ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ತಾರಕಕ್ಕೇರಿರುವ ಸಂದರ್ಭದಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು (ಶುಕ್ರವಾರ) ದೆಹಲಿಗೆ ಪ್ರಯಾಣ ಬೆಳೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಭಾಗವಹಿಸುವ ಅಧಿಕೃತ ಪ್ರವಾಸ ಎಂದು ಬಿಂಬಿತವಾಗಿದ್ದರೂ, ಇದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಬೇರೆಯೇ ಇವೆ ಎಂಬುದು ರಾಜಕೀಯ ಪಡಸಾಲೆಯ ಮಾತು.
2023ರ ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ “ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ” ಒಪ್ಪಂದ ನಡೆದಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈಗ 2025ರ ಡಿಸೆಂಬರ್ ಆಗಿರುವುದರಿಂದ, ಆ ಎರಡೂವರೆ ವರ್ಷದ ಅವಧಿ ಪೂರ್ಣಗೊಂಡಿದೆ. ಈ ಸಂದರ್ಭದಲ್ಲೇ ಸಿಎಂ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ. ಡಿ.ಕೆ. ಶಿವಕುಮಾರ್ ಶಿಬಿರವು ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಈ ಭೇಟಿ ನಡೆಯುತ್ತಿದೆ.
ನಾಳೆ ಸಿಡಬ್ಲ್ಯೂಸಿ ಸಭೆ: ಅಜೆಂಡಾ ಏನು?
ನಾಳೆ (ಶನಿವಾರ) ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ನಡೆಯಲಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷದ ಸಂಘಟನೆ, ಮುಂಬರುವ ವಿವಿಧ ರಾಜ್ಯಗಳ ಚುನಾವಣೆಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧದ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುವುದು ಈ ಸಭೆಯ ಅಧಿಕೃತ ಅಜೆಂಡಾ. ಆದರೆ, ಕರ್ನಾಟಕದ ಮಟ್ಟಿಗೆ ಈ ಸಭೆಗಿಂತಲೂ, ಸಭೆಯ ಬಿಡುವಿನಲ್ಲಿ ನಡೆಯಬಹುದಾದ ‘ರಾಜಕೀಯ ಮಾತುಕತೆ’ಗಳೇ ಹೆಚ್ಚು ಮುಖ್ಯವಾಗಿವೆ.
ಮೂಲಗಳ ಪ್ರಕಾರ, ಸಿಎಂ ಸಿದ್ದರಾಮಯ್ಯನವರು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗುವ ಸಾಧ್ಯತೆ ದಟ್ಟವಾಗಿದೆ. ಈ ವೇಳೆ ರಾಜ್ಯ ರಾಜಕೀಯದಲ್ಲಿ ಎದ್ದಿರುವ ಗೊಂದಲಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.
ಇದನ್ನೂ ಓದಿ | ಕುರ್ಚಿ ಕಾದಾಟಕ್ಕೆ ಕ್ಲೈಮ್ಯಾಕ್ಸ್? ಡಿಕೆಶಿ ವೈರಾಗ್ಯದ ಮಾತು, ಸಿದ್ದು ಸೇಫ್ ಆಟ!
ಬಣ ರಾಜಕೀಯಕ್ಕೆ ಬ್ರೇಕ್: ಇತ್ತೀಚೆಗೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ಶಾಸಕರು ಬಹಿರಂಗವಾಗಿ ನಾಯಕತ್ವದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವುದು ಪಕ್ಷಕ್ಕೆ ಮುಜುಗರ ತಂದಿದೆ. ಇದಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಕಠಿಣ ಸೂಚನೆ ನೀಡುವ ಸಾಧ್ಯತೆಯಿದೆ. ಸಿಎಂ ಬದಲಾವಣೆ ಆಗದಿದ್ದರೂ, ಕೆಲವೊಂದು ಮಹತ್ವದ ಖಾತೆಗಳ ಬದಲಾವಣೆ ಅಥವಾ ಕಳಪೆ ಸಾಧನೆ ತೋರಿದ ಸಚಿವರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕುವ ‘ಸಂಪುಟ ಪುನಾರಚನೆ’ (Cabinet Reshuffle) ವಿಷಯವೂ ಚರ್ಚೆಗೆ ಬರುವ ಸಾಧ್ಯತೆಯಿದೆ.







