ಕೇಂದ್ರ ಸರ್ಕಾರವು “ಭಾರತದ ಆರ್ಥಿಕತೆ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿದೆ, ನಾವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ದಾಪುಗಾಲು ಹಾಕುತ್ತಿದ್ದೇವೆ” ಎಂದು ಎದೆ ತಟ್ಟಿ ಹೇಳಿಕೊಳ್ಳುತ್ತಿದೆ. ಷೇರು ಮಾರುಕಟ್ಟೆಗಳು ನಿತ್ಯ ಹೊಸ ದಾಖಲೆ ಬರೆಯುತ್ತಿವೆ. ಆದರೆ, ಈ ಅಭಿವೃದ್ದಿಯ ಬೆಳಕು ದೇಶದ ಕಟ್ಟಕಡೆಯ ಜನಸಾಮಾನ್ಯನ ಮನೆಗೆ ಬಿದ್ದಿದೆಯೇ? ಅಂಕಿ-ಅಂಶಗಳ ಆಳಕ್ಕಿಳಿದು ನೋಡಿದರೆ, “ಭಾರತ ಬೆಳೆಯುತ್ತಿದೆ, ಆದರೆ ಭಾರತೀಯರು ಬಡವಾಗುತ್ತಿದ್ದಾರೆ” ಎಂಬ ಆಘಾತಕಾರಿ ಸತ್ಯ ಅನಾವರಣಗೊಳ್ಳುತ್ತದೆ.
ಜಿಡಿಪಿ ಎಂದರೆ ದೇಶದ ಒಟ್ಟು ಆದಾಯ. ಆದರೆ ಸರ್ಕಾರ ಹೇಳುವ ಈ ಜಿಡಿಪಿ ಬೆಳವಣಿಗೆ ಸಾಮಾನ್ಯ ಜನರ ಏಳಿಗೆಯನ್ನು ಸೂಚಿಸುತ್ತಿಲ್ಲ. ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದರೆ ಅದರಲ್ಲಿರುವ ನೈಜತೆ ನೋಡಿದರೆ ಮೇಲ್ಮಟ್ಟದಲ್ಲಿರುವ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ, ಕೆಳಮಟ್ಟದಲ್ಲಿರುವ ಬಡವರು ಇನ್ನಷ್ಟು ಪಾತಾಳಕ್ಕೆ ಕುಸಿಯುತ್ತಿದ್ದಾರೆ.
ವರದಿಗಳ ಪ್ರಕಾರ, ಭಾರತದ ಶೇ. 40ಕ್ಕೂ ಹೆಚ್ಚು ಸಂಪತ್ತು ಕೇವಲ 1% ಶ್ರೀಮಂತರ ಕೈಯಲ್ಲಿದೆ. ಅದಾನಿ ಅಥವಾ ಅಂಬಾನಿಯವರ ಸಂಪತ್ತು ಹೆಚ್ಚಾದರೆ ದೇಶದ ಜಿಡಿಪಿ ಏರುತ್ತದೆ, ಆದರೆ ಅದರಿಂದ ಹಳ್ಳಿಯಲ್ಲಿರುವ ರೈತನ ಬದುಕಿನಲ್ಲಿ ಯಾವ ಬದಲಾವಣೆಯೂ ಬೀರುವುದಿಲ್ಲ. ಹೀಗಾಗಿ, ಜಿಡಿಪಿ ಎಂಬುದು ಕೇವಲ ಶ್ರೀಮಂತರ ಲೆಕ್ಕಾಚಾರವಾಗಿದೆ.
ಜಿಡಿಪಿ ಅಬ್ಬರ ಮತ್ತು ಕಾರ್ಪೊರೇಟ್ ಓಲೈಕೆಯ ಕರಾಳ ಮುಖ
ದೇಶದ ಆರ್ಥಿಕ ನೀತಿಗಳು ಸ್ಪಷ್ಟವಾಗಿ ಬೃಹತ್ ಉದ್ಯಮಿಗಳ ಪರ ವಾಲಿದೆ ಎಂಬುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಸಾಕ್ಷಿ. ಕಳೆದ 10 ವರ್ಷಗಳಲ್ಲಿ ಬ್ಯಾಂಕುಗಳು ಕಾರ್ಪೊರೇಟ್ ಕಂಪನಿಗಳ ಬರೋಬ್ಬರಿ ₹14.5 ಲಕ್ಷ ಕೋಟಿ ಸಾಲವನ್ನು ‘ರೈಟ್ ಆಫ್’ (ಲೆಕ್ಕದಿಂದ ವಜಾ) ಮಾಡಿವೆ. ಆದರೆ, ಇದೇ ಬ್ಯಾಂಕುಗಳು ರೈತರು ಮತ್ತು ಮಧ್ಯಮ ವರ್ಗದವರು ತೆಗೆದುಕೊಂಡ ಸಾಲ ಮರುಪಾವತಿಸಲು ವಿಫಲರಾದರೆ ಅವರ ಟ್ರ್ಯಾಕ್ಟರ್ ಅಥವಾ ಇತರೆ ಆಸ್ತಿಗಳನ್ನು ಮುಲಾಜಿಲ್ಲದೆ ಜಪ್ತಿ ಮಾಡುತ್ತವೆ.
ಒಂದೆಡೆ ಸರ್ಕಾರ ದೊಡ್ಡ ಕಂಪನಿಗಳ ಕಾರ್ಪೊರೇಟ್ ತೆರಿಗೆಯನ್ನು ಇಳಿಕೆ ಮಾಡಿದೆ. ಇನ್ನೊಂದೆಡೆ, ಜನಸಾಮಾನ್ಯರು ಬಳಸುವ ಹಾಲು, ಮೊಸರು ಮತ್ತು ಹೋಟೆಲ್ ಊಟದ ಮೇಲೂ ಜಿಎಸ್‌ಟಿ (GST) ವಿಧಿಸಿದೆ. ಇದು ಅಕ್ಷರಶಃ ‘ಬಡವರಿಂದ ಕಿತ್ತು ಶ್ರೀಮಂತರಿಗೆ ನೀಡುವ’ ನೀತಿ ಸರ್ಕಾರದ್ದಾಗಿದೆ.
ಒಂದೆಡೆ ಆರ್ಥಿಕತೆ ಬೆಳೆದಿದೆ ಎನ್ನುತ್ತಾರೆ, ಇನ್ನೊಂದು ಕಡೆ ನೋಡಿದರೆ ದೇಶದಲ್ಲಿನ ಯುವಕರಿಗೆ ಕೆಲಸವಿಲ್ಲ. ‘ಭಾರತ ಉದ್ಯೋಗ ವರದಿ 2024’ (ILO Report) ಪ್ರಕಾರ, ಭಾರತದ ಒಟ್ಟು ನಿರುದ್ಯೋಗಿಗಳ ಪೈಕಿ ಶೇ. 83ರಷ್ಟು ಜನರು ಯುವಕರೇ ಆಗಿದ್ದಾರೆ. ಆರ್ಥಿಕತೆ ಚೆನ್ನಾಗಿದ್ದರೆ ಗ್ರಾಮೀಣ ಜನ ನಗರಕ್ಕೆ ಬಂದು ಕೆಲಸ ಪಡೆಯಬೇಕಿತ್ತು. ಆದರೆ ಇಂದಿಗೂ ಜನರು ನರೇಗಾ (MGNREGA) ಯೋಜನೆಯಡಿ ಕೂಲಿ ಕೆಲಸಕ್ಕೆ ಮುಗಿಬೀಳುತ್ತಿದ್ದಾರೆಂದರೆ, ಹಳ್ಳಿಗಳಲ್ಲಿ ಕೃಷಿಯೇತರ ಕೆಲಸಗಳಿಲ್ಲ ಮತ್ತು ನಗರಗಳಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದರ್ಥ.

ಬೆಲೆ ಏರಿಕೆಯ ಬರೆ ಮತ್ತು ಅನಿಶ್ಚಿತ ಭವಿಷ್ಯದ ಆತಂಕ
ಸರ್ಕಾರ ಹಣದುಬ್ಬರ ನಿಯಂತ್ರಣದಲ್ಲಿದೆ ಎಂದು ಹೇಳಿದರೂ, ಮಾರುಕಟ್ಟೆಯ ಲೆಕ್ಕಾಚಾರ ಬೇರೆಯೇ ಇದೆ. ಕಳೆದ ಒಂದು ದಶಕದಲ್ಲಿ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. 2014ರಲ್ಲಿ ₹72-₹75 ಇದ್ದ ಪೆಟ್ರೋಲ್ ಬೆಲೆ ಇಂದು ₹100 ದಾಟಿದೆ (ಶೇ. 40 ಏರಿಕೆ). ₹410 ಇದ್ದ ಅಡುಗೆ ಸಿಲಿಂಡರ್ ಬೆಲೆ ₹850-₹1100 ತಲುಪಿದೆ (ಶೇ. 140 ಏರಿಕೆ). ಹಾಲು ಲೀಟರ್‌ಗೆ ₹32 ರಿಂದ ₹58ಕ್ಕೆ ಏರಿದ್ದರೆ, ಅಡುಗೆ ಎಣ್ಣೆ ಬೆಲೆ ₹80 ರಿಂದ ₹160ಕ್ಕೆ ಜಿಗಿದಿದೆ. ಮೊಬೈಲ್ ರೀಚಾರ್ಜ್ ದರಗಳು ಕೂಡ ದುಪ್ಪಟ್ಟಾಗಿವೆ. ಬೆಲೆಗಳು ಇಷ್ಟು ಏರಿಕೆಯಾಗಿವೆ, ಆದರೆ ಜನಸಾಮಾನ್ಯರ ಸಂಬಳ ಅಥವಾ ಆದಾಯ ಇದೇ ಪ್ರಮಾಣದಲ್ಲಿ ಏರಿಕೆಯಾಗಿದೆಯೇ?
ಈ ಆರ್ಥಿಕ ಅಸಮಾನತೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಆದಾಯ ಸಾಲಲಾರದೆ, ಬದುಕು ನಡೆಸಲು ಜನರು ಕ್ರೆಡಿಟ್ ಕಾರ್ಡ್ ಮತ್ತು ಆ್ಯಪ್ ಸಾಲಗಳ ಮೊರೆ ಹೋಗುತ್ತಿದ್ದಾರೆ. ಇದು ಇಡೀ ಸಮಾಜವನ್ನು ಆರ್ಥಿಕ ಗುಲಾಮಗಿರಿಗೆ ತಳ್ಳುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ವಲಯ ಸಂಪೂರ್ಣ ಖಾಸಗೀಕರಣಗೊಂಡರೆ, ಬಡವರು ಚಿಕಿತ್ಸೆ ಮತ್ತು ಮಕ್ಕಳ ಓದಿಗಾಗಿ ತಮ್ಮ ಆಸ್ತಿ ಮಾರುವ ಪರಿಸ್ಥಿತಿ ಬರಲಿದೆ.
ಬಡವರ ಕೈಯಲ್ಲಿ ಹಣವಿಲ್ಲದಿದ್ದರೆ ಅವರು ವಸ್ತುಗಳನ್ನು ಖರೀದಿಸುವುದಿಲ್ಲ. ಖರೀದಿ ಇಲ್ಲದಿದ್ದರೆ ಮಾರುಕಟ್ಟೆ ಕುಸಿಯುತ್ತದೆ. ಆಗ ದೇಶ ಶ್ರೀಮಂತವಾಗಲೂ ಆಗದೆ, ಬಡವಾಗಿಯೂ ಉಳಿಯದೆ, ಅಭಿವೃದ್ಧಿ ಸ್ಥಗಿತಗೊಳ್ಳುವ ‘ಮಧ್ಯಮ ಆದಾಯದ ಬಲೆ’ಯಲ್ಲಿ ಸಿಲುಕುವ ಅಪಾಯವಿದೆ.
ಇದನ್ನೂ ಓದಿ | ಜಾತಿ–ಧರ್ಮದ ರಾಜಕಾರಣದ ನಡುವೆ ನಾವು ಮರೆತ ಕುವೆಂಪು ಮೌಲ್ಯಗಳು!
ಜಿಡಿಪಿ ಎಂಬುದು ಕೇವಲ ಶ್ರೀಮಂತರ ಅಂಕಿಸಂಖ್ಯೆಗಳ ಆಟವಾಗಿದ್ದರೆ, ಹಸಿದ ಹೊಟ್ಟೆಗಳಿಗೆ ದೇಶದ ಪ್ರಗತಿಯ ಕಥೆ ಹೇಳಿ ಪ್ರಯೋಜನವಿಲ್ಲ. ದೇಶಕ್ಕೆ ಬೇಕಿರುವುದು ‘ಬಿಲಿಯನೇರ್ ಭಾರತ’ ಅಲ್ಲ, ಪ್ರತಿಯೊಬ್ಬರೂ ನೆಮ್ಮದಿಯಿಂದ ‘ಬದುಕಬಲ್ಲ ಭಾರತ’. ಸರ್ಕಾರ ಇನ್ನಾದರೂ ಕಾರ್ಪೊರೇಟ್ ಪರ ಇರುವ ನೀತಿಗಳನ್ನು ಬದಿಗಿಟ್ಟು, ಸಾಮಾನ್ಯ ಜನರ ಜೇಬು ತುಂಬಿಸುವ ಕೆಲಸ ಮಾಡಬೇಕಿದೆ.







