ರಾಮನಗರ ಜಿಲ್ಲೆಯ ಬಿಡದಿ ಬಳಿಯ ಜಾಲಿವುಡ್ ಸ್ಟುಡಿಯೋಸ್‌ನಲ್ಲಿ ನಡೆಯುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ದೊಡ್ಡ ತೊಂದರೆ ಎದುರಾಗಿದೆ. ಜಲ ಕಾಯಿದೆ ಮತ್ತು ವಾಯು ಕಾಯಿದೆಯಡಿ ಅನುಮತಿ ಪಡೆಯದೇ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಶೋ ಸ್ಥಗಿತಗೊಳಿಸುವಂತೆ ನೋಟಿಸ್ ಜಾರಿ ಮಾಡಿದೆ. ಈ ವಿಷಯವನ್ನು ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಹಿರಂಗಪಡಿಸಿದರು.
ಇದನ್ನೂ ಓದಿ | “ಕುರುಬರಿಗೆ ಎಸ್‌ಟಿ ಬೇಕು, ಆದರೆ ಕೋಟಾ ಹೆಚ್ಚಬೇಕು” : ಸಿದ್ದರಾಮಯ್ಯ
ಸಚಿವ ಖಂಡ್ರೆಯ ಪ್ರಕಾರ, ರಾಮನಗರ ಪ್ರಾದೇಶಿಕ ಕಚೇರಿಯಿಂದ 2024ರಲ್ಲಿ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೆ ಸ್ಟುಡಿಯೋ ನಿರ್ವಹಣೆಯಲ್ಲಿ ಯಾವುದೇ ಸುಧಾರಣೆ ಆಗದ ಕಾರಣ, ಈಗ ಶೋ ಸ್ಥಗಿತಗೊಳಿಸುವಂತೆ ಕಟ್ಟುನಿಟ್ಟಾದ ನೋಟಿಸ್ ಜಾರಿ ಮಾಡಲಾಗಿದೆ. “ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಇದೆಲ್ಲ ತಿಳಿದುಬಂದಿತು. ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ. ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಅವರು ಸ್ಪಷ್ಟಪಡಿಸಿದರು.







