ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ನಿವಾರಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಮಹತ್ವಾಕಾಂಕ್ಷಿ ಸುರಂಗ ರಸ್ತೆ ಯೋಜನೆಯು ಇತ್ತೀಚೆಗೆ ಹಲವು ವಿವಾದಗಳನ್ನು ಹುಟ್ಟುಹಾಕಿದೆ.
ಈ ಯೋಜನೆಯು ಆರಂಭದಿಂದಲೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಆತಂಕಗಳನ್ನು ಎದುರಿಸುತ್ತಿದೆ. ಮೊದಲು ಲಾಲ್‌ಬಾಗ್ ಉದ್ಯಾನವನದ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂಬ ವಿವಾದ ಉಂಟಾಗಿತ್ತು.
ಇದೀಗ ಸ್ಯಾಂಕಿ ಟ್ಯಾಂಕ್ (ಸಂಕಿ ಕೆರೆ)ಯ ಮೇಲೆ ದುಷ್ಪರಿಣಾಮ ಬೀರುವ ಬಗ್ಗೆ ಅಪಸ್ವರಗಳು ಕೇಳಿಬರುತ್ತಿವೆ. ಬ್ರಿಟಿಷರ ಕಾಲದ ಜಲಮೂಲವಾದ ಸ್ಯಾಂಕಿ ಕೆರೆಯು ಉತ್ತರ ಬೆಂಗಳೂರಿನ ಪ್ರಮುಖ ಪರಿಸರ ವ್ಯವಸ್ಥೆಯಾಗಿದ್ದು, ಇಲ್ಲಿನ ಸುರಂಗ ನಿರ್ಮಾಣವು ಕೆರೆಯ ಏರಿಗೆ ಹಾನಿಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 16.75 ಕಿ.ಮೀ ಉದ್ದದ ಅವಳಿ ಸುರಂಗ ರಸ್ತೆಯ ವಿನ್ಯಾಸದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದ್ದು, ಮೇಖ್ರಿ ಸರ್ಕಲ್ ಬಳಿ ಯೋಜಿಸಲಾಗಿದ್ದ ಮೂರು ರ‍್ಯಾಂಪ್‌ಗಳನ್ನು ಕೈಬಿಡಲಾಗಿದೆ. ಇದರ ಬದಲು, ಸ್ಯಾಂಕಿ ಕೆರೆಯ ಪ್ರವೇಶದ್ವಾರದ ಎದುರು ಮಲ್ಲೇಶ್ವರಂ 18ನೇ ಕ್ರಾಸ್ ಬಳಿ ಹೊಸ ನಿರ್ಗಮನ ರ‍್ಯಾಂಪ್ ಸೇರಿಸಲಾಗಿದೆ. ಈ ರ‍್ಯಾಂಪ್ ಸ್ಯಾಂಕಿ ರಸ್ತೆಯ ಕೆಳಭಾಗದಲ್ಲಿ ಹಾದುಹೋಗುವಂತೆ ವಿನ್ಯಾ ಮಾಡಲಾಗಿದೆ.
ಯೋಜನೆಯನ್ನು ಕೈಗೆತ್ತಿಕೊಂಡಿರುವ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್)ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್ ಅವರು ಈ ಟೀಕೆಗಳಿಗೆ ಪ್ರತಿಕ್ರಿಯಿಸಿ, “ಹೆಬ್ಬಾಳ ಬಳಿ ಸಣ್ಣ ಸುರಂಗವನ್ನು ಸಂಯೋಜಿಸಲು ಈ ಬದಲಾವಣೆಗಳು ಅಗತ್ಯವಾಗಿವೆ. ಹೊಸ ರ‍್ಯಾಂಪ್‌ನಿಂದ ಕೆರೆಗೆ ಅಥವಾ ಅದರ ಕೋಡಿಗೆ ಯಾವುದೇ ಹಾನಿಯಾಗದು” ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಸರ್ಕಾರ ನೇಮಿಸಿದ ತಜ್ಞರ ಸಮಿತಿಯು ಯೋಜನೆಯ ವಿಸ್ತೃತ ವರದಿ (ಡಿಪಿಆರ್)ಯಲ್ಲಿ ಹಲವು ಕೊರತೆಗಳನ್ನು ಗುರುತಿಸಿದೆ. ಕೇವಲ ನಾಲ್ಕು ಮಣ್ಣಿನ ಮಾದರಿಗಳನ್ನು ಬಳಸಿ ಅಧ್ಯಯನ ಮಾಡಲಾಗಿದ್ದು, ಭೂಗತ ಜಲಮೂಲಗಳ ಬಗ್ಗೆ ಸರಿಯಾದ ಸಂಶೋಧನೆಯಿಲ್ಲ ಎಂದು ಸಮಿತಿ ಹೇಳಿದೆ. ಲಾಲ್‌ಬಾಗ್ ಬಳಿ ನಿರ್ಮಾಣವು ಮೆಟ್ರೋ ಮಾರ್ಗಕ್ಕೆ ತೊಂದರೆಯಾಗುತ್ತದೆ ಎಂಬ ಆತಂಕವೂ ಇದೆ.
ಮೂಲ ಯೋಜನೆಯಲ್ಲಿ ಏನಿದೆ?
ಉತ್ತರ-ದಕ್ಷಿಣ ಸಂಪರ್ಕಕ್ಕಾಗಿ 16 ರ‍್ಯಾಂಪ್‌ಗಳನ್ನು ಪ್ರಸ್ತಾಪಿಸಲಾಗಿತ್ತು. ಹೆಬ್ಬಾಳ, ಮೇಖ್ರಿ ಸರ್ಕಲ್ ಮತ್ತು ವಿಧಾನಸೌಧದಲ್ಲಿ ತಲಾ ನಾಲ್ಕು, ಲಾಲ್‌ಬಾಗ್ ಮತ್ತು ಸೇಂಟ್ ಜಾನ್ಸ್ ಆಸ್ಪತ್ರೆ ಬಳಿ ತಲಾ ಎರಡು ರ‍್ಯಾಂಪ್‌ಗಳು ಇರಬೇಕಿತ್ತು. ಆದರೆ ಪರಿಷ್ಕೃತ ವಿನ್ಯಾಸದಲ್ಲಿ ಮೇಖ್ರಿ ಸರ್ಕಲ್ ಬಳಿಯ ನಾಲ್ಕು ರ‍್ಯಾಂಪ್‌ಗಳಲ್ಲಿ ಮೂರನ್ನು ರದ್ದುಪಡಿಸಲಾಗಿದೆ. ಸಿ.ವಿ. ರಾಮನ್ ರಸ್ತೆ ಮತ್ತು ವಿಮಾನ ನಿಲ್ದಾಣದ ನಡುವಿನ ಎರಡು ರ‍್ಯಾಂಪ್‌ಗಳು ಹಾಗೂ ಜಯಮಹಲ್ ರಸ್ತೆಯ 820 ಮೀಟರ್ ನಿರ್ಗಮನ ರ‍್ಯಾಂಪ್ ಕೈಬಿಡಲಾಗಿದೆ. ಜಯಮಹಲ್‌ನಿಂದ ಸಿಲ್ಕ್ ಬೋರ್ಡ್ ಕಡೆಗಿನ ಪ್ರವೇಶ ರ‍್ಯಾಂಪ್ ಮಾತ್ರ ಉಳಿದಿದೆ.
ಈ ಬದಲಾವಣೆಗಳು ಹೆಬ್ಬಾಳ ಜಂಕ್ಷನ್ ಬಳಿ ಮತ್ತೊಂದು 2 ಕಿ.ಮೀ ಸುರಂಗ ರಸ್ತೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿವೆ ಎಂದು ವರದಿಯಾಗಿದೆ. ಇದು ಹೆಬ್ಬಾಳದ ಫ್ಲೈಓವರ್ ಮೇಲಿನ ದಟ್ಟಣೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಇದಲ್ಲದೆ, ಈ ಯೋಜನೆಯ ಒಟ್ಟು ವೆಚ್ಚ ₹17,780 ಕೋಟಿ ಎಂದು ಅಂದಾಜಿಸಲಾಗಿದ್ದು, ಇದು ವಿಶ್ವದ ಅತ್ಯಂತ ದುಬಾರಿ ರಸ್ತೆಗಳಲ್ಲಿ ಒಂದಾಗಬಹುದು ಎಂಬ ಆರೋಪಗಳಿವೆ.
ಇದನ್ನೂ ಓದಿ | “ಶಕ್ತಿ” ಯೋಜನೆ: ವಿಶ್ವ ದಾಖಲೆಗಿಂತ ಪಾರದರ್ಶಕತೆ ಮುಖ್ಯ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯು ಸಂಚಾರ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯನ್ನು ಖಾತ್ರಿಪಡಿಸಬೇಕು. ಲಾಲ್‌ಬಾಗ್ ಮತ್ತು ಸ್ಯಾಂಕಿ ಕೆರೆಯಂತಹ ಐತಿಹಾಸಿಕ ಸ್ಥಳಗಳು ನಗರದ ಶ್ವಾಸಕೋಶಗಳಾಗಿವೆ. ತಜ್ಞರ ಸಲಹೆಗಳನ್ನು ಪರಿಗಣಿಸಿ ಯೋಜನೆಯನ್ನು ಮರುಪರಿಶೀಲಿಸುವ ಅಗತ್ಯವಿದೆ. ಇಲ್ಲದಿದ್ದರೆ, ಸಂಚಾರ ಪರಿಹಾರದ ಹೆಸರಿನಲ್ಲಿ ಪರಿಸರ ಹಾನಿಯು ಮತ್ತಷ್ಟು ಹೆಚ್ಚಾಗಬಹುದು. ನಾಗರಿಕ ಸಂಸ್ಥೆಗಳು ಮತ್ತು ತಜ್ಞರ ಆತಂಕಗಳನ್ನು ಗಂಭೀರವಾಗಿ ಪರಿಗಣಿಸಿ, ಪಾರದರ್ಶಕ ಚರ್ಚೆಗಳ ಮೂಲಕ ಮುಂದುವರಿಯಬೇಕು.







