ಬೆಂಗಳೂರು: ಕರ್ನಾಟಕದ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಆಗಸ್ಟ್ 15, 2025ರಿಂದ ಎಲ್ಲಾ ಬಗೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದ್ದಾರೆ. ವಿಕಾಸಸೌಧದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ರಮವು ರಾಜ್ಯದ ದೇವಾಲಯಗಳನ್ನು ಪರಿಸರ ಸ್ನೇಹಿಯಾಗಿಸುವ ಗುರಿಯನ್ನು ಹೊಂದಿದೆ. “ನೀರಿನ ಬಾಟಲ್ ಸೇರಿದಂತೆ ಯಾವುದೇ ಪ್ಲಾಸ್ಟಿಕ್ ಉತ್ಪನ್ನಗಳನ್ನು ದೇವಾಲಯದ ಆವರಣದಲ್ಲಿ ಬಳಸುವಂತಿಲ್ಲ. ಈಗಿರುವ ಪ್ಲಾಸ್ಟಿಕ್ ಸಂಗ್ರಹವನ್ನು ಆಗಸ್ಟ್ 15ರ ಒಳಗೆ ಬಳಸಿಕೊಂಡು ಮುಗಿಸಬೇಕು,” ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಈ ಆದೇಶವನ್ನು ಜಾರಿಗೊಳಿಸಲು ದೇವಾಲಯ ಆಡಳಿತ ಮಂಡಳಿಗಳಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಪ್ಲಾಸ್ಟಿಕ್-ಮುಕ್ತ ದೇವಾಲಯಗಳ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ. ಈ ಕ್ರಮವು ರಾಜ್ಯದ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗಲಿದೆ ಎಂದು ಸಚಿವರು ಒತ್ತಿ ಹೇಳಿದರು. ಇದರ ಜೊತೆಗೆ, ದೇವಾಲಯಗಳಲ್ಲಿ ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಉತ್ತೇಜಿಸಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಜನೆ ರೂಪಿಸಲಾಗುವುದು.
ಸಭೆಯಲ್ಲಿ ಚಾಮುಂಡೇಶ್ವರಿ ಬೆಟ್ಟದ ಒತ್ತುವರಿ ತೆರವುಗೊಳಿಸುವ ಕುರಿತು ಮಹತ್ವದ ಚರ್ಚೆ ನಡೆಯಿತು. ಈಗಾಗಲೇ 11 ಎಕರೆ ಒತ್ತುವರಿಯಾದ ಜಾಗವನ್ನು ತೆರವುಗೊಳಿಸಲಾಗಿದ್ದು, ಉಳಿದ ಜಾಗವನ್ನು ಶೀಘ್ರವಾಗಿ ತೆರವುಗೊಳಿಸಲು ಸೂಚನೆ ನೀಡಲಾಗಿದೆ. ರಾಜ್ಯದಾದ್ಯಂತ ಇರುವ ಮುಜರಾಯಿ ದೇವಾಲಯಗಳ ಒಟ್ಟು 20 ಸಾವಿರ ಎಕರೆ ಜಮೀನಿನ ಇಂಡೀಕರಣವನ್ನು ಮೂರು ತಿಂಗಳ ಒಳಗೆ ಪೂರ್ಣಗೊಳಿಸಲು ಆದೇಶಿಸಲಾಗಿದೆ. ಗ್ರಾಮಾಂತರ ಮತ್ತು ನಗರ ಭಾಗದ ದೇವಾಲಯ ಆಸ್ತಿಗಳನ್ನು ಪ್ರತ್ಯೇಕವಾಗಿ ಸರ್ವೆ ಮಾಡಿ, ದಾಖಲೆಗಳನ್ನು ಸರಿಪಡಿಸಿ ನೋಟಿಫಿಕೇಶನ್ಗೆ ಸಿದ್ಧಪಡಿಸಲು ಸೂಚಿಸಲಾಗಿದೆ.
ಅರ್ಚಕರಿಗೆ ತಸ್ತೀಕ್ (ವೇತನ) ನೇರ ಬ್ಯಾಂಕ್ ವರ್ಗಾವಣೆ (ಡಿಬಿಟಿ) ಮೂಲಕ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಒಟ್ಟು 25 ಸಾವಿರ ಅರ್ಚಕರ ಪೈಕಿ 14 ಸಾವಿರ ಮಂದಿ ತಮ್ಮ ವಿವರಗಳನ್ನು ಈಗಾಗಲೇ ಸಲ್ಲಿಸಿದ್ದಾರೆ. ಉಳಿದವರು ಶೀಘ್ರವಾಗಿ ಮಾಹಿತಿ ನೀಡಿದರೆ, ಎಲ್ಲರಿಗೂ (ಡಿಬಿಟಿ) ಮೂಲಕ ತಸ್ತೀಕ್ ವಿತರಣೆ ಸಾಧ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ 31 ಜಿಲ್ಲೆಗಳಲ್ಲಿ ಧಾರ್ಮಿಕ ಪರಿಷತ್ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 8 ಜಿಲ್ಲೆಗಳಲ್ಲಿ ಇದು ರಚನೆಯಾಗಿದ್ದು, ಉಳಿದ ಜಿಲ್ಲೆಗಳಲ್ಲಿ ಶೀಘ್ರವಾಗಿ ರಚನೆಗೊಳಿಸಲು ಆದೇಶ ನೀಡಲಾಗಿದೆ. ಇದರ ಜೊತೆಗೆ, ತಿರುಪತಿ, ತುಳಿಜಾಪುರ, ಪಂಡರಾಪುರ ಸೇರಿದಂತೆ ಇತರ ರಾಜ್ಯಗಳಲ್ಲಿರುವ ಮುಜರಾಯಿ ಇಲಾಖೆಯ ವಸತಿ ಭವನಗಳಲ್ಲಿ 3-ಸ್ಟಾರ್ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ಈ ಭವನಗಳ ರೂಮ್ ಬುಕ್ಕಿಂಗ್ಗೆ ಆನ್ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲು ಸೂಚನೆ ನೀಡಲಾಗಿದೆ.
ಹುಲಿಗೆಮ್ಮ, ಮಲೆ ಮಹದೇಶ್ವರ, ಘಾಟಿ ಸುಬ್ರಮಣ್ಯ, ರೇಣುಕಾ ಎಲ್ಲಮ್ಮ, ಮತ್ತು ಚಾಮುಂಡೇಶ್ವರಿ ದೇವಾಲಯಗಳಿಗೆ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲ್ಯಾನ್ ರೂಪಿಸಲು ನಿರ್ಧರಿಸಲಾಗಿದೆ. ಈ ಯೋಜನೆಯು ದೇವಾಲಯಗಳ ಮೂಲಸೌಕರ್ಯವನ್ನು ಆಧುನೀಕರಣಗೊಳಿಸಿ, ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವ ಗುರಿಯನ್ನು ಹೊಂದಿದೆ ಎಂದರು.







