ದಿನೇ ದಿನೇ ಅವರ ಮಾನಸಿಕ ಆರೋಗ್ಯ ಕೆಡುತ್ತಿದೆಯೇ.. ಆರೋಗ್ಯ ಸ್ಥಿತಿ ಹದಗೆಡಲು ಕಾರಣ ಯಾರು? ಅವರನ್ನು ಈ ಸ್ಥಿತಿಗೆ ತಳ್ಳಿದ ಕಾಣದ ಕೈಗಳಾವು?
ಇಂತಹದ್ದೊಂದು ಗಂಭೀರ ಪ್ರಶ್ನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ನಿತೀಶ್ ಕುಮಾರ್ ಅವರು ಕೆಲವು ತಿಂಗಳಿಂದ ಸಾರ್ವಜನಿಕ ವೇದಿಕೆಗಳಲ್ಲಿ ಕಾಣಿಸಿಕೊಳ್ಳದಿರೋದು. ವಿಧಾನಸಭೆ ಚುನಾವಣೆಗಳು ಹತ್ತಿರ ಬಂದರೂ ಅವರ ಪ್ರಚಾರ ಕೇವಲ ಸರ್ಕಾರಿ ಕಾರ್ಯಕ್ರಮಕ್ಕೆ ಸೀಮಿತ ಆಗಿದೆ. ಇತ್ತೀಚೆಗೆ ನಡೆದ ಪ್ರಧಾನಿ ಜತೆಗಿನ ವರ್ಚುವಲ್ ವಿಡಿಯೋ ಸಂಭಾಷಣೆ ವೇಳೆ ಅವರು ಪ್ರಧಾನಿ ಕಡೆ ಗಮನಕೊಡದೆ ಏನೋ ಕೈ ತೋರುತ್ತಾ ನಗುತ್ತಿದ್ದರು.
ಇನ್ನೊಮ್ಮೆ ರಾಷ್ಟ್ರಗೀತೆ ಹಾಡುವ ವೇಳೆ ಅವರು ಏನೇನೋ ತಮಗೇ ತಾವೇ ಮಾತನಾಡುತ್ತಾ, ಯಾರಿಗೋ ಸಂಜ್ಞೆ ಮಾಡುತ್ತಿದ್ದರು. ಮೊದಲು ತೋರುತ್ತಿದ್ದ ಶಿಸ್ತು, ಸಭಾಗೌರವ ಉಲ್ಲಂಘಿಸಿ ಗೊಂದಲಕಾರಿಯಾಗಿ ನಡೆದುಕೊಳ್ಳುವ ಇತ್ತೀಚೆಗಿನ ಅವರ ನಡೆ ಹಲವು ಅನುಮಾನಗಳನ್ನು ಹೆಚ್ಚಿಸಿದೆ. ರಾಜಕೀಯ ಚಿಂತಕರಷ್ಟೆ ಅಲ್ಲ ಬಿಹಾರ ಜನರಲ್ಲೂ ನಿತೀಶ್ ಆರೋಗ್ಯದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ಎರಡು ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್ ಕುಮಾರ್ ಮುಜಫ್ಫರ್ ಪುರ ಜಿಲ್ಲೆಯ ಮೀನಾಪುರ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಔರಾಯಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮಾ ನಿಷಾದ್ ಅವರಿಗೆ ಭಾಷಣದ ನಡುವೆಯೇ ಹಾರ ಹಾಕಲು ಮುಂದಾಗಿದ್ದಾರೆ. ವಿವಾಹಿತ ಮಹಿಳೆಯ ಕೊರಳಿಗೆ ಪತಿ ಮಾತ್ರ ಹಾರ ಹಾಕಬೇಕು, ಉಳಿದಂತೆ ಗಂಡಸರಾದರೆ ಕೈಗೆ ಕೊಡಬೇಕು ಎಂಬುದು ಜನರ ನಂಬಿಕೆ. ನಿತೀಶ್ ಕುಮಾರ್ ಹಾಗೇ ಮಾಡದೆ ಕೊರಳಿಗೇ ಹಾರ ಹಾಕಲು ಮುಂದಾದರು. ಈ ವೇಳೆ ಅವರ ಬಳಿಯೇ ಇದ್ದ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಅವರು ಹಾರ ಹಾಕುವುದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ನಿತೀಶ್ “ನೀನು ತುಂಬಾ ವಿಚಿತ್ರ ವ್ಯಕ್ತಿ” ಎಂದು ಸಂಜಯ್ ಅವರ ಕೈ ಕಿತ್ತೆಸೆದ ನಿತೀಶ್ ಕೊನೆಗೂ ರಮಾ ಕೊರಳಿಗೇ ಹಾರ ಹಾಕಿದರು.
ಇಲ್ಲಿ ಪ್ರಶ್ನೆ ಇರೋದು ನಿತೀಶ್ ಹಾಗೆ ಮಾಡುವಾಗ ಯಾರೂ ತಡೆಯದೆ ಇದ್ದರೆ ಕೆಲವು ವೇಳೆ ಇದೇನು ತಪ್ಪು ಎನ್ನಲಾಗದು. ಆದರೆ ಸಾವಿರಾರು ಜನರ ಮುಂದೆ, ಜೆಡಿಯು ಪರಮೋಚ್ಚ ನಾಯಕರೂ ಆದ ತಮ್ಮ ಮುಖ್ಯಮಂತ್ರಿಯನ್ನು ಒಬ್ಬ ಪಕ್ಷದ ನಾಯಕ ಕೈ ಸನ್ನೆ, ಬಾಯ್ ಸನ್ನೆ ಮೂಲಕ ಸೂಚನೆ ಕೊಡುತ್ತಾ ಬಲವಂತವಾಗಿ ತಡೆಯಲು ಪ್ರಯತ್ನಿಸೋದು ಹಲವು ಅನುಮಾನಗಳನ್ನು ಸೂಚಿಸುತ್ತದೆ.
ಅಲ್ಲದೆ ಅವರ ಹೋದಲೆಲ್ಲಾ ಅವರ ಪಕ್ಷದ ಮುಖಂಡರು ನಿತೀಶ್ ಕುಮಾರ್ ಬಳಿಯೇ ಇದ್ದು, ಅವರ ಕೈ – ಬಾಯಿ ಕಾಯುವುದು ಯಾವ ಕಾರಣಕ್ಕಾಗಿ..? ನಿತೀಶ್ ಕುಮಾರ್ 20 ವರ್ಷದಿಂದ ಬಿಹಾರದ ಮುಖ್ಯಮಂತ್ರಿ. ಅಧಿಕಾರಕ್ಕಾಗಿ ಅವರು ಯಾವ ರಾಜಕೀಯ ನಿಲುವು ಅನುಸರಿಸಿದ್ದರೂ ಅದನ್ನು ಸತತ 2 ದಶಕದಿಂದ ಉಳಿಸಿಕೊಂಡು ಬಂದಿದ್ದಾರೆ. ಆ ಮೂಲಕ ಸಿಎಂ ಆಗಿ ಮುಂದುವರೆದಿರುವ ನಿತೀಶ್ ಅವರನ್ನು ಭಾರತದ ರಾಜಕಾರಣದ ಚಾಣಾಕ್ಷ ಎನ್ನಲಾಗುತ್ತದೆ.
ಇಂತಹ ಅವರಿಗೆ ಈಗ ಯಾವನೋ ಒಬ್ಬ ಹೇಗೆ ಹಾರ ಹಾಕಬೇಕು, ಹೇಗೆ ಕುಳಿತುಕೊಳ್ಳಬೇಕು, ಹೇಗೆ ಸಭಾ ನಡವಳಿಕೆ ತೋರಬೇಕು ಎಂದು ಹೇಳಿಕೊಡಬೇಕೇ..? ಹೌದು ಹಾಗೆ ಮಾಡಲಾಗುತ್ತಿದೆ. ಈ ಕುರಿತು ಆರ್‌ಜೆಡಿ ನಾಯಕ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಎಕ್ಸ್‌ನಲ್ಲಿ ಈ ವಿಡಿಯೋ ಹಾಕಿ ಅವರ ಆರೋಗ್ಯದ ಕುರಿತು ಪ್ರಶ್ನೆ ಎತ್ತಿದ್ದಾರೆ.
ಇವಷ್ಟೇ ಆಗಿದ್ದರೆ ಅದೂ ಸಹಜ ಎನ್ನಬಹುದಿತ್ತೇನೋ…
ಆದರೆ ನಿತೀಶ್ ಆರೋಗ್ಯ ಹಾಳಾಗುವುದರ ಹಿಂದೆ ಕಾಣದ ಕೈಗಳ ಕೈವಾಡ ಇದೆಯೇ ? ಒಡಿಶಾದಲ್ಲಿ ನವೀನ್ ಪಟ್ನಾಯಕ್ ಆರೋಗ್ಯ ಮತ್ತು ವೃದ್ದಾಪ್ಯವನ್ನೆ ವಿಷಯ ಮಾಡಿಕೊಂಡು ಚುನಾವಣೆ ಗೆದ್ದವರು ಇಲ್ಲೂ ಅದೇ ಮಾಡೆಲ್ ಅನುಸರಿಸಿ ಬಿಹಾರ ಗೆಲ್ಲುವ ತಂತ್ರ ರೂಪಿಸಿದ್ದಾರೆಯೇ..?
ಇದನ್ನೂ ಓದಿ | ಸಹಾನಿ ಬಿಜೆಪಿಗೆ: ಕರ್ನಾಟಕದಂತೆ ಬಿಹಾರದಲ್ಲೂ ‘ಕ್ಲೀನ್ ಚೀಟ್’ ತಂತ್ರ?
ನಿತೀಶ್ ಆರೋಗ್ಯದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆಯೇ? ಹಾಗಿದ್ದರೆ ಅವು ಯಾವುವು..? ಎಂಬ ಪ್ರಶ್ನೆಗಳು ಇವಿಎಂ, ಎಸ್‌ಐಆರ್ ಗೊಂದಲಗಳ ಜತೆಗೆ ಭಾರತದ ರಾಜಕಾರಣ, ಪ್ರಜಾಪ್ರಭುತ್ವ, ಸಂವಿಧಾನ ವ್ಯವಸ್ಥೆಯನ್ನು ಬುಡಮೇಲು ಮಾಡುವ ಮತ್ತೊಂದು ಹೊಸ ಗೊಂದಲಕ್ಕೆ ದಾರಿ ಮಾಡಿಕೊಡುತ್ತಿದೆಯೇ ಎಂಬ ಸಂಶಯ ಸೃಷ್ಟಿಯಾಗುತ್ತಿದೆ?







