ನಾಡಿನ ಹೆಮ್ಮೆಯ ನಟ, ನಾಡೋಜ ಡಾ. ರಾಜಕುಮಾರ್‌ರ ಜೀವನ ಮತ್ತು ಸಾಧನೆಯನ್ನು ಒಳಗೊಂಡ ‘ಡಾ. ರಾಜಕುಮಾರ್: ಒಂದು ಕಿರು ಅವಲೋಕನ’ ಎಂಬ ಸಾಕ್ಷ್ಯಚಿತ್ರ ಜುಲೈ 24ರಂದು ಬಿಡುಗಡೆಯಾಗಲಿದೆ. ಜನಪ್ರಿಯ ನಿರ್ದೇಶಕ ಬಿ.ಎಮ್. ಗಿರಿರಾಜ್ ಅವರು ಕನ್ನಡ ವಿಶ್ವವಿದ್ಯಾಲಯದ ಡಾ. ರಾಜಕುಮಾರ್ ಅಧ್ಯಯನ ಪೀಠದ ಸಲಹಾ ಸಮಿತಿಯ ಸಹಯೋಗದೊಂದಿಗೆ ಈ ಒಂದು ಗಂಟೆಯ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ್ದಾರೆ.
ತಾಯ್ನಾಡು.ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಗಿರಿರಾಜ್ ಅವರು ಈ ಸಾಕ್ಷ್ಯಚಿತ್ರದ ರೂಪುರೇಷೆ ಮತ್ತು ಡಾ. ರಾಜಕುಮಾರ್‌ರ ಬಹುಮುಖಿ ವ್ಯಕ್ತಿತ್ವದ ಬಗ್ಗೆ ಆಕರ್ಷಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“‘ಅಣ್ಣಾವ್ರು’ ಎಂಬ ಸಂಬೋಧನೆ ಕೇವಲ ಪದವಲ್ಲ; ಅದು ಡಾ. ರಾಜಕುಮಾರ್‌ರ ಸಾಧನೆಯ ಹಿರಿಮೆಯ ಗುರುತು,” ಎಂದು ಗಿರಿರಾಜ್ ಹೇಳಿದರು. “ನಾಡಿನ ಜನ ರಾಜಕುಮಾರ್‌ರನ್ನು ‘ಅಣ್ಣಾವ್ರು’ ಎಂದು ಕರೆಯುವುದರ ಹಿಂದಿನ ಕಾರಣವನ್ನು ಅರಿಯಲು ಈ ಸಾಕ್ಷ್ಯಚಿತ್ರ ಒಂದು ಪ್ರಯತ್ನ. ಅವರ ಜೀವನದ ವಿವಿಧ ಆಯಾಮಗಳನ್ನು ಬೆಳಕಿಗೆ ತರಲು 9-10 ಜನ ಪ್ರತ್ಯಕ್ಷದರ್ಶಿಗಳ ಸಂದರ್ಶನವನ್ನು ಒಳಗೊಂಡಿದ್ದೇವೆ.” ಈ ಸಂದರ್ಶನಗಳಲ್ಲಿ ಶಿವರಾಜಕುಮಾರ್, ಜಯಂತ್ ಕಾಯ್ಕಿಣಿ, ಗುರುದತ್, ಎನ್.ಎಸ್. ಚಿಕ್ಕಣ್ಣ, ಬರಗೂರು ರಾಮಚಂದ್ರಪ್ಪ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ರಾಜಕುಮಾರ್‌ರ ಬಗ್ಗೆ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಡಾ. ರಾಜಕುಮಾರ್‌ರನ್ನು ಕೇವಲ ಒಬ್ಬ ಅತ್ಯುತ್ತಮ ನಟ ಮತ್ತು ಗಾಯಕ ಎಂದೇ ಎಲ್ಲರಿಗೂ ತಿಳಿದಿದೆ. ಆದರೆ, ಅವರ ಸಾಮಾಜಿಕ ಕಳಕಳಿಯ ಕಥೆಗಳು ಈ ಸಾಕ್ಷ್ಯಚಿತ್ರದ ಮೂಲಕ ಬೆಳಕಿಗೆ ಬರುತ್ತವೆ. “ಕರ್ನಾಟಕದ ಹಳ್ಳಿಯಲ್ಲಿರುವ ಹಲವು ಸಣ್ಣ-ಸಣ್ಣ ಕ್ರೀಡಾ ಮೈದಾನದಲ್ಲಿ ಸ್ವತಃ ರಾಜ್‌ಕುಮಾರ್ ಅವರು ಸಂಗೀತ ರಸಮಂಜರಿ ಆಯೋಜಿಸಿ ದೇಣಿಗೆ ಕೊಟ್ಟಿರುವಂತದ್ದು,ಅಲ್ಲದೇ ಅವರು ಹಾಡಿರುವ ಹಾಡುಗಳಿಗೆ ಹಣ ತೆಗೆದುಕೊಳ್ಳದೇ ದೇವಸ್ಥಾನ ಮತ್ತು ಆಶ್ರಮಗಳಿಗೆ ದಾನ ಮಾಡುತ್ತಿದ್ದರು.” ಎನ್ನುವುದು ತಿಳಿಯುತ್ತದೆ.
ಈ ಸಂದರ್ಶನಗಳ ಮೂಲಕ ರಾಜಕುಮಾರ್‌ರ ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರಭಾವವನ್ನು ಗಿರಿರಾಜ್ ತಿಳಿಸಿದ್ದು. “ಈ ಸಾಕ್ಷ್ಯಚಿತ್ರದ ಕೆಲಸದಲ್ಲಿ ನಾವೆಲ್ಲರೂ ರಾಜಕುಮಾರ್‌ರ ಶ್ರಮದ ಫಲಾನುಭವಿಗಳು ಎಂಬ ಭಾವನೆ ಮೂಡಿತು,” ಎಂದರು.
ಸಾಕ್ಷ್ಯಚಿತ್ರದ ನಿರ್ಮಾಣಕ್ಕಾಗಿ ಗಿರಿರಾಜ್ ಅವರು ರಾಜಕುಮಾರ್‌ರ ಎಲ್ಲಾ ಬ್ಲ್ಯಾಕ್ ಅಂಡ್ ವೈಟ್ ಚಿತ್ರ ವೀಕ್ಷಿಸಬೇಕಾಯಿತು. “ರಾಜಕುಮಾರ್ ಅವರು ತಮ್ಮ ಬಳಿ ಏನೂ ಇಲ್ಲದಿದ್ದಾಗಲೂ ಎಲ್ಲರಿಗೂ ಕೈಲಾದ ಸಹಾಯ ಮಾಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಹಂಚಿಕೊಳ್ಳುವ ಗುಣದ ಮಹತ್ವವನ್ನು ಕಲಿತೆ. ಈ ಸಾಕ್ಷಚಿತ್ರವನ್ನು ವೀಕ್ಷಿಸಿದಾಗ, ಒಳ್ಳೆಯ ವ್ಯಕ್ತಿಯಾಗಲು ಮತ್ತಷ್ಟು ಪ್ರೇರಣೆ ಸಿಗುತ್ತದೆ,” ಎಂದು ಗಿರಿರಾಜ್ ಹೇಳಿದರು.
ಈ ಸಾಕ್ಷ್ಯಚಿತ್ರವು ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ಸಹಯೋಗದೊಂದಿಗೆ ಜುಲೈ 24, 2025ರಂದು ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ನಂತರ, ಇದನ್ನು ಕನ್ನಡ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಲಭ್ಯವಾಗಿಸಲಾಗುವುದು. “ಈ ಸಾಕ್ಷ್ಯಚಿತ್ರವು ರಾಜಕುಮಾರ್‌ರ ಜೀವನದ ಕಿರುನೋಟವನ್ನು ಮಾತ್ರವಲ್ಲ, ಒಂದು ಸಾಮಾಜಿಕ ಸಂದೇಶವನ್ನೂ ನೀಡುತ್ತದೆ,” ಎಂದು ಗಿರಿರಾಜ್ ಒತ್ತಿಹೇಳಿದರು.
ಇದನ್ನೂ ಓದಿ | ಕುಂದಗನ್ನಡದಲ್ಲಿ ಕಾರ್ಪೊರೇಟ್ ಜೀವನದ ರೋಚಕ ಕಥೆ
ಪುಸ್ತಕ ಬಿಡುಗಡೆ
ಈ ಸಂದರ್ಭದಲ್ಲಿ ಪ್ರೊ. ಜಿ. ಪ್ರಶಾಂತ್ ನಾಯಕ್ ಅವರ ‘ಡಾ. ರಾಜಕುಮಾರ್: ಬಹುತ್ವದ ಪ್ರಜ್ಞೆ’ ಮತ್ತು ಪ್ರೊ. ಡಿ. ಸತೀಶ್ ಚಂದ್ರ ಅವರ ‘ಡಾ. ರಾಜ್ ಚಿತ್ರಗೀತೆಗಳಲ್ಲಿ ಬಾಂಧವ್ಯದ ನೆಲೆಗಳು’ ಎಂಬ ಪುಸ್ತಕಗಳು ಬಿಡುಗಡೆಯಾಗಲಿವೆ. ಈ ಎರಡು ಕೃತಿಗಳು ಡಾ. ರಾಜಕುಮಾರ್‌ರ ಕಲೆ, ಸಂಸ್ಕೃತಿ, ಮತ್ತು ಸಾಮಾಜಿಕ ಕೊಡುಗೆಯನ್ನು ಆಳವಾಗಿ ವಿಶ್ಲೇಷಿಸುತ್ತವೆ.







