ಕರ್ನಾಟಕದಲ್ಲಿ ಯುವಕರ ನಿರುದ್ಯೋಗದ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ವಿಧಾನಸಭೆ ಮತ್ತು ವಿಧಾನಪರಿಷತ್‌ಗಳಲ್ಲಿ ಶಾಸಕರು ಮತ್ತು ಮಂತ್ರಿಗಳು ವಿದ್ಯಾರ್ಥಿಗಳ ಶಿಕ್ಷಣ ಸುಧಾರಣೆಯ ಬಗ್ಗೆ ಮಾತನಾಡುವುದು ಅಪರೂಪ. ಆದರೆ, ನಿರುದ್ಯೋಗದ ಸಮಸ್ಯೆಯ ಬಗ್ಗೆ ಯಾವ ಶಾಸಕರೂ ಸರಿಯಾಗಿ ಧ್ವನಿ ಎತ್ತಲಿಲ್ಲ. ವಿದ್ಯಾರ್ಥಿ ನಿಧಿ(ಯುವನಿಧಿ) ಯೋಜನೆಯ ಮೂಲಕ ಡಿಗ್ರಿ ಮುಗಿದವರಿಗೆ ₹3,000 ನೀಡುವುದು ತಾತ್ಕಾಲಿಕ ಪರಿಹಾರವಾಗಿದ್ದರೂ, ಇದು ಶಾಶ್ವತವಲ್ಲ.
ಬಿಜಾಪುರ, ಧಾರವಾಡದಂತಹ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಈ ಹಣವನ್ನು ಕೋಚಿಂಗ್ ಸೆಂಟರ್‌ಗಳಿಗೆ ಬಳಸುತ್ತಿದ್ದಾರೆ, ಆದರೆ ಕೋಚಿಂಗ್ ಗಳು ಉದ್ದಿಮೆಯಾಗಿ ಹಣ ಸುಲಿಗೆಗೆ ನಿಂತಿವೆ, ಇದು ಶಿಕ್ಷಣದ ಗುಣಮಟ್ಟವನ್ನು ಕಡಿಮೆ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಉನ್ನತ ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳು ಕೋಚಿಂಗ್‌ಗಳಿಗೆ ಹೋಗಿ ಹಣ ಕಳೆಯುವುದಿಲ್ಲ. ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಸ್ಥಿತಿ ಇನ್ನೂ ಹದಗೆಟ್ಟಿದ್ದು, ಸರ್ಕಾರ ಈ ಬಗ್ಗೆ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು.
ಕರ್ನಾಟಕದಲ್ಲಿ ಯುವ ನಿರುದ್ಯೋಗದ ಸಮಸ್ಯೆ ಗಂಭೀರವಾಗಿದೆ. 2025ರಲ್ಲಿ 18-29 ವಯಸ್ಸಿನ ಯುವಕರಲ್ಲಿ 53.5% ಉದ್ಯೋಗ ಅಥವಾ ಉದ್ಯೋಗ ಹುಡುಕಾಟದಲ್ಲಿ ತೊಡಗಿಲ್ಲ ಎಂದು ಸಮೀಕ್ಷೆಗಳು ತೋರಿಸುತ್ತವೆ. ಪದವೀಧರರ ಉದ್ಯೋಗ ದರ ಕೇವಲ 42.6% ಆಗಿದ್ದು, ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರವನ್ನು ತೋರಿಸುತ್ತದೆ. ಸರ್ಕಾರದ ಯುವ ನಿಧಿ ಯೋಜನೆಯು ನಿರುದ್ಯೋಗಿ ಪದವೀಧರರಿಗೆ ₹3,000 ಮತ್ತು ಡಿಪ್ಲೊಮಾ ಹೊಂದಿದವರಿಗೆ ₹1,500 ಮಾಸಿಕ ಭತ್ಯೆ ನೀಡುತ್ತದೆ, ಇದು ಶಿಕ್ಷಣದ ಮುಂದುವರಿಕೆಗೆ ಸಹಾಯ ಮಾಡುತ್ತದೆ.
ಕೋಚಿಂಗ್ ಸಂಸ್ಥೆಗಳು ಭಾರತದಲ್ಲಿ ಸಮಸ್ಯೆಯಾಗಿದ್ದು, ಹೆಚ್ಚಿನ ಶುಲ್ಕ, ಅಸಮಾನತೆ, ಕಳಪೆ ಬೋಧನೆ, ಮಾನಸಿಕ ಒತ್ತಡ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ಕಾರಣವಾಗುತ್ತವೆ. ಸರ್ಕಾರದ ನಿಯಮಗಳು ಸ್ಥಳೀಯವಾಗಿ ಜಾರಿಯಾಗುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಿದರೆ ಕೋಚಿಂಗ್ ಅಗತ್ಯವಿರುವುದಿಲ್ಲ ಎಂದು ತಜ್ಞರು ಕೂಡಾ ಹೇಳುತ್ತಾರೆ.
ಉತ್ತರ ಕರ್ನಾಟಕದ ಶಿಕ್ಷಣದ ಸ್ಥಿತಿಗತಿ:
ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಅಸಮಾನತೆ ತೀವ್ರವಾಗಿದೆ. ಮಹಿಳೆಯರ ಸಾಕ್ಷರತೆ ದರ ಕೇವಲ 54.52% ಆಗಿದ್ದು, ರಾಜ್ಯದ ಸರಾಸರಿ 68.08%ಗಿಂತ ಕಡಿಮೆ ಇದೆ. ಶಿಕ್ಷಕರ ಕೊರತೆ, ಡ್ರಾಪೌಟ್ ದರ ಹೆಚ್ಚು, ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಕಲಬುರಗಿ ಮತ್ತು ಯಾದಗಿರಿಯಲ್ಲಿ ಶಿಕ್ಷಣದ ಸ್ಥಿತಿ ಹದಗೆಟ್ಟಿದ್ದು, ಶಿಕ್ಷಕರ ಅನುಪಸ್ಥಿತಿ, ಪ್ರಾದೇಶಿಕ ಅಸಮಾನತೆ ಮತ್ತು ಸೌಲಭ್ಯಗಳ ಕೊರತೆ ಕಾರಣ. ಅವರ ರಿಸಲ್ಟ್ ಬಂದಾಗ ಲಿಸ್ಟ್ ನೋಡಬೇಕಾದರೆ ಅದು ಕೆಳಗಿನಿಂದ ನೋಡಬೇಕಾಗಿದೆ. ಅಲ್ಲಿರುವ ಸ್ಥಳಿಯ ಶಾಸಕರು ಕೂಡಲೇ ಎಚ್ಚೆತ್ತು ಕೊಳ್ಳಬೇಕು.
ರಾಜ್ಯ ಸರ್ಕಾರದ 2025ರ ಶಿಕ್ಷಣ ನೀತಿಯು (SEP) ಶೇ.30ರಷ್ಟು ಬಜೆಟ್ ಹಂಚಿಕೆ, ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ಶೇ.5-10ರ ಹೆಚ್ಚಳ ಮತ್ತು ದ್ವಿಭಾಷಾ ಶಿಕ್ಷಣವನ್ನು ಪರಿಚಯಿಸಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಅನುದಾನ ಪಡೆದರು ಅಲ್ಲಿ ಶಿಕ್ಷಣದಲ್ಲಿ ಯಾವುದೇ ರೀತಿಯಾದ ಚೆತರಿಕೆಯನ್ನು ಕಂಡಿಲ್ಲ. ಶಾಸಕ, ಸಚಿವರುಗಳಲ್ಲಿ ಆರ್ಥಿಕ ಚೇತರಿಕೆಯನ್ನು ನಾವು ಕಾಣಬಹುದು.
ಇದನ್ನೂ ಓದಿ | ರಾಮೇಶ್ವರಂನಿಂದ ರಾಷ್ಟ್ರಪತಿ ಭವನದವರೆಗೆ: ಕಲಾಂ ಕನಸಿನ ಪಯಣ
ಸರ್ಕಾರ ಯುವಕರನ್ನು ‘ನಾಳಿನ ಪ್ರಜೆಗಳು’ ಎಂದು ಕರೆದರೂ, ಅವರ ಭವಿಷ್ಯಕ್ಕೆ ಸರಿಯಾದ ಕ್ರಮಗಳು ಕಾಣುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ವೊಕೇಶನಲ್ ತರಬೇತಿ, ಉದ್ಯೋಗಕ್ಕೆ ಸಂಬಂಧಿತ ಕೋರ್ಸ್‌ಗಳನ್ನು ಪರಿಚಯಿಸಬೇಕು. ಕೋಚಿಂಗ್ ಸಂಸ್ಥೆಗಳ ಮೇಲೆ ಕಠಿಣ ನಿಯಮಗಳು ಬೇಕು, ಹೆಚ್ಚಿನ ಶುಲ್ಕ ಮತ್ತು ಮಾನಸಿಕ ಒತ್ತಡವನ್ನು ನಿಯಂತ್ರಿಸಬೇಕು. ಉತ್ತರ ಕರ್ನಾಟಕದಲ್ಲಿ ಶಿಕ್ಷಣದ ಅಸಮಾನತೆಯನ್ನು ಕಡಿಮೆ ಮಾಡಲು ಹೆಚ್ಚಿನ ಬಜೆಟ್ ಮತ್ತು ಶಿಕ್ಷಕರ ನೇಮಕಾತಿ ಅಗತ್ಯ ಕ್ರಮವಾಗಿದೆ. ಸರ್ಕಾರ ಮತ್ತು ಶಾಸಕರು ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಯುವಕರ ಭವಿಷ್ಯವನ್ನು ಸುರಕ್ಷಿತಗೊಳಿಸಬೇಕು.







