಯೂ(FAQ) ಗುಣಮಟ್ಟದ ತೊಗರಿ ಖರೀದಿಸಲಾಗುತ್ತದೆ.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ತೊಗರಿ ಬೆಲೆ ಕುಸಿತ ಕಂಡಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮನವಿಯ ಮೇರೆಗೆ ಕೇಂದ್ರ ಸರ್ಕಾರ ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (NAFED) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್(NCCF) ಮೂಲಕ ಕರ್ನಾಟಕದಲ್ಲಿ ಸುಮಾರು 9.67 ಲಕ್ಷ ಟನ್ ತೊಗರಿ ಖರೀದಿಗೆ ಅನುಮೋದನೆ ನೀಡಿದೆ. ಇದು ರೈತರಿಗೆ ಭಾರೀ ನೆರವಾಗಲಿದೆ.
ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಗಳಲ್ಲಿ ಈ ಖರೀದಿ ಪ್ರಕ್ರಿಯೆಗೆ ಒಪ್ಪಿಗೆ ಸಿಕ್ಕಿದೆ. ಕಲಬುರಗಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಖರೀದಿ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಪ್ರತಿ ಎಕರೆಗೆ ಗರಿಷ್ಠ 4 ಕ್ವಿಂಟಲ್ ತೊಗರಿ ಖರೀದಿಗೆ ಅವಕಾಶವಿದ್ದು, ಇದು ರೈತರ ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೋಂದಾಯಿತ ಬೆಳೆ ವಿಸ್ತೀರ್ಣದ ಆಧಾರದ ಮೇಲೆ ನಿರ್ಧಾರವಾಗಲಿದೆ. ಖರೀದಿ ಕೇಂದ್ರಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS), ಎಫ್‌ಪಿಒಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತವೆ. ರೈತರು ನೋಂದಣಿಗೆ ಆಧಾರ್ ಕಾರ್ಡ್, ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಸಲ್ಲಿಸಬೇಕು. POS ಯಂತ್ರದ ಮೂಲಕ ಆಧಾರ್ ಬಯೋಮೆಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ.
ರೈತರ ನೋಂದಣಿ ಪ್ರಕ್ರಿಯೆ ಸುಮಾರು 80-90 ದಿನಗಳವರೆಗೆ ನಡೆಯಲಿದ್ದು, ಖರೀದಿ ಕೇಂದ್ರಗಳಲ್ಲಿ ಗೋದಾಮುಗಳನ್ನು ಸ್ವಚ್ಛಗೊಳಿಸಿ, ತೂಕ ಮಾಪನ ಮತ್ತು ಮೂಲಭೂತ ಸೌಕರ್ಯಗಳನ್ನು ಸಿದ್ಧಪಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಕಲಬುರಗಿ, ಬೀದರ್, ಯಾದಗಿರ್, ರಾಯಚೂರು, ವಿಜಯಪುರ ಸೇರಿದಂತೆ ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರ ಕೂಡಾ ಕೆಲವು ಸಂದರ್ಭಗಳಲ್ಲಿ ಪ್ರೋತ್ಸಾಹ ಧನ ನೀಡುತ್ತಿದೆ.
ಇದನ್ನೂ ಓದಿ | ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದ ಸರ್ಕಾರ: ಟನ್‌ಗೆ 3,300 ರೂ.
ಈ ಯೋಜನೆಯಿಂದ ರೈತರು ಮಾರುಕಟ್ಟೆ ಅಪಾಯದಿಂದ ರಕ್ಷಣೆ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದ ಪಿಎಮ್ – ಆಶಾ ಯೋಜನೆಯಡಿ ದ್ವಿದಳ ಧಾನ್ಯಗಳ ಖರೀದಿಯನ್ನು ಬಲಪಡಿಸಲಾಗುತ್ತಿದ್ದು, 2027ರ ವೇಳೆಗೆ ದೇಶವನ್ನು ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬಿಯಾಗಿಸುವ ಗುರಿ ಹೊಂದಲಾಗಿದೆ. ರೈತರು ತಮ್ಮ ಸಮೀಪದ ಖರೀದಿ ಕೇಂದ್ರಗಳಲ್ಲಿ ಫ್ರೂಟ್ಸ್ ಐಡಿ ಜೊತೆ ನೋಂದಾಯಿಸಿಕೊಂಡು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.ಈ ಖರೀದಿ ಪ್ರಕ್ರಿಯೆ ರೈತರ ಆರ್ಥಿಕ ಸ್ಥಿರತೆಗೆ ಬಲ ನೀಡಲಿದ್ದು, ತೊಗರಿ ಬೆಳೆಗಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.







