‘ತಾರೆ ಬಿಂದಿಗೆಯ’: ಕಲಾವಿದನಿಗೆ ಸಂಜಿತ್‌ ಹೆಗ್ಡೆ ಗಾನ ನಮನ

ʼಮಾಯಾವಿʼ ಮ್ಯೂಸಿಕ್‌ ವಿಡಿಯೋ ಮೂಲಕ ಅಪಾರ ಸಂಗೀತ ಪ್ರೇಮಿಗಳ ಹೃದಯ ಗೆದ್ದ ಯುವ ಗಾಯಕ ಸಂಜಿತ್‌ ಹೆಗ್ಡೆ ʼತಾರೆ ಬಿಂದಿಗೆಯʼ ಎಂಬ ಮತ್ತೊಂದು ಹಾಡನ್ನು ಹೊರತಂದಿದ್ದಾರೆ. 
Taare Bindigeya

ʼಮಾಯಾವಿʼ ಮ್ಯೂಸಿಕ್‌ ವಿಡಿಯೋ ಮೂಲಕ ಅಪಾರ ಸಂಗೀತ ಪ್ರೇಮಿಗಳ ಹೃದಯ ಗೆದ್ದ ಯುವ ಗಾಯಕ ಸಂಜಿತ್‌ ಹೆಗ್ಡೆ ʼತಾರೆ ಬಿಂದಿಗೆಯʼ ಎಂಬ ಮತ್ತೊಂದು ಹಾಡನ್ನು ಹೊರತಂದಿದ್ದಾರೆ. 

15ನೇ ಶತಮಾನದ ಪುರಂದರದಾಸರ ಪ್ರಸಿದ್ಧ ದಾಸ ಪದ, ಸಮಕಾಲೀನ ಮೈಮ್‌ ಕಲಾವಿದರ ಬದುಕಿನೊಂದಿಗೆ ಮೇಳೈಸಿ ರೂಪಿಸಿರುವ ಈ ಹಾಡು ಈಗ ವೈರಲ್‌ ಆಗುತ್ತಿದೆ. 

ಬಿಜಯ್‌ ಶೆಟ್ಟಿ ನಿರ್ದೇಶಿಸಿರುವ ಈ ಹಾಡಿನಲ್ಲಿ ಕೊಲ್ಕತಾ ಮೂಲದ ಮೈಮ್‌ ಕಲಾವಿದ ಜೋಗೇಶ್‌ ದತ್ತಾ ಅವರ ಬದುಕನ್ನು ಚಿತ್ರಿಸಲಾಗಿದೆ. ಜೋಗೇಶ್‌ ದತ್ತಾ ಮೈಮ್‌ ಕಲೆಯ ವಾಸ್ತುಶಿಲ್ಪಿ ಎಂದೇ ಕರೆಯಲಾಗುತ್ತಿದೆ.  ಈ ಹಾಡು ಕೇವಲ ಸಂಗೀತವಲ್ಲ, ಜೋಗೇಶ್ ದತ್ತರ ಜೀವನವನ್ನು ಬಿಂಬಿಸುವ ಒಂದು ಭಾವನಾತ್ಮಕ ಪಯಣ.

ಸಾಮಾಜಿಕ ಬದಲಾವಣೆ, ಸಾಮಾಜಿಕ ಅರಿವು ಮೂಡಿಸುವುದಕ್ಕೆಂದೇ ಹೆಚ್ಚು ಬಳಕೆಯಾದ ಮೈಮ್‌ ಕಲೆಯನ್ನು ಅತ್ಯಂತ ಜನಪ್ರಿಯ ಗೊಳಿಸಿದ ಜೋಗೇಶ್‌ ದತ್ತಾ ಅವರ ಬದುಕು ಬಹಳಷ್ಟು ಜನರಿಗೆ ಅಪರಿಚಿತ. ಹಾಗೆಯೇ ಸಮಾಜದ ಡೊಂಕುಗಳನ್ನು ತಿದ್ದಲೆಂದೇ ಬರೆದ ದಾಸ ಪದಗಳು ಕೂಡ ಮೈಮ್‌ನಂತೆಯೇ ವಿಶಿಷ್ಟ ಕಲಾ ಪ್ರಯೋಗ. 

ಸಂಜಿತ್‌ ಹೆಗ್ಡೆಯವರ ʼತಾರೆ ಬಿಂದಿಗೆಯʼ ಹಾಡು ಈ ವೈಶಿಷ್ಟ್ಯಗಳನ್ನು ಒಂದೆಡೆಗೆ ತಂದು, ಅಪೂರ್ವ ಅನುಭವವನ್ನು ನೀಡುತ್ತಿದೆ.

 ʼತಾರಕ್ಕ ಬಿಂದಿಗೆಯʼ ಹಾಡನ್ನು ಬಳಸಿಕೊಂಡು ಧನಂಜಯ ರಾಜನ್‌ ಬರೆದಿರುವ ಗೀತೆಗೆ ಸನ್ನಿ ಜಫರ್‌ ಮತ್ತು ಗೌತಮ್‌ ಹೆಬ್ಬಾರ್‌ ಸಂಗೀತ ನೀಡಿದ್ದಾರೆ. ಬಿಜಯ್‌ ಶೆಟ್ಟಿ ನಿರ್ದೇಶನದಲ್ಲಿ ಸಿದ್ಧವಾಗಿರುವ ಈ ವಿಡಿಯೋ ಗೀತೆ ಕಲೆ, ಕಲಾವಿದನ ಬದುಕನ್ನು ಅತ್ಯಂತ ಆಪ್ತವಾಗಿ ಸೆರೆಹಿಡಿಯುತ್ತದೆ. ಹಾಡು ಕೇಳುವ ಅನುಭವ ಒಂದು ರೀತಿಯದ್ದಾದರೆ, ಕಲಾವಿದ ಜೋಗೇಶ್‌ ಬದುಕನ್ನು ನೋಡುವ ಅನುಭವ ಮತ್ತೊಂದು ರೀತಿಯದ್ದು. 

ಜೋಗೇಶ್‌ ದತ್ತರ 1983ರ  ‘ಎ ಸೈಲೆಂಟ್ ಆರ್ಟ್’ ಡಾಕ್ಯುಮೆಂಟರಿಯ ಆರ್ಕೈವ್ ಫೂಟೇಜ್‌ಗಳನ್ನು ಬಳಸಿಕೊಂಡು, ಬಿಜೋಯ್ ಶೆಟ್ಟಿ ನಿರ್ದೇಶಿಸಿದ ಈ ವೀಡಿಯೋದಲ್ಲಿ ದತ್ತರ ಕೊನೆಯ ಸ್ಟೇಜ್ ಶೋನ ದೃಶ್ಯಗಳು ಸೇರಿವೆ. ಶಿರೋಮಣಿ ಪುರಸ್ಕಾರ (1985) ಮತ್ತು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1993)ಗಳಂತಹ ಗೌರವಗಳನ್ನು ಪಡೆದ ದತ್ತರ ಕಲೆಯನ್ನು ದೇಶ ಮರೆತಂತೆ ಮಾಡಿದ್ದರೂ, ಸಂಜಿತ್ ಅದನ್ನು ಮತ್ತೆ ಬೆಳಕಿಗೆ ತಂದಿದ್ದಾರೆ. 

ಈ ಹಾಡು ಎರಡು ವಿಭಿನ್ನ ಕಲೆಗಳಿಗೆ ಸೇತುವೆಯಾದರೆ, ಎರಡು ಭಿನ್ನ ಭಾಷಿಕ ಸಂಸ್ಕೃತಿಗಳಿಗೂ ಸೇತುವೆಯಾಗಿ ವಿಸ್ಮಯ ಉಂಟು ಮಾಡುತ್ತದೆ. 

ಇದನ್ನೂ ಓದಿ | ಫಸ್ಟ್‌ ಶೋ | ಮುಗ್ಧತೆಯ ಸೆರಗಿನಲ್ಲಿ ಮರಳು ಮಾಫಿಯಾದ ಕರಿನೆರಳು

ತಮ್ಮ ವಿಶಿಷ್ಟ ಗಾಯನದ ಮೂಲಕ ಮನೆಮಾತಾದ ಸಂಜಿತ್‌ ಹೆಗ್ಡೆ, ವಿಭಿನ್ನ ಪ್ರಯೋಗಗಳ ಮೂಲಕ ಭಾಷೆಯ ಗಡಿ ಮೀರಿ ಸಂಗೀತದ ಹೊಸ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದಾರೆ. ಈಗಾಗಲೇ ಜನಪ್ರಿಯವಾಗಿರುವ ಮಾಯಾವಿ ಹಾಡು ಹೊಸ ತಲೆಮಾರಿನ ಸಂಗೀತ ಪ್ರೇಮಿಗಳ ಆಂಥಮ್‌ ಆಗಿ ಹೋಗಿದೆ. ಕೋಕ್‌ ಸ್ಟುಡಿಯೋಗೆ ನಿರ್ಮಿಸಿದ, ಸುಳ್ಳು ಮತ್ತು ಸತ್ಯಗಳ ಕುರಿತು ʼಗೀಜಿಗ ಹಕ್ಕಿʼ ಹಾಡೂ ಯಕ್ಷಗಾನ, ಸತ್ಯ ಹರಿಶ್ಚಂದ್ರ ಕತೆಯನ್ನು ಬೆಸೆದು, ಜನಪ್ರಿಯವಾಯಿತು. ಈ ಸಾಲಿಗೆ ʼತಾರೆ ಬಿಂದಿಗೆಯʼ ಸೇರಿದ್ದು, ಅಪಾರ ಪ್ರಶಂಸೆ ವ್ಯಕ್ತವಾಗುತ್ತಿದೆ. 

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »