ಒಂದು ಸಣ್ಣ ಊರಿನ ಮಣ್ಣಿನ ಮೈದಾನದಿಂದ ಉದಯಿಸಿ, ಕ್ರಿಕೆಟ್ ಜಗತ್ತೇ ತಿರುಗಿ ನೋಡುವಂತೆ ಮಾಡಿದ ಒಂದು ಹುಡುಗಿ. ಅವರ ಬ್ಯಾಟನಿಂದ ಭಾರಿಸಿದ ಪ್ರತಿಯೊಂದು ಹೊಡೆತಗಳು ಕೇವಲ ರನ್‌ಗಳಲ್ಲ, ಅವರ ಹೋರಾಟದ ಕಥೆಗಳು. ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಸ್ಮೃತಿ ಮಂಧಾನ ಅವರ ಹೆಸರು ಉಚ್ಚರಿಸಿದರೆ, ಹೃದಯದಲ್ಲಿ ಉತ್ಸಾಹ ಉಂಟಾಗುತ್ತದೆ.
2025ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಟ್ರೋಫಿ ತಂದುಕೊಟ್ಟ ಆ ಯುವತಿ, ತನ್ನ ಜೀವನದ ಪ್ರತಿಯೊಂದು ಹೊಡೆತದಲ್ಲಿ ಸಾಮಾನ್ಯ ಹುಡುಗಿಯರಿಗೆ ಭರವಸೆಯಾಗುತ್ತಾ ಬಂದಿದ್ದಾರೆ. ಇದು ಕೇವಲ ಕ್ರಿಕೆಟ್‌ನ ಕಥೆಯಲ್ಲ, ಹುಡುಗಿಯರು ಕಾಣುವ ಕನಸಿನ ಹೋರಾಟದ ಕಥೆ.

ಸ್ಮೃತಿ ಮಂಧಾನ ಬಾಲ್ಯ ಮತ್ತು ಜನನ
ಸ್ಮೃತಿ ಮಂಧಾನಾ ಅವರು 18 ಜುಲೈ 1996ರಂದು ಮುಂಬೈಯಲ್ಲಿ ಜನಿಸಿದರು. ನಂತರ ಇವರ ಕುಟುಂಬವು ಸಂಗ್ಲಿಗೆ ಸ್ಥಳಾಂತರಗೊಂಡಿತು. ತಂದೆ ಶ್ರೀನಿವಾಸ್ ಮಂಧಾನ ಜಿಲ್ಲಾ ಮಟ್ಟದ ಕ್ರಿಕೆಟ್ ಆಟಗಾರರು ಮತ್ತು ರಾಸಾಯನಿಕ ಕಾರ್ಖಾನೆ ನಡೆಸುತ್ತಿದ್ದರು. ತಾಯಿ ಸ್ಮಿತಾ ಮಂಧಾನ ಮಾಜಿ ಕ್ರಿಕೆಟ್ ಆಟಗಾರ್ತಿ ಜೊತೆಗೆ ಮಗಳ ಮೊದಲ ಕೋಚ್ ಆದರು. ತಮ್ಮ ಶ್ರಾವಣ್ ಮಂಧಾನ ಜಿಲ್ಲಾ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದರು. ಸಣ್ಣ ವಯಸ್ಸಿನಿಂದಲೇ ತಮ್ಮನ ಆಟ ನೋಡುತ್ತಾ, ಸ್ಮೃತಿ ಬ್ಯಾಟ್ ಹಿಡಿಯುವ ಕನಸು ಕಾಣುತ್ತಿದ್ದರು.
ಮೊದಲ ಬ್ಯಾಟ್ ಸ್ಪರ್ಶ: ತಾಯಿಯ ಬೆಂಬಲದ ಮ್ಯಾಜಿಕ್
ಸ್ಮೃತಿಯವರ ತಾಯಿ ತಮ್ಮನ ಜೊತೆಗೆ ಸ್ಮೃತಿಯನ್ನು ಮೈದಾನಕ್ಕೆ ಕರೆತಂದರೂ, ಆಗ ಅವರು ಬ್ಯಾಟ್ ಹಿಡಿದು ಆಟ ಆಡಲು ತೊಡಗಿದರು. ಆದರೆ ಆಗ ಇದು ಸರಳ ಆಟವಾಗಿತ್ತು ಅಷ್ಟೇ. ಯಾರೂ ಕೂಡ ಊಹಿಸಿರಲಿಲ್ಲ; ಮುಂದೆ ಒಂದು ದಿನ ಇವರು ದೇಶದ ಗೌರವವನ್ನು ಹೆಚ್ಚಿಸಲಿದ್ದಾರೆ ಎಂದು.
ಸ್ಮೃತಿಯ ಬಾಲ್ಯವು ಸರಳತೆಯಿಂದ ತುಂಬಿತ್ತು; ಊರಿನ ಶಾಲೆಯಲ್ಲಿ ಓದುತ್ತಾ, ಮನೆಯಲ್ಲಿ ಸಹೋದರನೊಂದಿಗೆ ಕ್ರಿಕೆಟ್ ಆಡುತ್ತಾ, ಬೆಳೆದರು. ಆದರೆ ಈ ಸರಳತೆಯ ಹಿನ್ನೆಲೆಯಲ್ಲಿ ಒಂದು ದೃಢ ಸಂಕಲ್ಪವಿತ್ತು. ಅದು ಕ್ರಿಕೆಟ್ ಅವರ ಜೀವನದ ಅವಿಭಾಜ್ಯ ಭಾಗವಾಗಬೇಕು ಎನ್ನುವ ದೃಢ ವಿಶ್ವಾಸವಿತ್ತು.

ಕ್ರಿಕೆಟ್‌ಗೆ ಮೊದಲ ಹೆಜ್ಜೆ: ಯುವ ತಾರೆಯ ಉದಯ
8ನೇ ವಯಸ್ಸಿನಲ್ಲಿ ಅವರು ಮೊದಲ ರಾಜ್ಯ ಮಟ್ಟದ ತಂಡಕ್ಕೆ ಆಯ್ಕೆಯಾದರು. ಮತ್ತು ಅದು ಅವರ ಜೀವನದ ಮೊದಲ ದೊಡ್ಡ ನಿರ್ಣಾಯಕ ಹಂತವಾಯಿತು. ಮಹಾರಾಷ್ಟ್ರದ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದ ಸ್ಮೃತಿ, ತನ್ನ ವಿಶಿಷ್ಟ ಬ್ಯಾಟಿಂಗ್ ಶೈಲಿಯ ಮೂಲಕ ಎಲ್ಲರ ಗಮನ ಸೆಳೆದರು. 13ನೇ ವಯಸ್ಸಿನಲ್ಲಿ ಮಹಾರಾಷ್ಟ್ರದ ಸೀನಿಯರ್ ತಂಡಕ್ಕೆ ಆಯ್ಕೆಯಾಗಿ, 16ನೇ ವಯಸ್ಸಲ್ಲಿ ನಾಯಕಿಯಾದರು.
2013ರಲ್ಲಿ ಭಾರತೀಯ ಮಹಿಳಾ ತಂಡಕ್ಕೆ ಸೇರಿದ ಸ್ಮೃತಿ, ಮೊದಲ ODIಯಲ್ಲಿ ಇಂಗ್ಲೆಂಡ್ ವಿರುದ್ಧ 90 ರನ್* ಗಳಿಸಿ ಗಮನ ಸೆಳೆದರು. ಆರಂಭದಲ್ಲಿ ಸ್ಟ್ರ್ಯಾಬಿಸ್ಮಸ್ (ಕಣ್ಣಿನ ತಿರುಗುವಿಕೆ) ಸಮಸ್ಯೆಯಿಂದಾಗಿ ಕನ್ನಡಕ ಹಾಕಿಕೊಂಡು ಆಟವಾಡುತ್ತಿದ್ದರು. 2014ರಲ್ಲಿ ಲೇಸರ್ ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿ ಸ್ಪಷ್ಟಗೊಂಡು ಆಟವೂ ಉತ್ತಮಗೊಂಡಿತು. 2018ರಲ್ಲಿ ICC ಮಹಿಳಾ ODI ಕ್ರಿಕೆಟರ್ ಆಫ್ ದಿ ಇಯರ್ ಆಯ್ಕೆಯಾಗಿ ಸಾಧನೆಯ ಮೈಲುಗಲ್ಲು ನಿಂತರು.

ಸವಾಲುಗಳು:
ಮಹಿಳೆಯರ ಕ್ರಿಕೆಟ್‌ನಲ್ಲಿ ಹುಡುಗಿಯರಿಗೆ ಸಾಮಾಜಿಕ ಒತ್ತಡಗಳು, ಸೌಲಭ್ಯಗಳ ಕೊರತೆ ಹೀಗೆ ಅನೇಕ ಸಮಸ್ಯೆಗಳಿರುತ್ತದೆ. ಇವೆಲ್ಲವೂ ಅವರ ಮುಂದೆ ಸವಾಲುಗಳಾಗಿ ನಿಂತಿದ್ದವು. ಆದರೂ, ಸ್ಮೃತಿ ಅವರ ತಾಯಿಯ ಬೆಂಬಲವು ಅವಳ ಶಕ್ತಿಯಾಯಿತು . ಸ್ಮೃತಿ ಅವರ ತಾಯಿ ಮಾಜಿ ಕ್ರಿಕೆಟ್ ಆಟಗಾರ್ತಿ, ಮತ್ತು ಅವರೇ ಸ್ಮೃತಿಯ ಮೊದಲ ಕೋಚ್ ಕೂಡ ಹೌದು. ಕುಟುಂಬದ ಬೆಂಬಲದೊಂದಿಗೆ, ಸ್ಮೃತಿ ತನ್ನ ರಾಜ್ಯ ತಂಡದಲ್ಲಿ ಮಿಂಚುತ್ತಾ ಬಂದರು.
2017ರಲ್ಲಿ ACL (Anterior Cruciate Ligament) ಗಾಯದಿಂದ ಕ್ರಿಕೆಟ್‌ನಿಂದ 5-7 ತಿಂಗಳು ದೂರ ಉಳಿದರೂ, ಅದು ಅವರನ್ನು ಮಾನಸಿಕವಾಗಿ ಹೆಚ್ಚು ಬಲಿಷ್ಠಗೊಳಿಸಿತು. ಅವರು WBBLನಲ್ಲಿ ಬೌಲಿಂಗ್ ಮಾಡುತ್ತಿರುವಾಗ ಗಾಯಗೊಂಡು, 2017 ವಿಶ್ವಕಪ್‌ಗೆ ತೊಡಕಾಗಿ ಬೂರಿದರೂ, ಗಾಯದ ನಂತರ ತಿರಿಗಿ ಬಂದು 90 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.
2021ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್ ಪಂದ್ಯದಲ್ಲಿ 127 ರನ್‌ಗಳ ಶತಕ ಸಾಧಿಸಿ, ಭಾರತೀಯ ಮಹಿಳಾ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದರು – ಇದು ಅವರ ಮೊದಲ ಟೆಸ್ಟ್ ಶತಕ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತೀಯ ಮಹಿಳೆಯರ ಮೊದಲ ಟೆಸ್ಟ್ ಶತಕ.
ODI, T20 ಮತ್ತು ಟೆಸ್ಟ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಸ್ಮೃತಿ, 2024ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕಿಯಾಗಿ ವುಮನ್ಸ್ ಪ್ರೀಮಿಯರ್ ಲೀಗ್ (WPL) ಗೆದ್ದುಕೊಂಡರು – ಇದು ಅವರ ನಾಯಕತ್ವದ ಮೊದಲ ದೊಡ್ಡ ಯಶಸ್ಸು ಮತ್ತು RCBಗೆ ಮೊದಲ WPL ಟ್ರೋಫಿ.
2025ರಲ್ಲಿ ಅವರ ODI ರನ್ ಸರಾಸರಿ 66.28 ಆಗಿ, 14 ಇನ್ನಿಂಗ್ಸ್‌ಗಳಲ್ಲಿ 928 ರನ್‌ಗಳಿಸಿ, 5 ಶತಕಗಳೊಂದಿಗೆ ಜಗತ್ತಿನ ಅಗ್ರ ODI ಬ್ಯಾಟರ್ ಆದರು.

ವಿಶ್ವಕಪ್ ಮ್ಯಾಜಿಕ್: ಭಾರತದ ಮೊದಲ ಟ್ರೋಫಿ ಸಾಧನೆ
2025ರ ICC ಮಹಿಳಾ ವಿಶ್ವಕಪ್ ಭಾರತದಲ್ಲಿ ನಡೆದಿದ್ದರಿಂದ ಒತ್ತಡ ಹೆಚ್ಚಾಗಿತ್ತು. ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ 88 ರನ್‌ಗಳಿಸಿದರೂ ತಂಡ 4 ರನ್‌ಗಳಿಂದ ಸೋತಿತು – ಇದು ಮೂರನೇ ಸೋಲು ಮತ್ತು ಸೆಮಿಫೈನಲ್ ಸಂಕಷ್ಟ ತಂದಿತು. ಆ ದಿನಗಳು ನಿದ್ರೆಯಿಲ್ಲದೇ ಕಳೆದವು; 45 ದಿನಗಳ ಕಾಲ ತಂಡದೊಂದಿಗೆ ಕಟ್ಟುನಿಟ್ಟಾಗಿ ಕೆಲಸ ಮಾಡಿದರು. ಆದರೆ ಆ ಹೋರಾಟ ವ್ಯರ್ಥವಾಗಲಿಲ್ಲ.
ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಗೆದ್ದು ಸೆಮಿಫೈನಲ್‌ಗೆ ಮುಂದುವರಿದರು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ 109 ರನ್ ಶತಕ ಬಾರಿಸಿದರು – 2025ರಲ್ಲಿ ಅವರ 5ನೇ ಶತಕ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ, ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತು. ಸ್ಮೃತಿಯ 45 ರನ್‌ಗಳ ಆರಂಭದ ದೃಢತೆಯೇ ಗೆಲುವಿಗೆ ಮೂಲವಾಯಿತು. ಈ ವಿಶ್ವಕಪ್‌ನಲ್ಲಿ ಅವರು ಭಾರತದ ಅತಿ ಹೆಚ್ಚು ರನ್ ಮಾಡಿದ ಆಟಗಾರ್ತಿಯಾಗಿ, ಮಿಥಾಲಿ ರಾಜ್‌ರ 2017ರ ದಾಖಲೆಯನ್ನು ಮುರಿದರು (434 ರನ್‌ಗಳೊಂದಿಗೆ).

ಗೆಲುವಿನ ಹಿನ್ನೆಲೆ: ಹೃದಯಸ್ಪರ್ಶಿ ಕ್ಷಣಗಳು
ಈ ಗೆಲುವು ಸ್ಮೃತಿಗೆ ಕೇವಲ ಟ್ರೋಫಿ ಅಲ್ಲ. ದಶಕಗಳ ಹೋರಾಟದ ವಿಜಯ. 2020ರ T20 ವಿಶ್ವಕಪ್ ಫೈನಲ್ ಸೋಲುಗಳು, ಹಿಂದಿನ ವಿಶ್ವಕಪ್‌ಗಳಲ್ಲಿನ ಘಟನೆಗಳು ಅವರನ್ನು ಬಲಿಷ್ಠಗೊಳಿಸಿದವು. ತಂಡದ ಉಪನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್ ಅವರೊಂದಿಗೆ ಏಕತೆಯನ್ನು ಕಾಪಾಡಿದರು. ಫೈನಲ್ ನಂತರ ಭಾವುಕರಾಗಿ ಹೇಳಿದರು: “ಈ ಗೆಲುವು ನಮ್ಮೆಲ್ಲರ ಹೃದಯದಲ್ಲಿ ಇರುತ್ತದೆ.” ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಸಭೆಯಲ್ಲಿ: “ಪ್ರತಿ ಹುಡುಗಿಯೂ ಚಾಂಪಿಯನ್ ಆಗಬಹುದು” ಎಂದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ಣವೀಸ್ ಅವರು ಸನ್ಮಾನಿಸಿ 2.25 ಕೋಟಿ ರೂಪಾಯಿ ನೀಡಿದರು. ಆದರೆ ಸ್ಮೃತಿಗೆ ಗೌರವಗಳು ಮುಖ್ಯವಲ್ಲ; ಆಟದ ಮೂಲಕ ಮಹಿಳಾ ಕ್ರಿಕೆಟ್‌ನ್ನು ಎತ್ತಿ ತೋರಿಸಿದರು.
ನಾಯಕತ್ವದ ಸೆಲೆ : ಆಸ್ಟ್ರೇಲಿಯಾ ಶತಕದ ಥಂಡರ್
2025ರಲ್ಲಿ ಆಸ್ಟ್ರೇಲಿಯಾ ವಿರುದ್ಧ 125 ರನ್ ಶತಕ ಬಾರಿಸಿ, ಭಾರತದ ಅತ್ಯಂತ ತ್ವರಿತ ODI ಶತಕದ ದಾಖಲೆ ಬರೆದರು. WPLನಲ್ಲಿ RCB ನಾಯಕತ್ವ ಮತ್ತು ಅಂತರರಾಷ್ಟ್ರೀಯ ಸ್ಥಿರತೆ ಅವರನ್ನು ಸಂಪೂರ್ಣ ಕ್ರಿಕೆಟರನ್ನಾಗಿ ಮಾಡಿವೆ. ಸ್ಮೃತಿಯ ಜೀವನ ಗೆಲುವುಗಳಿಂದಲೇ ತುಂಬಿಲ್ಲ; 2023ರ ಬಾಂಗ್ಲಾದೇಶ ಸರಣಿಯಲ್ಲಿ ತಂಡದ ಒತ್ತಡಗಳು, 2022ರಲ್ಲಿ ಮಿಥಾಲಿ ರಾಜ್ ಅವರೊಂದಿಗಿನ ಚರ್ಚೆಗಳು ಸವಾಲುಗಳಾಗಿದ್ದವು. ಆದರೂ, ತಪ್ಪುಗಳನ್ನು ಒಪ್ಪಿಕೊಂಡು ಮುಂದುವರಿದರು. ಇಂಗ್ಲೆಂಡ್ ಸೋಲಿನ ನಂತರ: “ತಪ್ಪು ಆಯ್ಕೆ ನನ್ನದೇ, ಆದರೆ ನಾವು ಗೆದ್ದು ತಪ್ಪಿಸಿಕೊಳ್ಳುತ್ತೇವೆ” ಎಂದರು. ಈ ಧೈರ್ಯವೇ ಅವರ ಶಕ್ತಿ.

ಇದನ್ನೂ ಓದಿ | ಟೀಕೆಗಳನ್ನ ಮೀರಿ ವಿಶ್ವಕಪ್ ಗೆದ್ದ ಕರಾವಳಿ ಕುವರಿ
ಭವಿಷ್ಯದ ಕನಸುಗಳು
ವೈಸ್-ಕ್ಯಾಪ್ಟನ್ ಆಗಿ ತಂಡದಲ್ಲಿ ಏಕತೆಯನ್ನು ಕಟ್ಟಿಬೆಳೆಸಿದ ಸ್ಮೃತಿ, ದುಬೈಯಲ್ಲಿ ಅಕಾಡೆಮಿ ತೆರೆದು ಯುವ ಹುಡುಗಿಯರನ್ನು ತರಬೇತಿ ನೀಡುತ್ತಿದ್ದಾರೆ. ಕ್ರಿಕೆಟ್ ಮೂಲಕ ಹುಡುಗಿಯರಿಗೆ ಸಾಧ್ಯತೆಗಳನ್ನು ತೋರಿಸುವುದು ಅವರ ಕನಸು. ಇಂದು ಸ್ಮೃತಿ ಮಂಧಾನಾ ಭಾರತೀಯ ಮಹಿಳಾ ಕ್ರಿಕೆಟ್‌ನ ಪ್ರತೀಕ. ಅವರ ಆಟದಲ್ಲಿ ಪ್ರೀತಿ, ಧೈರ್ಯ, ಶಕ್ತಿ ಇದೆ. 9,000ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್‌ಗಳು, 1,000ಕ್ಕೂ ಹೆಚ್ಚು ಬೌಂಡರಿಗಳು – ಇವುಗಳು ದಾಖಲೆಗಳು. ಆದರೆ ಈ ಯಶಸ್ಸು ಕೇವಲ ಅಂಕಿಗಳಲ್ಲ; ಹೋರಾಡು, ಬೀಳು, ಏಳು – ಹುಡುಗಿಯರಿಗೆ ಸಂದೇಶ. 2025ರ ವಿಶ್ವಕಪ್ ಗೆಲುವು ಸ್ಮೃತಿಯ ಮೊದಲ ICC ಟ್ರೋಫಿ, ಹಾಗೂ ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೊಸ ಯುಗದ ಆರಂಭ.







