ಪ್ರೀತಿಯ ಶ್ರೀ ಕೆ. ಸತ್ಯನಾರಾಯಣ ಅವರಿಗೆ,
ನನ್ನ ನಮಸ್ಕಾರಗಳು, ನನ್ನ ಪತ್ರಕ್ಕೆ ಉತ್ತರವಾಗಿ ತಾವು ೧೦-೧೨-೧೯೯೭ರಂದು ಬರೆದ ಪತ್ರ ಸಕಾಲದಲ್ಲಿ ತಲುಪಿತು. ಅದಕ್ಕಾಗಿ ಧನ್ಯವಾದಗಳು, ಕಾರಣಾಂತರಗಳಿಂದ ತಾವು ಈಚೆಗೆ ಬೆಂಗಳೂರಿಗೆ ಬಂದಾಗ ನನಗೆ ತಮ್ಮನ್ನು ಸಂಪರ್ಕಿಸಲು ಆಗಲಿಲ್ಲ. ಅದಕ್ಕಾಗಿ ವಿಷಾದಿಸುತ್ತೇನೆ.
ನನ್ನ ಆಸಕ್ತಿಗಳ ಬಗ್ಗೆ ಬರೆಯಲು ಹೇಳಿದ್ದಿರಿ. ನನಗೆ ನಮ್ಮ ಜೀವನದ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಆಯಾಮಗಳನ್ನು ತಿಳಿದುಕೊಳ್ಳುವ ಕುತೂಹಲ ಇದೆ. ಕಥೆ, ಕಾದಂಬರಿಗಳನ್ನು ಖುಷಿಗಾಗಿ ಓದುವ ಜೊತೆಗೆ ಅವುಗಳಲ್ಲಿ ನನಗೆ ಮೆಚ್ಚುಗೆಯಾದ ಕೃತಿಗಳ ಬಗ್ಗೆ ವಿಮರ್ಶಕರ ಬರಹಗಳನ್ನು ಓದುತ್ತೇನೆ. ನನ್ನ ಆಸಕ್ತಿಯ ವಿಷಯಗಳು ಹೀಗಿರುವುದರಿಂದಲೇ ನನಗೆ ನಿಮ್ಮ ‘ಆಸಕ್ತಿ’ ಸಂಗ್ರಹದ ಲೇಖನಗಳಲ್ಲಿನ ವಿಷಯ ಮಂಡನೆ ಬಹಳ ಹಿಡಿಸಿತು. ನನಗೂ ನನ್ನ ಆಸಕ್ತಿಯ ವಿಷಯಗಳ ಬಗ್ಗೆ ಲೇಖನಗಳನ್ನು ಬರೆಯುವ ಆಸೆ ಇದೆ. ಆದರೆ ನಾನು ಶಿಕ್ಷಣ ಪಡೆದಿರುವುದು ತಾಂತ್ರಿಕ ಕ್ಷೇತ್ರದಲ್ಲಾದ್ದರಿಂದ (ಫಾರ್ಮಸಿ) ನನಗೆ ಮಾನವಿಕ ಶಾಸ್ತ್ರಗಳ ಕ್ರಮಬದ್ಧವಾದ ಶಿಕ್ಷಣದ ಲಾಭ ಸಿಕ್ಕಿಲ್ಲ. ಅದರಿಂದಾಗಿ ನಾನು ನನ್ನ ಆಸಕ್ತಿಯ ವಿಷಯಗಳ ಬಗ್ಗೆ ನನ್ನ ವಿಚಾರಗಳನ್ನು ಬರಹಗಳ ಮೂಲಕ ಪ್ರಕಟಿಸಲು ಹಿಂಜರಿಯುತ್ತೇನೆ. ಇಲ್ಲಿ ನಾನು ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಬಹು ಚರ್ಚಿತವಾಗಿರುವ ಜಾತಿ ವ್ಯವಸ್ಥೆಯ ಬಗ್ಗೆ ನನ್ನ ವಿಚಾರಗಳನ್ನು ತಮ್ಮ ಮುಂದೆ ಇಡಲು ಪ್ರಯತ್ನಿಸುತ್ತೇನೆ. ಮೊದಲು ನನ್ನ ಸಾಮಾಜಿಕ ಹಿನ್ನೆಲೆಯಿಂದ ನಾನು ನಮ್ಮ ಸಮಾಜವನ್ನು ಗ್ರಹಿಸಿದ ರೀತಿ, ನಂತರ ಸಮಾಜಶಾಸ್ತ್ರಜ್ಞರ ಬರಹಗಳಿಂದ ಪಡೆದ ಮಾಹಿತಿ, ನಂತರ ಈ ಎರಡು ಆಯಾಮಗಳಿಂದ ನಾನು ಈ ವಿಷಯದ ಬಗ್ಗೆ ರೂಪಿಸಿಕೊಂಡಿರುವ ವಿಚಾರಗಳನ್ನು ತಿಳಿಸುತ್ತೇನೆ.
ಜಾತಿಯಿಂದ ನಾನು ಕೊಂಕಣಿ ಭಾಷೆ ಮನೆಮಾತಾಗಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಒಂದು ಗ್ರಾಮದ ಗೌಡ ಸಾರಸ್ವತ ಬ್ರಾಹ್ಮಣ (ಸ್ಮಾರ್ತ ಪಂಗಡ) ಸಮುದಾಯಕ್ಕೆ ಸೇರಿದವನು. ನನ್ನ ಜೀವನದ ಮೊದಲ ಇಪ್ಪತ್ತು ವರ್ಷಗಳನ್ನು ನಾನು ಬೆಂಗಳೂರು ನಗರದ ಗಾಂಧೀನಗರದ ಬಡಾವಣೆಯಲ್ಲಿನ ಬಾಡಿಗೆ ಮನೆಯಲ್ಲಿ ಕಳೆದೆ. ಈ ಬಡಾವಣೆ ಮೂವತ್ತು ಮತ್ತು ನಲವತ್ತರ ದಶಕದಲ್ಲಿ ಬೆಳೆದದ್ದು. ಐವತ್ತರ ದಶಕದಲ್ಲಿ ಇಲ್ಲಿ ಕನ್ನಡ, ತಮಿಳು, ತೆಲುಗು, ಗುಜರಾತಿ, ರಾಜಸ್ಥಾನಿ, ಪಂಜಾಬಿ, ಇತ್ಯಾದಿ ಭಾಷೆಗಳನ್ನು ಮಾತನಾಡುವ ಮಧ್ಯಮವರ್ಗದ ಕುಟುಂಬಗಳು ಇದ್ದವು. ದಕ್ಷಿಣ ಭಾರತೀಯರಲ್ಲಿ ಬಹು ಸಂಖ್ಯಾತರು ಬ್ರಾಹ್ಮಣೇತರ ಜಾತಿಗಳಿಗೆ ಸೇರಿದವರು. ಉದಾಹರಣೆಗೆ ನಮ್ಮ ಕ್ರಿಕೆಟ್ ಟೀಮಿನ ಕ್ಯಾಪ್ಟನ್ ತೆಲುಗು ಗೊಲ್ಲರು; ವಿಕೆಟ್ ಕೀಪರ್ ಕನ್ನಡ ಕುರುಬರು; ಫಾಸ್ಟ್ ಬೌಲರ್ ಕನ್ನಡ ನೇಕಾರರು; ಸ್ಪಿನ್ನರ್ ಲಿಂಗಾಯಿತರು, ಇತ್ಯಾದಿ. ನಮ್ಮ ಬಾಡಿಗೆ ಮನೆಯ ಯಜಮಾನರು ಕುರುಬ ಜಾತಿಯವರು. ನಮ್ಮ ಪಕ್ಕದ ಮನೆಯಲ್ಲಿ ಮೊದಲು ರಾಜಸ್ಥಾನದ ರಜಪೂತರು ಇದ್ದರು, ನಂತರ ಆ ಮನೆಗೆ ಮಲಯಾಳಿ ನಾಯರ್ ಕುಟುಂಬ ಬಂತು. ನಮ್ಮ ಮನೆಯ ಹಿಂದಿನ ಮನೆಯಲ್ಲಿ ಮನೆಯ ಮಾಲೀಕರ (ಕುರುಬರು) ಬಡ ಸಂಬಂಧಿಕರ ಒಂದು ಕುಟುಂಬ ಇತ್ತು. ಆ ಕುಟುಂಬದ ಮೂರು ಮಕ್ಕಳಲ್ಲಿ ಎಸ್.ಎಸ್. ಎಲ್.ಸಿ.ವರೆಗೆ ಓದಿದ್ದ ಯುವಕರು ಮತ್ತು ಹೈಸ್ಕೂಲಿನಲ್ಲಿ ಓದುತ್ತಿದ್ದ ಅವರ ತಂಗಿ, ಕನ್ನಡ ಮಾಧ್ಯಮದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ನಮಗೆ ದಿನಾ ಪಾಠ ಹೇಳಿಕೊಡುತ್ತಿದ್ದರು. ನಮ್ಮ ಮನೆಯ ಮುಂದೆ ಇದ್ದ ಒಂದು ಸೌದೆ ಡಿಪೋದ ಅಂಗಣದಲ್ಲಿ ಅಲ್ಲಿ ಸೌದೆ ಹೊಡೆಯುತ್ತಿದ್ದ ತಮಿಳು ವ್ಯಕ್ತಿಯ ಒಂದು ಕುಟುಂಬ ಇತ್ತು. ಆ ಮನೆಯ ಹುಡುಗರನ್ನು ಮಾತ್ರ ನಮ್ಮ ತಾಯಿ ನಮ್ಮ ಮನೆಯ ಊಟದ ಮನೆಯ ಒಳಗೆ ಬರಲು ಬಿಡುತ್ತಿರಲಿಲ್ಲ.
ಹೀಗೆ ‘ಕಾಸ್ಮೊಪಾಲಿಟನ್’ ಎಂದು ಹೇಳಬಹುದಾದ ವಾತಾವರಣದಲ್ಲಿ ಬೆಳೆದ ನನಗೆ ಹತ್ತು ವರ್ಷಕ್ಕೆ ಉಪನಯನ ಆಯಿತು. ಆದರೆ ನಮ್ಮ ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತಿರಲಿಲ್ಲ. ಆ ದಿನಗಳಲ್ಲಿ ನಮ್ಮ ಮನೆಗೆ ಒಂದು ದಿನವೂ ಬ್ರಾಹ್ಮಣ ಪುರೋಹಿತರು ಬಂದದ್ದಿಲ್ಲ. ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ನಮ್ಮ ಪೂರ್ವಜರ ಹಳ್ಳಿಯ ಮನೆಯಲ್ಲಿರುವ ನಮ್ಮ ಚಿಕ್ಕಪ್ಪನವರೇ ಮಾಡುತ್ತಾರೆ ಎಂದು ನಮಗೆ ಹೇಳಲಾಗುತ್ತಿತ್ತು. ನಾವು ಮಾಂಸ ತಿನ್ನುವ ಬ್ರಾಹ್ಮಣರಾಗಿದ್ದುದು ನನಗೆ ಬ್ರಾಹ್ಮಣೇತರರೊಡನೆ ಬೆರೆಯಲು ಸಹಾಯವಾಗಿರಬಹುದು ಎಂದು ನನ್ನ ಅನಿಸಿಕೆ. ಇನ್ನೂ ಒಂದು ಕಾರಣ (ಇದು, ಸಮಾಜ ಶಾಸ್ತ್ರಜ್ಞರ ಬರಹಗಳಿಂದ ತಿಳಿದುಕೊಂಡ ವಿಚಾರ) ನಾವು ಇಲ್ಲಿನ ಪ್ರಾದೇಶಿಕ ಜಾತಿ ವ್ಯವಸ್ಥೆಗೆ ಹೊರಗಿನವರಾಗಿದ್ದುದು.
ಆಧುನಿಕ ಮಾದರಿಯ ಶಿಕ್ಷಣ ಪಡೆದ ಎಲ್ಲಾ ಭಾರತೀಯರಂತೆ ನನಗೂ ಜಾತಿ ವ್ಯವಸ್ಥೆ ಒಂದು ಅನಾಗರಿಕ ಹಾಗೂ ಅಮಾನವೀಯ ವ್ಯವಸ್ಥೆ ಎಂಬ ಭಾವನೆಯ ಜೊತೆಗೆ ಅದು ನಮ್ಮಲ್ಲಿ ಆಧುನಿಕ ಮೌಲ್ಯಗಳು ಹರಡಿದಂತೆ ನಾಶವಾಗುತ್ತದೆ ಎಂಬ ಭಾವನೆ ಇತ್ತು. ಜಾತಿ ವ್ಯವಸ್ಥೆಯ ಬಗ್ಗೆ ನಾನು ವಿಶೇಷವಾಗಿ ಯೋಚಿಸುವಂತಾದದ್ದು ನಾನು ಅನಂತಮೂರ್ತಿಯವರ ‘ಪ್ರಜ್ಞೆ ಮತ್ತು ಪರಿಸರ’ (೧೯೭೧) ಗ್ರಂಥವನ್ನು ಓದಿದ ಮೇಲೆಯೇ (ಅನಂತಮೂರ್ತಿ ಮತ್ತು ಇತರ ನವ್ಯ ಸಾಹಿತಿಗಳ ಬಗ್ಗೆ ನನ್ನ ಗಮನ ಹರಿದದ್ದು ೧೯೬೯-೭೦ರಲ್ಲಿ ‘ಸಂಸ್ಕಾರ’ ಚಲನಚಿತ್ರದ ಬಗ್ಗೆ ನಡೆದ ವಾದ ವಿವಾದದ ನಂತರ). ಯಾವುದೇ ಒಂದು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಆ ಸಮಸ್ಯೆಯನ್ನು ಅಧ್ಯಯನ ಮಾಡಿರುವ ತಜ್ಞರ ಬರಹಗಳನ್ನು ಓದಬೇಕೆಂದು ನಮ್ಮ ಶಿಕ್ಷಣದಿಂದ ನಮಗೆ ದೊರೆತಿರುವ ಒಂದು ತಿಳಿವಳಿಕೆ. ಅದರಂತೆ ನಾನು ಜಾತಿ ವ್ಯವಸ್ಥೆಯ ಬಗ್ಗೆ ದೇಶೀಯ ಮತ್ತು ವಿದೇಶೀಯ ವಿದ್ವಾಂಸರು ಬರೆದ ಗ್ರಂಥಗಳನ್ನು ಓದಿ ಮಾಹಿತಿಯನ್ನು ಸಂಗ್ರಹಿಸಿದೆ.
ಇದನ್ನೂ ಓದಿ | ಕನ್ನಡ ಕಾದಂಬರಿ| `ಜೀವರತಿ’ಯ ಕಿತ್ತಳೆ ಪ್ರಸಂಗ
ಮಾನವಶಾಸ್ತ್ರಜ್ಞರ ಬರಹಗಳಿಂದ ತಿಳಿದುಬಂದ ಪ್ರಾಥಮಿಕ ಸಂಗತಿ ಎಂದರೆ ವ್ಯಕ್ತಿ ಸ್ವಾತಂತ್ರ್ಯ. ವಿಚಾರ ಸ್ವಾತಂತ್ರ್ಯ, ಮತ್ತು ಸಮಾನತೆಗಳೆ ಪರಮೋಚ್ಚ ಮೌಲ್ಯಗಳೆಂಬ ಧೋರಣೆ. ಮಾನವ ಸಮಾಜದಲ್ಲಿ ಕಳೆದ ಎರಡು ಶತಮಾನಗಳ ಈಚೆಗೆ ಪಶ್ಚಿಮ ಯುರೋಪಿನ ಉತ್ತರ ಭಾಗಗಳಲ್ಲಿ ಯಂತ್ರ ನಾಗರಿಕತೆಯೊಂದಿಗೆ ಬೆಳೆದು ಬಂದಿರುವ ಸಿದ್ಧಾಂತ. ದಿವಂಗತ ಸರ್ ಎಡ್ಮಂಡ್ ಲೀಚ್ ಅವರು ತಮ್ಮ ‘Social Anthropologyʼ ಎಂಬ ಗ್ರಂಥದಲ್ಲಿ ಹೇಳಿರುವಂತೆ ಮನುಷ್ಯರೆಲ್ಲಾ ಒಂದೇ ಜಾತಿಗೆ (Species) ಸೇರಿರುವವರು. ಆದರೆ ಅವರು ಭಿನ್ನ ಭಿನ್ನ ಸಮಾಜಗಳಲ್ಲಿ ಜೀವಿಸುತ್ತಾರೆ. ‘ಆಧುನಿಕ ಯಂತ್ರ ನಾಗರಿಕತೆ ರೂಪಿಸಿರುವ ಸಮಾಜವೊಂದೇ ನಾಗರಿಕ ಹಾಗೂ ಸುಸಂಸ್ಕೃತ ಸಮಾಜವಲ್ಲ, ಜಗತ್ತಿನಲ್ಲಿ ಸಾವಿರಾರು ರೀತಿಯ ಸಾಮಾಜಿಕ ವ್ಯವಸ್ಥೆಗಳಿರುವುದನ್ನು ಮಾನವಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಅವುಗಳೆಲ್ಲವೂ ತಮ್ಮದೇ ಆದ ವಿಶಿಷ್ಟ ಜೀವನ ದೃಷ್ಟಿಗೆ ಅನುಗುಣವಾಗಿ ರೂಪಿತವಾಗಿರುವ ಸಮಾಜಗಳು. ಅಂದರೆ ನಮ್ಮ ಸಮಾಜ ರೂಪಿಸಿರುವ ಜಾತಿ ವ್ಯವಸ್ಥೆ ಅಮಾನವೀಯವಾಗಿರಬಹುದು. ಆದರೆ ಅದು ಅಸಂಸ್ಕೃತ ಅಥವಾ ಅನಾಗರಿಕವಲ್ಲ, ಫ್ರೆಂಚ್ ಮಾನವಶಾಸ್ತ್ರಜ್ಞೆ, Louis Dumont ಅವರು ತಮ್ಮ Homo Hierarchicus-caste system and its implications ನಲ್ಲಿ ಹೇಳುವಂತೆ ಭಾರತೀಯ ಸಮಾಜವು ಜಗತ್ತಿನ ಪ್ರಮುಖ ನಾಗರಿಕತೆಗಳಲ್ಲಿ ಒಂದನ್ನು ಸೃಷ್ಟಿಸಿರುವುದರಿಂದಲೇ ನಾವು ಜಾತಿ ವ್ಯವಸ್ಥೆಯನ್ನು ಗಂಭೀರವಾಗಿ ಅಧ್ಯಯನ ಮಾಡುವ ಅಗತ್ಯವಿದೆ.
ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಚರ್ಚಿತವಾಗಿರುವ ‘ಬ್ರಾಹ್ಮಣ-ಶೂದ್ರ’ ಸಮಸ್ಯೆಯನ್ನು ಸಮಾಜಶಾಸ್ತ್ರಜ್ಞರು ಹೇಗೆ ನೋಡುತ್ತಾರೆ ಎಂದು ಗಮನಿಸೋಣ. ಒಬ್ಬ ತಜ್ಞರು ಹೇಳುವ ಈ ಮಾತನ್ನು ಗಮನಿಸಿ: ‘Varna is what is in the head, Jati is what is on the ground’ (ದುರದೃಷ್ಟವಶಾತ್ ನಾನು ಇದನ್ನು ಯಾವ ಗ್ರಂಥದಲ್ಲಿ ಓದಿದೆ ಎಂಬುದನ್ನು ಟಿಪ್ಪಣಿ ಮಾಡಿಕೊಳ್ಳಲಿಲ್ಲ.) ಭಾರತವನ್ನು ಐತಿಹಾಸಿಕ, ಭೌಗೋಳಿಕ, ಭಾಷಿಕ ಮತ್ತು ಸಾಮಾಜಿಕ ಏಕರೂಪತೆಯಿರುವ ಸುಮಾರು ೬೦ ಪ್ರದೇಶಗಳಾಗಿ ವಿಂಗಡಿಸಬಹುದು (ಉದಾ: ಕರ್ನಾಟಕವನ್ನು ತುಳುನಾಡು, ಕೊಡಗು, ಮಲೆನಾಡು, ಉತ್ತರದ ಬಯಲು ಸೀಮೆ ಮತ್ತು ದಕ್ಷಿಣದ ಬಯಲು ಸೀಮೆ ಎಂದು ವಿಂಗಡಿಸಬಹುದು.) ಈ ಪ್ರತಿಯೊಂದು ಪ್ರದೇಶದಲ್ಲಿ ಕಂಡುಬರುವ ಜಾತಿಗಳನ್ನು ಅಲ್ಲಿನ ಜನರು ವರ್ಣವ್ಯವಸ್ಥೆಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂದು ಅವ್ಯಕ್ತವಾಗಿ ಗ್ರಹಿಸಿರುತ್ತಾರೆ. ಒಂದು ಉದಾಹರಣೆ ಕೊಡುವುದಾದರೆ, ಒಬ್ಬ ಜಂಗಮ ಲಿಂಗಾಯಿತನನ್ನು ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಬ್ರಾಹ್ಮಣನಂತೆಯೇ ಕಾಣಲಾಗುತ್ತದೆ. ಅದೇ ರೀತಿ ದಕ್ಷಿಣ ಕರ್ನಾಟಕದಲ್ಲಿ ಒಬ್ಬ ಒಕ್ಕಲಿಗ ಜಮೀನ್ದಾರನನ್ನು ಅಲ್ಲಿನ ಬ್ರಾಹ್ಮಣನು ಕ್ಷತ್ರಿಯನಂತೆ ಕಾಣುತ್ತಾನೆ. ಆದರೆ ಅದೇ ಒಕ್ಕಲಿಗ ಜಾತಿಯ ಕೂಲಿಕಾರನನ್ನು ಶೂದ್ರನಂತೆ ಕಾಣುತ್ತಾನೆ. ಆದರೆ ಅನಂತಮೂರ್ತಿಯವರ ‘ಬ್ರಾಹ್ಮಣ-ಶೂದ್ರ’ ವ್ಯಾಖ್ಯಾನದಿಂದಾಗಿ ಬ್ರಾಹ್ಮಣೇತರರೆಲ್ಲಾ ‘ಶೂದ್ರ’ ಪದವಿ ಪಡೆದು ವಿಜೃಂಭಿಸುತ್ತಿದ್ದಾರೆ. ಆದರೆ ನಮ್ಮ ಸಮಾಜದಲ್ಲಿ ವ್ಯಾಪಾರೋದ್ಯಮಿಗಳಾಗಲಿ ಅಥವಾ ಅಕ್ಕಸಾಲಿಗರು, ನೇಕಾರರು, ಬಡಗಿಗಳು, ಇತ್ಯಾದಿ ಕುಶಲಕರ್ಮಿಗಳು ತಮ್ಮನ್ನು (ಬ್ರಾಹ್ಮಣರು) ಶೂದ್ರರೆಂದು ಗುರುತಿಸುವ ಜನರೊಂದಿಗೆ ಎಂದೂ ಗುರುತಿಸಿಕೊಳ್ಳುವುದಿಲ್ಲ.
ಹೀಗೆಯೆ ಅಸ್ಪೃಶ್ಯತೆಯ ಸಮಸ್ಯೆಯನ್ನು ತೆಗೆದುಕೊಳ್ಳಿ. ನಾವು ಸವರ್ಣೀಯರು ಅಸ್ಪೃಶ್ಯಜಾತಿಗಳೊಡನೆ ನಡೆದುಕೊಳ್ಳುವ ರೀತಿಯನ್ನು ನೋಡಿ. ಆ ನಡವಳಿಕೆಯನ್ನು ಅಮಾನವೀಯವೆಂದು ಸರಿಯಾಗಿಯೇ ಗುರುತಿಸುತ್ತೇವೆ. ಆದರೆ ಜಾತಿ ವ್ಯವಸ್ಥೆಯ ಮಡಿ ಮೈಲಿಗೆಯ ನಿಯಮಗಳನ್ನು ಮಾನ್ಯ ಮಾಡುವವರು ತಮ್ಮ ಕಟುಂಬದ ಸದಸ್ಯರನ್ನೇ ಬೇರೆ ಬೇರೆ ಸಂದರ್ಭಗಳಲ್ಲಿ ಅಸ್ಪೃಶ್ಯರನ್ನಾಗಿ ಕಾಣುವುದನ್ನು ನಾವು ಗಮನಿಸಬೇಕು ಎಂದು ಇರಾವತಿ ಕರ್ವೆ ಅವರು ಹೇಳಿದ್ದಾರೆ. ಅಗ ಮಾತ್ರ ನಾವು ಅಸ್ಪೃಶ್ಯತೆಯ ಕಲ್ಪನೆಯನ್ನು ಕೊನೆಗಾಣಿಸಬಹುದು.
ನಾನು ಸಮಾಜಶಾಸ್ತ್ರಜ್ಞರ ಬರಹಗಳನ್ನು ಓದಿ ಕಂಡುಕೊಂಡ ಸತ್ಯಗಳನ್ನು ತಮ್ಮ ‘ಮಾರ್ಕ್ ಟುಲಿ’ ಕಥೆ ರಸವತ್ತಾಗಿ ಅನಾವರಣಗೊಳಿಸಿತು.
ನಿಮ್ಮ ಈಚಿನ ಕಥೆ ‘ಇಂಗ್ಲಿಷ್ ಗೌಡರು ಎಂಬ ಭಯವು’ ನನಗೆ ಇಷ್ಟವಾಯಿತು. ನಮ್ಮ ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯು ಬರೀ ಒಂದು ಸಂವಹನದ ಮಾಧ್ಯಮವಾಗದೆ ಅದು ಅನೇಕ ಸಾಮಾಜಿಕ ಸಾಂಸ್ಕೃತಿಕ ವಿಕೃತಿಗಳಿಗೆ ಕಾರಣವಾಗಿರುವ ಭಾಷೆ ಎಂಬುದನ್ನು ನವಿರಾಗಿ ಕಾಣಿಸಿದ್ದೀರಿ. ಈ ಕಥೆಯಲ್ಲಿ ಓದುಗನಾಗಿ ನನಗೆ ಕಂಡ ಕೊರತೆ ಎಂದರೆ ನಿರೂಪಕ, ಗೌಡರನ್ನು ಕಂಡ ಸಮಯದ (ವರ್ಷಗಳು) ಅಂತರ ಎಷ್ಟು? ಆಗ ಅವರ ತಂಗಿಗೆ ಮತ್ತು ಅವರ ಮಕ್ಕಳಿಗೆ ಎಷ್ಟು ವಯಸ್ಸಾಗಿತ್ತು? ನಿರೂಪಕ ಎರಡು ಪೀಳಿಗೆಗಳ ವಯಸ್ಕರ ಜೀವನ ವೃತ್ತಾಂತಕ್ಕೆ ಸಾಕ್ಷಿಯಾಗಿರುವುದು ಕಥೆಯ ಮೊದಲ ಭಾಗದಲ್ಲಿ ಗೊತ್ತಾಗುವುದಿಲ್ಲ. ನನ್ನ ಪತ್ರ ಬಹಳ ಉದ್ದವಾಯಿತು. ಕ್ಷಮೆಯಿರಲಿ. ವಿಶ್ವಾಸಗಳೊಂದಿಗೆ.
ಇತಿ ,
ಗಿರೀಶ್ ವಿ. ವಾಘ್
ಪ್ರಕಾಶಕರ ವಿವರಗಳು:
ಅಮೂಲ್ಯ ಪುಸ್ತಕ
ಮೊ: 9620796770, 9448696770
amulyapustaka@gmail.com







