“ನಾನು ಹೈಕಮಾಂಡ್ಗೆ ಅಥವಾ ರಾಹುಲ್ ಗಾಂಧಿಯವರಿಗೆ ಯಾವುದೇ ತೊಂದರೆ ಕೊಡಲು ಬಯಸುವುದಿಲ್ಲ” ಎಂಬ ಡಿಸಿಎಂ ಡಿಕೆ ಶಿವಕುಮಾರ್ರವರ ವೈರಾಗ್ಯದ ಮಾತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಭಾರೀ ಕುತೂಹಲವನ್ನು ಹುಟ್ಟುಹಾಕಿವೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ‘ಅಧಿಕಾರ ಹಂಚಿಕೆ’ (Power Sharing) ಹಗ್ಗಜಗ್ಗಾಟ ಇದೀಗ ನಿರ್ಣಾಯಕ ಹಂತ ತಲುಪಿದಂತಿದೆ. ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ಮುನ್ಸೂಚನೆ ನೀಡುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಇತ್ತೀಚಿನ ಹೇಳಿಕೆಗಳು ಕಾರ್ಯಕರ್ತರಲ್ಲಿ ಮತ್ತು ರಾಜಕೀಯ ವಲಯದಲ್ಲಿ ಭಾರೀ ಗೊಂದಲ ಹಾಗೂ ಕುತೂಹಲವನ್ನು ಹುಟ್ಟುಹಾಕಿವೆ.
ದೆಹಲಿಯ ಕರ್ನಾಟಕ ಭವನದಲ್ಲಿ ಇಂದು (ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ತಮ್ಮ ಎಂದಿನ ಆಕ್ರೋಶದ ಅಥವಾ ಅಧಿಕಾರಯುತ ಧಾಟಿಯನ್ನು ಬಿಟ್ಟು ಸಂಪೂರ್ಣವಾಗಿ ಭಿನ್ನವಾಗಿ ಕಂಡುಬಂದರು. ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ಹೈಕಮಾಂಡ್ಗೆ ಅಥವಾ ರಾಹುಲ್ ಗಾಂಧಿಯವರಿಗೆ ಯಾವುದೇ ತೊಂದರೆ ಕೊಡಲು ಬಯಸುವುದಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿಯೇ ಮುಂದುವರಿಯಲು ಬಯಸುತ್ತೇನೆ,” ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸದಾ ‘ಬಂಡೆ’ಯಂತೆ ಗಟ್ಟಿಯಾಗಿ ನಿಂತು, ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಡಿಕೆಶಿ, ಇದ್ದಕ್ಕಿದ್ದಂತೆ ಇಂತಹ ವೈರಾಗ್ಯದ ಮಾತುಗಳನ್ನಾಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಅವರ ನಿಜವಾದ ತ್ಯಾಗವೋ ಅಥವಾ ಹೈಕಮಾಂಡ್ ಮೇಲೆ ಪರೋಕ್ಷವಾಗಿ ಒತ್ತಡ ಹೇರುವ ತಂತ್ರವೋ ಎಂಬ ಚರ್ಚೆ ಈಗ ಶುರುವಾಗಿದೆ. “ನನಗೆ ಪಕ್ಷವೇ ಮುಖ್ಯ, ಅಧಿಕಾರ ನಂತರ,” ಎಂಬ ಅವರ ಮಾತುಗಳು ಅವರ ಬೆಂಬಲಿಗರಲ್ಲಿ ನಿರಾಸೆ ಮೂಡಿಸಿದಂತಿದೆ.
ಇದನ್ನೂ ಓದಿ | ಕೇಂದ್ರದ ವಿರುದ್ಧ ಗುಡುಗಿದ್ದ ತರೂರ್ ಬಿಹಾರದಲ್ಲಿ ‘ಎನ್ಡಿಎ’ಗೆ ಮೆಚ್ಚುಗೆ!
ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿನಂತೆ ತಮ್ಮ ಜಾಣ್ಮೆಯ ನಡೆ ಪ್ರದರ್ಶಿಸಿದ್ದಾರೆ. ಅಧಿಕಾರ ಹಸ್ತಾಂತರದ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, “ಆ ವಿಷಯ ಹೈಕಮಾಂಡ್ಗೆ ಬಿಟ್ಟಿದ್ದು. ದೆಹಲಿ ನಾಯಕರು ಏನು ಹೇಳುತ್ತಾರೋ ಅದನ್ನು ನಾವು ಕೇಳುತ್ತೇವೆ,” ಎಂದು ಹೇಳುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ. ತಾವಾಗಿಯೇ ಕುರ್ಚಿ ಬಿಟ್ಟುಕೊಡುವ ಮಾತನ್ನಾಡದ ಸಿದ್ದರಾಮಯ್ಯ, ಹೈಕಮಾಂಡ್ ನಿರ್ಧಾರದ ನೆಪದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.







