ಪ್ರಧಾನಿ ನರೇಂದ್ರ ಮೋದಿ ಅವರ ಆಂಧ್ರಪ್ರದೇಶ ಭೇಟಿಯ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರವು ಕರ್ನೂಲ್ ಜಿಲ್ಲೆಯ ನಾಲ್ಕು ಮಂಡಲಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಎರಡು ದಿನಗಳ ರಜೆ ಘೋಷಿಸಿದೆ. ಇದರಿಂದಾಗಿ ಅಕ್ಟೋಬರ್ 16 ಮತ್ತು 17ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಅಕ್ಟೋಬರ್ 21 ಮತ್ತು 22ಕ್ಕೆ ಅಂದರೆ ದೀಪಾವಳಿ ಹಬ್ಬದ ದಿನದಂದು ಪರೀಕ್ಷೆನಡೆಸಲು ತೀರ್ಮಾನಿಸಿದೆ.
ಆಂಧ್ರ ಸರ್ಕಾರದ ಈ ನಿರ್ಧಾರವು ವಿದ್ಯಾರ್ಥಿಗಳ ಬೌದ್ಧಿಕ ಮಟ್ಟ ಮತ್ತು ಮಾನಸಿಕ ಸಿದ್ಧತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಶಿಕ್ಷಣ ತಜ್ಞರು ಮತ್ತು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ, ಮುಂದೂಡಲಾದ ದಿನಾಂಕಗಳು ದೀಪಾವಳಿ ಹಬ್ಬದ ಸಮಯಕ್ಕೆ ಸರಿಹೊಂದುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುವ ಮನಸ್ಥಿತಿಯಲ್ಲಿ ವಿದ್ಯಾರ್ಥಿಗಳಲ್ಲಿ ಇರುವುದಿಲ್ಲ ಎಂಬ ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಅವರ ಭೇಟಿಯು ರಾಜ್ಯಕ್ಕೆ ಪ್ರಮುಖವಾದದ್ದು ಎಂಬುದರಲ್ಲಿ ಸಂದೇಹವಿಲ್ಲ. ಅವರು ನನ್ನೂರು ಟೋಲ್ ಪ್ಲಾಜಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಕರ್ನೂಲ್‌ನಲ್ಲಿ 13,430 ಕೋಟಿ ರೂಪಾಯಿ ಮೌಲ್ಯದ ಹಲವಾರು ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಗಳು ರಸ್ತೆಗಳು, ರೈಲ್ವೇ, ಜಲಸಂರಕ್ಷಣೆ ಮತ್ತು ಇತರ ಮೂಲಭೂತ ಸೌಲಭ್ಯಗಳನ್ನು ಒಳಗೊಂಡಿವೆ, ಇದು ರಾಜ್ಯದ ಆರ್ಥಿಕ ಬೆಳವಣಿಗೆಗೆ ಪ್ರೋತ್ಸಾಹ ನೀಡಲಿದೆ. ಆದರೆ ಈ ಭೇಟಿಯ ಪರಿಣಾಮವು ಶಾಲಾ ವಿದ್ಯಾರ್ಥಿಗಳ ಮೇಲೆ ಬೀಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ!
ಕರ್ನೂಲ್ ಗ್ರಾಮೀಣ, ಕರ್ನೂಲ್ ನಗರ, ಕಲ್ಲೂರು ಮತ್ತು ಓರ್ವಕಲ್ ಮಂಡಲಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ಈ ರಜೆಯಿಂದ ಪರಿಣಾಮ ಬೀರಿದೆ. ಸಾಮಾನ್ಯವಾಗಿ, ಪ್ರಧಾನಿ ಅಥವಾ ಇತರ ಉನ್ನತ ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಘೋಷಿಸುವುದು ಸಾಮಾನ್ಯವಾಗಿದೆಯಾದರೂ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುತ್ತಾರೆ. ಪರೀಕ್ಷೆಗಳು ನಿಗದಿತ ದಿನದಂದು ನಡೆದರೆ ವಿದ್ಯಾರ್ಥಿಗಳು ಸಿದ್ಧತೆಯೊಂದಿಗೆ ಬರೆಯುತ್ತಾರೆ. ಆದರೆ ರಜೆ ಘೋಷಣೆಯಿಂದ ಅಧ್ಯಯನದ ಲಯ ತಪ್ಪುತ್ತದೆ. ವಿಶೇಷವಾಗಿ, ಮುಂದೂಡಿಕೆಯಿಂದಾಗಿ ಅವರ ಬೌದ್ಧಿಕ ಮಟ್ಟಕ್ಕೆ ಧಕ್ಕೆಯಾಗುತ್ತದೆ.
ಇದಕ್ಕೆ ಹೆಚ್ಚುವರಿಯಾಗಿ, ಮುಂದೂಡಲಾದ ಪರೀಕ್ಷೆಗಳ ದಿನಾಂಕಗಳು ಅಕ್ಟೋಬರ್ 21 ಮತ್ತು 22ಕ್ಕೆ ನಿಗದಿಯಾಗಿವೆ, ಇದು ದೀಪಾವಳಿ ಹಬ್ಬದ ಸಮಯಕ್ಕೆ ಸರಿಹೊಂದುತ್ತದೆ. ದೀಪಾವಳಿ ಭಾರತೀಯರಿಗೆ ಪ್ರಮುಖ ಹಬ್ಬವಾಗಿದ್ದು, ಕುಟುಂಬ ಸಮೇತರಾಗಿ ಆಚರಿಸುವ ಸಮಯ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಬ್ಬದ ಆಚರಣೆ, ಪಟಾಕಿ, ಸಿಹಿತಿಂಡಿ ಮತ್ತು ಕುಟುಂಬ ಸಮಯದಲ್ಲಿ ಮುಳುಗಿರುತ್ತಾರೆ. ಹಬ್ಬದ ಮಧ್ಯೆ ಪರೀಕ್ಷೆ ಇದ್ದರೆ ಯಾವ ಮಗುವೂ ಸರಿಯಾಗಿ ಓದುವುದಿಲ್ಲ. ಮನಸ್ಸು ಹಬ್ಬದಲ್ಲಿರುತ್ತದೆ, ಪರೀಕ್ಷೆಯಲ್ಲಿ ಅಲ್ಲ. ಇದು ಅವರ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ.
ಆಂದ್ರಪ್ರದೇಶ ಸರ್ಕಾರದ ಈ ನಿರ್ಧಾರವು ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಯಿಂದ ಅಗತ್ಯವಾಗಿದ್ದರೂ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು, “ಪ್ರಧಾನಿ ಭೇಟಿಯು ರಾಷ್ಟ್ರೀಯ ಮಹತ್ವದ್ದು. ರಜೆಯಿಂದಾಗಿ ಪರೀಕ್ಷೆಗಳನ್ನು ಮುಂದೂಡಬೇಕಾಯಿತು. ಆದರೆ ವಿದ್ಯಾರ್ಥಿಗಳು ಈ ಸಮಯವನ್ನು ಅಧ್ಯಯನಕ್ಕೆ ಬಳಸಿಕೊಳ್ಳಬಹುದು,” ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ರಜೆಯ ಸಮಯದಲ್ಲಿ ಮಕ್ಕಳು ಆಟಕ್ಕೆ ಹೆಚ್ಚು ಸಮಯ ಕಳೆಯುತ್ತಾರೆ, ಅಧ್ಯಯನಕ್ಕಲ್ಲ. ಮತ್ತು ದೀಪಾವಳಿಯಲ್ಲಿ ಪರೀಕ್ಷೆ ಎಂದರೆ ಅದು ಸುಮ್ಮನೆನಾ ಆ ಪಟಾಕಿಗಳ ಸದ್ದಿನಿಂದ ವಿದ್ಯಾರ್ಥಿಗಳ ಏಕಾಗ್ರತೆಗೆ ಧಕ್ಕೆಯಾಗುತ್ತದೆ.
ಇದನ್ನೂ ಓದಿ | ಗೂಗಲ್ ವಿಶಾಖಪಟ್ಟಣಂಗೆ ಶಿಫ್ಟ್: ಬಿಜೆಪಿಗೆ ಹೇಳಿಕೆಗೆ ಖರ್ಗೆ ತಿರುಗೇಟು
ಭವಿಷ್ಯದಲ್ಲಿ ಇಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ಆದ್ಯತೆ ನೀಡಬೇಕು. ಪ್ರಸ್ತುತ, ಕರ್ನೂಲ್ ಜಿಲ್ಲೆಯ ವಿದ್ಯಾರ್ಥಿಗಳು ಈ ಮುಂದೂಡಿಕೆಯಿಂದ ಗೊಂದಲದಲ್ಲಿ ಸಿಲುಕಿದ್ದಾರೆ. ರಾಜ್ಯ ಸರ್ಕಾರವು ಈ ಬಗ್ಗೆ ಮರುಪರಿಶೀಲನೆ ಮಾಡಿ, ಪರೀಕ್ಷೆಗಳನ್ನು ಸೂಕ್ತ ದಿನಾಂಕಕ್ಕೆ ನಿಗದಿಪಡಿಸಬೇಕು.







