ಕರ್ನಾಟಕ ಸಿವಿಲ್ ಪ್ರಕರಣಗಳಿಗೆ ತ್ವರಿತ ನ್ಯಾಯ: ಸಿಪಿಸಿ ತಿದ್ದುಪಡಿ 2024 ಜಾರಿ

ಕರ್ನಾಟಕದಲ್ಲಿ ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ನಾಗರಿಕರಿಗೆ ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) 1908ನ್ನು ತಿದ್ದುಪಡಿ ಮಾಡುವ “ಸಿವಿಲ್ ಪ್ರಕ್ರಿಯಾ ಸಂಹಿತೆ ಅಧಿನಿಯಮ, 2024”ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ.

ಬೆಂಗಳೂರು: ಕರ್ನಾಟಕದಲ್ಲಿ ಸಿವಿಲ್ ಪ್ರಕರಣಗಳ ತ್ವರಿತ ವಿಲೇವಾರಿ ಮತ್ತು ನಾಗರಿಕರಿಗೆ ಶೀಘ್ರ ನ್ಯಾಯ ಒದಗಿಸುವ ಉದ್ದೇಶದಿಂದ ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) 1908ನ್ನು ತಿದ್ದುಪಡಿ ಮಾಡುವ “ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024”ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೇ 19, 2025ರಂದು ಅಂಕಿತ ಹಾಕಿದ್ದಾರೆ. ಈ ಕಾನೂನನ್ನು ರಾಜ್ಯ ಸರಕಾರವು ಜೂನ್ 02, 2025ರಂದು ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಿದ್ದು, ಇದೀಗ ಜಾರಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ತಿದ್ದುಪಡಿ ಮಸೂದೆಯನ್ನು ರಾಜ್ಯ ವಿಧಾನಮಂಡಲದ ಎರಡೂ ಸದನಗಳು ಅಂಗೀಕರಿಸಿದ್ದವು. ರಾಜ್ಯಪಾಲರು ಸಂವಿಧಾನದ ಅನುಚ್ಛೇದ 200 ಮತ್ತು 254ರ ಅಡಿ ಈ ಮಸೂದೆಯನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯ್ದಿರಿಸಿದ್ದರು.

ಕರ್ನಾಟಕದಲ್ಲಿ ಸಿವಿಲ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಸುಮಾರು 10 ಲಕ್ಷಕ್ಕೂ ಅಧಿಕ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಇವುಗಳಲ್ಲಿ ಹೆಚ್ಚಿನವು ಭೂ ವಿವಾದಗಳಿಗೆ ಸಂಬಂಧಿಸಿದ್ದು, ಕೆಲವು ಪ್ರಕರಣಗಳು 20 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಬಾಕಿ ಉಳಿದಿವೆ. ಈ ಸಮಸ್ಯೆಯನ್ನು ಪರಿಹರಿಸಿ, ನ್ಯಾಯದಾನ ಪ್ರಕ್ರಿಯೆಯಲ್ಲಿ ವೇಗತರಗೊಳಿಸುವ ಗುರಿಯೊಂದಿಗೆ ಈ ತಿದ್ದುಪಡಿ ಕಾನೂನು ರೂಪಿಸಲಾಗಿದೆ. “ನ್ಯಾಯ ವಿಳಂಬವಾದರೆ ಅದು ನ್ಯಾಯ ನಿರಾಕರಣೆಗೆ ಸಮಾನ” ಎಂಬ ತತ್ವವನ್ನು ಆಧರಿಸಿ, ಈ ಕಾನೂನು ನ್ಯಾಯ ಸುಧಾರಣೆಯತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಈ ತಿದ್ದುಪಡಿಯ ಪ್ರಕಾರ, ಯಾವುದೇ ಸಿವಿಲ್ ಪ್ರಕರಣವು ತುರ್ತು ಮಧ್ಯಂತರ ಪರಿಹಾರವನ್ನು ಒಳಗೊಂಡಿಲ್ಲದಿದ್ದರೆ, ಅಂತಹ ಪ್ರಕರಣಗಳನ್ನು ಮೊದಲು ಮಧ್ಯಸ್ಥಿಕೆಗೆ ಕಡ್ಡಾಯವಾಗಿ ಒಳಪಡಿಸಲಾಗುವುದು. ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಬೇಕು, ಮತ್ತು ಅರ್ಜಿದಾರರು ಹಾಗೂ ಪ್ರತಿವಾದಿಗಳ ಒಪ್ಪಿಗೆ ಇದ್ದರೆ ಇನ್ನೊಂದು ತಿಂಗಳು ವಿಸ್ತರಿಸಬಹುದು. ಮಧ್ಯಸ್ಥಿಕೆಯಲ್ಲಿ ಒಪ್ಪಂದ ಸಾಧ್ಯವಾದರೆ, ಅದನ್ನು ಲಿಖಿತವಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಮತ್ತು ನ್ಯಾಯಾಲಯವು ರಾಜಿ-ಸಂಧಾನವನ್ನು ದೃಢಪಡಿಸುತ್ತದೆ. ಒಂದುವೇಳೆ ಮಧ್ಯಸ್ಥಿಕೆ ವಿಫಲವಾದರೆ, ನ್ಯಾಯಾಲಯವು ತಕ್ಷಣ ವಿಚಾರಣೆಯನ್ನು ಪ್ರಾರಂಭಿಸಲಿದೆ.

ಪ್ರಕರಣವು ವಿಚಾರಣೆಗೆ ಬಂದಾಗ, ಮೊದಲ ದಿನವೇ ತೀರ್ಪಿನ ದಿನಾಂಕವನ್ನು ನಿಗದಿಪಡಿಸಲಾಗುವುದು. ಜೊತೆಗೆ, ಲಿಖಿತ ಹೇಳಿಕೆ ಸಲ್ಲಿಕೆ, ಸಾಕ್ಷ್ಯ ಸಂಗ್ರಹ, ಪ್ರಮಾಣಪತ್ರ ಸಲ್ಲಿಕೆ, ಸಾಕ್ಷ್ಯ ದಾಖಲಿಸುವಿಕೆ, ಲಿಖಿತ ವಾದ ಮಂಡನೆ, ಮೌಖೀಕ ವಾದ ಸಲ್ಲಿಕೆ, ಮತ್ತು ಚರ್ಚೆಗೆ ಸಂಬಂಧಿಸಿದಂತೆ ಒಂದು ಸ್ಪಷ್ಟ ವೇಳಾಪಟ್ಟಿಯನ್ನು ನ್ಯಾಯಾಲಯವು ಸೂಚಿಸಲಿದೆ. ಈ ಪ್ರಕ್ರಿಯೆಯು 24 ತಿಂಗಳೊಳಗೆ ಪೂರ್ಣಗೊಳ್ಳಬೇಕು ಎಂಬುದು ಕಾನೂನಿನ ಮುಖ್ಯ ಉದ್ದೇಶವಾಗಿದೆ. ಯಾವುದೇ ಹಂತದಲ್ಲಿ ಒಂದು ತಿಂಗಳಲ್ಲಿ ಕೇವಲ ಮೂರು ಮುಂದೂಡಿಕೆಗಳಿಗೆ ಮಾತ್ರ ಅವಕಾಶವಿದ್ದು, ಅರ್ಜಿದಾರರು ಅಥವಾ ಪ್ರತಿವಾದಿಗಳು ಈ ಅವಕಾಶವನ್ನು ಸರಿಯಾಗಿ ಬಳಸದಿದ್ದರೆ, ಅವರ ಹೇಳಿಕೆಗಳನ್ನು ಶೂನ್ಯವೆಂದು ಪರಿಗಣಿಸಲಾಗುವುದು.

Share:

ಮತ್ತಷ್ಟು ಸುದ್ದಿ

ಮೋದಿಯನ್ನು ಸ್ವಾಗತಿಸಿದ ಬೆನ್ನಲ್ಲೇ ಕರ್ನಾಟಕದ ಪರ ದನಿ ಎತ್ತಿದ ಸಿದ್ದರಾಮಯ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮನವಿ ಗೌರವಾನ್ವಿತ ಪ್ರಧಾನ ಮಂತ್ರಿಯವರೇ, ಕರ್ನಾಟಕಕ್ಕೆ ನಿಮ್ಮ ಸ್ವಾಗತವನ್ನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ.

ಟೆಸ್ಲಾದಿಂದ ಬರ್ತಿದೆ 14 ಅಡಿ ಉದ್ದದ ಎಲೆಕ್ಟ್ರಿಕ್ ಕಾರ್

ಭಾರತದ ಶ್ರೀಸಾಮಾನ್ಯನಿಗೆ ಹೊಂದುತ್ತದೆಯೇ? ಜಾಗತಿಕ ಎಲೆಕ್ಟ್ರಿಕ್ ವಾಹನ ದೈತ್ಯ ‘ಟೆಸ್ಲಾ’ ಕಂಪನಿಯು ಸದ್ದಿಲ್ಲದೆ ಹೊಸದೊಂದು ಕ್ರಾಂತಿಗೆ ಸಿದ್ಧವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ

ಚಂದ್ರನ ಕತ್ತಲ ಪಾರ್ಶ್ವದ ಅಪರೂಪದ ಚಿತ್ರಗಳನ್ನು ಬಿಡುಗಡೆ ಮಾಡಿದ ನಾಸಾ!

ಬಾಹ್ಯಾಕಾಶ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಬೆಂಗಳೂರು: ದಶಕಗಳ ಬಳಿಕ ಮಾನವನ ಚಂದ್ರಯಾನದ ಕನಸು ನನಸಾಗುವತ್ತ ದಾಪುಗಾಲು ಹಾಕುತ್ತಿದೆ. ನಾಸಾದ ಮಹತ್ವಾಕಾಂಕ್ಷಿ

ಡಾ. ರಾಜ್‌ಕುಮಾರ್ ಆತ್ಮಚರಿತ್ರೆ ‘ಕಥಾನಾಯಕನ ಕಥೆ’ ಬಿಡುಗಡೆ

ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ಲೋಕಾರ್ಪಣೆ ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಜೀವನಗಾಥೆಯನ್ನು ಸಾರುವ ಆತ್ಮಚರಿತ್ರೆ

ಮುಂದೆ ಓದಿ »

ಏಪ್ರಿಲ್ 7 ಕೇವಲ ದಿನಾಂಕವಲ್ಲ, ನಮ್ಮ ಬದುಕಿನ ‘ಆರೋಗ್ಯ’ದ ಕನ್ನಡಿ!

ಏಪ್ರಿಲ್ 7 ಎಂದರೆ ಸಾಮಾನ್ಯ ದಿನವಲ್ಲ. ಜಗತ್ತಿನಾದ್ಯಂತ ಈ ದಿನವನ್ನು ಮಹತ್ವದ ಸಂದೇಶಗಳನ್ನು ಹೊತ್ತ ದಿನವಾಗಿ ಆಚರಿಸಲಾಗುತ್ತದೆ. ವಿಶೇಷವಾಗಿ, World

ಮುಂದೆ ಓದಿ »

ಅನಿಲ ಕೊರತೆ ವಿರುದ್ಧ ಬೆಂಗಳೂರಲ್ಲಿ ಬಾದಲ್ ನಂಜುಂಡಸ್ವಾಮಿ ಸಿಲಿಂಡರ್‌ ಕಲಾಕೃತಿ

ಅಡುಗೆ ಮನೆಗೆ ಯುದ್ಧದ ಬಿಸಿ ಜನಪ್ರತಿನಿಧಿಗಳಿಗೆ ತಲುಪಿಸಲು ಹೊಸ ಪ್ರಯತ್ನ ಬೆಂಗಳೂರು: ಜಾಗತಿಕ ರಾಜಕೀಯದ ಬಿಕ್ಕಟ್ಟು ಕೇವಲ ಗಡಿಗಳಿಗೆ ಸೀಮಿತವಾಗಿಲ್ಲ,

ಮುಂದೆ ಓದಿ »