ದೇಶದ ರಾಜಕಾರಣದಲ್ಲಿ ಗುಜರಾತ್‌ಗೆ ವಿಶೇಷ ಸ್ಥಾನವಿದೆ. ಇಂದಿನ ಪ್ರಧಾನಿ ನರೇಂದ್ರ ಮೋದಿಯವರು, ಸತತ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಆಗಿಂದಲೇ ದೇಶದಲ್ಲಿ ಗುಜರಾತ್ ಮಾದರಿ ಎಂಬ ಪದ ಪುಂಜ ಜನಪ್ರಿಯವಾಗಿತ್ತು. ಸಮರ್ಥ ಆಡಳಿತ, ಅಭಿವೃದ್ಧಿ ಇತ್ಯಾದಿಗಳಿಗೆ ಈ ʼಗುಜರಾತ್ ಮಾದರಿʼ ಅನ್ವರ್ಥವಾಗಿ ಸತತವಾಗಿ ಬಳಕೆಯಾಗುತ್ತಲೇ ಬಂದಿತ್ತು.
ಆದರೆ ಬುಧವಾರ ಗುಜರಾತ್‌ನಲ್ಲಿ ಭುಪೇಂದ್ರ ಪಟೇಲ್ ನೇತೃತ್ವದ ಸರ್ಕಾರದ ಎಲ್ಲ ಸಚಿವ ಸಂಪುಟದ ಸದಸ್ಯರು ಏಕಕಾಲಕ್ಕೆ ರಾಜೀನಾಮೆ ನೀಡುವ ಮೂಲಕ ಗುಜರಾತ್ ಮಾದರಿಯ ಬಗ್ಗೆ ಹೊಸ ಚರ್ಚೆಗಳು ಆರಂಭವಾಗಿವೆ. ಹಾಗೇ ನೋಡಿದರೆ, ಕಳೆದ ಏಳೆಂಟು ವರ್ಷಗಳಲ್ಲಿ ಗುಜರಾತ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಯಾವುದು ಸರಿಯಿಲ್ಲ ಎಂಬ ಮಾತುಗಳು ನಿರಂತರವಾಗಿ ಕೇಳಿ ಬರುತ್ತಲೇ ಇದ್ದವು. ಬುಧವಾರ ನಡೆದ ವಿದ್ಯಮಾನ ಈ ಮಾತುಗಳಿಗೆ ಅಧಿಕೃತತೆಯನ್ನು ಒದಗಿಸಿದೆ.
ಗುಜರಾತ್‌ನಲ್ಲಿ ಬಿಜೆಪಿ 30 ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಇದನ್ನು ‘ಮೋದಿ ಮಾಡೆಲ್’ ಎಂದು ಕರೆದು ಜನರಿಗೆ ಅಭಿವೃದ್ಧಿಯ ಭರವಸೆ ಕೊಡಲಾಗಿದೆ. ಆದರೆ ನಿಜವಾಗಿ ಈ ಸರ್ಕಾರ ಭ್ರಷ್ಟಾಚಾರ, ರೈತರ ಮೇಲಿನ ದೌರ್ಜನ್ಯ ಮತ್ತು ಸಾಮಾನ್ಯ ಜನರ ನಿರ್ಲಕ್ಷ್ಯ ವಿಷಯಕ್ಕೆ ಹೆಸರುವಾಸಿಯಾಗಿದೆ. ಬಿಜೆಪಿಯ ದೀರ್ಘಕಾಲದ ಆಡಳಿತ ದುರುಪಯೋಗ ಮುನ್ನೆಲೆಗೆ ಬಂದಿದೆ. ಇದರಿಂದಾಗಿ ಗುಜರಾತ್‌ನ ಜನರು ಬೇಸತ್ತಿದ್ದಾರೆ.
ಗುಜರಾತ್ ಸರ್ಕಾರದ ಅಭಿವೃದ್ಧಿಯನ್ನು ನೋಡುವುದಾದರೆ, ಮೊದಲು ರೈತರಿಗೆ ತೊಂದರೆ ಕೊಡುವುದೇ ಬಿಜೆಪಿ ಸರ್ಕಾರದವರು ಅಭಿವೃದ್ಧಿ ಎಂದು ಹೇಳಿಕೊಂಡು ಓಡಾಡುತ್ತಾರೆ. ರೈತರು ತಮ್ಮ ಸಮಸ್ಯೆಗಳಿಗೆ ಪ್ರತಿಭಟನೆ ಮಾಡಿದಾಗ, ಸರ್ಕಾರ ಲಾಠಿ ಚಾರ್ಜ್ ಮತ್ತು ಟಿಯರ್ ಗ್ಯಾಸ್ ಬಳಸಿ ರೈತರ ಪ್ರತಿಭೆಗಳನ್ನು ಹತ್ತಿಕ್ಕುತ್ತಾರೆ. 85 ರೈತರ ಮೇಲೆ ಕೇಸ್‌ಗಳನ್ನೂ ಸಹ ದಾಖಲಿಸಲಾಗಿದೆ. ರೈತರಿಗೆ ಬೆಂಬಲ ಬೆಲೆ, ಕೃಷಿ ಚಟುವಟಿಕೆಗಳಿಗೆ ನೀರಿನ ಕೊರತೆ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸುವದಿಲ್ಲ. ಸರ್ಕಾರ ಕೇವಲ ಹುಸಿ ಭರವಸೆಗಳನ್ನು ನೀಡಿ, ರೈತ ವಿರೋಧಿ ನೀತಿಯನ್ನು ತೋರಿಸುತ್ತಿದೆ.
ಇನ್ನೂ ಗುಜರಾತ್‌ನ ಶಿಕ್ಷಣ ಕ್ಷೇತ್ರದ ವಿಷಯಕ್ಕೆ ಬಂದರೆ ಅಲ್ಲಿನ ಸ್ಥಿತಿ ಇನ್ನು ಹದಗೆಟ್ಟಿದೆ. ಸರ್ಕಾರ ಶಿಕ್ಷಕರನ್ನು ರಾಜಕೀಯ ಕಾರ್ಯಕ್ರಮಗಳಿಗೆ ಬಳಸುತ್ತಿದೆ. ಉದಾಹರಣೆಗೆ, ಬಿಜೆಪಿಯ ಹೊಸ ರಾಜ್ಯ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಅವರ ಸ್ವಾಗತಕ್ಕೆ ಶಾಲೆಗಳಿಂದ ಶಿಕ್ಷಕರನ್ನು ಕರೆದಿದ್ದಾರೆ. ಗುಜರಾತ್ ರಾಜ್ಯವು ದೇಶದ ಶಿಕ್ಷಣದ ಸೂಚ್ಯಂಕದಲ್ಲಿ ಕೆಳಗಿನ 10 ರಾಜ್ಯಗಳಲ್ಲಿ ಒಂದಾಗಿದೆ. ಶಿಕ್ಷಕರ ಸಮಯ ರಾಜಕೀಯಕ್ಕೆ ವ್ಯರ್ಥವಾಗುತ್ತಿದೆ. ಇದರಿಂದ ಮಕ್ಕಳಿಗೆ ಶಿಕ್ಷಣದ ಕಲಿಕೆಯಲ್ಲಿ ತೊಂದರೆಯಾಗುತ್ತಿದೆ. ಸರ್ಕಾರ ಶಿಕ್ಷಣಕ್ಕಿಂತ ರಾಜಕೀಯಕ್ಕೆ ಒತ್ತು ನೀಡುತ್ತಿದೆ.
ದೀರ್ಘಕಾಲದ ಆಡಳಿತ ಭ್ರಷ್ಟಾಚಾರಕ್ಕೆ ನಾಂದಿ?
ಗುಜರಾತ್‌ನಲ್ಲಿ ಬಿಜೆಪಿಯ ದೀರ್ಘ ಕಾಲದ ಆಡಳಿತ ಭ್ರಷ್ಟಾಚಾರವನ್ನು ಹೆಚ್ಚಿಸಿದೆ. ಸಚಿವ ಬಚುಭಾಯ್ ಖಬಾದ್ ಅವರ ಮಕ್ಕಳ ಮೇಲೆ ಎಂಜಿಎನ್‌ಆರ್‌ಇಜಿಎ ಯೋಜನೆಯ ದುರ್ಬಳಕೆ ಆರೋಪವಿದೆ. ವಡೋದರದ ಗಂಭೀರಾ ಸೇತುವೆ ಕುಸಿತದಿಂದ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದಲ್ಲದೆ, ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶಾಲಾ ಮಕ್ಕಳು ಮತ್ತು ಆಸ್ಪತ್ರೆ ರೋಗಿಗಳನ್ನು ಒತ್ತಾಯಪೂರ್ವಕ ಸೇರಿಸಲಾಗಿದೆ ಎಂದು ಆರೋಪವಿದೆ. ಇದು ಜನರ ಜೀವನವನ್ನು ರಾಜಕೀಯಕ್ಕೆ ಬಳಸುವ ಸರ್ಕಾರದ ಸ್ವಭಾವವನ್ನು ತೋರಿಸುತ್ತದೆ.
ಗುಜರಾತ್‌ನ ಬಿಜೆಪಿಯ ಒಳಗೆ ಗೊಂದಲ ಇದೆ. ಚುನಾವಣೆ ಟಿಕೆಟ್ ಕೊಡುವಾಗ ಕೆಲವರು ಅಸಮಾಧಾನಗೊಂಡಿದ್ದಾರೆ. ಉದಾಹರಣೆಗೆ, ಅಮ್ರೇಲಿ ಮತ್ತು ಹಿಮ್ಮತ್‌ನಗರದಲ್ಲಿ ಪಕ್ಷದ ಕಾರ್ಯಕರ್ತರು ಜಗಳ ಆಡಿದ್ದಾರೆ. ಇತ್ತೀಚಿನ ಸಚಿವ ಸಂಪುಟ ಬದಲಾವಣೆಯಿಂದ ಹಾರ್ದಿಕ್ ಪಟೇಲ್‌ನಂತಹ ನಾಯಕರು ಕೋಪಗೊಂಡಿದ್ದಾರೆ. ಪಟೀದಾರ್ ಮತ್ತು ಆದಿವಾಸಿ ಸಮುದಾಯಗಳ ಬೆಂಬಲ ಕಳೆದುಕೊಳ್ಳುವ ಭಯವಿದೆ.
ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಾಯಿಸಿದ್ದು ಕೂಡ ಪಕ್ಷದ ಒಳಗಿನ ಒಡಕನ್ನು ತೋರಿಸುತ್ತದೆ. ಇದರಿಂದಾಗಿ 2027ರ ಚುನಾವಣೆಯಲ್ಲಿ ಬಿಜೆಪಿ ದುರ್ಬಲವಾಗಬಹುದು. ಕಾಂಗ್ರೆಸ್ ಮತ್ತು ಎಎಪಿ ಒಗ್ಗಟ್ಟಿಲ್ಲದ ಕಾರಣ ಬಿಜೆಪಿ ಗುಜರಾತ್‌ನಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ. ಆದರೆ ಜನರಲ್ಲಿ ಸರ್ಕಾರದ ಮೇಲೆ ಕೋಪ ಹೆಚ್ಚಾಗುತ್ತಿದೆ. ಉದ್ಯೋಗದ ಕೊರತೆ, ಮಹಿಳೆಯರ ಸುರಕ್ಷತೆ, ಮತ್ತು ಪರಿಸರ ಸಮಸ್ಯೆಗಳಿಗೆ ಸರ್ಕಾರ ಉತ್ತರ ನೀಡುತ್ತಿಲ್ಲ.
ಇದನ್ನೂ ಓದಿ | ಒಂದು ಶೂ, ಒಂದು ಗುಂಡು ಹೇಳಿದ ಜಾತೀಯತೆಯ ಕ್ರೂರ ಕತೆ
ಬಿಜೆಪಿ ಸರ್ಕಾರ ಗುಜರಾತ್‌ನ ಮಾಡಲ್ ಅಂತ ಮಾತನಾಡುತ್ತದೆ. ಆದರೆ ರೈತರ ಕಷ್ಟ, ಶಿಕ್ಷಣದ ಕೊರತೆ, ಭ್ರಷ್ಟಾಚಾರ, ಮತ್ತು ಪಕ್ಷದ ಒಳಗಿನ ಗೊಂದಲ ಇದರ ನಿಜವಾದ ಸ್ವರೂಪವನ್ನು ತೋರಿಸುತ್ತವೆ. 2026ರ ಸ್ಥಳೀಯ ಚುನಾವಣೆ ಮತ್ತು 2027ರ ವಿಧಾನಸಭಾ ಚುನಾವಣೆಯಲ್ಲಿ ಜನರು ಈ ಅಹಂಕಾರಕ್ಕೆ ಉತ್ತರ ನೀಡಬಹುದು. ಹೊಸ ಸಚಿವರು ಬಂದರೂ, ಸರ್ಕಾರದ ಮೂಲ ಸಮಸ್ಯೆಗಳು ಹಾಗೇ ಉಳಿಯುತ್ತವೆ.







