ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ಸ್ಥಾಪಕ ನಾಯಕರಾದ ವಿ.ಎಸ್.ಅಚ್ಯುತಾನಂದನ್ ಅವರು ಸೋಮವಾರ (ಜುಲೈ 21, 2025) ತಿರುವನಂತಪುರಂನ ಎಸ್ಯುಟಿ ಆಸ್ಪತ್ರೆಯಲ್ಲಿ ನಿಧನರಾದರು. 101 ವರ್ಷದವರಾಗಿದ್ದ ಅವರು ಜೂನ್ 23, 2025ರಂದು ತೀವ್ರ ಹೃದಯಾಘಾತಕ್ಕೊಳಗಾಗಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಧ್ಯಾಹ್ನ 3:20ಕ್ಕೆ ಕೊನೆಯುಸಿರೆಳೆದರು ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ದೃಢಪಡಿಸಿದ್ದಾರೆ.
1923ರ ಅಕ್ಟೋಬರ್ 20ರಂದು ಆಲಪ್ಪುಳ ಜಿಲ್ಲೆಯ ಪುನ್ನಪ್ರದಲ್ಲಿ ಶಂಕರನ್ ಮತ್ತು ಅಕ್ಕಮ್ಮ ದಂಪತಿಗಳಿಗೆ ಜನಿಸಿದ ವಿ.ಎಸ್, ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡು ಕಷ್ಟದ ಜೀವನ ನಡೆಸಿದರು. ಕೇವಲ ಏಳನೇ ತರಗತಿಯವರೆಗೆ ಶಿಕ್ಷಣ ಪಡೆದ ಇವರು 1939ರಲ್ಲಿ ರಾಜಕೀಯ ಚಳವಳಿಗೆ ಕಾಲಿಟ್ಟರು. 1940ರಲ್ಲಿ ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದರು. 1946ರ ಪುನ್ನಪ್ರ-ವಯಲಾರ್ ದಂಗೆಯಲ್ಲಿ ಪಾಲ್ಗೊಂಡ ಅವರು, 1964ರಲ್ಲಿ ಸಿಪಿಐನಿಂದ ಒಡಕುಗೊಂಡು ಸಿಪಿಐ(ಎಂ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ 32 ನಾಯಕರಲ್ಲಿ ಒಬ್ಬರಾಗಿದ್ದರು.
ಕೇರಳದ ರಾಜಕಾರಣದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಪ್ರಾಬಲ್ಯ ಹೊಂದಿದ್ದ ವಿ.ಎಸ್., 1967, 1970, 1991, 2001, 2006, 2011 ಮತ್ತು 2016ರಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾದರು. 2006ರಿಂದ 2011ರವರೆಗೆ ಕೇರಳದ 20ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು, 1991-1996, 2001-2006 ಮತ್ತು 2011-2016ರಲ್ಲಿ ಮೂರು ಬಾರಿ ವಿಪಕ್ಷ ನಾಯಕರಾಗಿದ್ದರು.
ಇದನ್ನೂ ಓದಿ | ಕನ್ನಡ ಚಿತ್ರರಂಗದ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ವಿಧಿವಶ
ಸಿಪಿಐ(ಎಂ)ನಲ್ಲಿ ತಮ್ಮ ದೃಢನಿಲುವಿನಿಂದಾಗಿ ವಿವಾದಗಳಿಗೆ ಒಳಗಾದರೂ, ಅವರ ಸರಳತೆ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟವು ಜನರ ಮನಗೆದ್ದಿತು. ಕೇರಳದ ಪ್ರಸ್ತುತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕೇರಳದ ರಾಜಕೀಯದಲ್ಲಿ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಅವರ ನಿಧನದಿಂದ ಕೇರಳ ಕಮ್ಯುನಿಸ್ಟ್ ಚಳವಳಿಯ ಒಂದು ಯುಗ ಕೊನೆಗೊಂಡಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.







