ಮೈಸೂರಿನ ಅರಮನೆಯ ಆವರಣದಲ್ಲಿ ಗುರುವಾರ ಅನಿಲ ಸ್ಫೋಟ ಪ್ರಕರಣದ ಹಿಂದಿರುವ ಕಾರಣವನ್ನು ಕವಿ ಹಾಗೂ ಲೇಖಕರಾಗಿರುವ ರಾಜೇಂದ್ರ ಪ್ರಸಾದ್‌ರವರು ವಿವರಿಸಿದ್ದಾರೆ.
ಸಾಮಾನ್ಯವಾಗಿ ಬಲೂನ್‌ಗಳಿಗೆ ವಾತಾವರಣದ ಗಾಳಿಯನ್ನೇ ಪಂಪ್ ಮಾಡಿ ತುಂಬುವುದು ಮೊದಲು ವಾಡಿಕೆಯಲ್ಲಿತ್ತು. ಆಮೇಲೆ ವಿಶೇಷವಾಗಿಸುವ ನಿಟ್ಟಿನಲ್ಲಿ, ಅದು ಹಗುರವಾಗಿ ಮೇಲೆ ಹಾರಾಡುವಂತೆ ಮಾಡುವ ಸಲುವಾಗಿ ಹಗುರ ಅನಿಲಗಳನ್ನು ತುಂಬುವುದು ಚಾಲ್ತಿಗೆ ಬಂತು. ವಾತಾವರಣದಲ್ಲಿರುವ ಎಲ್ಲ ಬಗೆಯ ಅನಿಲಗಳು ಕೂಡ ತೂಕವನ್ನು ಹೊಂದಿರುತ್ತವೆ. ಇದನ್ನ ಶಾಲೆಯ ಭೌತಶಾಸ್ತ್ರದ ತರಗತಿಗಳಲ್ಲಿ ಓದಿರುತ್ತೇವೆ. ಆದ್ರೆ ಜಲಜನಕ (ಹೈಡ್ರೋಜನ್) ಮತ್ತು ಹೀಲಿಯಂ ಅನಿಲಗಳ ಅಣು ಸಂರಚನೆಯು ವಿರಳವಾಗಿದ್ದು ಹಗುರವಾಗಿರುತ್ತವೆ. ಹಾಗಾಗಿ ಈ ಅನಿಲಗಳನ್ನು ತುಂಬಿದ ಬಲೂನುಗಳು ಮೇಲಕ್ಕೆ ಹಾರಲು ಶುರು ಮಾಡುತ್ತವೆ. ಅದೇ ನಾವೇ ಊದಿದ ಅಥವಾ ಪಂಪ್ ಮಾಡಿ ತುಂಬಿಸಿದ ಬಲೂನುಗಳು ಭಾರದಿಂದ ಕೆಳಮುಖವಾಗಿ ನೆಲಕ್ಕೆ ಬೀಳುತ್ತವೆ.
ಹೈಡ್ರೋಜನ್ ಮತ್ತು ಹೀಲಿಯಂ ತುಂಬಿದ ಬಲೂನುಗಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಳಸುವುದು ಈಚಿನ ದಶಕಗಳಲ್ಲಿ ಹೆಚ್ಚು ಚಾಲ್ತಿಗೆ ಬಂದಿದೆ. ಹುಟ್ಟುಹಬ್ಬದ ಆಚರಣೆ, ಮದುವೆ, ವಾರ್ಷಿಕೋತ್ಸವಗಳು, ಸಮಾವೇಶಗಳು ಮೊದಲಾದ ಕಾರ್ಯಕ್ರಮಗಳಲ್ಲಿ ‘ಹಾರುವ ಬಲೂನುಗಳು’ ಬಳಕೆ ಆಗುತ್ತಿವೆ. ಉದಾಹರಣೆಗೆ ಇಂಡಿಯಾದಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾ ಕೂಟದ ಸಮಾರೋಪದಲ್ಲಿ ಸಾವಿರಾರು ಕ್ಯೂಬಿಕ್ ಮೀಟರ್ ಗಳಷ್ಟು (ಹತ್ತಾರು ಕೋಟಿ ರೂಪಾಯಿಗಳಷ್ಟು) ಹೀಲಿಯಂ ಗ್ಯಾಸ್ ತುಂಬಿದ ಬಲೂನುಗಳನ್ನು ಕ್ರೀಡಾಂಗಣದ ಮೇಲ್ಚಾವಣಿ ಮೇಲೆ ಅಲಂಕಾರಕ್ಕೆ ಬಳಸಲಾಗಿತ್ತು.
ಹೈಡ್ರೋಜನ್ ಮತ್ತು ಹಿಲಿಯಂ ಗ್ಯಾಸ್ ಗಳ ಬೆಲೆಗಳನ್ನು ನೋಡಿದ್ರೆ ಅದರಲ್ಲಿ ಹೈಡ್ರೋಜನ್ ಗ್ಯಾಸ್ ಸಿಲಿಂಡರ್‌ನ ಬೆಲೆ ಸ್ವಲ್ಪ ಕಡಿಮೆ. ಹಾಗಾಗಿ ಬಲೂನುಗಳಿಗೆ ಹೈಡ್ರೋಜನ್ ಅನ್ನೇ ಹೆಚ್ಚು ಬಳಸುತ್ತಾರೆ. ಜಾಹೀರಾತು ಉದ್ದೇಶಗಳಿಗೆ ಹಾರಿ ಬಿಡುವ ದೊಡ್ಡ ಬಲೂನುಗಳಿಗೆ ಕೂಡ. ಇದಕ್ಕೆ ಹೀಲಿಯಂ ಬಳಸಬಹುದಾದರೂ ಅಧಿಕ ವೆಚ್ಚವಾಗುತ್ತದೆ. ಬಲೂನುಗಳಿಗೆ ಹೈಡ್ರೋಜನ್ ತುಂಬಿಸುವಾಗ ಬೆಂಕಿ ಹೊತ್ತಿಕೊಂಡು ಸಣ್ಣಪುಟ್ಟ ಅವಗಡಗಳಾಗಿದ್ದುಂಟು. ಆದ್ರೆ 2018-19ರಲ್ಲಿ ಬೆಂಗಳೂರಿನ IISC ನಲ್ಲಿ ನಡೆದ ಒಂದು ಹೈಡ್ರೋಜನ್ ಸಿಲಿಂಡರ್ ಸ್ಪೋಟದಲ್ಲಿ ಇಬ್ಬರು ವಿಜ್ಞಾನಿಗಳು ಸಾವಿಗೀಡಾದರು.
ಯಾವುದೇ ಸುರಕ್ಷತಾ ವಿಧಾನಗಳನ್ನು ಅನುಸರಿಸದೇ ಎರಡು ತೀವ್ರ ಸಂವೇದನೆಯುಳ್ಳ ಗ್ಯಾಸ್ ಗಳನ್ನು ಮಿಶ್ರಣ ಮಾಡಿ ಬಳಸಲು ಹೋಗಿದ್ದೇ ಆ ಅವಗಢಕ್ಕೆ ಕಾರಣವಾಗಿತ್ತು. ಈ ಘಟನೆ ನಡೆದ ನಂತರ ನಿಯಮಗಳು ಕಠಿಣವಾಗಿ ಹೈಡ್ರೋಜನ್ ಗ್ಯಾಸ್ ಅನ್ನು ಸಾರ್ವಜನಿಕರಿಗೆ ನೀಡುವುದನ್ನ ಗ್ಯಾಸ್ ಡೀಲರ್ ಗಳು ಮತ್ತು ಉತ್ಪಾದನಾ ಕಂಪನಿಗಳು ನಿಲ್ಲಿಸಿದವು.
ಗ್ಯಾಸ್ ಸಿಲಿಂಡರ್‌ಗಳ ಅಗತ್ಯವಿಲ್ಲದೇ ಹೈಡ್ರೋಜನ್ ಉತ್ಪಾದಿಸಬಹುದು
ಗ್ಯಾಸ್ ಸಿಲಿಂಡರ್‌ಗಳ ಅಗತ್ಯವಿಲ್ಲದೇ ಹೈಡ್ರೋಜನ್ ಉತ್ಪಾದಿಸುವ ಇನ್ನೊಂದು ಮಾರ್ಗವಿದೆ. ಅದೇ ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್)ಗೆ ನೀರು ಬೆರೆಸಿ ಅದರಿಂದ ಹೊಮ್ಮುವ ಗಾಳಿಯನ್ನು ತಡೆದು ಬಲೂನುಗಳಿಗೆ ತುಂಬಿಸುವ ವಿಧಾನ. ಈ ಗಾಳಿ ಕೂಡ ‘ಹೈಡ್ರೋಜನ್’ ಆಗಿದೆ. ಇದನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಉತ್ಪಾದಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಿಲಿಂಡರ್ ಗಳಲ್ಲಿ ಸಿಗುವ ಹೈಡ್ರೋಜನ್ ಅಥವಾ ಹೀಲಿಯಂ ಗ್ಯಾಸ್‌ಗಳಗಿಂತ ತೀರಾ ಕಡಿಮೆ ಖರ್ಚಿನಲ್ಲಿ ‘ಹಗುರ ಅನಿಲ’ ಉತ್ಪಾದಿಸಿಕೊಳ್ಳಬಹುದು.
ಇಂತಹದ್ದೇ ಡಬ್ಬಿಗಳನ್ನು ಬೀದಿಬದಿಯ ಮಾರಾಟಗಾರರು ಸೈಕಲ್ಲುಗಳ ಹಿಂದೆ ಕಟ್ಟಿಕೊಂಡು ಕಾಸ್ಟಿಕ್ ಸೋಡಾದ ತುಂಡುಗಳನ್ನು ಸಿಲಿಂಡರ್ ರೀತಿಯ ಡಬ್ಬದೊಳಗೆ ಹಾಕಿ ನೀರು ಬೆರೆಸಿ ಅದರಿಂದ ಹೊಮ್ಮುವ ಹೈಡ್ರೋಜನ್ ಅನ್ನು ಶೇಖರಣೆ ಮಾಡಿ ಬಲೂನುಗಳಿಗೆ ತುಂಬಿಕೊಡುತ್ತಾರೆ. ಈ ಪ್ರಕ್ರಿಯೆಯಲ್ಲಿರುವಾಗ ಏನಾದರೂ ಕಿಡಿ ಸೋಂಕಿದರೆ ಆ ಡಬ್ಬಿ ಸ್ಪೋಟಗೊಳ್ಳುತ್ತದೆ. ಅದಕ್ಕೆ ಹೆಚ್ಚು ತೀವ್ರತೆ ಇರುವುದಿಲ್ಲ. ಆದ್ರೆ ಡಬ್ಬಿ ದೊಡ್ಡದಾಗಿದ್ದು ಹೆಚ್ಚು ಕಾಸ್ಟಿಕ್ ಸೋಡಾ ಬೆರೆಸಿದ್ರೆ ಅದು ಅಪಾಯಕಾರಿ. ಇದಕ್ಕಿಂತಲೂ ಹೆಚ್ಚು ಅಪಾಯಕಾರಿ Compressed Hydrogen ಗ್ಯಾಸ್. ಇದನ್ನೀಗ ಮಾರಾಟಗಾರರು ಸಾರ್ವಜನಿಕರಿಗೆ ಕೊಡುವುದಿಲ್ಲ.
ಇದನ್ನೂ ಓದಿ | ಅರಾವಳಿಯ ಒಡಲಲ್ಲಿ ‘ಮಾಫಿಯಾ’ ಅಟ್ಟಹಾಸ: ಕರಗುತ್ತಿದೆಯೇ ಉ.ಭಾರತದ ರಕ್ಷಣಾ ಕೋಟೆ?
ಇಂತಹ ಹೈಡ್ರೋಜನ್ ಡಬ್ಬಿಯಿಂದ ಬಲೂನುಗಳನ್ನು ತುಂಬಿ ಹೊಟ್ಟೆ ಹೊರೆದುಕೊಳ್ಳುವ ನೂರಾರು ಜನರು ಶಾಲೆಗಳು, ಸಮಾವೇಶಗಳು, ಜಾತ್ರೆಗಳಲ್ಲಿ ಮಾತ್ರ ಕಾಣಸಿಗುತ್ತಾರೆ. ಇವರು ಹೀಲಿಯಂ ಗ್ಯಾಸ್ ಬಳಸುವುದು ಉತ್ತಮವಾದರೂ ಅದು ಬಹಳ ವೆಚ್ಚದಾಯಕವಾದ ಅನಿಲ. ಅಷ್ಟು ಹಣಕೊಟ್ಟು ತಂದು ಮಾರಾಟ ಮಾಡುವುದು ಬೀದಿಬದಿಯ ಮಾರಾಟಗಾರರಿಗೆ ಸಾಧ್ಯವಿಲ್ಲ. ಹಾಗಾಗಿ ಸುಲಭ ಮತ್ತು ಕಡಿಮೆ ವೆಚ್ಚದಲ್ಲಿ ಆಗುವ ಕಾಸ್ಟಿಕ್ ಸೋಡಾ ಬಳಸುತ್ತಾರೆ. ಬಳಕೆಯಲ್ಲಿ ಚೂರು ಎಚ್ಚರ ತಪ್ಪಿದರೆ ಸಣ್ಣ ಮಟ್ಟದ ಸ್ಫೋಟ ತಪ್ಪಿದ್ದಲ್ಲ.
ಮೈಸೂರಿನಲ್ಲಿ ಸ್ಫೋಟಗೊಂಡಿರುವುದು ಇಂತರ ಕೃತಕ ಹೈಡ್ರೋಜನ್ ಡಬ್ಬಿಯೇ ಹೊರತು ಹೀಲಿಯಂ ಸಿಲಿಂಡರೂ ಅಲ್ಲ, ಹೈಡ್ರೋಜನ್ ಸಿಲಿಂಡರೂ ಅಲ್ಲ!







