ಕರ್ನಾಟಕ ಜೀವನದಿಗಳ ದುರಂತಕ್ಕೆ ಯಾರು ಹೊಣೆ? 

2025ರ ಸೆಪ್ಟೆಂಬರ್‌ನ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯ ಪ್ರಕಾರ, ರಾಜ್ಯದ 12 ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಿಲ್ಲ ಎನ್ನುವ ಅಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ.
Karnataka River Pollution
ಚಿತ್ರ ಕೃಪೆ : LinkedIn & Hindustan

ಉತ್ತರಕ್ಕೆ ಕಾವೇರಿ, ದಕ್ಷಿಣಕ್ಕೆ ಕೃಷ್ಣೆ. ಈ ನದಿಗಳು ಕರ್ನಾಟಕದ ಜೀವನಾಡಿಗಳು, ನಮ್ಮ ಸಂಸ್ಕೃತಿ ಮತ್ತು ಕೃಷಿಯ ಆಧಾರಸ್ತಂಭಗಳು. ಆದರೆ 2025ರ ಸೆಪ್ಟೆಂಬರ್‌ನ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ವರದಿಯ ಪ್ರಕಾರ, ಈ 12 ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಿಲ್ಲ ಎನ್ನುವ ಅಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ರೀತಿಯ ವರದಿ ಬಂದಿರುವುದು ಇದೇ  ಮೊದಲ ಬಾರಿಯೇನಲ್ಲ.  2019ರಲ್ಲೂ ಇದೇ ರೀತಿಯ ಆಘಾತಕಾರಿ ವರದಿಯು ಬಂದಿತ್ತು, ಆದರೆ ಆಗಿನಿಂದ ಇಂದಿನವರೆಗೆ ಯಾವ ಸರ್ಕಾರವೂ ಈ ಸಮಸ್ಯೆಯನ್ನು ಸರಿಪಡಿಸಲು ಗಂಭೀರ ಕ್ರಮವನ್ನೂ ತೆಗೆದುಕೊಂಡಿಲ್ಲ ಎಂಬ ಆರೋಪ ಜನರಿಂದ ಕೇಳಿಬರುತ್ತಿದೆ.  

KSPCB ವರದಿಯಲ್ಲಿ ಎನಿದೆ?

KSPCBಯ 2025ರ ವರದಿಯ ಪ್ರಕಾರ, ಕಾವೇರಿ, ಕೃಷ್ಣಾ, ತುಂಗಭದ್ರಾ, ಭದ್ರಾ, ಶಿಂಷಾ, ಕಬಿನಿ, ಭೀಮಾ, ಅರ್ಕಾವತಿ, ಲಕ್ಷ್ಮಣತೀರ್ಥ, ಕಾಗಿನಿ, ನೇತ್ರಾವತಿ ಮುಂತಾದ 12 ನದಿಗಳ ನೀರಿನ ಗುಣಮಟ್ಟವನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಮಾನದಂಡಗಳ ಆಧಾರದಲ್ಲಿ ವಿಂಗಡಿಸಲಾಗಿದೆ:

  • ಎ ದರ್ಜೆ: ನೇರ ಕುಡಿಯುವಿಕೆಗೆ ಯಾವ ನದಿಯೂ ಇಲ್ಲ ಯೋಗ್ಯ.
  • ಬಿ ದರ್ಜೆ: ಶುದ್ಧೀಕರಣದ ನಂತರ ಕುಡಿಯಲು ಕೇವಲ ನೇತ್ರಾವತಿ ನದಿಯೊಂದು ಯೋಗ್ಯವಾಗಿದೆ
  • ಸಿ ದರ್ಜೆ: ಕಾವೇರಿ, ಕೃಷ್ಣಾ, ತುಂಗಭದ್ರಾ, ಶಿಂಷಾ, ಕಬಿನಿ, ಲಕ್ಷ್ಮಣತೀರ್ಥ ನದಿಗಳು ಕೃಷಿ ನೀರಾವರಿಗೆ ಮಾತ್ರ ಯೋಗ್ಯವಾಗಿದೆ.
  • ಡಿ ದರ್ಜೆ: ಭೀಮಾ, ಕಾಗಿನಿ, ಅರ್ಕಾವತಿ ನದಿಗಳು ಕೇವಲ ಜಲಚರ ಜೀವಿಗಳು ಬದುಕಲು ಮಾತ್ರ ಯೋಗ್ಯವಾಗಿದೆ. 
  • ಇ ದರ್ಜೆ: ವೃಷಭಾವತಿ ನದಿಯುಂತಹ ಕೆಲವು ನದಿಗಳು ಯಾವ ಬಳಕೆಗೂ ಯೋಗ್ಯವಿಲ್ಲ 

ಕೃಷ್ಣಾ ನದಿಯ ‘ಸಿ’ ದರ್ಜೆಯ ಸ್ಥಿತಿಯು ಬಾಗಲಕೋಟೆ, ರಾಯಚೂರು, ಕಲಬುರಗಿಯ ಜನರಿಗೆ ಆತಂಕವನ್ನುಂಟು ಮಾಡಿದೆ. ಕಾವೇರಿಯ ಮಾಲಿನ್ಯವು ಮಂಡ್ಯ, ಮೈಸೂರು, ಚಾಮರಾಜನಗರದ ಜನರಿಗೆ ತೊಂದರೆಯಾಗಿದೆ. ಆದರೆ 2019ರಿಂದ ಈ ಸಮಸ್ಯೆ ಗೊತ್ತಿದ್ದರೂ ಸರ್ಕಾರ ಏಕೆ ಮೌನವಾಗಿದೆ?

ಸರ್ಕಾರದ ವೈಫಲ್ಯಗಳು

  1. 2019ರಿಂದ ನಿರ್ಲಕ್ಷ್ಯ: 2019ರ KSPCB ವರದಿಯು ಈ ನದಿಗಳ ಮಾಲಿನ್ಯದ ಬಗ್ಗೆ ಎಚ್ಚರಿಕೆ ನೀಡಿತ್ತು. ಆದರೆ ಆರು ವರ್ಷಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರವಾಗಲಿ ಇಂದಿನ ಕಾಂಗ್ರೆಸ್‌ ಸರ್ಕಾರ ಆಗಲಿ, ಯಾವುದೇ ಗಂಭೀರ ಕ್ರಮವನ್ನೂ ತೆಗೆದುಕೊಂಡಿಲ್ಲ. ಕೈಗಾರಿಕಾ ತ್ಯಾಜ್ಯ ಶುದ್ಧೀಕರಣ ಘಟಕಗಳ (ETP) ಮತ್ತು ಒಳಚರಂಡಿ ಶುದ್ಧೀಕರಣ ಘಟಕಗಳ (STP) ಸ್ಥಾಪನೆ ಕೇವಲ ಘೋಷಣೆಗೆ ಸೀಮಿತವಾಗಿದಂತಾಗಿದೆ.
  2. ಕಾನೂನು ಜಾರಿಯ ಕೊರತೆ: ಕೈಗಾರಿಕೆಗಳು ಮತ್ತು ಸ್ಥಳೀಯಾಡಳಿತಗಳು ನದಿಗಳಿಗೆ ತ್ಯಾಜ್ಯ ಬಿಡುಗಡೆ ಮಾಡುವುದನ್ನು ತಡೆಯಲು ಹಲವು ಕಾನೂನು ಕ್ರಮಗಳಿವೆ, ಆದರೆ ಜಾರಿಯಲ್ಲಿ ಸರ್ಕಾರದ ದೊಡ್ಡ ವಿಫಲತೆ ಕಾಣುತ್ತಿದೆ. ಬೆಂಗಳೂರಿನ ದಕ್ಷಿಣ ವಲಯದಲ್ಲಿ ಹರಿಯುವ ವೃಷಭಾವತಿ ನದಿಯ ಸ್ಥಿತಿಯೇ ಇದಕ್ಕೆ ಉದಾಹರಣೆಯಾಗಿದೆ. ಈ ನದಿಯು ತೀವ್ರ ಮಾಲಿನ್ಯಕ್ಕೊಳಗಾಗಿದ್ದು ಕೊಳಚೆಯ ಒಳಚರಂಡಿಯಂತೆ ಕಾಣುತ್ತಿದೆ ಮತ್ತು ಯಾವ ಉಪಯೋಗಕ್ಕೂ ಯೋಗ್ಯವಿಲ್ಲ.
  3. ಅನುದಾನದ ದುರುಪಯೋಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನದಿಗಳ ಶುದ್ಧೀಕರಣಕ್ಕೆ ಕೋಟಿಗಟ್ಟಲೆ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಈ ಹಣ ಸಮರ್ಪಕವಾಗಿ ಬಳಕೆಯಾಗಿದೆಯೇ?  ಎನ್ನುವುದೇ ಈಗ ಪ್ರಶ್ನೆಯಾಗಿ ಕಾಡುತ್ತಿದೆ.
  4. ರಾಜಕೀಯ ಇಚ್ಛಾಶಕ್ತಿಯ ಕೊರತೆ: ನದಿಗಳ ಸಂರಕ್ಷಣೆಗೆ ದೀರ್ಘಕಾಲೀನ ಯೋಜನೆ ಅಗತ್ಯವಿದೆ. ಆದರೆ ಸರ್ಕಾರದ ಆದ್ಯತೆಗಳು ತಾತ್ಕಾಲಿಕ ಯೋಜನೆಗಳಿಗೆ ಸೀಮಿತವಾಗಿವೆ.
  5. ಜನಜಾಗೃತಿಯ ಕೊರತೆ: ಸರ್ಕಾರ ಗ್ರಾಮೀಣ ಮತ್ತು ನಗರ ಜನರಿಗೆ ನದಿಗಳ ಮಾಲಿನ್ಯದ ಪರಿಣಾಮಗಳ ಬಗ್ಗೆ ಶಿಕ್ಷಣ ನೀಡುವಲ್ಲಿ ವಿಫಲವಾಗಿದೆ. ‘ನಮ್ಮ ನದಿ, ನಮ್ಮ ಜವಾಬ್ದಾರಿ’ ಎಂಬಂತಹ ಅಭಿಯಾನಗಳು ಕೇವಲ ಕಾಗದದ ಮೇಲೆ ಉಳಿದಿವೆ. 

ಇದನ್ನೂ ಓದಿ | ರಾಜಕೀಯ ಕೆಸರಿನಾಟದಲ್ಲಿ ಸಿಲುಕಿ ಕೊಳೆತು ನಾರುತ್ತಿರುವ ಯಮುನೆ!

2019ರಿಂದ ಗೊತ್ತಿರುವ ಈ ಸಮಸ್ಯೆಗೆ ಆರು ವರ್ಷಗಳಾದರೂ ಸರ್ಕಾರದಿಂದ ಯಾವುದೇ ಗಂಭೀರ ಕ್ರಮ ಕಂಡುಬಂದಿಲ್ಲ. ಕಾವೇರಿಯ ಶುದ್ಧತೆಯನ್ನು, ಕೃಷ್ಣೆಯ ಜೀವಂತಿಕೆಯನ್ನು ಕಾಪಾಡಲು ಸರ್ಕಾರ ವಿಫಲವಾಗಿದೆ ಎನ್ನುವ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

Share:

ಮತ್ತಷ್ಟು ಸುದ್ದಿ

ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮ

ಅಲೆದಾಟ ಮುಕ್ತ ಆಡಳಿತದತ್ತ ಮೇಲುಕೋಟೆ ಮನೆ ಬಾಗಿಲಿಗೇ ಬಂದ ‘ಸರ್ಕಾರಿ ಸೇವೆ’ ಕಾರ್ಯಕ್ರಮ  ತಂತ್ರಜ್ಞಾನದ ಅರಿವನ್ನು ಆಡಳಿತ ಯಂತ್ರಕ್ಕೆ ವರ್ಗಾಯಿಸಿದ

ಬೆಂಗಳೂರಿನಲ್ಲಿ ಮೇ 25 ರಂದು 3ನೇ ಕರ್ನಾಟಕ ಸಂಘಟಕರ ಸಮಾವೇಶ

ಸಾಂಸ್ಕೃತಿಕ ನೀತಿ ಜಾರಿ ಮತ್ತು ಅಕಾಡೆಮಿಗಳ ಬಲವರ್ಧನೆಗೆ ಆಗ್ರಹಿಸಿ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ಸಂಘಟಕರ ಬೃಹತ್‌ ಸಮಾಲೋಚನೆ ಬೆಂಗಳೂರು: ಕರ್ನಾಟಕ

ಮುಂದೆ ಓದಿ »

ಪಾಂಡವಪುರದಲ್ಲಿ ಜೂನ್ 1 ರಿಂದ ‘ಸಾವಯವ ರೈತರ ಸಂತೆ’ ಆರಂಭ

ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜೈವಿಕ ಕ್ರಾಂತಿಯ ಮುನ್ನುಡಿ! ಮಂಡ್ಯ: ಹೈನುಗಾರಿಕೆ ಮತ್ತು ಕಬ್ಬಿನ ಬೆಳೆಯ ಮೂಲಕ ರಾಜ್ಯದ

ಮುಂದೆ ಓದಿ »