ಮೊಹರಂ ಎಂಬುದು ಇಸ್ಲಾಂ ಧರ್ಮದ ಒಂದು ಪ್ರಮುಖ ಶೋಕಾಚರಣೆಯಾಗಿದ್ದು, ಏಳನೇ ಶತಮಾನದಲ್ಲಿ ಪೈಗಂಬರ ಮುಹಮ್ಮದ್‌ರ ಮೊಮ್ಮಕ್ಕಳಾದ ಹಸನ್ ಮತ್ತು ಹುಸೇನ್‌ರವರ ತ್ಯಾಗವನ್ನು ಸ್ಮರಿಸುವ ಹಬ್ಬವಾಗಿದೆ. ಕರ್ಬಲಾ ಕಾಳಗದಲ್ಲಿ (680 CE), ಹುಸೇನ್ ಮತ್ತು ಅವರ ಸಹಚರರು ಯಜೀದ್‌ನ ವಿರುದ್ಧ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದರು. ಈ ಐತಿಹಾಸಿಕ ಘಟನೆಯ ಶೋಕವನ್ನು ಆಚರಿಸಲು ಮೊಹರಂ ಹಬ್ಬ ಆರಂಭವಾಯಿತು. ಈ ಘಟನೆಯ ಸ್ಮರಣೆಯಾಗಿ ರಚಿತವಾದ ಮೊಹರಂ ಪದಗಳು ಮತ್ತು ಕುಣಿತಗಳು ಇಂದಿಗೂ ಜಾನಪದ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ.
ಇತರ ದೇಶಗಳಲ್ಲಿ ಮೊಹರಂ ಶೋಕಾಚರಣೆಯಾಗಿ ಆಚರಿಸಲ್ಪಟ್ಟರೆ, ಭಾರತದಲ್ಲಿ, ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ, ಇದು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿದೆ. ಕಲಬುರಗಿ, ಧಾರವಾಡ, ಬಾಗಲಕೋಟೆ, ಬಿಜಾಪುರ, ಬೆಳಗಾವಿ ಮತ್ತು ಗದಗ ಜಿಲ್ಲೆಗಳಲ್ಲಿ ಮೊಹರಂ ಹಬ್ಬವು ವಿಶಿಷ್ಟವಾದ ಕಳೆಯಿಂದ ಕೂಡಿದೆ. ಈ ಹಬ್ಬದ ಪ್ರಮುಖ ಆಕರ್ಷಣೆಯೆಂದರೆ ಮೊಹರಂ ಕುಣಿತ ಮತ್ತು ಪದಗಳು.
ಈ ಪದಗಳು ಕರ್ಬಲಾ ಕಾಳಗದ ಇತಿಹಾಸವನ್ನು, ಇಸ್ಲಾಂ ಸಾಧು-ಸಂತರ ಚರಿತ್ರೆಯನ್ನು ಮತ್ತು ಧರ್ಮದ ರಕ್ಷಣೆಗಾಗಿ ತೊಡಗಿದ ವೀರರ ತ್ಯಾಗವನ್ನು ವರ್ಣಿಸುತ್ತವೆ. ಇವು ಜಾನಪದರಿಗೆ ಸತ್ಯ, ನ್ಯಾಯ ಮತ್ತು ಶಾಂತಿಯ ಸ್ಪೂರ್ತಿಯಾಗಿವೆ.
ಉತ್ತರ ಕರ್ನಾಟಕದ ಗ್ರಾಮಗಳಲ್ಲಿ ಮೊಹರಂ ಕುಣಿತವು ವಿಶೇಷ ಆಕರ್ಷಣೆಯಾಗಿದೆ. ಈ ಕುಣಿತದೊಂದಿಗೆ ಹಾಡಲಾಗುವ ಪದಗಳು ಶೋಕಗೀತೆಗಳಾಗಿದ್ದು, ಕೆಲವೊಮ್ಮೆ ಸವಾಲ್-ಜವಾಬ್ ಶೈಲಿಯಲ್ಲಿ ನಡೆಯುತ್ತವೆ. ಉದಾಹರಣೆಗೆ, “ಧರಮಕ ಸತ್ತವರಾ ಕೋಟಿಗೊಬ್ಬ ಜನರಾ, ಮುಸ್ಲಿಂ ಮಂದಿಗೆ ದೊರೆತಾರ ಹುಸೇನ್ ಸಾಹೇಬರ…” ಎಂಬ ಪದವು ಕರ್ಬಲಾ ಯುದ್ಧದ ದುಃಖವನ್ನು ವಿವರಿಸುತ್ತದೆ. ಈ ಪದಗಳನ್ನು ಗುರು-ಶಿಷ್ಯ ಪರಂಪರೆಯಲ್ಲಿ ಕಲಿಯಲಾಗುತ್ತದೆ. ಗುರುವಿನೊಂದಿಗೆ ಕಲಿತ ಶಿಷ್ಯರು ಮುಂದೆ ಸ್ವತಂತ್ರವಾಗಿ ಹಾಡುತ್ತಾರೆ ಮತ್ತು ತಂಡಗಳಾಗಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಈ ಸ್ಪರ್ಧೆಗಳು ಜನರ ಮೆಚ್ಚುಗೆಯ ಜೊತೆಗೆ ಭಕ್ಷಿಸುಗಳನ್ನೂ ಗಳಿಸುತ್ತವೆ.
ಮೊಹರಂ ಪದಗಳನ್ನು ಕರ್ಬಲಾ ಪದಗಳು, ರಿವಾಯಿತ ಪದಗಳು ಅಥವಾ ಉತ್ತರ ಕನ್ನಡದಲ್ಲಿ ‘ಅಲಾವಿ ಪದಗಳು’ ಎಂದು ಕರೆಯಲಾಗುತ್ತದೆ. ಇವು ಶೋಕಗೀತೆಗಳು, ಇತಿಹಾಸಕ್ಕೆ ಸಂಬಂಧಿಸಿದ ಲಾವಣಿಗಳು, ಸಾಮಾಜಿಕ ವಿಷಯಗಳನ್ನು ಒಳಗೊಂಡ ಪದಗಳು ಎಂದು ವಿಂಗಡಿಸಬಹುದು. ಉದಾಹರಣೆಗೆ, “ಸೂರಾ-ಧೀರಾ ತಗೊಂಡ ಹತಿಯಾರಾ, ಕೈಯಾಗ ಹಿಡದ ಅಂತಾನೋ ಬರ್ರೆಂದಾ…” ಎಂಬ ಪದವು ಯುದ್ಧದ ವೀರರನ್ನು ಹೊಗಳುತ್ತದೆ.
ಶಿಶುನಾಳ ಶರೀಫರ ತತ್ವಪದಗಳಾದ “ಸವಾಲೊಂದು ನಿನ್ನಮ್ಯಾಲ ಶಾಹಿರಕೆ…” ಎಂಬ ಪದ.
ಸವಾಲೊಂದು ನಿನ್ನಮ್ಯಾಲ
ಬಯಲು ಅಲಾವಿಗೆ ನವಿಲು ಕುಣಿದು ನಿಂತು
ತೈಲವಿಲ್ಲದ ಜ್ಯೋತಿ ಬೆಳಕುಮದಿನದಿ
ಸವಾಲೊಂದು ನಿನ್ನಮ್ಯಾಲ ಶಾಹಿರಕೆ
ಬಂಡಿಗಾಡಿಯ ಬುಡಕ ಬೆಂಕಿಯ ಹಚ್ಚಿತ್ತು ಪುಂಡಯ ಜೀದನ ಕುಂಡಿಯ ಉರದಿತ್ತು
ಸವಾಲೊಂದು ನಿನ್ನಮ್ಯಾಲ ಶಾಹಿರಕೆ
ತಾಗುತ್ತಿನೊಳಗೊಂದು ತಗಡಿನ್ಹಸ್ತವಕಂಡು
ಮೆಹಬೂಬ್ ಶಿಶುನಾಳಧೀಶಗ ನಗೆ ಬಂದು. ಈ ಪದಗಳು ಮೊಹರಂ ಕುಣಿತದಲ್ಲಿ ಜನಪ್ರಿಯವಾಗಿವೆ.
ಧಾರವಾಡ ಜಿಲ್ಲೆಯ ಯರಗುಪ್ಪಿಯ ಮೊಹರಂ ಜಾತ್ರೆಯು ಈ ಭಾಗದಲ್ಲಿ ವಿಶೇಷವಾಗಿ ಪ್ರಸಿದ್ಧವಾಗಿದೆ. ಇಲ್ಲಿ ಹಿಂದೂಗಳು, ಮುಸ್ಲಿಮರು ಮತ್ತು ವಿಶೇಷವಾಗಿ ಬ್ರಾಹ್ಮಣರು ಜಾತಿಬೇಧವಿಲ್ಲದೆ ಒಟ್ಟಾಗಿ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಮೊಹರಂ ಕುಣಿತ ಮತ್ತು ಪದಗಳು ಎಲ್ಲರನ್ನೂ ಭಾವೈಕ್ಯತೆಯ ತೆಕ್ಕೆಗೆ ಸೆಳೆಯುತ್ತವೆ. ಈ ಪದಗಳು ಕೇವಲ ಶೋಕವನ್ನು ವ್ಯಕ್ತಪಡಿಸುವುದಿಲ್ಲ, ಬದಲಿಗೆ ಸತ್ಯ, ನ್ಯಾಯ ಮತ್ತು ಧರ್ಮದ ರಕ್ಷಣೆಗಾಗಿ ಒಗ್ಗಟ್ಟಿನ ಸಂದೇಶವನ್ನು ಸಾರುತ್ತವೆ.







