‘ಈಗ ಈ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಸರಿಯಾದ ಸ್ಥಳದಲ್ಲಿ, ಯಾರೊಂದಿಗೆ ಮಾತನಾಡಬೇಕೋ ಅವರೊಂದಿಗೆ ಮಾತನಾಡುತ್ತೇನೆ’ ಎಂದು ಯತೀಂದ್ರ ಸಿದ್ಧರಾಮಯ್ಯನವರ ಹೇಳಿಕೆಗೆ ಡಿಸಿಎಂ ಡಿಕೆ. ಶಿವಕುಮಾರ್ ಸಂಯಮದಿಂದ ಉತ್ತರಿಸಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಆಂತರಿಕ ಘರ್ಷಣೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ತಮ್ಮ ತಂದೆಯ ರಾಜಕೀಯ ಜೀವನ ‘ಅಂತಿಮ ಹಂತ’ದಲ್ಲಿದೆ ಎಂದು ಹೇಳಿ, ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಪ್ರಗತಿಪರ ನಾಯಕ ಎಂದು ಪ್ರಶಂಸಿಸಿದ್ದಾರೆ.
ಯತೀಂದ್ರ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕೆಲ ಶಾಸಕರು, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಸಮೀಪದಲ್ಲಿರುವ ಶಾಸಕ ಇಬ್ರಾಹಿಂ ಹುಸೇನ್, ಯತೀಂದ್ರರ ಹೇಳಿಕೆಯನ್ನು ಟೀಕಿಸಿ. “ಅವರ ಹೇಳಿಕೆ ಎಳಸುತದಿಂದ ಕೂಡಿದೆ. ಅವರ ಮಾತಿನ್ನೂ ಬಲಿತಿಲ್ಲ. ಜೊತೆಗೆ ಶಕ್ತಿಯೂ ಇಲ್ಲ” ಎಂದರು.
ತಮ್ಮ ಮಾತನ್ನು ನೆನೆದು “ತಾವು ಹಿಂದೆ ನಾಯಕತ್ವ ಬದಲಾವಣೆಯ ಬಗ್ಗೆ ಮಾತನಾಡಿದಾಗ ಪಕ್ಷದಿಂದ ಎಚ್ಚರಿಕೆ ಪಡೆದಿದ್ದೇನೆ, ಆದರೆ ಯತೀಂದ್ರರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ” ಎಂದು ಅವರು ದೂರಿದ್ದಾರೆ. ಇದು ಪಕ್ಷದಲ್ಲಿ ದ್ವಂದ್ವ ನೀತಿಯನ್ನು ತೋರುತ್ತದೆ ಎಂದು ಹುಸೇನ್ ಆರೋಪಿಸಿದ್ದಾರೆ.
ಇದನ್ನೂ ಓದಿ | ರಾಜಕೀಯ ಕೆಸರಿನಾಟದಲ್ಲಿ ಸಿಲುಕಿ ಕೊಳೆತು ನಾರುತ್ತಿರುವ ಯಮುನೆ!
ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯತೀಂದ್ರರ ಹೇಳಿಕೆಗೆ ನೇರವಾಗಿ ಪ್ರತಿಕ್ರಿಯಿಸದೆ, ‘ಅವರನ್ನೇ ಕೇಳಿ, ನಾನೇನು ಹೇಳಲಿ?’ ಎಂದು ತಪ್ಪಿಸಿಕೊಂಡಿದ್ದಾರೆ.







