ರೈಲುಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ರೈಲ್ವೆಯ ಎಲ್ಲ ಬೋಗಿಗಳು ಮತ್ತು ಎಂಜಿನ್ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ರೈಲಿನ 74,000 ಬೋಗಿಗಳು ಮತ್ತು 15,000 ಲೋಕೋಮೋಟಿವ್ (ಇಂಜಿನ್)ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಆದೇಶಿಸಿದ್ದು, ರೈಲ್ವೆ ಪ್ರಯಾಣಿಕರ ಗೋಪ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಬೋಗಿಗಳ ಬಾಗಿಲು ಬಳಿಯ ಸಾಮಾನ್ಯ ಸಂಚಾರ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ರೈಲ್ವೆ ಕೋಚ್ನಲ್ಲಿ ಪ್ರತಿ ಪ್ರವೇಶ ದ್ವಾರದ ಬಳಿ ಎರಡು ಉತ್ತಮ ಗುಣಮಟ್ಟದ ಸಿ.ಸಿ.ಟಿ.ವಿ ಕ್ಯಾಮೆರಾಗಳು ಹಾಗೂ ಪ್ರತಿ ‘ಲೋಕೋಮೋಟಿವ್ʼಗಳಲ್ಲಿ ಅದೇ ರೀತಿಯ ಆರು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದು ‘ಲೋಕೋಮೋಟಿವ್ʼನ ಮುಂಭಾಗ, ಹಿಂಭಾಗ ಮತ್ತು ಎರಡೂ ಬದಿಗಳ ದೃಶ್ಯಗಳನ್ನು ಸೆರೆಹಿಡಿಯುತ್ತದೆ ಎಂದು ಇಲಾಖೆ ಹೇಳಿದೆ.
ಇದನ್ನೂ ಓದಿ | ರಾಜ್ಯ ಬಿಜೆಪಿ ನಾಯಕರ ಮೌನ ಖಂಡನೀಯ: ರೈಲ್ವೆ ಟಿಕೆಟ್ ದರ ಏರಿಕೆಗೆ ಸಿದ್ದರಾಮಯ್ಯ ಆಕ್ರೋಶ
ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ, ನಿಲ್ದಾಣಗಳು ಮತ್ತು ರೈಲುಗಳ ಸುತ್ತಮುತ್ತ ಕಿಡಿಗೇಡಿಗಳ ದುಷ್ಕೃತ್ಯ ತಡೆಯಲು ಈ ಕ್ರಮ ನೆರವಾಗಲಿದೆ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.
ಅಲ್ಲದೇ, ಉನ್ನತ ರೈಲ್ವೆ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿದ್ದ ರೈಲ್ವೆ ಸಚಿವರು, 100+ ಕಿಮೀ ವೇಗದಲ್ಲಿ ಚಲಿಸುವ ಮತ್ತು ಕಡಿಮೆ ಬೆಳಕಿನಲ್ಲಿ ಚಲಿಸುವ ರೈಲುಗಳಿಗೆ ಸಹ ಉತ್ತಮ ಗುಣಮಟ್ಟದ ದೃಶ್ಯಾವಳಿಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಮತ್ತು ಇಂಡಿಯಾ ಎಐ ಮಿಷನ್ನ ಸಹಯೋಗದೊಂದಿಗೆ, ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲಾದ ಡೇಟಾ ಪರಿಶೀಲನೆಗೆ ಕೃತಕ ಬುದ್ಧಿಮತ್ತೆ (ಎಐ) ಬಳಕೆಯ ಸಹಾಯ ಪಡೆಯಲು ಅಧಿಕಾರಿಗಳು ಮಾರ್ಗಕಂಡುಕೊಂಡರೆ ಉತ್ತಮ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.







