ನಗರದ ಹೃದಯಭಾಗದಲ್ಲಿರುವ, ಬಸವನಗುಡಿಯ ದೊಡ್ಡ ಬಸವಣ್ಣ ದೇವಾಲಯದಲ್ಲಿ ಬಳಿ ವರ್ಷಕ್ಕೊಮ್ಮೆ ಸೃಷ್ಟಿಯಾಗುವ ಅಪೂರ್ವ ಸಂಭ್ರಮವೇ ಈ ಕಡಲೆಕಾಯಿ ಪರಿಷೆ!. ಈ ವರ್ಷದ ಐತಿಹಾಸಿಕ ಜಾತ್ರೆಯು ಇದೇ ಮೊದಲ ಬಾರಿಗೆ 2 ದಿನಗಳಿಂದ 5 ದಿನಗಳಿಗೆ (ನವೆಂಬರ್ 17 ರಿಂದ 21ರವರೆಗೆ) ವಿಸ್ತರಣೆಯಾಗಿ ವಿಜೃಂಭಣೆಯಿಂದ ನಡೆಯುತ್ತಿದೆ. ಕಾರ್ತಿಕ ಮಾಸದ ಕೊನೆಯ ಸೋಮವಾರ (ನವೆಂಬರ್ 17) ಬೆಳಗ್ಗೆ 10 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡುವ ಮೂಲಕ ಪರಿಷೆ ಆರಂಭವಾಗಿದೆ.
ಕಳೆದ ವರ್ಷ 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಿ ಗುರುತಿಸಿಕೊಂಡಿದ್ದ ಈ ಜಾತ್ರೆಯು ಈ ಬಾರಿ ಇನ್ನಷ್ಟು ಭರ್ಜರಿಯಾಗಿದೆ. ಬುಲ್ ಟೆಂಪಲ್ ರಸ್ತೆ, ಗಾಂಧಿ ಬಜಾರ್, ಡಿ.ವಿ.ಜಿ. ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳು ಕಡಲೆಕಾಯಿ ಗಾಡಿಗಳು, ಬಣ್ಣಬಣ್ಣದ ದೀಪಾಲಂಕಾರ, ಜಾನಪದ ಕಲಾವಿದರ ನೃತ್ಯ-ಗಾಯನದಿಂದ ಕಂಗೊಳಿಸುತ್ತಿವೆ. ರೈತರು ತಮ್ಮ ಮೊದಲ ಕಡಲೆಕಾಯಿ ಬೆಳೆಯನ್ನು ಬಸವಣ್ಣನಿಗೆ ಸಮರ್ಪಿಸುವ ಸಾಂಪ್ರದಾಯಿಕ ಕಾರ್ಯಕ್ರಮದೊಂದಿಗೆ ಉದ್ಘಾಟನೆಯಲ್ಲಿ 21 ಬಸವಣ್ಣಗಳಿಗೆ ವಿಶೇಷ ಪೂಜೆ, ತುಲಾಭಾರ ಮತ್ತು ಕಡಲೆಕಾಯಿ ಗಿಡಗಳನ್ನು ತಿನ್ನಿಸುವ ಕಾರ್ಯಕ್ರಮ ನಡೆದಿದೆ.
ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ, ಬಸವನಗುಡಿ ಪ್ರದೇಶದಲ್ಲಿ ನೆಲೆಗೊಂಡಿರುವ ದೊಡ್ಡ ಬಸವಣ್ಣ ದೇವಾಲಯ ( Big Bull Temple) ಭಾರತದ ಅತ್ಯಂತ ಪ್ರಾಚೀನ ಮತ್ತು ವಿಶಿಷ್ಟ ದೇವಾಲಯಗಳಲ್ಲಿ ಒಂದು. ಇದು ಶಿವನ ವಾಹನವಾದ ನಂದಿ (ಬಸವ) ಗೆ ಸಮರ್ಪಿತವಾದ ಅಪರೂಪದ ದೇವಾಲಯವಾಗಿದ್ದು, ಏಕಶಿಲಾ (ಒಂದೇ ಕಲ್ಲಿನಿಂದ ಕೆತ್ತಿದ) ದೈತ್ಯಾಕಾರದ ನಂದಿ ಮೂರ್ತಿಯಿಂದ ಈ ದೇವಸ್ಥಾನ ಪ್ರಪಂಚದಾದ್ಯಂತ ಪ್ರಸಿದ್ಧ. ದೇವಾಲಯದ ಇತಿಹಾಸ ಸುಮಾರು 500 ವರ್ಷಗಳಷ್ಟು ಹಳೆಯದು ಮತ್ತು ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಕಾಲಕ್ಕೆ ಹೋಗಿ ಸೇರುತ್ತದೆ. ಇದು ಕೇವಲ ಧಾರ್ಮಿಕ ಕೇಂದ್ರವಲ್ಲ, ಬೆಂಗಳೂರಿನ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪೌರಾಣಿಕ ಪರಂಪರೆಯ ಸಂಕೇತವಾಗಿದೆ.
ಸಂಸ್ಥಾಪನೆ ಮತ್ತು ಕೆಂಪೇಗೌಡರ ಕಾಲ (1537)
ದೇವಾಲಯದ ನಿರ್ಮಾಣವು 1537ರಲ್ಲಿ ಆರಂಭವಾಯಿತು ಎಂದು ಐತಿಹಾಸಿಕ ದಾಖಲೆಗಳು ಸೂಚಿಸುತ್ತವೆ. ಬೆಂಗಳೂರಿನ ಸಂಸ್ಥಾಪಕ ಹಿರಿಯ ಕೆಂಪೇಗೌಡ ( ಒಂದನೇ ಕೆಂಪೇಗೌಡ) ಅವರು ವಿಜಯನಗರ ಸಾಮ್ರಾಜ್ಯದ ಅಧೀನದಡಿ ಬೆಂಗಳೂರು ಪೇಟೆಯನ್ನು ಸ್ಥಾಪಿಸಿದರು. ಅವರು ನಗರವನ್ನು ನಾಲ್ಕು ಕೋಟೆಗಳೊಂದಿಗೆ (ಪಶ್ಚಿಮದಲ್ಲಿ ಕೆಂಪೇಗೌಡ ಕೋಟೆ, ಉತ್ತರದಲ್ಲಿ ಹಲಸೂರು, ದಕ್ಷಿಣದಲ್ಲಿ ಬಸವನಗುಡಿ, ಪೂರ್ವದಲ್ಲಿ ಯಲಹಂಕ) ರಕ್ಷಿಸಿ ಅಭಿವೃದ್ಧಿಪಡಿಸಿದರು. ಬಸವನಗುಡಿ ಪ್ರದೇಶವು ಆ ಕಾಲದಲ್ಲಿ ಕಡಲೆಕಾಯಿ ಮತ್ತು ರಾಗಿ ಬೆಳೆಯುವ ಫಲವತ್ತಾದ ಗದ್ದೆಗಳಿಂದ ತುಂಬಿತ್ತು.
ಕೆಂಪೇಗೌಡರು ದ್ರಾವಿಡ ಶೈಲಿಯಲ್ಲಿ ದೇವಾಲಯವನ್ನು ನಿರ್ಮಿಸಿದರು. ಮುಖ್ಯ ಗರ್ಭಗುಡಿಯಲ್ಲಿ 4.57 ಮೀಟರ್ (15 ಅಡಿ) ಎತ್ತರ ಮತ್ತು 6.1 ಮೀಟರ್ (20 ಅಡಿ) ಉದ್ದದ ಏಕಶಿಲಾ ನಂದಿ ಮೂರ್ತಿಯನ್ನು ಸ್ಥಾಪಿಸಿದರು. ಈ ಮೂರ್ತಿಯನ್ನು ಸ್ಥಳೀಯ ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದ್ದು, ಆ ಕಾಲದ ಶಿಲ್ಪಕಲೆಯ ಅದ್ಭುತ ಉದಾಹರಣೆಯಾಗಿದೆ. ಮೂರ್ತಿಯು ಮೊದಲು ಬೂದು ಬಣ್ಣದಲ್ಲಿದ್ದು, ಕಾಲಕ್ರಮೇಣ ತೈಲಾಭಿಷೇಕ ಮತ್ತು ಪೂಜೆಗಳಿಂದ ಕಪ್ಪು ಬಣ್ಣಕ್ಕೆ ತಿರುಗಿದೆ. ನಂದಿಯ ಕಣ್ಣುಗಳು ರತ್ನಗಳಿಂದ ಕೂಡಿದ್ದು, ಗಂಟೆಗಳು ಮತ್ತು ಆಭರಣಗಳಿಂದ ಅಲಂಕೃತವಾಗಿದೆ.
ದೇವಾಲಯದ ಹತ್ತಿರದಲ್ಲೇ ದೊಡ್ಡ ಗಣಪತಿ ದೇವಾಲಯವನ್ನು ಕೆಂಪೇಗೌಡರೇ ನಿರ್ಮಿಸಿದರು. ಗಣಪತಿಯ ಮೂರ್ತಿ ಸುಮಾರು 18 ಅಡಿ ಎತ್ತರದ್ದಾಗಿದ್ದು, ಕಡಲೆಕಾಯಿ ಪರಿಷೆಯಲ್ಲಿ ವಿಶೇಷ ಪೂಜೆಗೊಳ್ಳುತ್ತದೆ.
ಪೌರಾಣಿಕ ಹಿನ್ನೆಲೆ ಮತ್ತು ಕಡಲೆಕಾಯಿ ಪರಿಷೆಯ ಉಗಮ
ದೇವಾಲಯದ ಇತಿಹಾಸದಲ್ಲಿ ಪೌರಾಣಿಕ ಕಥೆಯು ಪ್ರಮುಖ ಪಾತ್ರ ವಹಿಸುತ್ತದೆ. 16ನೇ ಶತಮಾನದಲ್ಲಿ ಬಸವನಗುಡಿ ಸುತ್ತಲಿನ ಗದ್ದೆಗಳಲ್ಲಿ ಹುಣ್ಣಿಮೆಯ ರಾತ್ರಿಯಲ್ಲಿ ಕಡಲೆಕಾಯಿ ಬೆಳೆಯನ್ನು ಒಂದು ದೊಡ್ಡ ಎತ್ತು (ಬಸವ) ನಾಶಪಡಿಸುತ್ತಿತ್ತು. ರೈತರು ಆ ಎತ್ತನ್ನು ಹಿಡಿಯಲು ಪ್ರಯತ್ನಿಸಿದಾಗ, ಓಡಿ ಹೋಯಿತು ಯಾರ ಕೈಗೂ ಸಿಗದೇ ಅದು ಕಲ್ಲಾಗಿ ಪರಿವರ್ತನೆಯಾಯಿತು ಎಂಬ ನಂಬಿಕೆ. ಆಗ ಗ್ರಾಮಸ್ಥರಿಗೆ ಇದು ದೇವರ ಬಸವ ಇತ್ತಾ? ಎನ್ನುವ ಪ್ರಶ್ನೆ ಕಾಡುತ್ತದೆ, ಆಗ ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಭೀಕರ ಬರಗಾಲ ಸಂಭವಿಸಿತು. ಆಗ ಗ್ರಾಮಸ್ಥರು ವಿಶೇಷ ಪೂಜೆಯನ್ನು ಮಾಡಿದಾಗ ಅದೇ ಸಂದರ್ಭದಲ್ಲಿ ಜೋರಾಗಿ ಮಳೆಯಾಯಿತು. ಆ ಸ್ಥಳದಲ್ಲಿ ಕೆಂಪೇಗೌಡರು ಬಸವನ ಮೂರ್ತಿಯನ್ನು ಸ್ಥಾಪಿಸಿ ದೇವಾಲಯ ನಿರ್ಮಿಸಿದರು. ಈ ಘಟನೆಯನ್ನು ಸ್ಮರಿಸಿ, ರೈತರು ಮೊದಲ ಕಡಲೆಕಾಯಿ ಬೆಳೆಯನ್ನು ಬಸವಣ್ಣನಿಗೆ ಸಮರ್ಪಿಸುವ ಸಂಪ್ರದಾಯ ಆರಂಭವಾಯಿತು ಎಂಬ ನಂಬಿಕೆ ಇದೆ.
ಈ ಸಂಪ್ರದಾಯವೇ ಕಡಲೆಕಾಯಿ ಪರಿಷೆಯಾಗಿ ಬೆಳೆದು, ಕಾರ್ತಿಕ ಮಾಸದ ಕೊನೆಯ ಸೋಮವಾರ (ಸಾಮಾನ್ಯವಾಗಿ ನವೆಂಬರ್) ನಡೆಯುತ್ತದೆ. ಪರಿಷೆಯು ದೇವಾಲಯದ ಸುತ್ತಲೂ ಆಯೋಜಿತವಾಗಿ, ರೈತರು ಗಾಡಿಗಳಲ್ಲಿ ಕಡಲೆಕಾಯಿ ತಂದು ಮಾರಾಟ ಮಾಡುತ್ತಾರೆ. 2025ರಲ್ಲಿ ಇದು ಮೊದಲ ಬಾರಿಗೆ 5 ದಿನಗಳಿಗೆ ವಿಸ್ತರಣೆಯಾಗಿ, ಪ್ಲಾಸ್ಟಿಕ್ ಮುಕ್ತವಾಗಿ ನಡೆಯುತ್ತಿದೆ.
ಈ ಬಾರಿಯ ವಿಶೇಷತೆಗಳು
- 5 ದಿನಗಳ ಮಹೋತ್ಸವ: ಕಳೆದ ವರ್ಷದ ಯಶಸ್ಸನ್ನು ಮುಂದುವರಿಸಿ ಮೊದಲ ಬಾರಿಗೆ 5 ದಿನಗಳಿಗೆ ವಿಸ್ತರಣೆ. ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮಗಳು ನೆರವೇರಲಿವೆ.
- ಪ್ಲಾಸ್ಟಿಕ್ ಮುಕ್ತ ಪರಿಷೆ: ಬಿಬಿಎಂಪಿ ಮತ್ತು ಮುಜರಾಯಿ ಇಲಾಖೆಯ ಸಹಕಾರದಿಂದ ಪೂರ್ಣ ಪ್ಲಾಸ್ಟಿಕ್ ನಿಷೇಧ. ಕಾಗದ ಮತ್ತು ಬಟ್ಟೆ ಚೀಲಗಳ ಬಳಕೆಗೆ ಆಧ್ಯತೆ.
- ರೈತರಿಗೆ ನೇರ ಮಾರಾಟ: ಕರ್ನಾಟಕ, ತಮಿಳುನಾಡು, ಆಂಧ್ರದ ರೈತರು ತಮ್ಮ ತಾಜಾ ಕಡಲೆಕಾಯಿ ತಂದು ಮಾರಾಟ ಮಾಡುತ್ತಾರೆ. ಬೆಲೆ ಕಡಿಮೆ, ಉತ್ತಮಗುಣಮಟ್ಟ!
- ಸಾಂಸ್ಕೃತಿಕ ಆಕರ್ಷಣೆ: ದೊಡ್ಡ ಗಣಪತಿ ದರ್ಶನ, ಬಸವಣ್ಣನಿಗೆ ಕಡಲೆಕಾಯಿ ಅಭಿಷೇಕ, ಆಟಿಕೆಗಳು, ಆಹಾರ ಮಳಿಗೆಗಳು, ಮಕ್ಕಳ ಆಟಿಕೆಗಳು.
- ಸುರಕ್ಷತೆ: ಸಿಸಿಟಿವಿ, ಪೊಲೀಸ್ ಬಂದೋಬಸ್ತ್, ತ್ಯಾಜ್ಯ ನಿರ್ವಹಣೆಗೆ ವಿಶೇಷ ವ್ಯವಸ್ಥೆ.
ಇದನ್ನೂ ಓದಿ | ನ.8ರಿಂದ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ
ಆಧುನಿಕ ಸವಾಲುಗಳು ಮತ್ತು ಸಂರಕ್ಷಣೆ
ನಗರೀಕರಣದಿಂದ ದೇವಾಲಯದ ಸುತ್ತಲೂ ಟ್ರಾಫಿಕ್, ಮಾಲಿನ್ಯ ಸಮಸ್ಯೆಗಳು. ಮುಜರಾಯಿ ಇಲಾಖೆಯು ಹಸಿರು ಉದ್ಯಾನ, ತ್ಯಾಜ್ಯ ನಿರ್ವಹಣೆ, ಡಿಜಿಟಲ್ ಪೂಜೆಗಳನ್ನು ಪರಿಚಯಿಸಿದೆ. 2025ರಲ್ಲಿ ಪರಿಷೆಯು ಪೂರ್ಣ ಪ್ಲಾಸ್ಟಿಕ್ ಮುಕ್ತವಾಗಿ ಪರಿಸರ ಸ್ನೇಹಿಯಾಗಿದೆ.







