“ರೈತರು ಪ್ರತಿ ಹೆಕ್ಟೇರ್‌ಗೆ ರೂ. 70,000 ರಿಂದ 80,000 ಖರ್ಚು ಮಾಡುತ್ತಾರೆ. ಸರ್ಕಾರ ಕೇವಲ17-25 ಸಾವಿರ ನೀಡಿದರೆ ಅದು ʻರೈತರ ಮೂಗಿಗೆ ತುಪ್ಪ ಸವರಿದ ಹಾಗೆʼ ಆಗುತ್ತದೆ. ಎಂದು ರೈತನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೈಋತ್ಯ ಮುಂಗಾರು ಮಳೆಯಿಂದಾಗಿ ಉತ್ತರ ಕರ್ನಾಟಕದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆಗಳು ನಾಶವಾಗಿದ್ದು ಬುಧವಾರ ಕೃಷಿ ಸಚಿವರಾದ ಕೃಷ್ಣ ಬೈರೇಗೌಡರವರು 30ದಿನಗಳಲ್ಲಿ ಪರಿಹಾರ ನೀಡುವುದಾಗಿ ಭರವಸೆಯನ್ನು ನೀಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
ಪರಿಹಾರ ವಿತರಣೆಯ ಕುರಿತು ಸಮಾಚಾರ.ಕಾಮ್‌ನೊಂದಿಗೆ ಮಾತನಾಡಿದ ರೈತಮುಖಂಡ ಚಾಮರಸ ಪಾಟೀಲ, “ಕರ್ನಾಟಕ ಸರ್ಕಾರದ ಬೆಳೆ ಪರಿಹಾರದ ಸರ್ವೇಯಲ್ಲಿ ಲೋಪದೋಷಗಳಿವೆ. ಎಲ್ಲಾ ಹೊಲಗಳಿಗೆ ಹೋಗಿ, ಹೊಲಗಳನ್ನು ನೋಡಿ ಎಷ್ಟು ನಷ್ಟವಾಗಿದೆ ಎಂದು ಪರಿಶೀಲಿಸುವುದಿಲ್ಲ. ಕೆಲವು ಕಡೆಗಳಲ್ಲಿ ಮಾತ್ರ ರೈತ ಸಂಘದವರು ಒತ್ತಾಯ ಮಾಡಿದರೆ ಸರಿಯಾಗಿ ನಡೆಯುತ್ತದೆ, ಇಲ್ಲದಿದ್ದರೆ ಸರ್ವೇಯ ಲೋಪದಿಂದ ರೈತರಿಗೆ ಪರಿಹಾರವೇ ಸಿಗುವುದಿಲ್ಲ” ಎಂದು ಕಿಡಿಕಾರಿದರು.
“ನೀರಾವರಿ ಹೊಂದಿರುವ ಭೂಮಿಗೆ ಒಂದು ಹೆಕ್ಟೇರ್‌ಗೆ ರೂ. 25,000 ಮತ್ತು ಖುಷ್ಕಿ ಭೂಮಿಗೆ ರೂ. 17,000 ನೀಡುವುದು ಕೇವಲ ತಾತ್ಕಾಲಿಕ ಸಮಾಧಾನ ಮಾತ್ರ. ರೈತರು ಪ್ರತಿ ಹೆಕ್ಟೇರ್‌ಗೆ ರೂ. 70,000 ರಿಂದ 80,000 ಖರ್ಚು ಮಾಡಿರುತ್ತಾರೆ. ಸರ್ಕಾರ ಕೇವಲ 25-17 ಸಾವಿರ ನೀಡಿದರೆ ಅದು ರೈತರ ಮೂಗಿಗೆ ತುಪ್ಪ ಸವರಿದ ಹಾಗೆ ಆಗುತ್ತದೆ. ವೈಜ್ಞಾನಿಕವಾಗಿ ಕೃಷಿ ಬೆಲೆ ಆಯೋಗ ನಿಗದಿಪಡಿಸಿರುವ ಬೆಲೆಯ ಪ್ರಕಾರ ಪರಿಹಾರ ನೀಡಬೇಕು” ಎಂದು ಪಾಟೀಲ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕ ರೈತರ ಪರಿಸ್ಥಿತಿ ಗಂಭೀರ!
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ಹೇಳಿದ ಪಾಟೀಲರು, “ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ತೊಗರಿ, ಹತ್ತಿ ಮತ್ತು ಮೆಣಸಿನಕಾಯಿ ಬೆಳೆಗಳು ಹೆಚ್ಚಾಗಿ ನಾಶವಾಗಿವೆ. ಇಲ್ಲಿನ ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ನೀಡುವ ಪರಿಹಾರ ಸುಮ್ಮನೆ ಸಮಾಧಾನಕ್ಕೆ ಮಾತ್ರ. ಕಳೆದ ಬಾರಿ ಬರಗಾಲದಲ್ಲಿ ಕೇಂದ್ರದಿಂದ ಬಂದ ಪರಿಹಾರ ಸರಿಯಾಗಿ ವಿತರಣೆಯಾಗಲಿಲ್ಲ, ರೈತ ಸಂಘದವರು ಎಷ್ಟು ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸಲಿಲ್ಲ. ಈ ಬಾರಿ ಪರಿಹಾರ ಸರಿಯಾಗಿ ದೊರೆಯದಿದ್ದರೆ ಹೋರಾಟ ಅನಿವಾರ್ಯ” ಎಂದು ಎಚ್ಚರಿಸಿದರು.
ರೈತ ಸಂಘದ ಮತ್ತೊಬ್ಬ ಮುಖಂಡ ವೀರ ಸಂಗಯ್ಯ ಅವರು, “ಬೆಳೆ ಹಾನಿ ಪರಿಹಾರ ಸಮೀಕ್ಷೆ ವೈಜ್ಞಾನಿಕವಾಗಿ ನಡೆದಿಲ್ಲ. ಇದು ಅವೈಜ್ಞಾನಿಕವಾಗಿದ್ದು, ರೈತರಿಗೆ ಪರಿಹಾರದ ಬಗ್ಗೆ ಯಾವ ಭರವಸೆಯೂ ಇಲ್ಲ” ಎಂದ ಅವರು, ಕೃಷಿ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದರು..
“ಬರಗಾಲ ಮತ್ತು ಅತಿವೃಷ್ಟಿಯಿಂದ ಕಳೆದ ವರ್ಷ ಮತ್ತು ಈ ವರ್ಷ ಬೆಳೆಗಳು ನಾಶವಾಗಿವೆ. ರೈತರು ಬ್ಯಾಂಕುಗಳಲ್ಲಿ ಸಾಲ ಪಡೆದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಲ ಮನ್ನಾ ಮಾಡಬೇಕು” ಎಂದು ಅವರು ಒತ್ತಾಯಿಸಿದರು. ಇದರ ಜೊತೆಗೆ, ಎಪಿಎಂಸಿ ಕಾಯ್ದೆಯನ್ನು ಬಲಪಡಿಸಿ, ಪ್ರಾಮಾಣಿಕ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ, “ಕರ್ನಾಟಕದಲ್ಲಿ ಎಪಿಎಂಸಿ ಟೆಂಡರ್ ಪ್ರಕ್ರಿಯೆ ಶೇ. 80ರಷ್ಟು ಬಿದ್ದೊಗಿದೆ. ಇದನ್ನು ಬಲಪಡಿಸಿದರೆ ರೈತರು ಒಂದೇ ಕಡೆ ಬೆಳೆ ಮಾರಾಟ ಮಾಡಿ ಉತ್ತಮ ಬೆಲೆ ಪಡೆಯಬಹುದು” ಎಂದು ಸಂಗಯ್ಯ ಅಭಿಪ್ರಾಯಪಟ್ಟರು.
ಪರಿಹಾರಕ್ಕೆ ಸಂಬಂದಿಸಿದಂತೆ ಸರ್ಕಾರ ನಡೆಸುತ್ತಿರುವ ಸಮಿಕ್ಷೆಯ ಕುರಿತು ಮಾಹಿತಿ ಪಡೆಯಲು ಸಮಾಚಾರ.ಕಾಮ್ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕಿಸಿದಾಗ, “ನಮಗೆ ಇನ್ನು ಅದರ ಬಗ್ಗೆ ಯಾವ ಮಾಹಿತಿಯೂ ದೊರೆತಿಲ್ಲ” ಎಂದು ಅಧಿಕಾರಿಗಳಿಂದ ಪ್ರತಿಕ್ರಿಯೆ ದೊರೆಯಿತು.
ಕರ್ನಾಟಕದಲ್ಲಿ 2025ರ ನೈಋತ್ಯ ಮುಂಗಾರು ಮಳೆಯಿಂದ ಉಂಟಾದ ಭಾರಿ ಪ್ರವಾಹ ಮತ್ತು ಅತಿವೃಷ್ಟಿ ರೈತರ ಬದುಕನ್ನು ತಲ್ಲಣಗೊಳಿಸಿದ್ದು. ಅದರಲ್ಲೂ ಕಲ್ಯಾಣ ಕರ್ನಾಟಕದ ಭಾಗಗಳು ಭಾಗಶಃ ಮುಳುಗಿ ಹೋಗಿದೆ. ಸುಮಾರು 12.54 ಲಕ್ಷ ಹೆಕ್ಟೇರ್ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ | ವಿದ್ಯಾಕಾಶಿಯಲ್ಲಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಂಡು ಪರಿಹಾರ ನೀಡುವ ಭರವಸೆ ನೀಡಿದೆ. ಮುಂದಿನ 30 ದಿನಗಳಲ್ಲಿ ಪರಿಹಾರ ಸಿಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ. ಈ ಯೋಜನೆಯ ಮೂಲಕ ರೂ. 2,000 ಕೋಟಿ ಪರಿಹಾರ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವರು ತಿಳಿಸಿದ್ದಾರೆ. ಆದರೆ ರೈತ ನಾಯಕರು ಪರಿಹಾರದ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ.







