ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದ ‘ವಂದೇ ಮಾತರಂ’ ಗೀತೆಗೆ 150 ವರ್ಷ ತುಂಬಿದ ಐತಿಹಾಸಿಕ ಸಂದರ್ಭದಲ್ಲಿ, ಸಂಸತ್ತಿನ ಲೋಕಸಭೆಯಲ್ಲಿ ಇಂದು (ಸೋಮವಾರ) ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಕೇವಲ ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕಾಗಿ ಮತ್ತು ಮುಸ್ಲಿಂ ಲೀಗ್‌ನ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಅಂದು ವಂದೇ ಮಾತರಂ ಹಾಡನ್ನು ಒಡೆದು ತುಂಡು ಮಾಡಿತ್ತು,” ಎಂದು ಆರೋಪ ಮಾಡಿದರು.
ಲೋಕಸಭೆಯಲ್ಲಿ ಇತಿಹಾಸದ ಪುಟಗಳನ್ನು ತೆರೆದಿಟ್ಟ ಪ್ರಧಾನಿ ಮೋದಿ, ಸ್ವಾತಂತ್ರ್ಯ ಪೂರ್ವದ ರಾಜಕೀಯ ಬೆಳವಣಿಗೆಗಳನ್ನು ಪ್ರಸ್ತಾಪಿಸಿದರು. “ಅಂದು ಮಹಮ್ಮದ್ ಅಲಿ ಜಿನ್ನಾ ಅವರು ವಂದೇ ಮಾತರಂ ಹಾಡಿನ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಹಾಡು ವಿಗ್ರಹ ಆರಾಧನೆಯನ್ನು ಉತ್ತೇಜಿಸುತ್ತದೆ ಎಂದು ಅವರು ತಕರಾರು ತೆಗೆದಿದ್ದರು. ದುರದೃಷ್ಟವಶಾತ್, ಅಂದಿನ ಕಾಂಗ್ರೆಸ್ ನಾಯಕತ್ವ, ವಿಶೇಷವಾಗಿ ಜವಾಹರಲಾಲ್ ನೆಹರು ಅವರು ರಾಷ್ಟ್ರಭಕ್ತಿಯ ಸಂಕೇತವಾಗಿದ್ದ ಈ ಹಾಡಿನ ಪರ ನಿಲ್ಲುವ ಬದಲು, ಜಿನ್ನಾ ಮತ್ತು ಮುಸ್ಲಿಂ ಲೀಗ್‌ಗೆ ತಲೆಬಾಗಿದರು,” ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದರು.
“ವಂದೇ ಮಾತರಂ ಕೇವಲ ಒಂದು ಹಾಡಾಗಿರಲಿಲ್ಲ, ಅದು ಬ್ರಿಟಿಷರ ವಿರುದ್ಧದ ಹೋರಾಟದ ಮಂತ್ರವಾಗಿತ್ತು. ಆದರೆ, ರಾಜಕೀಯ ಲಾಭಕ್ಕಾಗಿ ಮತ್ತು ಒಂದು ವರ್ಗವನ್ನು ಮೆಚ್ಚಿಸಲು ಕಾಂಗ್ರೆಸ್ ಈ ಹಾಡಿನ ಕೇವಲ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಸ್ವೀಕರಿಸಿ, ಉಳಿದ ಭಾಗವನ್ನು ಕೈಬಿಡುವ ಮೂಲಕ ‘ಹಾಡನ್ನು ತುಂಡರಿಸುವ’ ಮಹಾಪಾಪ ಮಾಡಿತು. ಹಾಡನ್ನು ಒಡೆಯುವ ಮನಸ್ಥಿತಿಯೇ ಮುಂದೆ ದೇಶವನ್ನು (ಭಾರತ-ಪಾಕಿಸ್ತಾನ) ಒಡೆಯುವಂತೆ ಮಾಡಿತು,” ಎಂದು ಪ್ರಧಾನಿ ತೀಕ್ಷ್ಣವಾಗಿ ನುಡಿದರು.
ತುಷ್ಟೀಕರಣದ ರಾಜಕಾರಣ:
“ಅಂದಿನಿಂದ ಇಂದಿನವರೆಗೂ ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣವನ್ನೇ ಮಾಡಿಕೊಂಡು ಬಂದಿದೆ. ಅಂದು ವಂದೇ ಮಾತರಂಗೆ ಅವಮಾನ ಮಾಡಿದರು, ಇಂದು ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇತಿಹಾಸ ಅವರನ್ನು ಕ್ಷಮಿಸುವುದಿಲ್ಲ,” ಎಂದು ಮೋದಿ ಹೇಳಿದರು. ವಂದೇ ಮಾತರಂ ಹಾಡಿನ ಸಂಪೂರ್ಣ ಆವೃತ್ತಿಯನ್ನು ಹಾಡುವುದಕ್ಕೆ ಅಂದಿನಿಂದಲೂ ವಿರೋಧ ವ್ಯಕ್ತವಾಗುತ್ತಲೇ ಇದೆ, ಇದಕ್ಕೆ ಕಾಂಗ್ರೆಸ್ ಹಾಕಿಕೊಟ್ಟ ತಪ್ಪು ಪರಂಪರೆಯೇ ಕಾರಣ ಎಂಬುದು ಮೋದಿ ಅವರ ವಾದವಾಗಿತ್ತು.
ಪ್ರಧಾನಿ ಮೋದಿ ಅವರ ಈ ಹೇಳಿಕೆಗೆ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತಿದ್ದ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದು ಇತಿಹಾಸವನ್ನು ತಿರುಚುವ ಪ್ರಯತ್ನ ಎಂದು ವಿಪಕ್ಷ ನಾಯಕರು ಘೋಷಣೆ ಕೂಗಿದರು. ಇದರಿಂದಾಗಿ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಆದರೆ, ಆಡಳಿತ ಪಕ್ಷದ ಸದಸ್ಯರು ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುವ ಮೂಲಕ ಪ್ರಧಾನಿ ಮಾತಿಗೆ ಬೆಂಬಲ ಸೂಚಿಸಿದರು.
ಇದನ್ನೂ ಓದಿ | “ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಪ್ಪಿಲ್ಲ”: ಯತೀಂದ್ರ
1875ರಲ್ಲಿ ಬಂಕಿಮ ಚಂದ್ರ ಚಟರ್ಜಿ ಅವರು ಬರೆದ ಈ ಹಾಡು, ನಂತರ ಅವರ ‘ಆನಂದಮಠ’ ಕಾದಂಬರಿಯಲ್ಲಿ ಪ್ರಕಟವಾಯಿತು. ಈ ಹಾಡು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿಗಳಲ್ಲಿ ಹೊಸ ಚೈತನ್ಯ ತುಂಬಿತ್ತು. ಇಂತಹ ಕ್ರಾಂತಿ ಗೀತೆಗೆ 150ನೇ ವರ್ಷಾಚರಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಹಳೆಯ ಗಾಯವನ್ನು ಕೆದಕಿರುವುದು ದೇಶಾದ್ಯಂತ ಹೊಸ ಚರ್ಚೆಗೆ ನಾಂದಿ ಹಾಡಿದೆ.







