ಪ್ರತಿ ವರ್ಷ ಜೂನ್ 5 ರಂದು ಆಚರಿಸಲಾಗುವ ವಿಶ್ವ ಪರಿಸರ ದಿನಾಚರಣೆಯು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನುಂಟು ಮಾಡುವ ಒಂದು ವಿಶ್ವವ್ಯಾಪಿ ಚಳವಳಿಯಾಗಿದೆ. ಈ ವರ್ಷದ ಥೀಮ್ “ಪ್ಲಾಸ್ಟಿಕ್ ಮಾಲಿನ್ಯ ಮುಕ್ತ” ಎಂಬುದಾಗಿದೆ. ಇದು ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳತ್ತ ಗಮನ ಸೆಳೆಯುತ್ತದೆ. ಮನುಷ್ಯ ಬಳಸುವ ಈ ಪ್ಲಾಸ್ಟಿಕ್ ಕೇವಲ ಮನುಷ್ಯನಿಗೆ ಮಾತ್ರವಲ್ಲದೇ ಮೂಕಪ್ರಾಣಿಗಳಿಗು ಪ್ರಾಣ ಹಾನಿ ಮಾಡುತ್ತವೆ. ಪ್ಲಾಸ್ಟಿಕ್ ಬಳಕೆಯಿಂದಾಗುವ ಅಪಾಯದ ಬಗ್ಗೆ ಗೊತ್ತಿದ್ದರು ಕೂಡ ಬಳಕೆಯ ಪ್ರಮಾಣವನ್ನು ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತಲೇ ಹೋಗುತ್ತಿದ್ದೇವೆ. ಇದರ ಪರಿಣಾಮವನ್ನು ಈಗಾಗಲೇ ನಾವು ಹಲವು ತರಹಗಳಲ್ಲಿ ಅನುಭವಿಸುತ್ತಿದ್ದೇವೆ. ಆದರೂ ಎಚ್ಚೆತ್ತುಕೊಳ್ಳುತ್ತಿಲ್ಲ.
ದಿನ ಬೆಳಗಾದರೆ ನಾವು ಎಷ್ಟೊಂದು ಪ್ಲಾಸ್ಟಿಕ್ ಬಳಸುತ್ತೇವೆ ಎಂದರೆ, ಅದನ್ನು ಲೆಕ್ಕ ಹಾಕಲು ಸಾಧ್ಯವೇ ಇಲ್ಲ. ಬೆಳಿಗ್ಗೆ ಎದ್ದ ಕೂಡಲೇ ಟೂತ್‌ಪೇಸ್ಟ್‌ನ ಟ್ಯೂಬ್‌ನಿಂದ ಹಿಡಿದು, ಆಹಾರದ ಪ್ಯಾಕೇಜಿಂಗ್, ನೀರಿನ ಬಾಟಲಿಗಳು, ಶಾಂಪೂ ಕಂಟೇನರ್‌ಗಳು, ದಿನಸಿ ಕೊಂಡು ತರುವ ಚೀಲಗಳು ಎಲ್ಲವೂ ಪ್ಲಾಸ್ಟಿಕ್‌ನಿಂದಲೇ ತಯಾರಾಗಿರುತ್ತವೆ. ಒಂದು ಅಂದಾಜಿನ ಪ್ರಕಾರ, ಒಬ್ಬ ಸಾಮಾನ್ಯ ವ್ಯಕ್ತಿಯು ದಿನಕ್ಕೆ ಕನಿಷ್ಠ 50-100 ಗ್ರಾಂ ಪ್ಲಾಸ್ಟಿಕ್ ಬಳಸುತ್ತಾನೆ. ಇದರಲ್ಲಿ ಹೆಚ್ಚಿನ ಭಾಗವು ಒಮ್ಮೆ ಮಾತ್ರ ಬಳಕೆಯಾಗಿ ತ್ಯಾಜ್ಯವಾಗಿ ಬದಲಾಗುವ ಪ್ಲಾಸ್ಟಿಕ್‌ಗಳು.
ಈ ಇಂಟರ್‌ನೆಟ್ ಯುಗದಲ್ಲಿ ಇ-ಕಾಮರ್ಸ್‌ನ ಜನಪ್ರಿಯತೆಯಿಂದಾಗಿ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆಯನ್ನು ಇನ್ನಷ್ಟು ಹದಗೊಳಿಸಿದೆ. ಆನ್‌ಲೈನ್ ಶಾಪಿಂಗ್‌ನ ಉದಯದಿಂದಾಗಿ, ಪ್ರತಿಯೊಂದು ಉತ್ಪನ್ನವನ್ನೂ ಸುರಕ್ಷಿತವಾಗಿ ಗ್ರಾಹಕರಿಗೆ ತಲುಪಿಸುವ ನಿಟ್ಟಿನಿಂದ ಹಲವಾರು ಪದರಗಳ ಪ್ಲಾಸ್ಟಿಕ್ ಕವರ್‌ಗಳನ್ನು ಬಳಸಲಾಗುತ್ತದೆ. ಒಂದು ಸಣ್ಣ ವಸ್ತುವನ್ನು ಆರ್ಡರ್ ಮಾಡಿದರೂ, ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ, ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿ, ಮತ್ತೆ ಅಂಟಿನ ಟೇಪ್‌ನಿಂದ ಸೀಲ್ ಮಾಡಲಾಗುತ್ತದೆ.
ಇನ್ನು ಈ ರಟ್ಟಿನ ಪೆಟ್ಟಿಗೆಯ ವಿಷಯಕ್ಕೆ ಬಂದರೆ ಇದರಿಂದ ಪರಿಸರಕ್ಕೆ ತುಂಬ ದೊಡ್ಡ ನಷ್ಟ. ರಟ್ಟಿನ ಪೆಟ್ಟಿಗೆಯ ತಯಾರಿಕೆಗೆ ಮರಗಳನ್ನು ಕಡಿಯಲಾಗುತ್ತದೆ, ಇದರಿಂದಾಗಿ ಕಾಡಿನ ಜೀವವೈವಿಧ್ಯಕ್ಕೆ ಧಕ್ಕೆಯುಂಟಾಗುತ್ತದೆ. ಅಲ್ಲದೇ, ಕಾಡುಗಳು ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ಒದಗಿಸುವ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತವೆ, ಇದರಿಂದ ಹವಾಮಾನ ಬದಲಾವಣೆ ಇನ್ನಷ್ಟು ತೀವ್ರಗೊಳ್ಳುತ್ತದೆ. ಒಟ್ಟಾರೆಯಾಗಿ, ಒಂದು ದಿನಕ್ಕೆ ಲಕ್ಷಾಂತರ ಆರ್ಡರ್‌ಗಳು ಆಗುವಾಗ, ಈ ಪ್ಲಾಸ್ಟಿಕ್ ಮತ್ತು ರಟ್ಟಿನ ತ್ಯಾಜ್ಯವು ಒಂದು ದೊಡ್ಡ ಸಂಖ್ಯೆಯನ್ನು ತಲುಪಿ, ಎಲ್ಲೆಂದರಲ್ಲಿ ಎಸೆದು ಪರಿಸರವನ್ನು ಹಾಳು ಮಾಡುವಲ್ಲಿ ದೊಡ್ಡ ಕೊಡುಗೆಯನ್ನು ನೀಡುತ್ತವೆ.

ಇತ್ತೀಚಿನ ದಿನಗಳಲ್ಲಿಈ ಪ್ಲಾಸ್ಟಿಕ್ ತ್ಯಾಜ್ಯವು ಪರಿಸರಕ್ಕೆ ಗಂಭೀರ ಸವಾಲಾಗಿದೆ. ಇದು ಸಾಮಾನ್ಯವಾಗಿ ಭೂಮಿಯಲ್ಲಿ ಅಥವಾ ಸಮುದ್ರದಲ್ಲಿ ಕರಗಿ ಹೋಗದೆ, ನೂರಾರು ವರ್ಷಗಳ ಕಾಲ ಉಳಿದುಕೊಳ್ಳುತ್ತದೆ. ಸಮುದ್ರದಲ್ಲಿ ತೇಲುವ ಪ್ಲಾಸ್ಟಿಕ್ ತ್ಯಾಜ್ಯವು ಸಮುದ್ರ ಜೀವಿಗಳಿಗೆ ಮಾರಕವಾಗಿದ್ದು, ಮೀನುಗಳು, ಕಡಲಾಮೆಗಳು ಮತ್ತು ಇತರ ಜೀವಿಗಳು ಇದನ್ನು ಆಹಾರವೆಂದು ತಿನ್ನುವುದರಿಂದ ಸಾವನ್ನಪ್ಪುತ್ತವೆ. ಒಂದು ಅಂದಾಜಿನ ಪ್ರಕಾರ, ವಿಶ್ವದಾದ್ಯಂತ ಪ್ರತಿ ವರ್ಷ 8 ದಶಲಕ್ಷ ಮೆಟ್ರಿಕ್ ಟನ್‌ಗಿಂತಲೂ ಹೆಚ್ಚು ಪ್ಲಾಸ್ಟಿಕ್ ಸಮುದ್ರವನ್ನು ಪ್ರವೇಶಿಸುತ್ತದೆ. ಇದರಿಂದ ನೀರು ಕಲುಷಿತ ಆಗುವುದರ ಜೊತೆಗೆ, ಮುಗ್ಧ ಮೂಕ ಪ್ರಾಣಿಗಳು ಬಲಿಯಾಗುತ್ತವೆ.
ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡಲು ಕೆಲವು ಸರಳ ಆದರೆ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೊದಲನೆಯದಾಗಿ, ಇ-ಕಾಮರ್ಸ್ ಕಂಪನಿಗಳು ಸಮರ್ಥನೀಯ ಪ್ಯಾಕೇಜಿಂಗ್ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ಜೈವಿಕ ವಿಘಟನೀಯ ವಸ್ತುಗಳಿಂದ ತಯಾರಾದ ಕವರ್‌ಗಳು, ಕಡಿಮೆ ಪ್ಲಾಸ್ಟಿಕ್ ಬಳಕೆ ಮತ್ತು ಮರುಬಳಕೆಗೆ ಒತ್ತು ನೀಡುವ ರಟ್ಟಿನ ಪೆಟ್ಟಿಗೆಗಳನ್ನು ಬಳಸಬೇಕು. ಗ್ರಾಹಕರೂ ಸಹ ತಮ್ಮ ಜವಾಬ್ದಾರಿಯನ್ನು ಅರಿತು, ಮರುಬಳಕೆಯ ಚೀಲಗಳನ್ನು ಬಳಸುವುದು, ಏಕ ಬಳಕೆಯ ಪ್ಲಾಸ್ಟಿಕ್‌ನ್ನು ತಪ್ಪಿಸುವುದು ಮತ್ತು ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸುವುದರ ಮೂಲಕ ತಮ್ಮ ಕೊಡುಗೆಯನ್ನು ನೀಡಬೇಕು. ಸರ್ಕಾರವು ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆಯ ಮೇಲೆ ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು.
ಒಬ್ಬೊಬ್ಬರ ಸಣ್ಣ ಕ್ರಮಗಳು ಒಟ್ಟಾರೆಯಾಗಿ ದೊಡ್ಡ ಬದಲಾವಣೆಯನ್ನು ತರಬಹುದು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ, ಮರಗಿಡಗಳನ್ನು ನೆಡುವುದು, ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು ಸಮರ್ಥನೀಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ನಮ್ಮ ಗ್ರಹದ ಆರೋಗ್ಯಕ್ಕೆ ಒಂದು ಕೊಡುಗೆಯಾಗಬಹುದು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾದಾಗ ಮಾತ್ರ ಭವಿಷ್ಯದ ಪೀಳಿಗೆಗೆ ಒಂದು ಹಸಿರಾದ, ಆರೋಗ್ಯಕರ ಭೂಮಿಯನ್ನು ಕೊಡಬಹುದು.
ಇದರ ಜೊತೆಗೆ, ವಿಶ್ವ ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಾಗಿರದೆ, ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಒಂದು ನಿರಂತರ ಚಳವಳಿಯಾಗಿರಬೇಕು. ಇ-ಕಾಮರ್ಸ್‌ನಿಂದ ಉಂಟಾಗುವ ಪ್ಲಾಸ್ಟಿಕ್ ಮಾಲಿನ್ಯ ಮತ್ತು ಮರಗಳ ಕಡಿತದಂತಹ ಸಮಸ್ಯೆಗಳನ್ನು ಎದುರಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಹೀಗೆ ಮಾಡಿದ್ದಲ್ಲಿ ನಮ್ಮ ಸುಂದರ ಗ್ರಹವನ್ನು ರಕ್ಷಿಸುವ ದಿಕ್ಕಿನಲ್ಲಿ ಒಂದು ದೊಡ್ಡ ಹೆಜ್ಜೆ ಇಟ್ಟಂತಾಗುತ್ತದೆ.







