ಉತ್ತರ ಪ್ರದೇಶದ ಮಾಜಿ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿ ದಿವಂಗತ ಮುಖ್ತಾರ್ ಅನ್ಸಾರಿ ಅವರ ಪುತ್ರ, ಮಾಜಿ ಶಾಸಕ ಅಬ್ಬಾಸ್ ಅನ್ಸಾರಿ ಅವರಿಗೆ ಆಗಸ್ಟ್ 20ರಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ದೊಡ್ಡ ರಿಲೀಫ್ ನೀಡಿದೆ. 2022ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದ್ವೇಷ ಭಾಷಣದ ಆರೋಪದಡಿ ವಿಧಿಸಲಾಗಿದ್ದ ಎರಡು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ರದ್ದುಗೊಳಿಸಿರುವ ನ್ಯಾಯಾಲಯ, ಅಬ್ಬಾಸ್ ಅನ್ಸಾರಿ ಅವರ ಶಾಸಕ ಸ್ಥಾನಮಾನವನ್ನು ಮರುಸ್ಥಾಪಿಸಿದೆ. ಈ ತೀರ್ಪಿನಿಂದ ಮೌ ಸದರ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆಯ ಅಗತ್ಯವಿಲ್ಲದಂತಾಗಿದೆ.
2022ರ ಮಾರ್ಚ್ 3ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ, ಮೌ ಸದರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಬ್ಬಾಸ್ ಅನ್ಸಾರಿ, ಸರ್ಕಾರಿ ಅಧಿಕಾರಿಗಳ ವಿರುದ್ಧ ಭಾವನಾತ್ಮಕ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅವರು, “ಅಖಿಲೇಶ್ ಯಾದವ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅಧಿಕಾರಿಗಳ ವಿರುದ್ಧ ಲೆಕ್ಕಪತ್ರ ಮಾಡಿ ನಂತರ ವರ್ಗಾವಣೆ ಮಾಡಲಾಗುವುದು,” ಎಂದು ಹೇಳಿದ್ದರು. ಈ ಹೇಳಿಕೆಯನ್ನು ಚುನಾವಣಾ ಆಯೋಗವು ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಶಿಫಾರಸು ಮಾಡಿತ್ತು. ಈ ಆರೋಪದ ಆಧಾರದ ಮೇಲೆ, ಮೌದ ಎಂಪಿ/ಎಂಎಲ್‌ಎ ವಿಶೇಷ ನ್ಯಾಯಾಲಯವು ಮೇ 31, 2025ರಂದು ಅಬ್ಬಾಸ್ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 2,000 ರೂಪಾಯಿ ದಂಡ ವಿಧಿಸಿತು. ಅವರ ಚುನಾವಣಾ ಏಜೆಂಟ್ ಮನ್ಸೂರ್‌ಗೆ ಆರು ತಿಂಗಳ ಶಿಕ್ಷೆ ವಿಧಿಸಲಾಗಿತ್ತು, ಆದರೆ ಅವರ ಸಹೋದರ ಉಮರ್ ಅನ್ಸಾರಿಯನ್ನು ಖುಲಾಸೆಗೊಳಿಸಲಾಗಿತ್ತು.
ಈ ಶಿಕ್ಷೆಯ ಪರಿಣಾಮವಾಗಿ, ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್ 8(3)ರಡಿ, ಉತ್ತರ ಪ್ರದೇಶ ವಿಧಾನಸಭಾ ಸಚಿವಾಲಯವು ಜೂನ್ 1, 2025ರಂದು ಅಬ್ಬಾಸ್ ಅವರ ಶಾಸಕ ಸದಸ್ಯತ್ವವನ್ನು ರದ್ದುಗೊಳಿಸಿತು. ಚುನಾವಣಾ ಆಯೋಗಕ್ಕೆ ಉಪಚುನಾವಣೆಗೆ ಶಿಫಾರಸು ಮಾಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ, ಅಬ್ಬಾಸ್ ಅವರು ಮೌ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರಾದರೂ, ಜುಲೈ 5ರಂದು ಅದನ್ನು ತಿರಸ್ಕರಿಸಲಾಯಿತು. ಇದಾದ ನಂತರ, ಅವರು ಅಲಹಾಬಾದ್ ಉಚ್ಚ ನ್ಯಾಯಾಲಯದ ಮೊರೆ ಹೋದರು.
ಇದನ್ನೂ ಓದಿ | ಕ್ರಿಕೆಟಿಗ ಯಶ್ ದಯಾಳ್‌ಗೆ ತಾತ್ಕಾಲಿಕ ರಿಲೀಫ್ ನೀಡಿದ ಕೋರ್ಟ್
ನ್ಯಾಯಮೂರ್ತಿ ಸಮೀರ್ ಜೈನ್ ಅವರ ಏಕಸದಸ್ಯ ಪೀಠವು ಜುಲೈ 30, 2025ರಂದು ವಾದ-ಪ್ರತಿವಾದಗಳನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿತು. ಆಗಸ್ಟ್ 20ರಂದು ನೀಡಿದ ತೀರ್ಪಿನಲ್ಲಿ, ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಲಾಯಿತು. ಈ ತೀರ್ಪಿನಿಂದ ಅಬ್ಬಾಸ್ ಅನ್ಸಾರಿ ಅವರ ಶಾಸಕ ಸ್ಥಾನವು ಮರಳಿ ಸ್ಥಾಪನೆಗೊಂಡಿದ್ದು, ಸುಹೆಲ್‌ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ)ದ ಮೌ ಸದರ್ ಶಾಸಕರಾಗಿ ಅವರು ಮುಂದುವರಿಯಲಿದ್ದಾರೆ.







