ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ನದಿಯ ಮೇಲೆ ನಿರ್ಮಿತವಾದ ಸಿಗಂದೂರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದೆ. ಈ ಐತಿಹಾಸಿಕ ಕೇಬಲ್-ಸ್ಟೇಯ್ಡ್ ಸೇತುವೆ ಜುಲೈ 14ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಆದರೆ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಂದು ಪತ್ರ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸೇತುವೆ ಉದ್ಘಾಟನೆಯ ಆಹ್ವಾನ ವಿಚಾರದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡದಿರುವುದರ ವಿರುದ್ಧ ಸಿದ್ದರಾಮಯ್ಯ ಗಡ್ಕರಿಯವರಿಗೆ ಪತ್ರ ಬರೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ರದಲ್ಲಿ, ಜುಲೈ 14 ರಂದು ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆಯಲಿರುವ “ರಾಷ್ಟ್ರ ಸಮರ್ಪಣೆ ಮತ್ತು ಶಿಲಾನ್ಯಾಸ ಸಮಾರಂಭ” ಕಾರ್ಯಕ್ರಮದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮುಂಚಿತವಾಗಿ ಮಾಹಿತಿ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದೇ ದಿನ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ತಾವು ಭಾಗವಹಿಸಬೇಕಿರುವುದರಿಂದ, ಸಿಗಂದೂರು ಸೇತುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಕಾರಣಕ್ಕೆ, ಕಾರ್ಯಕ್ರಮವನ್ನು ಮುಂದೂಡಿ, ತಮಗೆ ಸೂಕ್ತ ದಿನಾಂಕವನ್ನು ಒದಗಿಸುವಂತೆ ಕೇಂದ್ರ ಸಚಿವರಿಗೆ ವಿನಂತಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಇಂಡಿಯಲ್ಲಿ ಈಗಾಗಲೇ ಕಾರ್ಯಕ್ರಮ ನಿಗದಿಯಾಗಿರುವ ಕಾರಣ, ಸಿಗಂದೂರು ಸೇತುವೆ ಉದ್ಘಾಟನೆಯಲ್ಲಿ ರಾಜ್ಯ ಸರ್ಕಾರದ ಪರವಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಆಹ್ವಾನ ತಡವಾಗಿ ಬಂದಿದ್ದರಿಂದ ದಿನಾಂಕ ಘರ್ಷಣೆಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜಕೀಯ ಕ್ರೆಡಿಟ್ ವಾರ್
ಸಿಗಂದೂರು ಸೇತುವೆ ಲೋಕಾರ್ಪಣೆಗೆ ಸಂಬಂಧಿಸಿದಂತೆ ರಾಜಕೀಯ ವಿವಾದವೂ ಬುಗಿಲೆದ್ದಿದೆ. ಕೇಂದ್ರ ಸರ್ಕಾರದ ಅನುದಾನದೊಂದಿಗೆ ನಿರ್ಮಿತವಾದ ಈ ಸೇತುವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ದೂರದೃಷ್ಟಿಗೆ ಸಂಬಂಧಿಸಿದ್ದಾಗಿ ಬಿಜೆಪಿ ಶಾಸಕರು ಹೇಳಿಕೊಂಡಿದ್ದಾರೆ. ಆದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಈ ಸೇತುವೆಯ ರೂಪುರೇಷೆಯು ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡಿಸ್ ಸಚಿವರಾಗಿದ್ದ ಕಾಲದಿಂದಲೂ ಆರಂಭವಾಗಿತ್ತು ಎಂದು ತಿಳಿಸಿದ್ದಾರೆ. ಈ ವಿವಾದದಿಂದ ಕಾರ್ಯಕ್ರಮದಲ್ಲಿ ರಾಜಕೀಯ ಕ್ರೆಡಿಟ್‌ಗಾಗಿ ಚರ್ಚೆ ತೀವ್ರವಾಗಿದೆ.
ಸೇತುವೆಯ ಮಹತ್ವ
ಇದನ್ನೂ ಓದಿ | ಶರಾವತಿ ಸೇತುವೆಗೆ ಬಿ.ಎಸ್. ಯಡಿಯೂರಪ್ಪ ಹೆಸರು: ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಸಿಗಂದೂರು ಸೇತುವೆ ಕರ್ನಾಟಕದ ಅತಿ ಉದ್ದದ ಒಳನಾಡು ಕೇಬಲ್-ಸ್ಟೇಯ್ಡ್ ಸೇತುವೆಯಾಗಿದ್ದು, ಸುಮಾರು 2.25 ಕಿಲೋಮೀಟರ್ ಉದ್ದವಿದೆ. ಶರಾವತಿ ನದಿಯ ಹಿನ್ನೀರಿನಲ್ಲಿ ನಿರ್ಮಿತವಾದ ಈ ಸೇತುವೆ, ಸಾಗರ ತಾಲೂಕಿನ ಅಂಬಾರಗೋಡ್ಲು ಮತ್ತು ಕಳಸವಳ್ಳಿಯನ್ನು ಸಂಪರ್ಕಿಸುತ್ತದೆ. ಈ ಸೇತುವೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳ ನಡುವೆ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ. 450 ಕೋಟಿ ರೂ. ವೆಚ್ಚದಲ್ಲಿ 2019 ರಲ್ಲಿ ಆರಂಭವಾದ ಕಾಮಗಾರಿಯು ಆರು ದಶಕಗಳ ಜನರ ಕನಸನ್ನು ನನಸಾಗಿಸಿದೆ. ಈ ಸೇತುವೆಯಿಂದ ಕರೂರು, ಬಾರಂಗಿ ಸೇರಿದಂತೆ ಶರಾವತಿ ಹಿನ್ನೀರಿನ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಸುಧಾರಣೆಯಾಗಲಿದೆ.
ಜನರ ಕನಸಿನ ಸೇತುವೆ
ಶರಾವತಿ ಹಿನ್ನೀರಿನಿಂದ ಸುತ್ತುವರೆದ ಸಿಗಂದೂರು, ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಮತ್ತು ಸ್ಥಳೀಯರಿಗೆ ಈ ಸೇತುವೆ ಒಂದು ವರದಾನವಾಗಿದೆ. ಈ ಹಿಂದೆ ಲಾಂಚ್‌ಗಳ ಮೂಲಕ ಸಂಚಾರ ನಡೆಸುತ್ತಿದ್ದ ಜನರಿಗೆ ಈಗ ಶಾಶ್ವತ ಪರಿಹಾರ ಸಿಗಲಿದೆ. ಈ ಸೇತುವೆಯಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು, ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಲಿದೆ.







