“ಮುಂಬೈಯನ್ನು ಲೂಟಿ ಮಾಡಲು ಹೊಂಚು ಹಾಕಿರುವ ಶಕ್ತಿಗಳ ವಿರುದ್ಧ ನಾವು ಒಂದಾಗಿದ್ದೇವೆ. ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಮರಾಠಿಗನೇ ಆಗಬೇಕು ಎಂಬುದು ನಮ್ಮ ಏಕೈಕ ಗುರಿ,” ಎಂದು ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜಕಾರಣದಲ್ಲಿ ಸುಮಾರು ಎರಡು ದಶಕಗಳ ಕಾಲ ಹಾವು- ಮುಂಗುಸಿಯಂತಿದ್ದ ಠಾಕ್ರೆ ಕುಟುಂಬದ ದಾಯಾದಿಗಳು, ಅಂದರೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ನವನಿರ್ಮಾಣ್ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅಂತಿಮವಾಗಿ ಒಂದಾಗಿದ್ದಾರೆ. ಬುಧವಾರ (ಡಿಸೆಂಬರ್ 24) ಮುಂಬೈನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಮುಂಬರುವ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.
ಮುಂಬೈನ ದಾದರ್‌ನಲ್ಲಿರುವ ಬಾಳಾ ಸಾಹೇಬ್ ಠಾಕ್ರೆ ಅವರ ಸ್ಮಾರಕವಾದ ಶಿವಾಜಿ ಪಾರ್ಕ್‌ನಲ್ಲಿ ಮೊದಲು ಉಭಯ ನಾಯಕರು ತಮ್ಮ ಕುಟುಂಬ ಸಮೇತರಾಗಿ ಪುಷ್ಪ ನಮನ ಸಲ್ಲಿಸಿದರು. ನಂತರ ಮಾಧ್ಯಮಗಳ ಎದುರು ಪ್ರತ್ಯಕ್ಷರಾದ ಸಹೋದರರು, “ಇದು ಕೇವಲ ರಾಜಕೀಯ ಮೈತ್ರಿಯಲ್ಲ, ಮರಾಠಿ ಅಸ್ಮಿತೆಯ ರಕ್ಷಣೆಗಾಗಿ ಆಗಿರುವ ಒಕ್ಕೂಟ,” ಎಂದು ಬಣ್ಣಿಸಿದರು. 2006ರಲ್ಲಿ ಶಿವಸೇನೆಯಿಂದ ಹೊರಬಂದು ರಾಜ್ ಠಾಕ್ರೆ ಪ್ರತ್ಯೇಕ ಪಕ್ಷ ಕಟ್ಟಿದ ನಂತರ, ಇದೇ ಮೊದಲ ಬಾರಿಗೆ ಇಬ್ಬರೂ ನಾಯಕರು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದಾರೆ.
ಏಕೆ ಈ ಮೈತ್ರಿ?
ಜನವರಿ 15, 2026ರಂದು ಬಿಎಂಸಿ ಸೇರಿದಂತೆ ಮಹಾರಾಷ್ಟ್ರದ ಪ್ರಮುಖ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ. ಇತ್ತೀಚಿನ ವಿಧಾನಸಭಾ ಚುನಾವಣೆ ಮತ್ತು ಪಂಚಾಯತ್ ಚುನಾವಣೆಗಳಲ್ಲಿ ಉಭಯ ಪಕ್ಷಗಳಿಗೆ ನಿರೀಕ್ಷಿತ ಫಲಿತಾಂಶ ಸಿಕ್ಕಿರಲಿಲ್ಲ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟದ (ಮಹಾಯುತಿ) ಅಬ್ಬರದ ಎದುರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಠಾಕ್ರೆ ಸಹೋದರರಿಗೆ ಒಂದಾಗುವುದು ಅನಿವಾರ್ಯವಾಗಿತ್ತು. “ಮುಂಬೈಯನ್ನು ಲೂಟಿ ಮಾಡಲು ಹೊಂಚು ಹಾಕಿರುವ ಶಕ್ತಿಗಳ ವಿರುದ್ಧ ನಾವು ಒಂದಾಗಿದ್ದೇವೆ. ಮುಂಬೈ ಮಹಾನಗರ ಪಾಲಿಕೆಯ ಮೇಯರ್ ಮರಾಠಿಗನೇ ಆಗಬೇಕು ಎಂಬುದು ನಮ್ಮ ಏಕೈಕ ಗುರಿ,” ಎಂದು ರಾಜ್ ಠಾಕ್ರೆ ಗುಡುಗಿದ್ದಾರೆ.
ಸದ್ಯಕ್ಕೆ ಮೈತ್ರಿ ಘೋಷಣೆಯಾಗಿದ್ದರೂ, ಸೀಟು ಹಂಚಿಕೆಯ ಅಂತಿಮ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಮೂಲಗಳ ಪ್ರಕಾರ, ಒಟ್ಟು 227 ವಾರ್ಡ್‌ಗಳ ಪೈಕಿ ಶಿವಸೇನೆ (ಯುಬಿಟಿ) ಸಿಂಹಪಾಲು (ಸುಮಾರು 140-150 ಸ್ಥಾನ) ಪಡೆಯಲಿದ್ದು, ಎಂಎನ್‌ಎಸ್ ಸುಮಾರು 60-70 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ದಾದರ್, ಮಾಹಿಮ್, ವರ್ಲಿ ಮತ್ತು ಪರೇಲ್‌ನಂತಹ ಮರಾಠಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಈ ಮೈತ್ರಿಕೂಟ ಭಾರೀ ಪ್ರಭಾವ ಬೀರುವ ನಿರೀಕ್ಷೆಯಿದೆ.
ಇದನ್ನೂ ಓದಿ | “ಚುನಾವಣೆ ತಪ್ಪಿಸಲು ಸರ್ಕಾರವೇ ನನ್ನ ತಮ್ಮನ ಕೊಲೆ ಮಾಡಿಸಿದೆ”: ಹಾದಿ ಸಹೋದರನ ಆರೋಪ
ವಿರೋಧಿಗಳ ಪ್ರತಿಕ್ರಿಯೆ:
ಈ ಬೆಳವಣಿಗೆಯನ್ನು ಬಿಜೆಪಿ ಮತ್ತು ಶಿಂಧೆ ಬಣ ಲೇವಡಿ ಮಾಡಿದೆ. “ಇದು ಸೋಲಿನ ಭಯದಿಂದ ಮಾಡಿಕೊಂಡಿರುವ ಹೊಂದಾಣಿಕೆ. ಎರಡು ಮುಳುಗುತ್ತಿರುವ ಹಡಗುಗಳು ಒಂದಾದರೆ ತೇಲಲು ಸಾಧ್ಯವಿಲ್ಲ,” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಲೇವಡಿ ಮಾಡಿದ್ದಾರೆ.
ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್, ರಾಜ್ ಠಾಕ್ರೆ ಅವರ ಆಗಮನದಿಂದ ಅಂತರ ಕಾಯ್ದುಕೊಂಡಿದೆ. ರಾಜ್ ಅವರ ಹಿಂದಿನ ಉತ್ತರ ಭಾರತೀಯರ ವಿರೋಧಿ ನಿಲುವು ಕಾಂಗ್ರೆಸ್‌ಗೆ ಇರಿಸುಮುರಿಸು ಉಂಟುಮಾಡಿದ್ದು, ಬಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.







