ಕನ್ನಡ ಸಾಹಿತ್ಯದಲ್ಲಿ ಎಸ್.ಎಲ್. ಭೈರಪ್ಪ ಪ್ರಮುಖ ಕಾದಂಬರಿಕಾರರೆಂದು ಗುರುತಿಸಿಕೊಂಡಿದ್ದಾರೆ. ಅವರ ಆರಂಭಿಕ ಕೃತಿಗಳು ಗೃಹಭಂಗ, ದೂರಸರಿದರು, ಪರ್ವ ಮುಂತಾದವುಗಳಲ್ಲಿ ವ್ಯಕ್ತಿತ್ವದ ಶಕ್ತಿ, ತೀವ್ರವಾದ ಭಾವನೆಗಳ ತಾಕತ್ತು, ಮತ್ತು ಕಥಾ ನಿರೂಪಣೆಯ ಸಾಮರ್ಥ್ಯ ಸ್ಪಷ್ಟವಾಗಿತ್ತು. ಈ ಕೃತಿಗಳು ಅವರನ್ನು ತರಾಸು, ಅನಕೃ, ತ್ರಿವೇಣಿ ಮುಂತಾದ ಜನಪ್ರಿಯ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲಿಸುವಂತಿದ್ದವು. ಆದರೆ ಇಳಿ ವಯಸ್ಸಿಗೆ ಬಂದಂತೆ, ಭೈರಪ್ಪ ಅವರ ಬರಹ ಸಾಹಿತ್ಯದ ಘನತೆಯಿಂದ ದೂರ ಸರಿದು, ಒಂದು ನಿರ್ದಿಷ್ಟ ರಾಜಕೀಯ-ಸಾಂಸ್ಕೃತಿಕ ಅಜೆಂಡಾದ ಉಪಕರಣವಾಗಿ ಪರಿಣಮಿಸಿತು.
ಅವರ ಕಾದಂಬರಿಗಳಲ್ಲಿ, ವಿಶೇಷವಾಗಿ ಧರ್ಮಶ್ರೀ, ತಬ್ಬಲಿಯು ನೀನಾದೆ ಮಗನೆ, ಆವರಣ, ಕವಲು, ಯಾನ ಹಾಗೂ ಉತ್ತರಕಾಂಡ ಮುಂತಾದವುಗಳಲ್ಲಿ ಧರ್ಮ, ಜಾತಿ ಮತ್ತು ಇತಿಹಾಸದ ಕುರಿತಾಗಿ ಕಟ್ಟುವ ವಾದಗಳು ಮಾನವೀಯ ಸಾಮರಸ್ಯಕ್ಕಿಂತಲೂ, ಸಂಪ್ರದಾಯಪರ ಸನಾತನ ಧೋರಣೆಯ ಮೇಲುಗೈ ಸ್ಥಾಪಿಸಲು ಪ್ರಯತ್ನಿಸುತ್ತವೆ. ಆವರಣ (2007) ಇದಕ್ಕೆ ಅತ್ಯಂತ ಬಲವಾದ ಉದಾಹರಣೆ. ಇತಿಹಾಸ ಆಧಾರಿತ ಕಾದಂಬರಿಯಂತೆ ಪ್ರತಿಪಾದಿಸಲ್ಪಟ್ಟ ಈ ಕೃತಿಯಲ್ಲಿ, ಮುಸ್ಲಿಂ ಸಮುದಾಯವನ್ನು ಲೈಂಗಿಕ ಹಿಂಸಾಚಾರ ಮತ್ತು ಕ್ರೂರತೆಯ ಪ್ರತಿನಿಧಿಗಳಂತೆ ಚಿತ್ರಿಸುವ ಮೂಲಕ ಭೈರಪ್ಪ ಇತಿಹಾಸವನ್ನು ತಿರುಚಿದರು ಎಂಬ ಆರೋಪ ಗಂಭೀರವಾಗಿ ಕೇಳಿಬಂತು. ಆವರಣದ ಅಪಾರ ಮಾರಾಟ ಕನ್ನಡ ಪುಸ್ತಕೋದ್ಯಮಕ್ಕೆ ಒಂದು “ಮಾರುಕಟ್ಟೆಯ ಯಶಸ್ಸು” ತಂದರೂ, ಅದೇ ಸಮಯದಲ್ಲಿ ಸಮಾಜದ ಸಾಮರಸ್ಯಕ್ಕೆ ಕೊಳ್ಳಿ ಇಟ್ಟಿತು. ದಿವಂಗತ ಯು.ಆರ್. ಅನಂತಮೂರ್ತಿ ಅವರು, “ಆವರಣದ ಮಾರಾಟದ ವೇಗ ನೋಡಿ ದಿಗಿಲಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದರು.
ಭೈರಪ್ಪ ಅವರಲ್ಲಿ ಕಾಣುವ ಅತ್ಯಂತ ಸಮಸ್ಯಾತ್ಮಕ ಅಂಶವೆಂದರೆ ವಿಭಜನೆಯನ್ನು ಸಾಹಿತ್ಯದ ಮೂಲಭೂತ ಶೈಲಿಯಾಗಿ ಬಳಸುವುದು. ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯಗಳನ್ನು ದ್ವೇಷಪೂರ್ಣವಾಗಿ ಚಿತ್ರಿಸುವುದು, ಮಹಿಳಾ ಪಾತ್ರಗಳನ್ನು ಅಗ್ಗದ ಮಟ್ಟದಲ್ಲಿ ಬಳಸಿಕೊಳ್ಳುವುದು, ಮತ್ತು “ನಮ್ಮವರು-ಅವರವರು” ಎಂಬ ದ್ವಂದ್ವವನ್ನು ಬಲಪಡಿಸುವುದು ಅವರ ಕೃತಿಗಳ ಸಾಮಾನ್ಯ ಸ್ವರೂಪವಾಗಿದೆ. ಹೀಗಾಗಿ ಅವರ ಬರಹವು ಮಾನವೀಯ ಮೌಲ್ಯಗಳನ್ನು ಕಾಪಾಡುವ ಬದಲು, ಅನುಮಾನ, ಅಸಹಿಷ್ಣುತೆ ಮತ್ತು ದ್ವೇಷವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ಅವರ ಉತ್ತರಕಾಂಡ ಕಾದಂಬರಿಯನ್ನು ಬಹಳಷ್ಟು ಓದುಗರೇ ಸ್ತ್ರೀವಿರೋಧಿ ಕೃತಿಯಾಗಿ ಗುರುತಿಸಿದರು. “ಸತ್ಯವೇ ಬರಹಗಾರನ ನಿಷ್ಠೆ” ಎಂದು ಯಾವಾಗಲೂ ಹೇಳಿಕೊಂಡ ಭೈರಪ್ಪನವರು, ವಾಸ್ತವದಲ್ಲಿ ಅರ್ಧಸತ್ಯಗಳನ್ನು ತಿರುಚಿ, ವೈಷಮ್ಯವನ್ನು ಬೆಳೆಸುವ ಕಥಾನಕಗಳನ್ನು ಕಟ್ಟಿದರು. ಅವರು ತಮ್ಮನ್ನು “ಯಾವ ಚಳವಳಿಗೂ ಸೇರಿದವರು ಅಲ್ಲ” ಎಂದು ಘೋಷಿಸಿಕೊಂಡರೂ, ಅವರ ಬರಹಗಳು ಬಲಪಂಥೀಯ ರಾಜಕೀಯ, ವೈದಿಕ ಚಿಂತನೆ, ಮತ್ತು ಸಂಪ್ರದಾಯಪರ ಸನಾತನವಾದದ ಪರವಾಗಿ ನಿಲ್ಲುತ್ತವೆ.
ಇದರ ಪರಿಣಾಮ, ಭೈರಪ್ಪರನ್ನು ಇಂದಿನ ದಿನದಲ್ಲಿ “ಮಾನವೀಯ ಸಾಹಿತ್ಯಕರ್ತ” ಎಂದು ಕರೆಯುವುದು ಅಸಾಧ್ಯ. ಬದಲಿಗೆ, ಅವರು “ವೈಷಮ್ಯವನ್ನು ಬೆಳೆಸುವ ಪ್ರಚಾರಕ” ಎಂಬ ಹೆಸರು ಹೆಚ್ಚು ತಕ್ಕದ್ದು.
ಅವರ ಅಂತಿಮ ಅವಧಿಯ ನಿಲುವುಗಳೂ ಇದನ್ನೇ ದೃಢಪಡಿಸುತ್ತವೆ. 2023ರಲ್ಲಿ 92ರ ವಯಸ್ಸಿನಲ್ಲಿ ಪದ್ಮಭೂಷಣ ಸ್ವೀಕರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿ 2024 ಮತ್ತು 2029ರಲ್ಲೂ ಮೋದಿ ಪ್ರಧಾನಿಯಾಗಲೇಬೇಕು ಎಂದು ಬಯಸಿದರು. ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕೆಂದು ಬೆಂಬಲಿಸಿದರು. ಈ ನಿಲುವುಗಳು, ಭೈರಪ್ಪ ಅವರ ಸಾಹಿತ್ಯ ಮತ್ತು ಅವರ ವ್ಯಕ್ತಿತ್ವ ಎರಡೂ ಒಂದು ನಿರ್ದಿಷ್ಟ ರಾಜಕೀಯ ಪ್ರಚಾರದ ವಿಸ್ತಾರವೆಂಬುದನ್ನು ಸ್ಪಷ್ಟಪಡಿಸುತ್ತವೆ.
ಇದನ್ನೂ ಓದಿ | ಹಿರಿಯ ಕಾದಂಬರಿಕಾರ ಎಸ್ಎಲ್ ಭೈರಪ್ಪ ನಿಧನ
ಭೈರಪ್ಪ ಅವರ ಬರಹದಲ್ಲಿ ತಾತ್ವಿಕ ಗಂಭೀರತೆಯ ಮುಖವಾಡವಿದ್ದರೂ, ಅದರ ಅಂತರಾಳದಲ್ಲಿ ಸಮಾಜವನ್ನು ವಿಭಜಿಸುವ, ಸಹಾನುಭೂತಿಯನ್ನು ಕುಂದಿಸುವ, ಮತ್ತು ದ್ವೇಷವನ್ನು ಪೋಷಿಸುವ ಅಂಶಗಳು ತುಂಬಿಕೊಂಡಿವೆ. ಅವರು ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಕಾರರಾಗಿ ಆರಂಭಿಸಿದರೂ, ಕೊನೆಗೆ ತಮ್ಮ ಸಾಹಿತ್ಯವನ್ನು ಸಂಪ್ರದಾಯಪರ ರಾಜಕೀಯ ಪ್ರಚಾರಕ್ಕೆ ಅರ್ಪಿಸಿದ ಲೇಖಕರಾಗಿ ಉಳಿದಿದ್ದಾರೆ.







