ವಾಲ್ಮೀಕಿ ಜಯಂತಿಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಬುಡಕಟ್ಟು (ಎಸ್ಟಿ) ವರ್ಗಕ್ಕೆ ಸೇರಿಸುವ ಬಗ್ಗೆ ಮಾತನಾಡಿದರು. ಕುರುಬರಿಗೆ ಎಸ್ಟಿ ಕೊಡಬೇಕಾದರೆ ಎಸ್ಟಿ ಕೋಟಾವನ್ನು ಹೆಚ್ಚಿಸಬೇಕು, ಯಾರೂ ಈಗಿನ ಕೋಟಾಕ್ಕೆ ಕೈ ಹಾಕಬಾರದು ಎಂದು ಎಚ್ಚರಿಕೆ ನೀಡಿದರು.
ಮಾಜಿ ಸಂಸದ ಉಗ್ರಪ್ಪ, “ಕುರುಬರನ್ನು ಎಸ್ಟಿಗೆ ಸೇರಿಸಿದರೆ ನಮ್ಮ ಕೋಟಾಕ್ಕೆ ಕೈ ಹಾಕಬೇಡಿ, ಇಲ್ಲವಾದರೆ ಹೋರಾಟ ಮಾಡುತ್ತೇವೆ” ಎಂದು ಹೇಳಿದ್ದರು. ಉಗ್ರಪ್ಪ ಅವರ ಈ ಮಾತು ವಾಲ್ಮೀಕಿ ಸಮುದಾಯದಲ್ಲಿ ಆಕ್ರೋಶ ತಂದಿತು. ವಾಲ್ಮೀಕಿ ಮತ್ತು ಇತರ ಎಸ್ಟಿ ಸಮುದಾಯಗಳು ತಮ್ಮ 7% ಕೋಟಾವನ್ನು ಕುರುಬರೊಂದಿಗೆ ಹಂಚಿಕೊಳ್ಳಲು ವಿರೋಧಿಸುತ್ತಿವೆ.
ಇದನ್ನೂ ಓದಿ | ಸಮಾನತೆ ವಿರೋಧಿಗಳೇ ಜಾತಿಗಣತಿ ವಿರೋಧಿಸುತ್ತಾರೆ : ಸಿದ್ದರಾಮಯ್ಯ
ಕುರುಬರು ಈಗ ಒಬಿಸಿ 2ಎ ವರ್ಗದಲ್ಲಿ 15% ಕೋಟಾ ಪಡೆಯುತ್ತಿದ್ದಾರೆ. ಸಿದ್ದರಾಮಯ್ಯ, “ಹಿಂದಿನ ಬಿಜೆಪಿ ಸರ್ಕಾರವೇ ಕುರುಬರಿಗೆ ಎಸ್ಟಿ ಕೊಡಲು ಚಿಂತಿಸಿತ್ತು. ನಾವು ಕೇಂದ್ರಕ್ಕೆ ಮತ್ತೆ ಶಿಫಾರಸು ಮಾಡುತ್ತೇವೆ. ಆದರೆ ಕೋಟಾ ಹೆಚ್ಚಿಲ್ಲದಿದ್ದರೆ ಕುರುಬರಿಗೆ ನ್ಯಾಯ ಸಿಗದು” ಎಂದರು.







