ಅಪ್ಪ ಎಂದರೆ ಏನು? ಎಂದು ಪ್ರತಿಯೊಬ್ಬರನ್ನೂ ಕೇಳುತ್ತಾ ಹೋದರೆ, ನಮ್ಮೆದುರು ಅಪ್ಪನ ಬಗೆಗಿನ ಭಾವನೆಗಳ ಅನಂತತೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಅಮ್ಮನನ್ನು ಹಾಡಿ ಹೊಗಳುವ ನಾವು, ಅಪ್ಪನ ಬಗ್ಗೆ ಅಷ್ಟು ಸಲೀಸಾಗಿ ಎಂದೂ ಮಾತನಾಡಲಾರೆವು.
ನಮ್ಮ ನಡುವೆ ಅದೇಷ್ಟೋ ಜನರಿಗೆ ಅಪ್ಪ ಎಂದರೆ ಆಕಾಶ. ಇನ್ನು ಕೆಲವರಿಗೆ ಆ ಆಕಾಶವೂ ತಾಯಿಯೇ ಆಗಿರುತ್ತಾಳೆ. ಅಪ್ಪನ ಬಗೆಗಿನ ಪ್ರೀತಿ, ಗೌರವ, ಭಯ ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ. ಕೆಲವರು ತಮ್ಮ ತಂದೆಯ ಬಗ್ಗೆ ಹೆಮ್ಮೆಯಿಂದ, ಇನ್ನು ಕೆಲವರು ಪ್ರೀತಿಯಿಂದ, ಮತ್ತೆ ಕೆಲವರು ಅಸಡ್ಡೆಯಿಂದ ಅಥವಾ ಹತಾಶ ಭಾವದಿಂದಲೂ ಅಪ್ಪನನ್ನು ನೆನೆಯುತ್ತಾರೆ.
ಆದರೆ, ಒಂದೊಮ್ಮೆ ‘ಅಪ್ಪ’ ಎಂಬ ಪದ ಕಿವಿಗೆ ತಾಗುತ್ತಿದ್ದಂತೆ, ಎಲ್ಲರ ಕಣ್ಣೆದುರು ಕಾಣುವ ಚಿತ್ರಣ ಮಾತ್ರ ಒಂದೇ. ಗತ್ತು, ಗಾಂಭೀರ್ಯ, ಗದರುವ ಧ್ವನಿ, ಸಿಡುಕು ಮುಖ, ಮಾತು ಕಡಿಮೆ, ಕಣ್ಣಲ್ಲೇ ಹೆದರಿಸುವವ—ಹೀಗೆ, ಇದೆಲ್ಲದರ ಅಮೂರ್ತ ರೂಪವೇ ಅಪ್ಪ. ಅಪ್ಪನನ್ನು ಕಂಡು ಭಯಪಡದ ಮಕ್ಕಳು ಬಹುಶಃ ನಮಗೆ ಎಲ್ಲೂ ಸಿಗಲಾರರು.
ಜೀವನದುದ್ದಕ್ಕೂ ಮಕ್ಕಳ ಜೊತೆಗೇ ಇದ್ದರೂ, ಇಲ್ಲ ಎಂಬಂತೆ ಬದುಕುವ ಶ್ರಮಜೀವಿ ಅಪ್ಪ. ಮಕ್ಕಳ ಮೇಲೆ ಅಗಾಧ ಪ್ರೀತಿ ಇದ್ದರೂ, ಅದನ್ನು ತನ್ನೊಳಗೇ ಇಟ್ಟುಕೊಂಡು, ಆದಷ್ಟು ಮಕ್ಕಳ ಎದುರು ಗಂಭೀರವಾಗಿರುತ್ತಾನೆ. ತಾಯಿ ಮಕ್ಕಳನ್ನು ಪ್ರಪಂಚಕ್ಕೆ ತರುತ್ತಾಳೆ; ತಂದೆ ಆ ಪ್ರಪಂಚವನ್ನು ಪರಿಚಯಿಸುತ್ತಾನೆ. ತಂದೆಯೊಬ್ಬ ತಾನು ಓದಲಾಗದ್ದನ್ನು ಮಕ್ಕಳು ಓದಲಿ ಎಂದು ಬಯಸುತ್ತಾನೆ. ತಾನು ನೋಡಲಾಗದ ಪ್ರಪಂಚವನ್ನು ತನ್ನ ಮಕ್ಕಳು ನೋಡಲಿ ಎಂದು ಕನಸು ಕಾಣುತ್ತಾನೆ. ತಾನು ಮಾಡಲಾಗದ ಸಾಧನೆಯನ್ನು ಮಕ್ಕಳು ಮಾಡಲಿ ಎಂದು ಹಂಬಲಿಸುತ್ತಾನೆ. ತಾನು ಮಾಡಲಾಗದ್ದನ್ನು ಮಕ್ಕಳು ಮಾಡಲಿ ಎಂಬ ಆಸೆಗೆ, ಅಪ್ಪ ತನ್ನನ್ನು ಕಠಿಣಗೊಳಿಸಿಕೊಂಡು ಮಕ್ಕಳನ್ನು ಶಿಸ್ತಿನಲ್ಲಿ ಬೆಳೆಸುತ್ತಾನೆ.

ಮಕ್ಕಳ ಏಳಿಗೆಯನ್ನು ದೂರದಿಂದಲೇ ನೋಡಿ, ಒಳಗೊಳಗೇ ಆನಂದವನ್ನು ಅನುಭವಿಸುವ ಅಪ್ಪ, ಎಂದೂ ತನ್ನ ಭಾವನೆಗಳನ್ನು ಅಮ್ಮನಂತೆ ಹೊರಹಾಕಲಾರ.
ಅಮ್ಮ ಎಂದರೆ ತ್ಯಾಗಮಯಿ, ಕರುಣಾಮೂರ್ತಿ, ಪ್ರೀತಿಯ ಧಾರೆ. ನಾವು ಹುಟ್ಟಿನಿಂದಲೂ ಅವಳನ್ನು ನೋಡುತ್ತಾ, ಅವಳ ಮಾತು ಕೇಳುತ್ತಾ, ಆ ಪ್ರೀತಿಯನ್ನು ಅನುಭವಿಸುತ್ತಾ ಬೆಳೆಯುತ್ತೇವೆ. ಆಕೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಕಸರತ್ತು ಬೇಕಿಲ್ಲ. ಆದರೆ, ಅಪ್ಪನನ್ನು ಅರ್ಥಮಾಡಿಕೊಳ್ಳುವುದು ಹೆಣ್ಣುಮಕ್ಕಳಿಗೆ ಮದುವೆಯಾದ ಮೇಲೆ, ಗಂಡುಮಕ್ಕಳಿಗೆ ತಾವು ಅಪ್ಪನಾದ ಮೇಲೆ.
ಮಗಳೊಬ್ಬಳಿಗೆ ಅಪ್ಪ ಅವಳ ಮೊದಲ ಹೀರೋ. ಯಾರು ಮಾಡಲಾರದ್ದನ್ನು ಮಾಡುವವ, ಯಾರು ಕೊಡಿಸಲಾಗದ್ದನ್ನು ಕೊಡಿಸುವವ, ಜಗತ್ತಿನ ಶ್ರೇಷ್ಠ ಮತ್ತು ತುಂಬಾ ಒಳ್ಳೆಯ ವ್ಯಕ್ತಿಯೂ ಅವಳ ಪಾಲಿಗೆ ಅಪ್ಪನೇ. ಅಮ್ಮನನ್ನು ಒಂದು ಕ್ಷಣ ಬಿಟ್ಟರೂ, ತಂದೆಯನ್ನು ಎಂದೂ ಬಿಟ್ಟುಕೊಡಲಾರಳು. ಹೆಣ್ಣುಮಗುವನ್ನು ಬೆಳೆಸುವ ಅಪ್ಪ ಅವಳಿಂದ ಕಲಿತು ಬದಲಾಗುತ್ತಾನೆ. ಅಪ್ಪಂದಿರು ಯಾರಾದರೂ ಮಾತು ಕೇಳುತ್ತಾರೆಂದರೆ, ಅದು ತಮ್ಮ ಮಗಳ ಮಾತೇ ಆಗಿರುತ್ತದೆ. ಮಗನಿಗೆ ಎಲ್ಲವನ್ನೂ ಕಲಿಸುವ ಅಪ್ಪ, ಮಗಳಿಂದ ಕಲಿಯಲು ಇಷ್ಟಪಡುತ್ತಾನೆ.
ಕಾಲ ಬದಲಾದಂತೆ, ಈ ಟಿಪಿಕಲ್ ಅಪ್ಪಂದಿರು ಮರೆಯಾಗುತ್ತಿದ್ದಾರೆ. ಈ ತಲೆಮಾರಿನ ಅಪ್ಪಂದಿರು ತಮ್ಮ ಮಕ್ಕಳೊಂದಿಗೆ ಅಮ್ಮನಂತೆ ಬೆರೆಯುತ್ತಿದ್ದು, ಮಕ್ಕಳ ಇಷ್ಟದ ಅಪ್ಪನಾಗಲು ಶ್ರಮಿಸುತ್ತಿದ್ದಾರೆ. ಕೆಲ ದಶಕಗಳ ಹಿಂದೆ, ಶಾಲೆಗೆ ಮಕ್ಕಳನ್ನು ಬಿಡಲು ಅಮ್ಮಂದಿರೇ ಬರಬೇಕಿತ್ತು; ಇಲ್ಲದಿದ್ದರೆ, ಮಕ್ಕಳು ಶಾಲೆಯೊಳಗೂ ಬರುತ್ತಿರಲಿಲ್ಲ. ಆದರೆ, ಇಂದು ಪ್ರತಿ ಶಾಲೆಯ ಮುಂದೆ ಮಕ್ಕಳ ಜೊತೆ ಬರೀ ಅಪ್ಪಂದಿರೇ ಕಾಣಸಿಗುತ್ತಾರೆ.
ಮಕ್ಕಳನ್ನು ನೋಡಿಕೊಳ್ಳುವುದು ಬರೀ ತಾಯಿಯೊಬ್ಬಳ ಕೆಲಸ ಎಂಬ ಅಲಿಖಿತ ನಿಯಮ ನಮ್ಮ ಮಧ್ಯೆ ಇದೆ. ಈ ಭಾವನೆ ಹೊಸ ತಲೆಮಾರಿನ ಅಪ್ಪಂದಿರಲ್ಲಿ ಕಡಿಮೆ ಕಾಣುತ್ತದೆ. ಅವರು ಅಪ್ಪನೊಂದಿಗಿನ ಬಾಲ್ಯವನ್ನು ಸೃಷ್ಟಿಸುವತ್ತ ಹೊರಳಿದ್ದಾರೆ. ಮಕ್ಕಳು ತಮ್ಮನ್ನು ತಾಯಿಯಂತೆ ಪ್ರೀತಿಸಲಿ ಎಂಬ ಬಯಕೆ ಅವರದ್ದು.
ಅಪ್ಪ ನನ್ನೊಟ್ಟಿಗೆ ಹೀಗೆ ಇರಬೇಕಿತ್ತು ಎಂದುಕೊಂಡವರು, ಇಂದು ತಾವು ತಂದೆಯಾದಾಗ, ತಮ್ಮ ಅಪ್ಪನಿಂದ ಬಯಸಿದ ಪ್ರೀತಿ, ವಾತ್ಸಲ್ಯ, ಆತ್ಮೀಯತೆಯನ್ನು ತಮ್ಮ ಮಕ್ಕಳಿಗೆ ಧಾರೆಯಾಗಿ ಎರೆಯುತ್ತಿದ್ದಾರೆ. ಮೊದಲಿನ ಅಪ್ಪಂದಿರ ಎಲ್ಲ ಸ್ವಭಾವವೂ ಈ ಹೊಸ ತಲೆಮಾರಿನ ಅಪ್ಪಂದಿರಲ್ಲಿದೆ. ಆದರೆ, ಅದನ್ನು ತೋರಿಸಿಕೊಳ್ಳುವ ರೀತಿ ಬೇರೆ.
ನನ್ನ ಅಪ್ಪ ನಮ್ಮ ಜೊತೆ ಆಟವಾಡಿದ, ಕೂತು ಮಾತನಾಡಿದ, ಇಲ್ಲವೇ ಅಮ್ಮನಂತೆ ಅತ್ತಾಗ ಸಮಾಧಾನ ಮಾಡಿದ ನೆನಪು ನಮಗಿಲ್ಲ. ನಾವು ಅಪ್ಪನನ್ನು ಯಾವಾಗಲೂ ಗಂಭೀರವಾಗಿಯೇ ನೋಡಿದ್ದೇವೆ. ಆದರೆ, ಇಂದು ನಮ್ಮ ಮಕ್ಕಳನ್ನು ಅವರ ಅಪ್ಪಂದಿರು ಅಮ್ಮನಂತೆ ನೋಡಿಕೊಳ್ಳುವುದನ್ನು ಕಂಡಾಗ ಎನ್ನಿಸುವುದು—ಅಪ್ಪಾ, ಹೀಗೂ ಇರಬಹುದು







