ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಐತಿಹಾಸಿಕ ಕ್ಷಣ! ಕನ್ನಡದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರ ಕಥಾಸಂಕಲನ ‘ಹೃದಯ ದೀಪ’ಕ್ಕೆ 2025ರ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭಿಸಿದೆ. ಈ ಕೃತಿಯನ್ನು ಇಂಗ್ಲಿಷ್ಗೆ ಭಾಷಾಂತರಿಸಿದ ಲೇಖಕಿ ದೀಪಾ ಭಾಸ್ತಿ ಅವರ ಕೊಡುಗೆಯೂ ಈ ಗೆಲುವಿನಲ್ಲಿ ಪ್ರಮುಖವಾಗಿದೆ.
ಮೇ 20, 2025ರಂದು ಲಂಡನ್ನ ಟೇಟ್ ಮಾಡರ್ನ್ನಲ್ಲಿ ನಡೆದ ಸಮಾರಂಭದಲ್ಲಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ಬಾನು ಅವರು ಈ ಗೆಲುವನ್ನು ವೈವಿಧ್ಯತೆಯ ವಿಜಯವೆಂದು ಬಣ್ಣಿಸಿದರು. ಈ ಕೃತಿಯಲ್ಲಿ ‘ಹೃದಯ ದೀಪ’ದಲ್ಲಿ ಮುಸ್ಲಿಂ ಸಮುದಾಯದ ಬಾಲಕಿಯರು ಹಾಗೂ ಹೆಣ್ಣುಮಕ್ಕಳ ದೈನಂದಿನ ಬದುಕು ಈ ಕತೆಗಳಲ್ಲಿ ಅನಾವರಣಗೊಂಡಿದೆ. ಹಾಗಾಗಿ ತೀರ್ಪುಗಾರರ ಮೆಚ್ಚುಗೆಗೆ ‘ಹೃದಯ ದೀಪʼ ಕೃತಿ ಪಾತ್ರವಾಯಿತು.

ಈ ವಾರ್ಷಿಕ ಪ್ರಶಸ್ತಿಯು ಮೇ 2024 ರಿಂದ ಏಪ್ರಿಲ್ 2025ರವರೆಗೆ ಯುಕೆ ಅಥವಾ ಐರ್ಲೆಂಡ್ನಲ್ಲಿ ಇಂಗ್ಲಿಷ್ಗೆ ಭಾಷಾಂತರಗೊಂಡ ಉನ್ನತ ಕಾದಂಬರಿಗಳು ಅಥವಾ ಕತೆಗಳ ಸಂಕಲನಗಳಿಗೆ ನೀಡಲಾಗುತ್ತದೆ. ‘ಹೃದಯ ದೀಪ’ ಕೃತಿಯು ಕನ್ನಡದ ಸಾಹಿತ್ಯದ ಶಕ್ತಿಯನ್ನು ವಿಶ್ವಕ್ಕೆ ತೋರಿಸಿತು. ಬಾನು ಮುಷ್ತಾಕ್ ತಮ್ಮ ಕೃತಿಯ ಬಗ್ಗೆ ಮಾತನಾಡುತ್ತಾ, ‘ಯಾವ ಕಥೆಯೂ ಸಣ್ಣದಲ್ಲ, ಅನುಭವದ ವಸ್ತ್ರದಲ್ಲಿನ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು’ ಎಂದು ಹೇಳಿದ್ದಾರೆ. ಅನುವಾದಕಿ ದೀಪಾ ಭಸ್ತಿ, “ನನ್ನ ಸುಂದರ ಭಾಷೆಗೆ ಇದೊಂದು ಸೊಗಸಾದ ಗೆಲುವು” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಧನೆಯನ್ನು ಕೊಂಡಾಡಿದರು. “ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರಿಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಗೆದ್ದಿದ್ದಕ್ಕೆ ಹೃದಯಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗರು ಮತ್ತು ಕರ್ನಾಟಕವನ್ನು ಆಚರಿಸುವ ಸಮಯ” ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದರು.
ಲೋಕಸಭಾ ಸದಸ್ಯ ಮತ್ತು ಲೇಖಕ ಶಶಿ ಥರೂರ್ ಕೂಡ ಮುಷ್ತಾಕ್ ಅವರನ್ನು ಅಭಿನಂದಿಸಿದರು. “ಭಾರತೀಯ ಬರವಣಿಗೆಗೆ ಮತ್ತೊಂದು ಜಯ, ವೈವಿಧ್ಯತೆಯ ಆಚರಣೆ ಮತ್ತು ‘ಯಾವ ಕತೆಯೂ ಚಿಕ್ಕದಲ್ಲ’ ಎಂಬ ಲೇಖಕಿಯ ನಂಬಿಕೆಯೇ ಗೆಲುವು” ಎಂದು ಅವರು ತಿಳಿಸಿದರು.
ಈ ಗೆಲುವು ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಾನ್ಯತೆಯನ್ನು ತಂದಿದ್ದು, ಕನ್ನಡಿಗರೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ.







