ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಆಯೋಜಿಸಿರುವ ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಯಿಂದ ಬಾಂಗ್ಲಾದೇಶ ತಂಡವು ಭಾರತದಲ್ಲಿ ಆಡುವುದಿಲ್ಲ ಎಂದು ಹಿಂದೆ ಸರಿದಿದೆ. ಈ ಮೂಲಕ ಬಿಸಿಸಿಐ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಡುವಿನ ಶೀತಲ ಸಮರ ತಾರ್ಕಿಕ ಅಂತ್ಯ ಕಂಡಂತಾಗಿದೆ, ಆದರೆ ಅದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಭದ್ರತೆ ಮತ್ತು ರಾಜಕೀಯ ಕಾರಣಗಳನ್ನು ಮುಂದಿಟ್ಟುಕೊಂಡು ಭಾರತಕ್ಕೆ ತಂಡವನ್ನು ಕಳುಹಿಸಲು ಬಾಂಗ್ಲಾದೇಶ ನಿರಾಕರಿಸುತ್ತಲೇ ಬಂದಿತ್ತು. ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ನಡೆಸಬೇಕೆಂಬ ಬಾಂಗ್ಲಾದೇಶದ ಬೇಡಿಕೆಯನ್ನು ಬಿಸಿಸಿಐ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಐಸಿಸಿ, ಬಾಂಗ್ಲಾದೇಶಕ್ಕೆ 24 ಗಂಟೆಗಳ ಕಡತ ಗಡುವು ನೀಡಿತ್ತು.
ಈ ಗಡುವಿನ ಹಿನ್ನೆಲೆಯಲ್ಲಿ ಗುರುವಾರ ಢಾಕಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮತ್ತು ಅಲ್ಲಿನ ಸರ್ಕಾರದ ಉನ್ನತ ಮಟ್ಟದ ಸಭೆ ನಡೆಯಿತು. “ಯಾವುದೇ ಕಾರಣಕ್ಕೂ ಭಾರತಕ್ಕೆ ತಂಡವನ್ನು ಕಳುಹಿಸುವುದು ಬೇಡ, ಬೇಕಿದ್ದರೆ ವಿಶ್ವಕಪ್‌ನಿಂದಲೇ ಹಿಂದೆ ಸರಿಯೋಣ,” ಎಂದು ಸರ್ಕಾರ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ ಎನ್ನಲಾಗಿದೆ. ಈ ನಿರ್ಧಾರವನ್ನು ಬಿಸಿಬಿ ಅಧಿಕೃತವಾಗಿ ಐಸಿಸಿಗೆ ತಿಳಿಸಿದ್ದು, ಟೂರ್ನಿಯಿಂದ ತನ್ನ ಹೆಸರನ್ನು ಹಿಂಪಡೆದಿದೆ.
ಇದನ್ನೂ ಓದಿ | ಚಿನ್ನಸ್ವಾಮಿಯಲ್ಲಿ ಐಪಿಎಲ್ ಧಮಾಕಾ: ಸುರಕ್ಷತೆ ಮತ್ತು ಸಹಕಾರಕ್ಕೆ ಕೆಎಸ್‍ಸಿಎ ಆದ್ಯತೆ
ಸ್ಕಾಟ್ಲೆಂಡ್‌ಗೆ ಒಲಿದ ಅದೃಷ್ಟ:
ನಿಯಮಗಳ ಪ್ರಕಾರ, ಅರ್ಹತೆ ಪಡೆದ ತಂಡವೊಂದು ಟೂರ್ನಿಯಿಂದ ಹಿಂದೆ ಸರಿದರೆ, ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿ, ಸ್ವಲ್ಪದರಲ್ಲೇ ಅವಕಾಶ ವಂಚಿತವಾದ ತಂಡಕ್ಕೆ ಮಣೆ ಹಾಕಲಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ, ಸ್ಕಾಟ್ಲೆಂಡ್ (Scotland) ತಂಡವು ಬಾಂಗ್ಲಾದೇಶದ ಸ್ಥಾನವನ್ನು ತುಂಬಲಿದ್ದು, ಭಾರತದಲ್ಲಿ ನಡೆಯುವ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ.
ಬಾಂಗ್ಲಾದೇಶದ ಈ ನಿರ್ಧಾರವು ಏಷ್ಯಾದ ಕ್ರಿಕೆಟ್ ಸಂಬಂಧಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ನೆರೆಯ ರಾಷ್ಟ್ರಗಳ ನಡುವಿನ ರಾಜಕೀಯ ಬಿಕ್ಕಟ್ಟು ಕ್ರೀಡೆಯ ಮೇಲೂ ಪರಿಣಾಮ ಬೀರುತ್ತಿರುವುದು ದುರದೃಷ್ಟಕರ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇತ್ತ ಸ್ಕಾಟ್ಲೆಂಡ್ ಆಟಗಾರರು ಅನಿರೀಕ್ಷಿತವಾಗಿ ಸಿಕ್ಕ ಅವಕಾಶವನ್ನು ಸಂಭ್ರಮಿಸುತ್ತಿದ್ದು, ವಿಶ್ವಕಪ್‌ಗೆ ಸಜ್ಜಾಗುತ್ತಿದ್ದಾರೆ.







