ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸ್ ತಂಡ ದಾಳಿ ನಡೆಸಿದೆ. ಹಾಸನ ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರ ನೇತೃತ್ವದಲ್ಲಿ ನಡೆದ ಈ ದಾಳಿಯು ಬೆಂಗಳೂರಿನ ಹೊಸಮನೆ, ಚಿಕ್ಕಮಗಳೂರಿನ ಬಸಾಪುರ ಗ್ರಾಮದ ನಿವಾಸ ಮತ್ತು ಬಾಳೆಹೊನ್ನೂರು ಸಮೀಪದ ಹಲಸೂರು ತೋಟ ಸೇರಿದಂತೆ ನಾಲ್ಕು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಯಿತು. ನಾಲ್ಕು ವಾಹನಗಳಲ್ಲಿ ಬಂದ ಅಧಿಕಾರಿಗಳು ಮನೆ, ಕಚೇರಿ ಮತ್ತು ತೋಟಗಳಲ್ಲಿ ನಿಖರ ಶೋಧ ನಡೆಸಿ, ದಾಖಲೆಗಳು, ಆರ್ಥಿಕ ವಹಿವಾಟು ಸಂಬಂಧಿತ ಕಾಗದಪತ್ರಗಳು ಮತ್ತು ಇತರ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಯು ಮುಂದುವರೆದಿದ್ದು, ಪ್ರಕರಣದ ಹೆಚ್ಚಿನ ವಿವರಗಳು ಶೀಘ್ರ ಬಹಿರಂಗವಾಗುವ ಸಾಧ್ಯತೆಯಿದೆ.
ಪ್ರಕರಣದ ಹಿನ್ನೆಲೆ:
ಶಾಸಕ ರಾಜೇಗೌಡ ಅವರು, ಪತ್ನಿ ಡಿ.ಕೆ. ಪುಷ್ಪಾ ಮತ್ತು ವಿದೇಶದಲ್ಲಿರುವ ಪುತ್ರ ರಾಜ್‌ದೇವ್ ಟಿ.ಆರ್. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಪ್ರಕರಣವಿದೆ. ಕೊಪ್ಪ ತಾಲೂಕಿನ ನಿವಾಸಿ ದಿನೇಶ್ ಎಚ್.ಕೆ. (ಸ್ಥಳೀಯ ಬಿಜೆಪಿ ಮುಖಂಡ) ಅವರು ಸೆಪ್ಟೆಂಬರ್ 23ರಂದು ಲೋಕಾಯುಕ್ತ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಲೋಕಾಯುಕ್ತ ವಿಶೇಷ ನ್ಯಾಯಾಲಯವು FIR ದಾಖಲಿಸಿ, ತನಿಖೆಗೆ ಆದೇಶ ನೀಡಿತು. ದೂರಿನಲ್ಲಿ ಶಾಸಕರ ಕುಟುಂಬವು ಅವರ ಸ್ಥಾನ-ಮಾನದ ಅನುಚಿತವಾಗಿ ಸಂಪತ್ತು ಸಂಗ್ರಹಿಸಿದ್ದಾರೆ, ಸರ್ಕಾರಿ ಇಲಾಖೆಗಳು ಮತ್ತು ಆದಾಯ ತೆರಿಗೆ ವಿಭಾಗವನ್ನು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಮುಖ ಆರೋಪವೆಂದರೆ, ಬಾಳೆಹೊನ್ನೂರು ಸಮೀಪದ ಹಲಸೂರಿನಲ್ಲಿ ಶಾಸಕ ರಾಜೇಗೌಡ ಅವರು 266 ಎಕರೆ ತೋಟವನ್ನು ಖರೀದಿಸಿದ್ದಾರೆ. ಈ ತೋಟವು ಉದ್ಯಮಿ ದಿವಂಗತ ಸಿದ್ಧಾರ್ಥ್ ಅವರಿಗೆ ಸೇರಿದ್ದು, ನೂರಾರು ಕೋಟಿ ರೂಪಾಯಿಗಳ ಬೆಲೆಯಿರುವ ಈ ಭೂಮಿಯ ವಹಿವಾಟು ಅಕ್ರಮವಾಗಿದೆ ಎಂದು ದೂರುದಾರರು ಹೇಳಿದ್ದಾರೆ.
ಚುನಾವಣೆಯ ಸಂದರ್ಭದಲ್ಲಿ ಶಾಸಕರು ಸಲ್ಲಿಸಿದ ಅಫಿಡವಿಟ್‌ನಲ್ಲಿ ವಾರ್ಷಿಕ ಆದಾಯವು ಕೇವಲ 38 ಲಕ್ಷ ರೂಪಾಯಿಗಳಷ್ಟು ಎಂದು ತಿಳಿಸಿದ್ದಾರೆ. ಆದರೆ, ಇಂತಹ ಕಡಿಮೆ ಆದಾಯದೊಂದಿಗೆ ಹೀಗಿರುವಂತಹ ವ್ಯಾಪಕ ಭೂಮಿ ಖರೀದಿ ಹೇಗೆ ಸಾಧ್ಯ? ಎಂದು ದಿನೇಶ್ ಪ್ರಶ್ನಿಸಿದ್ದಾರೆ. ಹೆಚ್ಚುವರಿಯಾಗಿ, ಶಾಸಕರ ಕುಟುಂಬವು ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ಗೆ 55.75 ಕೋಟಿ, ಬ್ಯಾಂಕ್ ಆಫ್ ಬರೋಡಕ್ಕೆ 66 ಕೋಟಿ ಮತ್ತು ಕರ್ನಾಟಕ ಬ್ಯಾಂಕ್‌ಗೆ 81.95 ಲಕ್ಷ ರೂಪಾಯಿಗಳ ಸಾಲಗಳನ್ನು ಅಗತ್ಯವಾಗಿ ಮರುಪಾವತಿ ಮಾಡಿದ್ದಾರೆ. ಈ ವಹಿವಾಟುಗಳು ಆದಾಯ ಮೂಲಗಳೊಂದಿಗೆ ಹೊಂದಿಕೊಳ್ಳುತ್ತಿಲ್ಲ ಎಂದು ತನಿಖೆಯಲ್ಲಿ ಕಂಡುಬಂದಿದೆ.
ಇದನ್ನೂ ಓದಿ | ಬೈರತಿ ಸುರೇಶ್ ಪಿಎ ಮನೆಯ ಮೇಲೆ `ಲೋಕಾ’ ದಾಳಿ
ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಎಸ್‌ಪಿ ಸ್ನೇಹಾ ಅವರು , ‘ರಾಜೇಗೌಡರ ಕುಟುಂಬದ ವಿರುದ್ಧ ದಾಖಲಾದ ಪ್ರಕರಣ ಸಂಬಂಧ ಈ ಶೋಧ ನಡೆದಿದೆ’ ಎಂದು ತಿಳಿಸಿದ್ದಾರೆ. ದಾಳಿಯಲ್ಲಿ ದಾಖಲೆಗಳ ವಶಪಡಿಸಿಕೊಂಡಿದ್ದು ಆರ್ಥಿಕ ವಹಿವಾಟುಗಳ ಪರಿಶೀಲನೆ ಮುಂದುವರೆದಿದೆ. ಶಾಸಕರ ಪಾಲುದಾರಿಕೆ ಸಹ ವ್ಯವಹಾರದ ರಿಜಿಸ್ಟರ್‌ಗಳು ಸಹ ತಪಾಸಣೆಯಲ್ಲಿವೆ. ಬಿಜೆಪಿ ಪಕ್ಷವು ಈ ದಾಳಿಯನ್ನು ಸ್ವಾಗತಿಸಿ, ಹೆಚ್ಚಿನ ತನಿಖೆಗೆ ಒತ್ತಾಯಿಸಿದೆ. ಇದರಿಂದ ಕಾಂಗ್ರೆಸ್ ಸರ್ಕಾರದೊಳಗೆ ಆಂತರಿಕ ಚರ್ಚೆಗಳು ಉಂಟಾಗಿವೆ.







