ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಅಧಿಕಾರಿಗಳು ಮತ್ತು ಎಂಜಿನಿಯರ್ಗಳ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ವಿದ್ಯುತ್ ತಂತಿಗಳು ಮತ್ತು ಬೆಲೆಬಾಳುವ ವಿದ್ಯುತ್ ಪರಿಕರಗಳನ್ನು ಕಳ್ಳತನ ಮಾಡಿ, ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಿರುವ ಆರೋಪದಡಿಯಲ್ಲಿ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಹಗರಣದಲ್ಲಿ 2.10 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿದ್ಯುತ್ ಸಾಮಗ್ರಿಗಳ ದರೋಡೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ಕೆ.ಸಿ. ರಾಜಣ್ಣ ಅವರ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಎಂಜಿನಿಯರ್ ಕರಿಮುಲ್ಲಾ ಹುಸೇನಿ, ನಹೀದ್ ಪಾಷಾ, ಜನಾರ್ದನ್ ಮತ್ತು ಇತರ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಹಗರಣದಲ್ಲಿ ಬೆಸ್ಕಾಂನ ಉಗ್ರಾಣದಿಂದ ವಾಹನಗಳ ಮೂಲಕ ವಿದ್ಯುತ್ ಸಾಮಗ್ರಿಗಳನ್ನು ಕದ್ದು ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ದೂರಿನೊಂದಿಗೆ ವಿಡಿಯೋ ದೃಶ್ಯಗಳು ಸೇರಿದಂತೆ ದಾಖಲೆಗಳನ್ನು ಸಲ್ಲಿಸಲಾಗಿದ್ದು, ಇದರಿಂದ ಆರೋಪಕ್ಕೆ ಬಲವಾದ ಆಧಾರ ಸಿಕ್ಕಿದೆ. ಕೋಲಾರದ ಬೆಸ್ಕಾಂ ವಿಭಾಗೀಯ ಕಚೇರಿಗೆ ಪೊಲೀಸರು ಪ್ರಾಥಮಿಕ ವಿಚಾರಣೆಗೆ ನೋಟಿಸ್ ಕಳುಹಿಸಿದ್ದರೂ, ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಸಿಬ್ಬಂದಿ, ಹೊರಗುತ್ತಿಗೆ ನೌಕರರು, ವಾಹನ ಚಾಲಕರು ಮತ್ತು ಬೆಸ್ಕಾಂನ ಹಿರಿಯ ಅಧಿಕಾರಿಗಳು ಶಾಮೀಲಾಗಿರುವ ಆರೋಪವಿದೆ.
ಪ್ರಕರಣ ದಾಖಲಾದ ಕೂಡಲೇ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೋಲಾರ ನಗರ ಠಾಣೆ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಈ ಘಟನೆಯ ಹಿಂದಿನ ಸಂಪೂರ್ಣ ವಿವರಗಳನ್ನು ಪತ್ತೆಹಚ್ಚಲು ಕಾರ್ಯಪ್ರವೃತ್ತರಾಗಿದ್ದಾರೆ.
ಇದನ್ನೂ ಓದಿ | ದುಬಾರಿ ಸ್ಮಾರ್ಟ್ ಮೀಟರ್: ಬಡವರಿಗೆ ಹೊರೆಯಾಗುತ್ತಿರುವ ಬೆಸ್ಕಾಂ? ಹೈಕೋರ್ಟ್ನಿಂದ ಸರ್ಕಾರಕ್ಕೆ ತರಾಟೆ
ಈ ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬೆಸ್ಕಾಂನಂತಹ ಸಾರ್ವಜನಿಕ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಈ ಪ್ರಕರಣವು ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯ ಆಡಳಿತದ ಮೇಲೆ ಪ್ರಶ್ನೆಗಳನ್ನು ಎತ್ತಿದೆ. ತನಿಖೆಯ ಮುಂದಿನ ಹಂತದಲ್ಲಿ ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದ್ದು, ಈ ಹಗರಣದ ಸಂಪೂರ್ಣ ವಿವರಗಳು ಬೆಳಕಿಗೆ ಬರಬಹುದು.







