ದೇಶದ ಈ ಪ್ರತಿಷ್ಟಿತ ಬ್ಯ್ರಾಂಡ್‌ಗಳು ಕ್ಷಮೆ ಕೇಳಿದ್ಯಾಕೆ?!

ಫೋಕ್ಸ್‌ ವ್ಯಾಗನ್‌ ಕಾರಿನಿಂದ ಹಿಡಿದು ಪಿವಿರ್ ಚಿತ್ರಮಂದಿರಗಳವರೆಗೆ, ಮಿಂತ್ರಾದಿಂದ ಹಿಡಿದು ಹಲ್ದಿರಾಮ್‌ ರವರೆಗೆ ಎಲ್ಲ ಉದ್ಯಮ ವಲಯಗಳಿಂದ 'ಕ್ಷಮಾಪಣೆ'ಯ ಜಾಹಿರಾತುಗಳೇಕೆ?
why brands are apologizing

ಕಳೆದು ಕೆಲವು ದಿನಗಳಿಂದ ಭಾರತದ ಮಾರುಕಟ್ಟೆ ವಲಯದಲ್ಲಿ ‘ಸಾರಿ’ಗಳದ್ದೇ ಸದ್ದು. ಫೋಕ್ಸ್‌ ವ್ಯಾಗನ್‌ ಕಾರಿನಿಂದ ಹಿಡಿದು ಪಿವಿರ್ ಚಿತ್ರಮಂದಿರಗಳವರೆಗೆ, ಮಿಂತ್ರಾದಿಂದ ಹಿಡಿದು ಹಲ್ದಿರಾಮ್‌ ರವರೆಗೆ ಎಲ್ಲ ರೀತಿಯ ಉದ್ಯಮ ವಲಯಗಳಿಂದ ‘ಕ್ಷಮಾಪಣೆ’ಯ ಜಾಹಿರಾತುಗಳು ಪ್ರಕಟವಾಗುತ್ತಿವೆ. 

ಈ ಕ್ಷಮೆ ಯಾಕೆ? ತಪ್ಪು ಮಾಡಿರುವುದಕ್ಕಲ್ಲ. ನಾವು ಕೊಡುತ್ತಿರುವ ಅತ್ಯುತ್ತಮ ಸೇವೆ, ಉತ್ಪನ್ನಗಳಿಂದಾಗಿ, ನೀವು ಇನ್ನೊಂದು ಬ್ಯ್ರಾಂಡ್‌ಗಳತ್ತ ಹೋಗಲು ಆಗುತ್ತಿಲ್ಲ. ಅದಕ್ಕೆ ಕ್ಷಮೆ ಕೇಳುತ್ತಿದ್ದೇವೆ ಎಂಬುದೇ ಈ ಜಾಹಿರಾತುಗಳ ಒಕ್ಕಣೆ. ಕೆಲವು ಜಾಹೀರಾತುಗಳು ಪತ್ರಿಕೆಗಳಲ್ಲಿ, ಕೆಲವು ಜಾಹೀರಾತುಗಳು ಕಂಪನಿಗಳ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಪ್ರಕಟವಾಗಿತ್ತು. ಜನರ ಗಮನ ಸಳೆಯುತ್ತಿವೆ. ‘ಸಾರಿ’ ಜಾಹೀರಾತುಗಳು ವೈರಲ್ ಆಗುತ್ತಿವೆ. 

ಸಾರಿ ಕೇಳಿದ್ಯಾಕೆ?

ಕ್ಷಮೆ ಕೇಳಿದ್ದು ಯಾವುದೇ ಸೇವೆಯ ಲೋಪಕ್ಕಲ್ಲ, ಕಳಪೆ ಗುಣಮಟ್ಟದ ಕಾರಣಕ್ಕಲ್ಲ. ಕ್ಷಮೆ ಕೇಳುವುದು, ತಮಾಷೆ ಮಾಡುವ ಕಾರಣಕ್ಕೆ. ಇದೊಂದು ಕಾರ್ಪೋರೇಟ್‌ ಕ್ಷಮೆಯಾಚನೆ. ಕ್ಷಮೆ ಕೇಳುವ ರೀತಿಯ ಗಂಭೀರ, ಕ್ಷಮಾಪಣಾ ಪತ್ರವೂ ಅಧಿಕೃತ, ಅದರೆ ಕೇಳುತ್ತಿರುವುದು ಮಾತ್ರ, ಭಿನ್ನ ರೀತಿಯಲ್ಲಿ. ಗ್ರಾಹಕರನ್ನು ತಮ್ಮ ಉತ್ತಮ ಗುಣಮಟ್ಟದ ಸೇವೆಯಿಂದಾ ಹಿಡಿದಿಟ್ಟುಕೊಂಡಿರುವುದಕ್ಕೆ, ಇನ್ನೊಂದು ಉತ್ಪನ್ನ ಅಥವಾ ಸೇವೆಯ ಕಡೆಗೆ ಗಮನ ಹರಿಸದಂತೆ ಮಾಡಿರುವುದಕ್ಕೆ, ಪ್ರತಿ ಸ್ಪರ್ಧಿಯ ಕಡೆಗೆ ತಿರುಗಿ ನೋಡದಂತೆ ಮಾಡಿರುವುದಕ್ಕೆ.

ಭಾರತದಲ್ಲಿ ಮೊದಲು ಈ ಮಾರ್ಕೆಟ್‌ ತಂತ್ರ ಬಳಸಿದ್ದು, ಫೋಕ್ಸ್‌ವ್ಯಾಗನ್‌ ಸಂಸ್ಥೆ. ನಂತರದಲ್ಲಿ ಸ್ಕೋಡಾ ಇಂಡಿಯಾ, ಟಿಸೀರೀಸ್, ಕೆವೆಂಟರ್ಸ್, ಅಂದಾನಿ ಅಂಬುಜ ಸಿಮೆಂಟ್ಸ್, ಮಿಂತ್ರಾ, ಹಲ್ದೀ ರಾಮ್ಸ್, ರಿಲಯನ್ಸ್ ಡಿಜಿಟಲ್‌ ಸಂಸ್ಥೆಗಳು ಕ್ಷಮಾಪಣಾ ಜಾಹೀರಾತು ಪ್ರಕಟಿಸಿದವು. ಈ ಸ್ಪರ್ಧೆಯಲ್ಲಿ ಮಾಧ್ಯಮ ಸಂಸ್ಥೆಗಳು ಹಿಂದೆ ಬೀಳಲಿಲ್ಲ, ಕರ್ನಾಟಕದಲ್ಲಿ ಡೆಕ್ಕನ್‌ ಹೆರಾಲ್ಡ್‌ ಹಾಗೂ ಪ್ರಜಾವಾಣಿ ಪತ್ರಿಕೆಗಳು, ಶತಮಾನಗಳ ಕಾಲ ಸತ್ಯವನ್ನು ರಾಜಿಯಾಗದ ಮಾನದಂಡವಾಗಿಸಿಕೊಂಡಿದ್ದಕ್ಕೆ, ಜಗತ್ತನ್ನು ಸ್ಪಷ್ಟವಾಗಿ ನೋಡುವ ಮಸೂರವಾಗಿದ್ದಕ್ಕೆ” ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಿದವು. ಇದೇ ಹಾದಿಯಲ್ಲಿ ಝೀಕನ್ನಡ, ಒನ್‌ ಇಂಡಿಯಾ, ಸಂಸ್ಥೆಗಳ ಪ್ರಕಟಿಸಿವೆ. ಈ ಟ್ರೆಂಡ್‌ ವೈರಲ್ ಆದ ಹಿನ್ನೆಲೆಯಲ್ಲಿ ಎಲ್ಲರೂ ಗ್ರಾಹಕರಲ್ಲಿ ‘ಕ್ಷಮೆ’ ಯಾಚಿಸುತ್ತಿದ್ದಾರೆ. 

ಎಲ್ಲಿಂದು ಶುರವಾಯ್ತು?

ಇದು ಶುರುವಾಗಿದ್ದು, ಫಿಲಿಪೈನ್ಸ್‌ನಲ್ಲಿ. ಕಳೆದ ವರ್ಷ ಮಧ್ಯಭಾಗದ ಫಿಲಿಪೈನ್ಸ್‌ನಲ್ಲಿ ಕ್ಷಮಾಪಣಾ ಜಾಹೀರಾತಿನ ಟ್ರೆಂಡ್‌ ಆರಂಭವಾಯಿತು. ಅಲ್ಲಿನ ಸ್ಥಳೀಯ ಬ್ಯ್ರಾಂಡ್‌ಗಳು,  ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಮೂಲಕ ಅಣಕು ಕ್ಷಮೆಯ ತಂತ್ರವನ್ನು ಅನುಸರಿಸಿ ಗ್ರಾಹಕರ ಗಮನಸೆಳೆಯುವ ಯತ್ನ ಮಾಡಿದವು. ಇನ್‌ಸ್ಟಾಗ್ರಾಮ್‌ ಮತ್ತು ಟಿಕ್‌ಟಾಕ್‌ಗಳಲ್ಲಿ ಇದು ಹೆಚ್ಚು ಗಮನಸೆಳೆದು ವೈರಲ್ ಆದವು. 

ಈ ತಂತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ಆರಂಭದಲ್ಲಿ ಗಮನಸೆಳೆಯುವ ವಿಶಿಷ್ಟ ತಂತ್ರವಾಗಿ ಕಂಡ ಕ್ಷಮೆಯಾಚನೆ ಈ ಬಗ್ಗೆ ಈಗ ತಕರಾರುಗಳೂ ಕೇಳಿ ಬರುತ್ತಿವೆ. 

ಮೊದಲ ನೋಟಕ್ಕೆ ಇದೊಂದು ಹೊಸತನದಿಂದ ಕೂಡಿ, ಗಮನಸೆಳೆಯುವ ಹಾಗೂ ಕಂಪನಿಗಳು ಗ್ರಾಹಕರಿಗೆ ಹತ್ತಿರವಾಗುವಂತೆ ಮಾಡುವ ತಂತ್ರವಾಗಿ ಕಾಣಿಸುತ್ತದೆ. ಆದರೆ ಎಲ್ಲರೂ ಇದೇ ಮಾದರಿಯನ್ನು ಅನುಸರಿಸಿ ಕ್ಷಮೆ ಕೇಳುತ್ತಿರುವುದು, ‘ಕ್ಷಮೆ’ಯಾಚನೆಯ ಬಗ್ಗೆ ಮತ್ತು ಯಾಚಿಸುತ್ತಿರುವ ಕಂಪನಿಯ ಪ್ರಾಮಾಣಿಕತೆಯ ಬಗ್ಗೆ ಅನುಮಾನ ಹುಟ್ಟಿಸುವಂತಾಗಿದೆ.

“ಸೋಷಿಯಲ್‌ ಮೀಡಿಯಾದ ಆಲ್ಗರಿದಮ್‌ಗಳು ವ್ಯಂಗ್ಯ ಮತ್ತು ಬೆಸೆಯುವಂತಹ ಸಂಗತಿಗಳನ್ನು ಇಷ್ಟಪಡುತ್ತವೆ. ಕ್ಷಮೆ ಕೇಳುವುದು ಮಾನವೀಯವಾದ, ಸೌಜನ್ಯ ಪೂರ್ವಕವಾದ ನಡೆ. ಅದರಲ್ಲೂ ಒಳ್ಳೆಯ ಕೆಲಸವನ್ನು ಮಾಡಿ, ಕ್ಷಮೆ ಕೇಳಿದರೆ ಕೇಳುವವರ ಮೌಲ್ಯ ಇನ್ನೂ ಹೆಚ್ಚುತ್ತದೆ. ತಪ್ಪು ಮಾಡಿದಾಗಲೇ ಕೇಳದೇ ಇರುವಾಗ, ಒಳ್ಳೆಯ ಕೆಲಸ, ಉತ್ತಮ ಸೇವೆ ಮಾಡಿ, ಕ್ಷಮೆ ಕೇಳುವುದು ಹೆಚ್ಚುಗಾರಿಕೆ ಎನ್ನಿಸುತ್ತದೆ. ಈ ರೀತಿಯಲ್ಲಿ ಗ್ರಾಹಕರ ಸೆಳೆದು ಅವರ ಮನಸ್ಸು ಗೆಲ್ಲುವುದು ಈ ತಂತ್ರದ ಏಕೈಕ ಗುರಿ” ಎಂದು ಸಮಾಚಾರ.ಕಾಮ್‌ನೊಂದಿಗೆ ಮಾತನಾಡಿದ ಮಾರ್ಕೆಂಟಿಗ್‌ ತಜ್ಞರೊಬ್ಬರು ಅಭಿಪ್ರಾಯ ಪಡುತ್ತಾರೆ. 

ಬ್ಯ್ರಾಂಡ್‌ ಗುರು ಹರೀಶ್‌ ಬಿಜೂರ್, ಈ ಟ್ರೆಂಡ್‌ ಕುರಿತು ಆತಂಕ ವ್ಯಕ್ತಪಡಿಸುತ್ತಾರೆ. ಸಮಾಚಾರ.ಕಾಮ್‌ ನೊಂದಿಗೆ ಮಾತನಾಡಿದ ಅವರು, “ಫೋಕ್ಸ್‌ ವಾಗನ್‌, ಸ್ಕೋಡಾ ಮುಂತಾದ ಕಂಪನಿಗಳ “ಅಧಿಕೃತ ಕ್ಷಮಾಪಣಾ ಹೇಳಿಕೆ”ಯ ಜಾಹೀರಾತುಗಳು ಪ್ರಕಟವಾಗುತ್ತಿದ್ದಂತೆ, ಅಲ್ಲೇನು ಸಮಸ್ಯೆ ಇದೆ ಎಂದು ಜನ ಗಮನ ಹರಿಸುತ್ತಾರೆ. ಇದು ಗ್ರಾಹಕರ ಜೊತೆಗೆ ಮಾಧ್ಯಮಗಳ ಗಮನವನ್ನೂ ಸೆಳೆಯುತ್ತದೆ. ಇವರೇಕೆ ಕ್ಷಮೆ ಕೇಳುತ್ತಿದ್ದಾರೆ ಎಂದು. ಆದರೆ ಒಮ್ಮೆ ಕ್ಷಮಾಪಣಾ ಪತ್ರ ಓದಿದ ಮೇಲೆ ಇದು, ಮಾರ್ಕೆಂಟಿಂಗ್‌ ‘ಗಾಳ’ ಎಂದು ತಿಳಿಯುತ್ತದೆ.

ಇದನ್ನೂ ಓದಿ | ನ.8ರಿಂದ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ

ಜನರನ್ನು ಸೆಳೆಯುವ ವಿಷಯದಲ್ಲಿ ಇದು ಒಳ್ಳೆಯ ತಂತ್ರವಾಗಿಯೇ ಕಾಣಿಸುತ್ತದೆ. ಆದರೆ ಕಡೆಗೆ ಜನ ಪತ್ರ ಓದಿ ನಗುತ್ತಾರೆ. ಇದರಿಂದಾಗಿ ಬ್ಯ್ರಾಂಡ್‌ಗಳು ಹಾಸ್ಯಾಸ್ಪದವಾಗಿ ಬಿಡಬಹುದು. ಈಗ ಎಲ್ಲರೂ ಇದೇ ತಂತ್ರ ಅನುಸರಿಸುತ್ತಿದ್ದಾರೆ. ಅತಿಯಾದರೆ, ತಮ್ಮದೇ ಬ್ಯ್ರಾಂಡ್‌ಗಳಿಗೆ ಪೆಟ್ಟು ಬೀಳಬಹುದು. ಇಂತಹ ಗಿಮಿಕ್‌ಗಳು ಮಾರ್ಕೆಟಿಂಗ್‌ ಕೆಟ್ಟ ಹೆಸರು ತಂದುಬಿಡಬಹುದು. ಮಾರ್ಕೆಟಿಂಗ್‌ ಎಂಬುದು ಗಂಭೀರವಾದ ವಿಷಯ. ಪ್ರಾಮಾಣಿಕವಾಗಿರಬೇಕು. ಈ ರೀತಿಯ ಗಿಮಿಕ್‌ ಮಾರ್ಕೆಂಟಿಂಗ್‌ ಕ್ಷೇತ್ರಕ್ಕೆ ಕೆಟ್ಟ ಹೆಸರು ತಂದುಬಿಡಬಹುದು” ಎಂದು ಅಭಿಪ್ರಾಯ ಪಡುತ್ತಾರೆ.

Share:

ಮತ್ತಷ್ಟು ಸುದ್ದಿ

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »