ಫೂಲನ್ ದೇವಿ (ಆಗಸ್ಟ್ 10, 1963 – ಜುಲೈ 25, 2001), ಭಾರತದ ಇತಿಹಾಸದಲ್ಲಿ ಅತ್ಯಂತ ವಿವಾದಾತ್ಮಕ ಮತ್ತು ಧೈರ್ಯಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. “ಬ್ಯಾಂಡಿಟ್ ಕ್ವೀನ್” ಎಂದು ವಿಶ್ವದಾದ್ಯಂತ ಖ್ಯಾತರಾದ ಫೂಲನ್, ಒಬ್ಬ ಡಕಾಯಿತ ನಾಯಕಿಯಿಂದ ಲೋಕಸಭೆಯ ಸಂಸದೆಯವರೆಗಿನ ಒಂದು ಅಸಾಧಾರಣ ಜೀವನವನ್ನು ನಡೆಸಿದರು. ಜಾತಿ ತಾರತಮ್ಯ, ಲಿಂಗ ಆಧಾರಿತ ದೌರ್ಜನ್ಯ, ಬಡತನ ಮತ್ತು ಸಾಮಾಜಿಕ ಶೋಷಣೆಯ ವಿರುದ್ಧ ಅವರ ಹೋರಾಟವು ಶೋಷಿತ ಸಮುದಾಯಗಳಿಗೆ ಧ್ವನಿಯಾಗಿತ್ತು.

ಬಾಲ್ಯ ಮತ್ತು ಆರಂಭಿಕ ಜೀವನ
ಫೂಲನ್ ದೇವಿಯವರು 1963ರ ಆಗಸ್ಟ್ 10ರಂದು ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಯಮುನಾ ನದಿಯ ತೀರದಲ್ಲಿರುವ ಗುರ್ಹಾ ಕಾ ಪುರ್ವಾ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದರು. ಅವರು ಮಲ್ಲಾಹ್ (ನಿಷಾದ) ಸಮುದಾಯಕ್ಕೆ ಸೇರಿದ ಬಡ ಕುಟುಂಬದಿಂದ ಬಂದವರು. ಫೂಲನ್‌ರ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು ಅವರ ತಂದೆ ದೇವಿದಿನ್ ಒಂದು ಸಣ್ಣ ಭೂಮಿಯನ್ನು ಹೊಂದಿದ್ದರು, ಆದರೆ ಜಾತಿ ತಾರತಮ್ಯದಿಂದ ತೀವ್ರ ಶೋಷಣೆಗೊಳಗಾಗಿದ್ದರು.
ಫೂಲನ್ ಅವರಿಗೆ ಶಿಕ್ಷಣದ ಅವಕಾಶವು ತೀರಾ ಕಡಿಮೆಯಿತ್ತು. ಬಾಲ್ಯದಿಂದಲೇ ಜಾತಿ ತಾರತಮ್ಯ ಮತ್ತು ಲಿಂಗ ತಾರತಮ್ಯ ಎದುರಿಸುತ್ತಲೇ ಬಂದಿರುವ ಇವರಿಗೆ 11ನೇ ವಯಸ್ಸಿನಲ್ಲಿ, ತಮ್ಮಕ್ಕಿಂತ ಮೂರು ಪಟ್ಟು ದೊಡ್ಡವರಾದ ಪುಟ್ಟಿಲಾಲ್ ಎಂಬಾತನನ್ನು ಮದುವೆಯಾಗುತ್ತಾರೆ. ಈ ಬಾಲ್ಯವಿವಾಹದಿಂದ ಫೂಲನ್‌ಗೆ ಗಂಡನಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಾರೆ. ಹಾಗಾಗಿ 16ನೇ ವಯಸ್ಸಿನಲ್ಲಿ ತನ್ನ ಗಂಡನನ್ನು ತೊರೆದು ಮನೆಗೆ ಮರಳಿದರು. ಆದರೆ, ಸಾಂಪ್ರದಾಯಿಕ ಸಮಾಜದಲ್ಲಿ ವಿಚ್ಛೇದಿತ ಮಹಿಳೆಯಾಗಿ ಅವರು ಕುಟುಂಬ ಮತ್ತು ಗ್ರಾಮದಿಂದ ಬಹಿಷ್ಕರಣೆಗೊಳಗಾದರು.

ಡಕಾಯಿತ ಜೀವನ
1979ರಲ್ಲಿ, ಫೂಲನ್ ದೇವಿಯವರ ಜೀವನವು ಒಂದು ಮಹತ್ತರ ತಿರುವು ತೆಗೆದುಕೊಳ್ಳುತ್ತದೆ. ಚಂಬಲ್ ಕಣಿವೆಯ ಡಕಾಯಿತ ಗುಂಪೊಂದು, ಬಾಬು ಗುಜ್ಜಾರ್ ನೇತೃತ್ವದಲ್ಲಿ, ಫೂಲನ್‌ರನ್ನು ಅಪಹರಿಸುತ್ತದೆ. ಈ ಘಟನೆಯು ಆರಂಭದಲ್ಲಿ ದುರಂತವಾದರೂ, ನಂತರ ಅವರ ಜೀವನವನ್ನು ರೂಪಾಂತರಗೊಳಿಸುತ್ತದೆ. ಬಾಬು ಗುಜ್ಜಾರ್‌ನಿಂದ ಕಿರುಕುಳಕ್ಕೊಳಗಾದ ಫೂಲನ್‌ರನ್ನು, ಗುಂಪಿನ ಇನ್ನೊಬ್ಬ ಸದಸ್ಯ ವಿಕ್ರಮ್ ಮಲ್ಲಾಹ್ ರಕ್ಷಿಸಿದನು. ವಿಕ್ರಮ್, ಬಾಬು ಗುಜ್ಜಾರ್‌ನನ್ನು ಕೊಂದು, ಫೂಲನ್‌ರನ್ನು ತನ್ನ ಗುಂಪಿನ ನಾಯಕಿಯಾಗಿ ಮಾಡುತ್ತಾನೆ. ಇದರಿಂದ ಫೂಲನ್ ಚಂಬಲ್ ಕಣಿವೆಯ ಒಂದು ಶಕ್ತಿಶಾಲಿ ಡಕಾಯಿತ ನಾಯಕಿಯಾದರು.
ಫೂಲನ್ ದೇವಿಯ ಡಕಾಯಿತ ಜೀವನವು ಜಾತಿ ಶೋಷಿತರಿಗೆ ಮತ್ತು ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯವನ್ನು ಕೊಡುವ ಒಂದು ಮಾರ್ಗವಾಯಿತು. 1981ರಲ್ಲಿ, ಉತ್ತರ ಪ್ರದೇಶದ ಬೆಹ್ಮಾಯಿ ಗ್ರಾಮದಲ್ಲಿ ನಡೆದ ಕುಖ್ಯಾತ ಘಟನೆಯು ಫೂಲನ್‌ರನ್ನು ರಾಷ್ಟ್ರೀಯ ಗಮನಕ್ಕೆ ತಂದಿತು. ಈ ಗ್ರಾಮದಲ್ಲಿ, ಫೂಲನ್‌ರ ಗುಂಪು 22 ಠಾಕೂರ್ (ಉನ್ನತ ಜಾತಿಯ) ಪುರುಷರನ್ನು ಕೊಂದಿತು, ಇದು ಜಾತಿ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ವಿರುದ್ಧ ಒಂದು ದಂಗೆಯ ಕೃತ್ಯವೆಂದು ಕೆಲವರು ಭಾವಿಸಿದರು. ಈ ಘಟನೆಯಲ್ಲಿ ಫೂಲನ್ “ಬ್ಯಾಂಡಿಟ್ ಕ್ವೀನ್” ಎಂದು ಖ್ಯಾತರಾಗುತ್ತಾರೆ. ಆದರೆ ಈ ಘಟನೆಯಿಂದಾಗಿ ಪುಲನ್ ಮೇಲೆ 70ಕ್ಕೂ ಹೆಚ್ಚು ಕಾನೂನು ಕೇಸುಗಳು ದಾಖಲಾಗುತ್ತದೆ.

1983ರಲ್ಲಿ, ಫೂಲನ್ ದೇವಿಯು ತನ್ನ ಗುಂಪಿನೊಂದಿಗೆ ಭೋಪಾಲ್‌ನಲ್ಲಿ ಮಧ್ಯಪ್ರದೇಶ ಸರ್ಕಾರಕ್ಕೆ ಶರಣಾಗತರಾಗುತ್ತಾರೆ. ಈ ಶರಣಾಗತಿಯು ಒಂದು ಒಪ್ಪಂದದ ಭಾಗವಾಗಿತ್ತು, ಅದರಂತೆ ಫೂಲನ್‌ಗೆ ಗಲ್ಲು ಶಿಕ್ಷೆ ವಿಧಿಸದಿರುವುದು ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡುವುದು ಸೇರಿತ್ತು. ಆದರೆ, ಶರಣಾಗತಿಯ ನಂತರ, ಫೂಲನ್‌ರನ್ನು 11 ವರ್ಷಗಳ ಕಾಲ ಗ್ವಾಲಿಯರ್ ಮತ್ತು ತಿಹಾರ್ ಜೈಲಿನಲ್ಲಿ ಯಾವುದೇ ವಿಚಾರಣೆಯಿಲ್ಲದೆ ಇರಿಸಲಾಯಿತು. ಈ ಅವಧಿಯಲ್ಲಿ, ಫೂಲನ್ ತನ್ನ ಜೀವನ ಕತೆಯನ್ನು ದಾಖಲಿಸಲು ಆರಂಭಿಸಿದರು, ಇದು ನಂತರ ಫೂಲನ್ ಆತ್ಮಕಥೆಯಾಗಿ ಬಿಡುಗಡೆಯಾಯಿತು.
ಇದನ್ನೂ ಓದಿ | ರಾಜ್ ಅಪಹರಣಕ್ಕೆ 25 ವರ್ಷ| ನಕ್ಕೀರನ್ ಹೇಳಿದ ದಂತವಿಲ್ಲದ ಆನೆ ಕಥೆ
ರಾಜಕೀಯ ಜೀವನ
1994ರಲ್ಲಿ, ಉತ್ತರ ಪ್ರದೇಶ ಸರ್ಕಾರವು ಫೂಲನ್‌ರ ಮೇಲಿನ ಎಲ್ಲಾ ಆರೋಪಗಳನ್ನು ಹಿಂತೆಗೆದುಕೊಳ್ಳುತ್ತದೆ, ಮತ್ತು ಅವರನ್ನು ಜೈಲಿನಿಂದ ಬಿಡುಗಡೆ ಮಾಡುತ್ತದೆ. ಜೈಲಿನಿಂದ ಬಿಡುಗಡೆಯಾದ ನಂತರ, ಫೂಲನ್ ಸಮಾಜವಾದಿ ಪಕ್ಷಕ್ಕೆ ಸೇರಿದರು. 1996 ಮತ್ತು 1999ರ ಲೋಕಸಭೆ ಚುನಾವಣೆಗಳಲ್ಲಿ ಮಿರ್ಜಾಪುರದಿಂದ ಸಂಸದರಾಗಿ ಚುನಾಯಿತರಾದರು. ರಾಜಕೀಯದಲ್ಲಿ, ಅವರು ಶೋಷಿತ ಸಮುದಾಯಗಳಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ಒಡ್ಡ ಜಾತಿಗಳಿಗೆ ಧ್ವನಿಯಾಗಿ ಕೆಲಸ ಮಾಡಿದರು. ಜಾತಿ ಆಧಾರಿತ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಆರ್ಥಿಕ ಶೋಷಣೆಯ ವಿರುದ್ಧ ಅವರ ಹೋರಾಟವು ರಾಷ್ಟ್ರದಾದ್ಯಂತ ಗಮನ ಸೆಳೆಯಿತು.

1994ರಲ್ಲಿ, ಶೇಖರ್ ಕಪೂರ್ ನಿರ್ದೇಶನದ “ಬ್ಯಾಂಡಿಟ್ ಕ್ವೀನ್” ಚಲನಚಿತ್ರವು ಫೂಲನ್ ದೇವಿಯ ಜೀವನ ಕತೆಯನ್ನು ಆಧರಿಸಿ ಬಿಡುಗಡೆಯಾಗುತ್ತದೆ. ಈ ಚಿತ್ರವು ಅವರ ಬಾಲ್ಯ, ಡಕಾಯಿತ ಜೀವನ ಮತ್ತು ಬೆಹ್ಮಾಯಿ ಘಟನೆಯನ್ನು ಚಿತ್ರಿಸಿತು. ಚಿತ್ರವು ವಿಮರ್ಶಾತ್ಮಕವಾಗಿ ಯಶಸ್ವಿಯಾದರೂ, ಫೂಲನ್ ದೇವಿಯು ಚಿತ್ರದ ಕೆಲವು ದೃಶ್ಯಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು, ವಿಶೇಷವಾಗಿ ಲೈಂಗಿಕ ದೌರ್ಜನ್ಯವನ್ನು ಚಿತ್ರಿಸಿದ ದೃಶ್ಯಗಳಿಗೆ. ಫೂಲನ್, ಚಿತ್ರವು ತನ್ನ ಜೀವನದ ಕೆಲವು ಭಾಗಗಳನ್ನು ತಪ್ಪಾಗಿ ಚಿತ್ರಿಸಿದೆ ಎಂದು ವಾದಿಸಿದರು. ಆದರೆ, ಈ ಚಿತ್ರವು ಫೂಲನ್‌ರ ಕತೆಯನ್ನು ವಿಶ್ವದಾದ್ಯಂತ ತಲುಪಿಸಿತು, ಮತ್ತು ಅವರನ್ನು ಶೋಷಿತರ ಹೋರಾಟದ ಸಂಕೇತವಾಗಿ ಗುರುತಿಸಿತು.

ದುರಂತ ಅಂತ್ಯ
2001ರ ಜುಲೈ 25ರಂದು, ದೆಹಲಿಯ ತಮ್ಮ ನಿವಾಸದ ಮುಂಭಾಗದಲ್ಲಿ, ಫೂಲನ್ ದೇವಿಯವರನ್ನು ಶೆರ್ ಸಿಂಗ್ ರಾಣಾ ಎಂಬಾತ ಗುಂಡಿಟ್ಟು ಕೊಂದನು. ಈ ಕೊಲೆಯು ಬೆಹ್ಮಾಯಿ ಘಟನೆಯ ತಿರುಗೇಟು ಎಂದು ಕೆಲವರು ಭಾವಿಸಿದರೆ, ಇತರರು ಇದನ್ನು ರಾಜಕೀಯ ಪಿತೂರಿಯ ಭಾಗವೆಂದು ಆರೋಪಿಸಿದರು. ಈ ಘಟನೆಯು ರಾಷ್ಟ್ರದಾದ್ಯಂತ ಆಘಾತವನ್ನುಂಟು ಮಾಡಿತು, ಮತ್ತು ಫೂಲನ್‌ರ ಸಾವು ಶೋಷಿತ ಸಮುದಾಯಗಳಿಗೆ ಒಂದು ದೊಡ್ಡ ಆಘಾತವಾಯಿತು.

ಫೂಲನ್ ದೇವಿಯ ಆತ್ಮಕಥೆ ಐ, ಫೂಲನ್ ದೇವಿ (I, Phoolan Devi) (1996) ರಲ್ಲಿ, ಅವರು ತಮ್ಮ ಜೀವನದ ಕಷ್ಟದಾಯಕ ಕ್ಷಣಗಳನ್ನು ಮತ್ತು ಶೋಷಿತರಿಗಾಗಿ ಹೋರಾಡಿದ ಉದ್ದೇಶವನ್ನು ವಿವರಿಸಿದ್ದಾರೆ. ಇಂದಿಗೂ, ಅವರ ಕತೆಯು ಭಾರತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವವರಿಗೆ ಸ್ಫೂರ್ತಿಯಾಗಿದೆ. ಆಗಸ್ಟ್ 10, ಫೂಲನ್ ದೇವಿಯ ಜನ್ಮದಿನ, ಒಬ್ಬ ಧೈರ್ಯಶಾಲಿ ಮಹಿಳೆಯನ್ನು ಸ್ಮರಿಸುವ ದಿನವಾಗಿದೆ, ಆಕೆ ತನ್ನ ಜೀವನದ ಒಡಲಾಟಗಳ ಮೂಲಕ ಶೋಷಿತರಿಗೆ ಧ್ವನಿಯಾಗಿದ್ದಳು.








