ಬೆಂಗಳೂರು: ಐಪಿಎಲ್ 2025ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು 6 ರನ್‌ಗಳಿಂದ ಮಣಿಸಿ, 18 ವರ್ಷಗಳ ಕಾಲದ ಐಪಿಎಲ್ ಟ್ರೋಫಿ ಕನಸನ್ನು ನನಸಾಗಿಸಿತು. 190/9 ರನ್‌ಗಳ ಸ್ಕೋರ್‌ನೊಂದಿಗೆ ಆರ್‌ಸಿಬಿಯ ಬ್ಯಾಟಿಂಗ್ ಮತ್ತು ಕೃನಾಲ್ ಪಾಂಡ್ಯ (2/17), ಜೋಶ್ ಹ್ಯಾಜಲ್‌ವುಡ್, ಮತ್ತು ಭುವನೇಶ್ವರ್ ಕುಮಾರ್‌ರ ಬಿಗುವಿನ ಬೌಲಿಂಗ್‌ನಿಂದ ಪಿಬಿಕೆಎಸ್ 184/7ಕ್ಕೆ ಸೀಮಿತವಾಯಿತು. ಈ ಐತಿಹಾಸಿಕ ಗೆಲುವಿಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮತ್ತು ಆರ್‌ಸಿಬಿಯ ಮಾಜಿ ಮಾಲೀಕ ವಿಜಯ್ ಮಾಲ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಆರ್‌ಸಿಬಿಯ ಗೆಲುವಿನ ನಂತರ, ಮಾಜಿ ಮಾಲೀಕ ವಿಜಯ್ ಮಲ್ಯ ಎಕ್ಸ್‌ನಲ್ಲಿ ಎರಡು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದರು. ಮೊದಲನೆಯದಾಗಿ, “ಆರ್‌ಸಿಬಿ 18 ವರ್ಷಗಳ ನಂತರ ಐಪಿಎಲ್ ಚಾಂಪಿಯನ್ಸ್ ಆಗಿದ್ದಾರೆ. 2025ರ ಟೂರ್ನಿಯ ಉದ್ದಕ್ಕೂ ಅದ್ಭುತ ಕಾರ್ಯಕ್ಷಮತೆ. ಸಮತೋಲಿತ ತಂಡ, ಧೈರ್ಯದ ಆಟ, ಅತ್ಯುತ್ತಮ ಕೋಚಿಂಗ್ ಮತ್ತು ಸಿಬ್ಬಂದಿಯ ಬೆಂಬಲ . ತುಂಬ ಅಭಿನಂದನೆಗಳು! ಈ ಸಲ ಕಪ್ ನಮ್ದೇ!!” ಎಂದು ಬರೆದರು. ಎರಡನೇ ಟ್ವೀಟ್‌ನಲ್ಲಿ, “ನಾನು ಆರ್‌ಸಿಬಿಯನ್ನು ಸ್ಥಾಪಿಸಿದಾಗ, ಐಪಿಎಲ್ ಟ್ರೋಫಿ ಬೆಂಗಳೂರಿಗೆ ಬರಬೇಕೆಂಬುದು ನನ್ನ ಕನಸಾಗಿತ್ತು. ಯುವ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ ಗೌರವ ನನಗೆ ಸಿಕ್ಕಿತು, ಅವರು 18 ವರ್ಷಗಳ ಕಾಲ ಆರ್‌ಸಿಬಿಯೊಂದಿಗೆ ಇದ್ದದ್ದು ಅದ್ಭುತ. ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್‌ರನ್ನು ಆಯ್ಕೆ ಮಾಡಿದ ಗೌರವವೂ ನನಗಿದೆ,” ಎಂದು ತಮ್ಮ ಕೊಡುಗೆಯನ್ನು ಸ್ಮರಿಸಿದರು.
ರಾಜಕೀಯ ಗಣ್ಯರ ಅಭಿನಂದನೆಯ ಸುರಿಮಳೆ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ, “Rrrrrrrrr…. Cccccccc…. Bbbbbbbbb…. ಇದು ಇತಿಹಾಸ ಸೃಷ್ಟಿಸಿದ ದಿನ! ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್‌ನನ್ನು ಸೋಲಿಸಿ ಟ್ರೋಫಿ ಎತ್ತಿಹಿಡಿದ ಆರ್‌ಸಿಬಿಗೆ ಅಭಿನಂದನೆಗಳು. ವಿರಾಟ್ ಕೊಹ್ಲಿಯ 18 ವರ್ಷಗಳ ತಪಸ್ಸು, ಬದ್ಧತೆ, ಮತ್ತು ತಂಡದ ಒಗ್ಗಟ್ಟಿನ ಪ್ರದರ್ಶನವು ಕೋಟ್ಯಂತರ ಅಭಿಮಾನಿಗಳ ಕನಸನ್ನು ನನಸಾಗಿಸಿದೆ. ಈ ಸಲ ಕಪ್ ನಮ್ದೇ!” ಎಂದು ಬರೆದುಕೊಂಡಿದ್ದಾರೆ.
“ಈ ಸಲ ಕಪ್ ನಮ್ದೇ! 18 ವರ್ಷಗಳ ಉತ್ಸಾಹ, ನಿಷ್ಠೆ, ಮತ್ತು ತಾಳ್ಮೆಯ ಫಲವಾಗಿ ಆರ್‌ಸಿಬಿಯು ಐಪಿಎಲ್ 2025 ಟ್ರೋಫಿಯನ್ನು ಗೆದ್ದಿದೆ. ಇದು ಕೇವಲ ಗೆಲುವಲ್ಲ, ಇಡೀ ಕರ್ನಾಟಕದ ಹೆಮ್ಮೆಯ ಕ್ಷಣ. ಆರ್‌ಸಿಬಿ ಸೈನ್ಯಕ್ಕೆ ಈ ಐತಿಹಾಸಿಕ ಗೆಲುವು ಮರೆಯಲಾಗದ ಕ್ಷಣವಾಗಿದೆ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಆರ್‌ಸಿಬಿಯ ಗೆಲುವನ್ನು “ಭಾವನಾತ್ಮಕ ಕ್ಷಣ” ಎಂದು ಕರೆದಿದ್ದಾರೆ. ಪಂದ್ಯಕ್ಕೂ ಮುನ್ನ, “ಬೆಂಗಳೂರು ಬಾಯ್ಸ್ ಗೆಲುವಿನ ಜೊತೆಗೆ ಟ್ರೋಫಿಯನ್ನು ತಂದೇ ತೀರತಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಐಪಿಎಲ್ 2025ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಆರ್‌ಸಿಬಿಗೆ ಹೃತ್ಪೂರ್ವಕ ಅಭಿನಂದನೆಗಳು. ರಜತ್ ಪಾಟಿದಾರ್ ನಾಯಕತ್ವದಲ್ಲಿ ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸಾಗಿಸಿದ ಈ ಗೆಲುವು ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದೆ. ವಿರಾಟ್ ಕೊಹ್ಲಿಯ 18 ವರ್ಷಗಳ ಸಮರ್ಪಣೆಯನ್ನು ವಿಶೇಷವಾಗಿ ಶ್ಲಾಘಿಸುತ್ತೇನೆ,” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
“18 ವರ್ಷಗಳ ಭರವಸೆ, ದುಃಖ, ಮತ್ತು ಉತ್ಸಾಹದ ನಂತರ ಕನಸು ಕೊನೆಗೂ ನನಸಾಗಿದೆ. ಆರ್‌ಸಿಬಿಗೆ ಚಾಂಪಿಯನ್ಸ್ ಎಂದು ಅಭಿನಂದನೆಗಳು,” ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಅಭಿಮಾನಿಗಳು ಆರ್‌ಸಿಬಿ ಜರ್ಸಿಗಳಲ್ಲಿ ಸಂಭ್ರಮಾಚರಣೆ ಮಾಡಿದ್ದು, ಈ ಗೆಲುವು ಕರ್ನಾಟಕದಾದ್ಯಂತ ಸಂತಸದ ಅಲೆಯನ್ನು ಸೃಷ್ಟಿಸಿತು.
ಈ ಗೆಲುವಿನೊಂದಿಗೆ, 2009, 2011, ಮತ್ತು 2016ರಲ್ಲಿ ಫೈನಲ್‌ನಲ್ಲಿ ಸೋತಿದ್ದ ಆರ್‌ಸಿಬಿಯ ಇತಿಹಾಸ ಬದಲಾಯಿತು. ವಿರಾಟ್ ಕೊಹ್ಲಿಯ 43 ರನ್‌ಗಳು, ಜಿತೇಶ್ ಶರ್ಮಾರ 24 ರನ್‌ಗಳು, ಮತ್ತು ತಂಡದ ಒಗ್ಗಟ್ಟಿನ ಪ್ರದರ್ಶನವು ಈ ಜಯಕ್ಕೆ ಕಾರಣವಾಯಿತು. ಕರ್ನಾಟಕದ ಜನತೆ, ವಿಶೇಷವಾಗಿ ಬೆಂಗಳೂರಿನಲ್ಲಿ, ರಾತ್ರಿಯಿಡೀ ಪಟಾಕಿಗಳೊಂದಿಗೆ ಸಂಭ್ರಮಿಸಿದರು







