ಇಂದು ನವೆಂಬರ್ 26, ಸಂವಿಧಾನ ದಿನ. ಭಾರತದ ಸಂವಿಧಾನಕ್ಕೆ 75 ವರ್ಷ ತುಂಬಿದೆ. ಆದರೆ ಈ 75 ವರ್ಷಗಳಲ್ಲಿ ಸಂವಿಧಾನ ಎಷ್ಟು ಜನರ ಮನೆಯಲ್ಲಿ, ಮನಸ್ಸಿನಲ್ಲಿ, ದೈನಂದಿನ ಜೀವನದಲ್ಲಿ ಇದೆ? ಈ ಪ್ರಶ್ನೆಗೆ ಉತ್ತರ ಹುಡುಕುತ್ತಾ ಸಾಗುತ್ತಿರುವ ಒಂದು ಸಣ್ಣ ಆದರೆ ದೊಡ್ಡ ಕನಸುಳ್ಳ ತಂಡವೇ ‘ರಿಕ್ಲೇಮ್ ಕಾನ್ಸ್ಟಿಟ್ಯೂಷನ್’. ಈ ತಂಡದ ಸಂಸ್ಥಾಪಕರಾದ ವಿನಯ್ ಕುಮಾರ್ ಅವರೊಂದಿಗೆ ಸಂವಿಧಾನ ದಿನದ ಪ್ರಯುಕ್ತ ಸಮಾಚಾರ.ಕಾಮ್ ಮಾಡಿದ ವಿಶೇಷ ಸಂದರ್ಶನದ ಸಂಪೂರ್ಣ ಅಂಶಗಳು ಇಲ್ಲಿವೆ.
‘ರಿಕ್ಲೇಮ್ ಕಾನ್ಸ್ಟಿಟ್ಯೂಷನ್ʼ ಪಯಣ
2019ರ ಸುಮಾರಿಗೆ ದೇಶದಾದ್ಯಂತ ಸಂವಿಧಾನದ ಬಗ್ಗೆ ಏಕಾಏಕಿ ಭಾರೀ ಚರ್ಚೆ ಶುರುವಾಯಿತು. ಪತ್ರಿಕೆಗಳು, ಮ್ಯಾಗಜೀನ್‌ಗಳು, ಟೆಲಿವಿಷನ್ ಚಾನೆಲ್‌ಗಳು, ಸೋಷಿಯಲ್ ಮೀಡಿಯಾ, ಎಲ್ಲೆಡೆ ಸಂವಿಧಾನವೇ ಕಾಣುತ್ತಿತ್ತು. ಆಗ ವಿನಯ್ ಕುಮಾರ್ ಅವರ ಮನದಲ್ಲಿ ಒಂದು ಕುತೂಹಲ ಮೂಡಿತು: “ಇಷ್ಟೊಂದು ಆಸಕ್ತಿ ಯಾಕೆ? ಈ ಸಂವಿಧಾನದಲ್ಲಿ ಏನಿದೆ?” ಆ ಪ್ರಶ್ನೆಯೇ ಇಂದು ‘ರಿಕ್ಲೇಮ್ ಕಾನ್ಸ್ಟಿಟ್ಯೂಷನ್’ ಎಂಬ ದೊಡ್ಡ ಜನಾಂದೋಲನಕ್ಕೆ ಬೀಜ ಬಿತ್ತಿದೆ.
ಈ ಪ್ರಶ್ನೆಗಳೇ ಒಂದು ವಾಟ್ಸಾಪ್ ಗುಂಪು ಶುರು ಮಾಡಲು ಕಾರಣವಾಯಿತು. ಆ ಗುಂಪಿನಲ್ಲಿ ಚರ್ಚೆಗಳು ನಡೆದವು. ಆ ಚರ್ಚೆಗಳು ದೇಶದಾದ್ಯಂತ ಪ್ರತಿ ವಾರ ಸಂವಿಧಾನದ ಬಗ್ಗೆ ಜಾಗೃತಿ ಕಾರ್ಯಕ್ರಮಗಳಾಗಿ ರೂಪ ತಳೆದವು.
ವಕೀಲರು ಎಷ್ಟೇ ಚೆನ್ನಾಗಿ ವಿವರಿಸಿದರೂ ಅವರ ಭಾಷೆ, ಅವರ ಟೆಕ್ನಿಕಲ್ ಟರ್ಮ್‌ಗಳು ಸಾಮಾನ್ಯ ಜನರಿಗೆ ತಲುಪುತ್ತಿರಲಿಲ್ಲ. ಒಳ್ಳೆಯ ವಿಷಯವನ್ನು ಸರಳವಾಗಿ ಹೇಳಬೇಕು, ಜನರ ಮನಸ್ಸಿಗೆ ನೇರವಾಗಿ ತಾಗಬೇಕು ಎಂಬ ಆಲೋಚನೆಯಿಂದ ಹೊಸ ದಾರಿ ಹುಡುಕಲಾಯಿತು. ಆಗ ವಿನಯ್ ಕುಮಾರ್ ಅವರ ಆಲೋಚನೆಗೆ ಬಂದಿದ್ದ ಹಾಡುಗಳು, ಕಾರ್ಟೂನ್‌ಗಳು, ಸಿನಿಮಾ ಡೈಲಾಗ್‌ಗಳು, ರಸ್ತೆ ನಾಟಕಗಳು, ಎಲ್ಲವನ್ನೂ ಪ್ರಯೋಗಿಸಲಾಯಿತು. ಒಟ್ಟಾರೆಯಾಗಿ ಯಾವುದೋ ಒಂದು ಸರಳ ಮಾಧ್ಯಮದ ಮೂಲಕ ಜನರಿಗೆ ಸಂವಿಧಾನವನ್ನು ತಲುಪಿಸಬೇಕು.
ಇವೆಲ್ಲದರ ಜೊತೆಗೆ ಅವರು ಸಂವಿಧಾನದ ಮೊದಲ ಮೂಲ ಪ್ರತಿಯನ್ನು ತೆಗೆದುಕೊಂಡರು. ಆ ಪ್ರತಿಯಲ್ಲಿ ಪ್ರತಿ ಅಧ್ಯಾಯದ ಆರಂಭದಲ್ಲಿ ಲಲಿತಕಲಾ ಕಲಾವಿದ ನಂದಲಾಲ್ ಬೋಸ್ ಮತ್ತು ಅವರ ಶಿಷ್ಯರು ರಚಿಸಿದ ಅದ್ಭುತ ಚಿತ್ರಗಳಿವೆ. ಆ ಚಿತ್ರಗಳು ಭಾರತದ ಐದಾರು ಸಾವಿರ ವರ್ಷಗಳ ಇತಿಹಾಸವನ್ನು, ಸಂಸ್ಕೃತಿಯನ್ನು, ಸಂವಿಧಾನದ ಮೌಲ್ಯಗಳನ್ನು ಒಳಗೊಂಡಿವೆ. ಆ ಚಿತ್ರಗಳನ್ನು ಜನರ ಮುಂದಿಡಲು ಶುರು ಮಾಡಿದಾಗ ಜನರಲ್ಲಿ ಕುತೂಹಲ ಮೂಡಿತು. “ಇದು ಯಾವ ಪುಸ್ತಕ?” ಎಂಬ ಪ್ರಶ್ನೆಯೇ ಸಂವಿಧಾನದ ಬಗ್ಗೆ ಮಾತಿನ ಆರಂಭವಾಯಿತು.
ಇಂದು ಈ ಚಳವಳಿ ಶಾಲಾ-ಕಾಲೇಜುಗಳಿಂದ ಹಿಡಿದು ಕರ್ನಾಟಕ ಹೈಕೋರ್ಟ್, ದೆಹಲಿ ಹೈಕೋರ್ಟ್, ಬೀದಿಗಳು, ಲಂಡನ್‌ನ SOAS ಯೂನಿವರ್ಸಿಟಿ, ಆಕ್ಸ್‌ಫರ್ಡ್ ಯೂನಿವರ್ಸಿಟಿಯವರೆಗೂ ತಲುಪಿದೆ. ಭಾರತೀಯ ಸಂವಿಧಾನದ 75ನೇ ವರ್ಷಾಚರಣೆಯಲ್ಲಿ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ನಮ್ಮ ಪ್ರದರ್ಶನ ಕೇಂದ್ರಬಿಂದುವಾಗಿತ್ತು. ಅಂಬೇಡ್ಕರ್, ರೇಣುಕಾ ರಾಯ್, ಅಮೃತ್ ಕೌರ್ ಸೇರಿದಂತೆ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡವರಲ್ಲಿ ಹಲವರು ಆ ಯೂನಿವರ್ಸಿಟಿಗಳಲ್ಲಿ ಓದಿದ್ದರಿಂದ ಅವರು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಿಸಿದ್ದರು.
ಇಂದು ‘ರಿಕ್ಲೇಮ್ ಕಾನ್ಸ್ಟಿಟ್ಯೂಷನ್’ ತಂಡದಲ್ಲಿ ನೂರಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ವಿಜ್ಞಾನಿಗಳು, ವೈದ್ಯರು, ಐಟಿ ಉದ್ಯೋಗಿಗಳು, ಬ್ಯಾಂಕ್ ಸಿಬ್ಬಂದಿ, ಹೀಗೆ ಎಲ್ಲ ವೃತ್ತಿಗಳ ಸಾಮಾನ್ಯ ಜನರಿದ್ದಾರೆ. ಬೆಂಗಳೂರಿನ ಬೀದಿಗಳಲ್ಲಿ ಪ್ರತಿ ವಾರ ಕಾರ್ಯಕ್ರಮಗಳು ನಡೆಯುತ್ತವೆ. ಟೈಮ್ಸ್ ಆಫ್ ಇಂಡಿಯಾದ ‘ಹ್ಯಾಪಿ ಸ್ಟ್ರೀಟ್ಸ್’ ಕಾರ್ಯಕ್ರಮದಲ್ಲಿ ಈ ತಂಡದ ಕಾರ್ಯಕ್ರಮಗಳು ತುಂಬಾ ಜನಪ್ರಿಯವಾಗಿವೆ. ಆದರೆ ಅತ್ಯಂತ ಆಕರ್ಷಕವಾದ ಪ್ರಯೋಗವೆಂದರೆ ಸ್ಥಳದಲ್ಲೇ ಸಂವಿಧಾನದ ಪೀಠಿಕೆಯನ್ನು ಪ್ರಿಂಟ್ ಮಾಡಿಕೊಡುವುದು. ಕೇವಲ ಮೂರು ವರ್ಷಗಳಲ್ಲಿ ಎರಡು ಲಕ್ಷ ಪ್ರತಿಗಳು ಜನರ ಕೈ ಸೇರಿವೆ. ಯಾರಾದರೂ ತೆಗೆದುಕೊಂಡರೆ “ಇದರಲ್ಲಿ ಏನಿದೆ?” ಎಂದು ಕೇಳುತ್ತಾರೆ. ಅಲ್ಲಿಂದ ಸಂವಿಧಾನದ ಮಾತು ಶುರುವಾಗುತ್ತದೆ. ಸಂವಿಧಾನ ಎಂದರೇನು, ಅದರ ಮುಖ್ಯ ಉದ್ದೇಶಗಳೇನು, ಇಂದು ಅದಕ್ಕೆ ಯಾವ ರೀತಿ ಧಕ್ಕೆ ಬರುತ್ತಿದೆ, ನಮಗೆ ಯಾಕೆ ಕಾಳಜಿ ಇರಬೇಕು – ಎಲ್ಲವನ್ನೂ ನಮ್ಮ ತಂಡದ ಸ್ವಯಂಸೇವಕರು ವಿವರಿಸುತ್ತಾರೆ ಎನ್ನುತ್ತಾರೆ ವಿನಯ್.

ಸಂವಿಧಾನದ ಐತಿಹಾಸಿಕ ಸತ್ಯ:
ಈ ಸಂದರ್ಭದಲ್ಲಿ ವಿನಯ್ ಕುಮಾರ್ ಅವರು ಒಂದು ಮಹತ್ವದ ಐತಿಹಾಸಿಕ ಸತ್ಯವನ್ನು ನೆನಪಿಸುತ್ತಾರೆ. ಅನಕ್ಷರಸ್ಥರು, ಆದಿವಾಸಿಗಳು, ಮಕ್ಕಳು, ಮಹಿಳೆಯರು, ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಬರೆದು ಕಳುಹಿಸಿದ್ದರು. ಕರ್ನಾಟಕದಿಂದಲೂ ಸಾಕಷ್ಟು ಪತ್ರಗಳು ಬಂದಿದ್ದವು. ಆ ಪತ್ರಗಳನ್ನೆಲ್ಲಾ ಸಂಗ್ರಹಿಸಿ, ಮೂರು ವರ್ಷಗಳ ಕಾಲ ತೀವ್ರ ಚರ್ಚೆ ನಡೆಸಿ ಸಂವಿಧಾನ ರಚಿತವಾಯಿತು. ರಚನಾ ಸಮಿತಿಯಲ್ಲಿ 15 ಮಂದಿ ಮಹಿಳೆಯರೂ ಇದ್ದರು. “ಇದು ಒಬ್ಬ ವ್ಯಕ್ತಿಯ ಸಂವಿಧಾನವಲ್ಲ, ಇಡೀ ದೇಶದ ಜನರ ಸಂವಿಧಾನ. ಅಂಬೇಡ್ಕರ್ ಒಬ್ಬರೇ ಬರೆದಿದ್ದಾರೆ ಎಂಬ ತಪ್ಪು ಕಲ್ಪನೆಯನ್ನು ನಾವು ಬಿಟ್ಟುಬಿಡಬೇಕು. ಇಂದು “ಅಂಬೇಡ್ಕರ್ ಬರೆದರು” ಎಂದು ಮಾತ್ರ ಹೇಳುತ್ತೇವೆ. ಅಂಬೇಡ್ಕರ್ ಒಬ್ಬರೇ ಬರೆದಿದ್ದರೂ ಆಗಬಹುದಿತ್ತು, ಅವರಲ್ಲಿ ಅಷ್ಟೊಂದು ಜ್ಞಾನವಿತ್ತು. ಆದರೆ ಅವರು ಎಲ್ಲರನ್ನೂ ಒಳಗೊಂಡು, ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಿ ಸಂವಿಧಾನ ರಚಿಸಿದ್ದಾರೆ. ಅದಕ್ಕೇ ಅವರ ಮಹತ್ವ ಇನ್ನಷ್ಟು ದೊಡ್ಡದು” ಎಂದು ವಿನಯ್ ಕುಮಾರ್ ಹೇಳುತ್ತಾರೆ.
ಆದರೆ ಇಂದು ಸಂವಿಧಾನ ಅಪಾಯದಲ್ಲಿದೆ ಎಂಬುದು ಅವರ ದೊಡ್ಡ ಆತಂಕ. “ಅಪಾಯ ಯಾರಿಂದ? ನಮ್ಮ ನಿರ್ಲಕ್ಷ್ಯದಿಂದ. ಬಸ್ ನಿಲ್ದಾಣದಲ್ಲಿ, ರೈಲ್ವೆ ನಿಲ್ದಾಣದಲ್ಲಿ ಸಂವಿಧಾನದ ಬಗ್ಗೆ ಕೇಳಿ ನೋಡಿ, ಉತ್ತರ ಬರುತ್ತದೆಯೇ? ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ತಿಳಿವಳಿಕೆ ಇಲ್ಲದಿದ್ದರೆ ಅದೇ ಸಂವಿಧಾನಕ್ಕೆ ಮೊದಲ ಅಪಾಯ” ಎಂದು ಅವರು ಹೇಳುತ್ತಾರೆ.
ಇನ್ನೂ “ಎಲ್ಲ ಪಕ್ಷಗಳೂ ಅಧಿಕಾರಕ್ಕೆ ಬಂದಾಗ ಸಂವಿಧಾನವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿವೆ. ನ್ಯಾಯಾಲಯ, ಪೊಲೀಸ್, ಮೀಡಿಯಾ, ಅಧಿಕಾರಶಾಹಿ, ಎಲ್ಲವನ್ನೂ ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ. “ಇದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಸಂವಿಧಾನದ ವಿರುದ್ಧ ಕೆಲಸ ಮಾಡಿವೆ” ಎಂದು ಅವರು ನಿಸ್ಸಂಕೋಚವಾಗಿ ಹೇಳುತ್ತಾರೆ.
ಇದನ್ನೂ ಓದಿ | ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸಂದರ್ಶನ | ‘ವನ್ಯ ಜೀವಿ ಸಂಘರ್ಷ ತಗ್ಗಿಸಲು ನೀತಿ ರೂಪಿಸುವದಷ್ಟೇ ಅಲ್ಲ, ಪಾಲಿಸುವುದು ಮುಖ್ಯ’
ಆದರೆ ತಪ್ಪು ಕೇವಲ ರಾಜಕಾರಣಿಗಳದ್ದಲ್ಲ. “ನಾವು ಪ್ರಶ್ನೆ ಕೇಳದಿರುವುದೇ ದೊಡ್ಡ ತಪ್ಪು. ಐದು ವರ್ಷಕ್ಕೊಮ್ಮೆ ವೋಟ್ ಹಾಕಿ ಮನೆಗೆ ಬಂದು ಸುಮ್ಮನೆ ಇದ್ದರೆ ಸಂವಿಧಾನ ಉಳಿಯುವುದಿಲ್ಲ. ದಿನನಿತ್ಯ ಪ್ರಶ್ನೆ ಕೇಳಬೇಕು. ನಿಮ್ಮ ಜನಪ್ರತಿನಿಧಿಯನ್ನು ಕೇಳಿ, ನೀವು ಸಂವಿಧಾನದ ಮೌಲ್ಯಗಳಿಗೆ ಬದ್ಧರೇ? ಸಮಾಜದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೀರಾ? ಒಬ್ಬೊಬ್ಬರು ಒಂದೊಂದು ಪ್ರಶ್ನೆ ಕೇಳಿದರೆ ರಾಜಕಾರಣಿಗಳಿಗೆ ಜವಾಬ್ದಾರಿ ಬರುತ್ತದೆ. ಅವರಿಗೆ ಎಚ್ಚರ ಇರುತ್ತದೆ” ಎಂದು ವಿನಯ್ ಕುಮಾರ್ ಒತ್ತಿ ಹೇಳುತ್ತಾರೆ.

ಜನರು ಪ್ರಶ್ನೆ ಕೇಳುವಂತೆ ಮಾಡಬೇಕು ಎನ್ನುವುದು ನಮ್ಮ ಮುಖ್ಯ ಗುರಿ. ಹಾಡು, ಭರತನಾಟ್ಯ, ಚಿತ್ರಕಲೆ, ಪೋಸ್ಟ್‌ಕಾರ್ಡ್, ಟೀ-ಶರ್ಟ್, ಬ್ಯಾಗ್, ಎಲ್ಲವನ್ನೂ ಬಳಸಿಕೊಂಡು ಸಂವಿಧಾನವನ್ನು ಜನರಿಗೆ ಮತ್ತೆ ಮತ್ತೆ ವಾಪಸ್ ಕೊಡುವ ಪ್ರಯತ್ನವೇ ‘ರಿಕ್ಲೇಮ್ ಕಾನ್ಸ್ಟಿಟ್ಯೂಷನ್’. ಆದಷ್ಟು ಜನರಿಗೆ ಈ ಅರಿವು ಮೂಡಿಸಿ, ಒಬ್ಬೊಬ್ಬರು ಕೂಡ ಪ್ರಶ್ನೆ ಮಾಡುವ ದೈರ್ಯ ಮಾಡಬೇಕು ಹಾಗೆ ಸ್ವತಂತ್ರವಾಗಿ ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸಂವಿಧಾನವನ್ನು ಅರಿತುಕೊಂಡ ಮೇಲೆ ಅದನ್ನ ಅವರ ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಆಗ ಸಮಾಜ ಕಂಡಿತವಾಗಿ ಅಭಿವೃದ್ದಿಯ ಪಥದತ್ತ ಸಾಗುತ್ತದೆ ಎನ್ನುವುದು ವಿನಯ್ ಕುಮಾರ್ ಅವರ ಅಭಿಪ್ರಾಯ.







