ಬಹಳ ಬೇಗನೆ ಅವರು ಪಟ್ಟಣ ದಾಟಿ ಹೊಲಗಳ ಕಡೆಗೆ ಬಂದರು. ಅಲ್ಲಿ ಯಾವುದೇ ಬದಲಾವಣೆ ಇಲ್ಲದ ಒಂದೇ ರೀತಿಯ ಹೊಲಗಳು ಕಾಣುತ್ತಿದ್ದವು. ಅಲ್ಲೊಂದು ಪಟ್ಟಣದ ಶೈಲಿಯಲ್ಲಿ ಕಟ್ಟಿದ ಮನೆಯ ಹತ್ತಿರ ಒಂದು ಕಲ್ಲು ಕ್ವಾರಿ ಇತ್ತು. ಬಹುತೇಕ ಅದು ಮಸುಕುಮಸುಕಾಗಿ ಕಾಣಿಸುತ್ತಿತ್ತು. ನಿರ್ಜನವಾಗಿತ್ತು. ಆರಂಭದಿಂದಲೂ ಇದೇ ಅವರು ತಲುಪಬೇಕಾದ ಗುರಿಯಾಗಿತ್ತೇನೋ ಎಂಬಂತೆ; ಸುಸ್ತಾಗಿದೆ ಇನ್ನು ಓಡಲಾರೆವು ಎಂಬಂತೆ ಅವರು ಇಬ್ಬರೂ ನಿಂತುಕೊAಡರು. ಹೆಣೆದುಕೊಂಡಿದ್ದ ಕೈಗಳನ್ನು ಬಿಡಿಸಿಕೊಂಡರು. ಕೆ. ಸುಮ್ಮನೆ ಮೌನವಾಗಿ ನಿಂತಿದ್ದ. ಇಬ್ಬರೂ ತಮ್ಮ ಕರವಸ್ತçಗಳನ್ನು ತೆಗೆದು ಮುಖದ ಮೇಲಿನ ಬೆವರನ್ನು ಒರೆ
ಸಿಕೊಂಡರು. ಒಂದು ಸುತ್ತು ಕ್ವಾರಿಯನ್ನು ಕಣ್ಣಾಡಿಸಿದರು. ಸುತ್ತ ಎಲ್ಲ ಕಡೆ ಚೆಲ್ಲಿದ ಬೆಳದಿಂಗಳು ಒಂದು ರೀತಿಯ ಪ್ರಶಾಂತತೆಯನ್ನು ಸೃಶ್ಟಿಸಿತ್ತು. ಮುಂದೆ ಅವರು ನಿರ್ವಹಿಸಬೇಕಾಗಿರುವ ಕೆಲಸದ ಪೂರ್ವಭಾವಿ ಸಿದ್ಧತೆ ಎಂಬಂತೆ ಅವರು ಕೆಲವು ಔಪಚಾರಿಕ ಶಾಸ್ತ್ರಗಳನ್ನು ಮಾಡಿದರು. ಇಬ್ಬರಿಗೂ ನ್ಯಾಯಾಂಗವು ನಿರ್ದಿಶ್ಟವಾದ ಕರ್ತವ್ಯಗಳನ್ನು ನಿಗಧಿಪಡಿಸಿಲ್ಲ ಎಂಬಂತೆ ಆ ಇಬ್ಬರಲ್ಲಿ ಒಬ್ಬ ಕೆ. ಹತ್ತಿರ ಬಂದು ಇವನ ಜಾಕೆಟ್, ವೇಸ್ಟ್ ಕೋಟ್ ತೆಗೆದನು. ಅಂತಿಮವಾಗಿ ಅಂಗಿಯನ್ನು ಬಿಚ್ಚಿಸಿದನು. ನಂತರ ಇವನ ಬೆನ್ನಿಗೆ ಒಂದು ಮೃದುವಾದ ಏಟು ಕೊಟ್ಟನು. ಗಾಳಿ, ಚಳಿಗೆ ಕೆ. ನಡುಗತೊಡಗಿದನು.
ಶೀತವಾದ ಆ ರಾತ್ರಿಯಲ್ಲಿ ಇವನು ಮತ್ತಶ್ಟು ಚಳಿಗೆ ನಡುಗದಿರಲೆಂದು ಇವನ ತೋಳು ಹಿಡಿದು ಒಂದೆರಡು ಸುತ್ತು ಮೇಲಕ್ಕು ಕೆಳಕ್ಕು ಒಬ್ಬ ತಿರುಗಾಡಿಸಿದನು. ತಕ್ಶಣಕ್ಕೆ ಬೇಕಿಲ್ಲದಿದ್ದರೂ ಮುಂದೆ ಬೇಕಾಗಬಹುದು ಎಂಬ ಎಚ್ಚರಿಕೆಯಿಂದ ಕೆ.ಗೆ ಸಂಬAಧಿಸಿದ ಎಲ್ಲವನ್ನೂ ಜೋಪಾನವಾಗಿ ಅಲ್ಲೊಂದು ಕಡೆ ಇರಿಸಿದನು. ಹೀಗೆ ಮಾಡುತ್ತಿರುವಾಗ ಕ್ವಾರಿಯನ್ನು ಒಂದು ಸುತ್ತು ಕಣ್ಣಾಡಿಸುತ್ತ ಆಯಕಟ್ಟಿನ ಜಾಗಕ್ಕಾಗಿ ಹುಡುಕಾಡುತ್ತಿದ್ದನು. ಹಾಗೆ ಒಂದು ನಿರ್ಧಿಶ್ಟ ಜಾಗ ಸೂಕ್ತ ಎಂದು ಅನ್ನಿಸಿದಾಗ ಅವನು ಇನ್ನೊಬ್ಬನಿಗೆ ಕೈ ಬೀಸಿ ಅಲ್ಲಿಗೆ ಬರಲು ಸೂಚಿಸಿದನು. ಅವನು ಕೆ.ನನ್ನು ಅಲ್ಲಿಗೆ ಕರೆದೊಯ್ದನು. ಕಡಿದಾಗಿ ಕಲ್ಲುಗಳನ್ನು ಕಡೆದು ತಗ್ಗಾಗಿದ್ದ ಒಂದು ಜಾಗ ಅದಾಗಿತ್ತು. ಅಲ್ಲೊಂದು ಸೀಳಿದ ದೊಡ್ಡ ಕಲ್ಲು ತುಂಡು ಬಿದ್ದಿತ್ತು. ಕೆ.ನನ್ನು ಅಲ್ಲೆ ನೆಲದ ಮೇಲೆ ಕುಳ್ಳಿರಿಸಿದ ಆತ ಹಾಗೇ ಒರಗಿಸಿ ಆ ಕಲ್ಲಿನ ಮೇಲೆ ತಲೆ ಬರುವಂತೆ ಮಲಗಿಸಿದನು. ಅವರ ಎಲ್ಲ ಪ್ರಯತ್ನಗಳು ತಡೆಯಿಲ್ಲದೆ ಜರುಗುತ್ತ ಇದ್ದಾಗ್ಯೂ; ಕೆ. ಅವರ ಪ್ರಯತ್ನಗಳಿಗೆ ಪ್ರತಿರೋಧವಿಲ್ಲದ ಸಹಕಾರ ನೀಡುತ್ತಿದ್ದಾಗ್ಯೂ ಆ ಇಡೀ ಕಾರ‍್ಯ ಬಲವಂತದಿಂದ ಕಶ್ಟಸಾಧ್ಯವಾಗಿ ನಡೆಯುತ್ತಿದೆ ಎಂದು ಅನ್ನಿಸುತ್ತಿತ್ತು.
ಇದನ್ನೂ ಓದಿ | ಗಿರೀಶ್ ವಿ. ವಾಘ್ ಸಾಂಸ್ಕೃತಿಕ ಪತ್ರಗಳು | “ಜಾತಿ ವ್ಯವಸ್ಥೆ ಒಂದು ಅನಾಗರಿಕ ಹಾಗೂ ಅಮಾನವೀಯ ವ್ಯವಸ್ಥೆ..”
ಇಬ್ಬರಲ್ಲಿ ಒಬ್ಬ ಇದನ್ನೆಲ್ಲ; ಇವನನ್ನು ವಿಲೇವಾರಿ ಮಾಡುವುದನ್ನೆಲ್ಲ ನನಗೆ ಬಿಟ್ಟುಬಿಡು ಎಂಬಂತೆ ಸನ್ನೆ ಮಾಡಿದನು. ಆದರೂ ಆ ಕಾರ‍್ಯ ಸುಲಭ ಅನ್ನಿಸುವಂತೆ ಕಾಣಲಿಲ್ಲ. ಅದುವರೆಗೆ ಅವರು ಮಾಡಿದ ಎಲ್ಲ ಪ್ರಯೋಗಗಳಲ್ಲಿ ಉತ್ತಮವಾದುದು ಇದು ಎಂದೇನೂ ಅನ್ನಿಸದಿದ್ದರೂ ಕೊನೆಗೆ ಒಂದು ನಿರ್ದಿಶ್ಟವಾದ ಭಂಗಿಯಲ್ಲಿ ಅವರು ಕೆ.ನನ್ನು ಮಲಗಿಸಿದರು. ಆಗ ಒಬ್ಬ ತನ್ನ ಉದ್ದ ನಿಲುಕೋಟನ್ನು ತೆಗೆದ. ತನ್ನ ಸೊಂಟದ ಸುತ್ತ ಬಿಗಿದಿದ್ದ ಬೆಲ್ಟಿಗೆ ಸಿಗಿಸಿದ್ದ ಒರೆಯಿಂದ ಒಂದು ಕಟುಕರ ಕತ್ತಿಯನ್ನು ಹೊರತೆಗೆದು, ಬೆಳಕಿಗೆ ಹಿಡಿದು ಅದರ ಹರಿತ ಹೇಗಿದೆಯೆಂದು ಪರೀಕ್ಷಿಸಿದ. ಮತ್ತೊಮ್ಮೆ ಅವರ ಶಾಸ್ತ್ರಗಳು ಶುರುವಾದವು. ಆ ಕಡೆ ಈ ಕಡೆ ನಿಂತ ಇಬ್ಬರೂ ಕತ್ತಿಯನ್ನು ಕೈ ಬದಲಾಯಿಸಿಕೊಂಡರು. ಇವನು ಕೆ. ಮೇಲಿನಿಂದ ಅವನಿಗೆ ಕೊಟ್ಟ. ಅವನು ಮರಳಿ ಇವನಿಗೆ ಕೊಟ್ಟ. ತನ್ನ ಮೇಲೆ ಹೀಗೆ ಕೈ ಬದಲಾಗುತ್ತಿದ್ದ ಕತ್ತಿಯನ್ನು ಕಂಡ ಕೆ. ಈಗ ಇವರ ಈ ಕತ್ತಿಯನ್ನು ನಾನೇ ಕಿತ್ತುಕೊಂಡು ನನಗೆ ನಾನೇ ಚುಚ್ಚಿಕೊಳ್ಳುವುದು ನನ್ನ ಕರ್ತವ್ಯ ಎಂದು ಖಚಿತವಾಗಿ ಯೋಚಿಸಿದ. ಆದರೆ ಅವನು ಹಾಗೆ ಮಾಡಲಿಲ್ಲ.
ಇನ್ನೂ ಅವನ ಕತ್ತನ್ನು ಅವರು ಬಿಗಿಯಾಗಿ ಹಿಡಿದಿರಲಿಲ್ಲ. ಕತ್ತು ಹೊರಳಿಸಿ ಅವರತ್ತ ನೋಡಿದ. ಅವನ ನಿಜವಾದ ಸಾಮರ್ಥ್ಯ ಏನೆಂದು ಸಾಬೀತು ಮಾಡಲು ಅವನಿಗೆ ಆಗಲೇ ಇಲ್ಲ. ಅಧಿಕಾರದಲ್ಲಿ ಇರುವವರಿಗೆ ಅವರೆಲ್ಲ ಕರ‍್ಯಗಳಿಂದ ಬಿಡುಗಡೆ ಕೊಡಲು ಅವನಿಗೆ ಆಗಲಿಲ್ಲ. ಅದಕ್ಕೆ ಬೇಕಾದ ಅವನ ಶಕ್ತಿಯನ್ನು ಅವನು ಒಗ್ಗೂಡಿಸಿಕೊಳ್ಳಲು ಯಾರು ಅವಕಾಶ ನೀಡಲಿಲ್ಲವೋ ಅವರದೇ ಈ ಎಲ್ಲ ಹೊಣೆ. ಕ್ವಾರಿಯ ಕೊನೆಗೆ ಇದ್ದ ಆ ಮನೆಯ ಮೇಲು ಅಂತಸ್ತಿನ ಕಡೆಗೆ ಅವನ ದೃಶ್ಟಿ ಹೋಯಿತು. ಮೇಲಿನ ಏನೋ ಒಂದು ರೀತಿಯ ಬೆಳಕು ಹಾಯುತ್ತಿದ್ದಂತೆ ತೆರೆದುಕೊಂಡಿತು. ಮಸುಕಾದ ಅಸ್ಪಶ್ಟ ಮನುಶ್ಯ ಆಕೃತಿಯೊಂದು ಅಶ್ಟು ಎತ್ತರದಿಂದ ಅಶ್ಟು ದೂರದಿಂದ ಹೊರನುಗ್ಗಿ ಕೈ ಚಾಚಿದಂತೆ ಕಂಡಿತು. ಯಾರಿರಬಹುದು? ಸ್ನೇಹಿತನೆ? ಸಜ್ಜನನೇ? ಇವನ ಬಗ್ಗೆ ಅನುಕಂಪ ಹೊಂದಿದವನೇ? ಸಹಾಯ ಮಾಡಲು ಬಂದಿರುವವನೇ? ಒಬ್ಬನೇ ವ್ಯಕ್ತಿಯೋ ಅಥವಾ ಹಲವಾರು ಜನರೋ? ಇನ್ನೂ ಏನಾದರೂ ಸಹಾಯ ಉಂಟೋ? ಮರೆತು ಹೋಗಿರುವ ಆಕ್ಶೇಪಗಳು ಇನ್ನೂ ಏನಾದರೂ ಉಂಟೋ? ಖಂಡಿತಾ ಇರಬಹುದು. ತರ್ಕಕ್ಕೆ ಕೊನೆ ಎಂಬುದು ಇದೆಯೇ? ಇಲ್ಲ. ಆದರೆ ಬದುಕಲು ಇಚ್ಛಿಸುವ ವ್ಯಕ್ತಿಗೆ ಖಂಡಿತವಾಗಿಯೂ ಅದರಿಂದ ಯಾವ ಪ್ರಯೋಜನವೂ ಆಗದು. ಎಂದೂ ನೋಡಿರದ ಆ ನ್ಯಾಯಾಧೀಶ ಎಲ್ಲಿದ್ದಾನೆ? ಯಾವತ್ತೂ ಹೋಗಿಯೇ ಇರದ ಆ ಹೈಕೋರ್ಟ್ ಎಲ್ಲಿದೆ? ಕೆ. ತನ್ನ ಎರಡೂ ಕೈಗಳನ್ನು ನಿಡಿದಾಗಿ ಚಾಚಿ ಬೆರಳುಗಳನ್ನು ಗಾಳಿಯಲ್ಲಿ ಅಗಲಿಸಿದ. ಒಬ್ಬನ ಕೈಗಳು ಜೆ.ಕೆ.ಯ ಗಂಟಲನ್ನು ಒತ್ತಿ ಹಿಡಿದವು. ಇನ್ನೊಬ್ಬನು ಸೀದಾ ಜೆ.ಕೆ.ಯ ಎದೆಗೆ ಇರಿದು ಅಲ್ಲೆ ಎರಡು ಬಾರಿ ತಿರುಗಿಸಿದ. ಈಗಲೂ ಕೆ. ತನ್ನ ಮುಖದ ಹತ್ತಿರವೇ ಇದ್ದ ಅವರಿಬ್ಬರ ಕೆನ್ನೆಗೆ ಕೆನ್ನೆ ತಾಕುವಂತಹ ಮುಖಗಳನ್ನು ನೋಡುತ್ತಿದ್ದ. ಅವನ ಅಂತಿಮ ಚಲನೆಯನ್ನು ಇವರು ಗಮನಿಸಿದರು. ಕೊನೆಯಲ್ಲಿ ‘ನಾಯಿಯ ಹಾಗೆ’ ಎಂದು ಕೆ. ಉಸುರಿದ. ಅವಮಾನವೇ ಆಚೆ ಹೋಗುತ್ತಿದೆಯೇನೋ ಎಂಬಂತೆ ಅವನಿಂದ ಆ ಮಾತು ಹೊರಬಂತು.







