ಅಹಮದಾಬಾದ್: ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI171), ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಮೇಘನಿನಗರದಲ್ಲಿ ಪತನಗೊಂಡಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿಗಳನ್ನು ಒಳಗೊಂಡಂತೆ ಒಟ್ಟು 242 ಜನರನ್ನು ಹೊತ್ತಿತ್ತು. ಈ ದುರಂತದಲ್ಲಿ 170ಕ್ಕೂ ಹೆಚ್ಚು ಜನರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದ್ದು, ತುರ್ತು ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡಿವೆ.

ವಿಮಾನವು ಮಧ್ಯಾಹ್ನ 1:38ಕ್ಕೆ ರನ್‌ವೇ 23ರಿಂದ ಟೇಕ್‌ಆಫ್ ಆಗಿದ್ದು, ಕೇವಲ ಐದು ನಿಮಿಷಗಳಲ್ಲಿ 625 ಅಡಿ ಎತ್ತರಕ್ಕೆ ಏರಿದ ನಂತರ ಇದ್ದಕ್ಕಿದ್ದಂತೆ ಇಳಿಮುಖವಾಗಿವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫೋರೆನ್ಸಿಕ್ ಕ್ರಾಸ್ ರಸ್ತೆಯ ಬಳಿ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡದ ಮೇಲೆ ಪತನಗೊಂಡಿತು. ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ವಿಮಾನವನ್ನು ನಿರ್ವಹಿಸುತ್ತಿದ್ದರು. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ATC)ಗೆ “ಮೇಡೇ” ಎಚ್ಚರಿಕೆ ಕರೆ ನೀಡಿದ್ದರು, ಆದರೆ ನಂತರ ಯಾವುದೇ ಸಂಪರ್ಕವಿಲ್ಲದೆ ವಿಮಾನವು ಕುಸಿಯಿತು. “ಮೇಡೇ” ಎಂಬುದು ಜಾಗತಿಕವಾಗಿ ಗುರುತಿಸಲ್ಪಟ್ಟ ತುರ್ತು ಸಂಕೇತವಾಗಿದ್ದು, ಇದು ವಿಮಾನದಲ್ಲಿ ಜೀವಕ್ಕೆ ಕುತ್ತು ತರುವ ತೊಂದರೆಯನ್ನು ಸೂಚಿಸುತ್ತದೆ.

ಘಟನೆಯಿಂದಾಗಿ ದಟ್ಟ ಕಪ್ಪು ಹೊಗೆಯು ಆಕಾಶದಲ್ಲಿ ಕಾಣಿಸಿಕೊಂಡಿದ್ದು, ವಿಮಾನದ ಭಾಗವೊಂದು ಕಟ್ಟಡದ ಮೇಲೆ ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಕ್ಷಣವೇ ಏಳು ಅಗ್ನಿಶಾಮಕ ವಾಹನಗಳು, 24ಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳು, ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ 90 ಸಿಬ್ಬಂದಿಯನ್ನು ಒಳಗೊಂಡ ಮೂರು ತಂಡಗಳು ರಕ್ಷಣಾ ಕಾರ್ಯಕ್ಕೆ ಧಾವಿಸಿವೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಅಹಮದಾಬಾದ್ ಪೊಲೀಸರು ತುರ್ತು ಸಹಾಯವಾಣಿ ಸಂಖ್ಯೆ 079-25620359 ಮತ್ತು ಏರ್ ಇಂಡಿಯಾ 1800 5691 444ನ್ನು ಪ್ರಕಟಿಸಿದ್ದಾರೆ.
ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್, 7 ಪೋರ್ಚುಗೀಸ್, ಮತ್ತು 1 ಕೆನಡಾದ ಪ್ರಯಾಣಿಕರಿದ್ದರು. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಕೂಡ ಈ ವಿಮಾನದಲ್ಲಿದ್ದರು ಎಂದು ವರದಿಯಾಗಿದೆ. ದುರಂತದ ಕಾರಣವನ್ನು ತನಿಖೆಯ ಮೂಲಕ ಖಚಿತಪಡಿಸಲಾಗುತ್ತಿದ್ದು, ಇಂಜಿನ್ ವೈಫಲ್ಯ ಅಥವಾ ಪಕ್ಷಿಗಳ ಢಿಕ್ಕಿಯ ಸಾಧ್ಯತೆಯನ್ನು ತಜ್ಞರು ಶಂಕಿಸಿದ್ದಾರೆ. ಅಹಮದಾಬಾದ್ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಏರ್ ಇಂಡಿಯಾದ ಅಧ್ಯಕ್ಷ ಎನ್. ಚಂದ್ರಶೇಖರನ್, “ನಾವು ಈ ದುರಂತದಿಂದ ಆಘಾತಗೊಂಡಿದ್ದೇವೆ. ಪೀಡಿತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇವೆ,” ಎಂದು ಹೇಳಿದ್ದಾರೆ. ಟಾಟಾ ಗ್ರೂಪ್ ಮತ್ತು ಅದಾನಿ ಗ್ರೂಪ್ ರಕ್ಷಣಾ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ. ಈ ದುರಂತವು 2020ರ ಕೊಝಿಕೋಡ್ ವಿಮಾನ ದುರಂತದ ನಂತರ ಭಾರತದಲ್ಲಿ ಸಂಭವಿಸಿದ ಅತ್ಯಂತ ಗಂಭೀರ ವಿಮಾನ ಅಪಘಾತವಾಗಿದೆ







