ರಾಜ್ಯ ರಾಜಕೀಯದಲ್ಲಿ ʼನವೆಂಬರ್ ಕ್ರಾಂತಿʼ ನಡೆಯುತ್ತದೆ, ಎಂಬ ಉಹಾಪೋಹವು ಈಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನವೆಂಬರ್ 19ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎನ್ನುವ ಸುದ್ದಿಯಿಂದ ಇನ್ನು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.
ಕರ್ನಾಟಕದ ರಾಜಕೀಯ ವೇದಿಕೆಯಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿನ ಆಂತರಿಕ ಕಲಹಗಳು ತುಂಬಾ ಜೋರಾಗಿವೆ. 2023ರಲ್ಲಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್, ಇಂದು ನಾಯಕತ್ವ ಬದಲಾವಣೆಯ ಗಾಳಿ ಬೀಸುತ್ತಾಯಿದೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಒಂದು ಹೇಳಿಕೆಯಿಂದ ರಾಜಕೀಯ ಚರ್ಚೆಗೆ ಮತ್ತಷ್ಟು ಪುಷ್ಟಿ ಕೊಟ್ಟಿದ್ದು, ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಮೇಲೆ ಪ್ರಶ್ನೆ ಹುಟ್ಟುಹಾಕುವಂತಾಗಿದೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ಈ ಎಲ್ಲ ರಾಜಕೀಯ ಗೊಂದಲಗಳ ನಡುವೆ, ನವೆಂಬರ್ 19ರಂದು ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಬೆಂಗಳೂರಿಗೆ ಆಗಮಿಸುತ್ತಿರುವುದರಿಂದ. ಇದು ಮುಖ್ಯಮಂತ್ರಿ ಬದಲಾವಣೆಯ ತಯಾರಿಯೇ? ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.
2.5 ವರ್ಷ ಅಧಿಕಾರ ಹಂಚಿಕೆಯ ಒಪ್ಪಂದದ ಬಗ್ಗೆ ಊಹಾಪೋಹ
2023ರ ಮೇ ತಿಂಗಳಲ್ಲಿ ಕಾಂಗ್ರೆಸ್, ಬಿಜೆಪಿಯನ್ನು ಸೋಲಿಸಿ ಕರ್ನಾಟಕದಲ್ಲಿ 135 ಸೀಟುಗಳೊಂದಿಗೆ ಭರ್ಜರಿ ಗೆಲುವು ಸಾಧಿಸಿದ ನಂತರ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಈ ಆಯ್ಕೆಯ ಹಿಂದೆ ಒಂದು ‘ಗುಪ್ತ ಒಪ್ಪಂದ’ ಇದೆ ಎಂಬ ಗಾಳಿ ಸುದ್ದಿಯು ರಾಜ್ಯಾದ್ಯಂತ ಹರಡಿತು. ಈ ಒಪ್ಪಂದದಂತೆ, ಸಿದ್ದರಾಮಯ್ಯ ಅವರು ಮೊದಲ 2.5 ವರ್ಷ (2023 ಮೇ – 2025 ನವೆಂಬರ್) ಮುಖ್ಯಮಂತ್ರಿಯಾಗಿದ್ದು, ಉಳಿದ 2.5 ವರ್ಷ (2025 ನವೆಂಬರ್ – 2028) ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿಯೊಂದು ಹರಡಿತ್ತು.
ಈ ಒಪ್ಪಂದಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲದಿದ್ದರೂ, ಈ ಊಹಾಪೋಹ ರಾಜ್ಯದ ರಾಜಕೀಯ ವಲಯದಲ್ಲಿ ಆಗಾಗ ಸುದ್ದಿ ಮಾಡುತ್ತಲೇ ಇರುತ್ತದೆ. ಸಿದ್ದರಾಮಯ್ಯ ಅವರು ಇತ್ತೀಚೆಗೆ, “ನಾನು 5 ವರ್ಷ ಪೂರ್ಣ ಕಾಲ ಮುಖ್ಯಮಂತ್ರಿಯಾಗಿರುತ್ತೇನೆ, ಯಾವುದೇ 50-50 ಒಪ್ಪಂದ ಇಲ್ಲ” ಎಂದು ಗಟ್ಟಿಯಾಗಿ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡ, “ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿರುವೆ” ಎಂದು ಸಮಾಧಾನದಿಂದಲೇ ಮಾತನಾಡಿ ಎಲ್ಲವನ್ನು ಹೈಕಮಾಂಡ್ ಮೇಲೆ ಭಾರ ಹಾಕಿ ತಾನು ಸುಮ್ಮನಿರುವುದು ಡಿಕೆಶಿಯವರ ತಂತ್ರಗಾರಿಕೆಯಾಗಿದೆ. ಇದರಿಂದ ಕಾಂಗ್ರೆಸ್ ಹೈಕಮಾಂಡ್‌ನ ಭರವಸೆಯನ್ನು ಗಳಿಸಿಕೊಂಡು ತಾನು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.
ಯತೀಂದ್ರ ಹೇಳಿಕೆಯಿಂದ ರಾಜಕೀಯದಲ್ಲಿ ಗೊಂದಲ
ಆದರೆ, ಇತ್ತೀಚೆಗೆ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ ಒಂದು ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಯತೀಂದ್ರ ಹೇಳಿದ್ದು: “ನನ್ನ ತಂದೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನ ಕೊನೆಯ ಹಂತಕ್ಕೆ ಬಂದಿದೆ. ಅವರ ಸೈದ್ಧಾಂತಿಕ (ಐಡಿಯಾಲಜಿಕಲ್) ಉತ್ತರಾಧಿಕಾರಿಯಾಗಿ ಸತೀಶ್ ಜಾರಕಿಹೊಳಿ ಸೂಕ್ತರು” ಎಂದು ಹೇಳಿದ್ದರು. ಈ ಮಾತು ಕಾಂಗ್ರೆಸ್‌ನ ಆಂತರಿಕ ರಾಜಕೀಯದಲ್ಲಿ ಕಿಡಿಯನ್ನು ಹೊತ್ತಿಸಿದೆ.
ಸಿದ್ದರಾಮಯ್ಯ ಅವರು ಯತೀಂದ್ರರ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ: “ಯತೀಂದ್ರ ಸೈದ್ಧಾಂತಿಕ ಉತ್ತರಾಧಿಕಾರಿಯ ಬಗ್ಗೆ ಮಾತನಾಡಿದ್ದಾರೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅಲ್ಲ. ಈ ಹೇಳಿಕೆಯನ್ನು ತಿರುಚಲಾಗಿದೆ.” ಸತೀಶ್ ಜಾರಕಿಹೊಳಿಯೂ, “ಇದು ಐಡಿಯಾಲಜಿಯ ಬಗ್ಗೆ, ಅಧಿಕಾರದ ಚರ್ಚೆಯಲ್ಲ” ಎಂದು ಸಮಜಾಯಿಷಿ ಕೊಟ್ಟಿದ್ದಾರೆ..
ಯತೀಂದ್ರ ಅವರ ಹೇಳಿಕೆಯು ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯವನ್ನೇ ಪ್ರಶ್ನಿಸಿದೆ. 2.5 ವರ್ಷದ ಒಪ್ಪಂದದ ಪ್ರಕಾರ, ನವೆಂಬರ್ 2025ರಲ್ಲಿ ಸಿದ್ದರಾಮಯ್ಯ ಅವರ ಕಾಲಾವಧಿ ಮುಗಿಯಬೇಕಿತ್ತು, ಮತ್ತು ಶಿವಕುಮಾರ್ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ, ಯತೀಂದ್ರ ಅವರ ‘ಸತೀಶ್ ಜಾರಕಿಹೊಳಿ ಉತ್ತರಾಧಿಕಾರಿ’ ಎಂಬ ಮಾತು, ಸಿದ್ದರಾಮಯ್ಯ ಬಣದಿಂದ ಶಿವಕುಮಾರ್ ಅವರ ಹಕ್ಕನ್ನು ಕಿತ್ತುಕೊಂಡು, ತಮ್ಮ ಬಣದವರಿಗೆ (ಜಾರಕಿಹೊಳಿಗೆ) ಅಧಿಕಾರ ಹಸ್ತಾಂತರಿಸುವ ಯೋಜನೆ ಇದೆ ಎಂದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಇದಕ್ಕೆ, ಡಿಕೆ.ಶಿವಕುಮಾರ್ ಅವರು, “ಸೂಕ್ತ ಸಮಯದಲ್ಲಿ ಉತ್ತರಿಸುತ್ತೇನೆ” ಎಂದು ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಹುಲ್ ಗಾಂಧಿಯವರ ಬೆಂಗಳೂರು ಭೇಟಿ: ಗುರಿ ಏನು?
ರಾಹುಲ್ ಗಾಂಧಿಯವರ ಬೆಂಗಳೂರು ಭೇಟಿಯು ಕಾಂಗ್ರೆಸ್‌ನ ಆಂತರಿಕ ಕಲಹವನ್ನು ಸರಿಪಡಿಸಲು ಮತ್ತು ನಾಯಕತ್ವ ಬದಲಾವಣೆಯ ಚರ್ಚೆಗೆ ತೆರೆ ಎಳೆಯಲು ಇರಬಹುದು ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ | ‘ಯತೀಂದ್ರ ವಿವಾದಕ್ಕೆ ಸರಿಯಾದ ಸ್ಥಳದಲ್ಲಿ ಮಾತನಾಡುತ್ತೇನೆ’: ಡಿಕೆಶಿ
ಮುಖ್ಯಮಂತ್ರಿ ಬದಲಾವಣೆ, ಕೆಲವರು ಈ ಭೇಟಿಯು ಸಿದ್ದರಾಮಯ್ಯ ಅವರಿಂದ ಶಿವಕುಮಾರ್‌ಗೆ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದೆ ಎಂದು ಊಹಿಸುತ್ತಿದ್ದಾರೆ. ಸಿಎಂ ಬದಲಾಗದಿದ್ದರೂ ಸಂಪುಟ ಪುನರ್ರಚನೆಯಾದರು ನಡೆಯುತ್ತದೆ. ನವೆಂಬರ್‌ನಲ್ಲಿ ಸಂಪುಟದಲ್ಲಿನ 50% ಸಚಿವರನ್ನು ಬದಲಾಯಿಸುವ ಯೋಜನೆ ಇದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ನಾಯಕತ್ವ ಬದಲಾವಣೆಯ ಘೋಷಣೆಯೂ ಆಗಬಹುದು. ರಾಹುಲ್ ಗಾಂಧಿಯವರ ಭೇಟಿಯು ಬಣಗಳ ಜಗಳವನ್ನು ಶಮನಗೊಳಿಸಿ, ಪಕ್ಷವನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.







